
ನವದೆಹಲಿ, ಅಕ್ಟೋಬರ್ 29: ಟೆಕ್ ಕ್ಷೇತ್ರದಲ್ಲಿ ಲೇ ಆಫ್ ಮೇಲೆ ಲೇ ಆಫ್ ನಡೆಯುತ್ತಿದೆ. ನೂರಾರು ಸಂಖ್ಯೆಯಲ್ಲಿ, ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಗಳು ಕಳೆದುಹೋಗುತ್ತಿವೆ. ಮೈಕ್ರೋಸಾಫ್ಟ್ನಲ್ಲಿ ಬರೋಬ್ಬರಿ 60,000 ಮಂದಿಯನ್ನು ಕೆಲಸದಿಂದ ತೆಗೆಯಲಾಗುತ್ತಿರುವ ಆಘಾತಕಾರಿ ಸುದ್ದಿ ಇದೆ. ಇನ್ನೋಡಾಟಾ ಸಂಸ್ಥೆ ಭಾರತದಲ್ಲಿ 550 ಉದ್ಯೋಗಿಗಳನ್ನು ದಿಢೀರನೇ ಲೇ ಆಫ್ ಮಾಡಿದೆ ಎಂದು ಮೊನ್ನೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಈಗ ಅಮೇಜಾನ್ ಸಂಸ್ಥೆ ಈ ತಿಂಗಳು ಎರಡನೇ ಬಾರಿ ಲೇ ಆಫ್ ನಡೆಸಿರುವುದು ಇಂದು ವರದಿಯಾಗಿದೆ.
ಇನ್ನೋಡಾಟಾ ಕಂಪನಿಯ 550 ಉದ್ಯೋಗಿಗಳಿಗೆ ತಾವು ಕೆಲಸ ಕಳೆದುಕೊಳ್ಳುವ ಯಾವ ಪೂರ್ವಸೂಚನೆಯೂ ಇರಲಿಲ್ಲ. ಯಥಾರೀತಿಯಲ್ಲಿ ಬೆಳಗ್ಗೆ ಕೆಲಸ ಆರಂಭಿಸಿದ್ದ ಉದ್ಯೋಗಿಗಳು ಮಧ್ಯಾಹ್ನದ ನಂತರ ವಿವಿಧ ಅಕ್ಸೆಸ್ಗಳು ಕೈತಪ್ಪತೊಡಗಿದವು. ಲ್ಯಾಪ್ಟಾಪ್ಗಳು ಲಾಗೌಟ್ ಆದವು. ಆಫೀಸ್ ಐಡಿಗಳ ಅಕ್ಸೆಸ್ ಸೌಲಭ್ಯ ಡೀಆ್ಯಕ್ಟಿವೇಟ್ ಆಗತೊಡಗಿತು. ಅವರ ವೈಯಕ್ತಿಕ ಇಮೇಲ್ಗಳಿಗೆ ಟರ್ಮಿನೇಶನ್ ಲೆಟರ್ ಬಂದಿತು. ಏನಾಗುತ್ತಿದೆ ಎಂದು ಗೊತ್ತಾಗುವಷ್ಟರಲ್ಲಿ 550 ಉದ್ಯೋಗಿಗಳು ಲೇ ಆಫ್ ಆಗಿ ಹೋಗಿದ್ದರು.
ಇದನ್ನೂ ಓದಿ: ಎಐ ಬೆಳವಣಿಗೆಯಿಂದ ಬೆಂಗಳೂರಿನ ಐಟಿ ಉದ್ಯೋಗಿಗಳಿಗೂ ಸಂಕಷ್ಟ? ಸರ್ಕಾರ ಮಧ್ಯಪ್ರವೇಶಕ್ಕೆ ಐಟಿ ಎಂಪ್ಲಾಯಿಸ್ ಯೂನಿಯನ್ ಆಗ್ರಹ
ಅಮೆರಿಕದ ಡಾಟಾ ಎಂಜಿನಿಯರಿಂಗ್ ಮತ್ತು ಎಐ ಸರ್ವಿಸ್ ಕಂಪನಿಯಾದ ಇನ್ನೋಡಾಟಾ ಫಿಲಿಪ್ಪೈನ್ಸ್ನಲ್ಲಿರುವ ಅದರ ಹಲವು ಉದ್ಯೋಗಿಗಳನ್ನು ಝೂಮ್ ಕಾಲ್ನಲ್ಲಿ ಟರ್ಮಿನೇಟ್ ಮಾಡಿತು. ಆ ಸುದ್ದಿ ಭಾರತದಲ್ಲಿರುವ ಅದರ ಉದ್ಯೋಗಿಗಳಲ್ಲಿ ಗೊತ್ತಾಗುತ್ತಿರುವಂತೆಯೇ 550 ಮಂದಿಯನ್ನು ಕೆಲಸದಿಂದ ತೆಗೆದುಹಾಕಲಾಯಿತು.
ಕೆಲಸ ಕಳೆದುಕೊಂಡ ಸಂತ್ರಸ್ತರು ಒಂದು ವಾಟ್ಸಾಪ್ ಗ್ರೂಪ್ ಮಾಡಿಕೊಂಡು, ಏನಾಗುತ್ತಿದೆ ಎಂದು ಅವಲೋಕಿಸತೊಡಗಿದ್ದಾರೆ. ದಿಢೀರ್ ಲೇ ಆಫ್ ಮಾಡಲಾಗಿರುವುದನ್ನು ಕಾನೂನಾತ್ಮಕವಾಗಿ ಪ್ರಶ್ನಿಸಲು ಮಾರ್ಗಗಳನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ.
ವಿಶ್ವದ ಪ್ರಮುಖ ಇ-ಕಾಮರ್ಸ್ ಪ್ಲಾಟ್ಫಾರ್ಮ್ ಆಗಿರುವ ಅಮೇಜಾನ್ ಅಕ್ಟೋಬರ್ ತಿಂಗಳಲ್ಲಿ ಎರಡನೇ ಬಾರಿ ಲೇ ಆಫ್ ಮಾಡಿದೆ. ರೀಟೇಲ್ ಬ್ಯುಸಿನೆಸ್ನಲ್ಲಿ 1,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದ ಅದು, ಈಗ ಡಿವೈಸಸ್ ಮತ್ತು ಸರ್ವಿಸಸ್ ಸೆಕ್ಷನ್ನಲ್ಲಿ 250 ಮಂದಿಗೆ ಪಿಂಕ್ ಸ್ಲಿಪ್ ಕೊಟ್ಟಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಷೇರು ಬಜಾರಿಗೆ ಜಿಯೋ ಪ್ಲಾಟ್ಫಾರ್ಮ್ಸ್ ಭರ್ಜರಿ ಪದಾರ್ಪಣೆ; ಮಾರ್ಕೆಟ್ ಕ್ಯಾಪ್ನಲ್ಲಿ ರಿಲಯನ್ಸ್ ಕಂಪನಿಗಳೇ ನಂ. 1, ನಂ. 2
ಎರಡನೇ ಸುತ್ತಿನ ಲೇ ಆಫ್ನಲ್ಲಿ ಕೆಲಸ ಕಳೆದುಕೊಂಡಿರುವವರು ಹೆಚ್ಚಾಗಿ ಸಾಫ್ಟ್ವೇರ್ ಡೆವಲಪ್ಮೆಂಟ್ನ ಕೆಲಸ ಮಾಡುತ್ತಿದ್ದವರು. ಇವರಿಗೆಲ್ಲಾ ತಾವು ಟರ್ಮಿನೇಟ್ ಆಗಿರುವ ಮಾಹಿತಿ ಬೆಳಗ್ಗೆ ಇಮೇಲ್ಗಳ ಮೂಲಕ ಮತ್ತು ಮೊಬೈಲ್ನಲ್ಲಿ ಮೆಸೇಜ್ಗಳ ಮೂಲಕ ಸಿಕ್ಕಿದೆ.
ಅಮೇಜಾನ್ ಕಳೆದ ವರ್ಷ ಇದೇ ಅಕ್ಟೋಬರ್ ತಿಂಗಳಲ್ಲಿ 14,000 ಮಂದಿಯನ್ನು ಲೇ ಆಫ್ ಮಾಡಿತು. ಮೈಕ್ರೋಸಾಫ್ಟ್ ಸಿಕ್ಕಾಪಟ್ಟೆ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿದೆ. ವಿಶ್ವಾದ್ಯಂತ 60,000 ಉದ್ಯೋಗಿಗಳಿಗೆ (ಶೇ. 27) ಕೆಲಸ ಬಿಡಲು ವಾಲಂಟರಿ ಎಕ್ಸಿಟ್ ಆಯ್ಕೆ ಕೊಟ್ಟಿದೆ. ಅಂದರೆ, ನೀವಾಗೇ ಕೆಲಸದಿಂದ ಹೊರಹೋಗಿ ಎಂದು ಸೂಚಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:46 am, Thu, 29 October 26