AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಐ ಬೆಳವಣಿಗೆಯಿಂದ ಬೆಂಗಳೂರಿನ ಐಟಿ ಉದ್ಯೋಗಿಗಳಿಗೂ ಸಂಕಷ್ಟ? ಸರ್ಕಾರ ಮಧ್ಯಪ್ರವೇಶಕ್ಕೆ ಐಟಿ ಎಂಪ್ಲಾಯಿಸ್ ಯೂನಿಯನ್ ಆಗ್ರಹ

ಎಐ ಬೆಳವಣಿಗೆಯಿಂದ ಮುಂಬರುವ ದಿನಗಳಲ್ಲಿ ಐಟಿ ಉದ್ಯೋಗಿಗಳ ಸ್ವಯಂಪ್ರೇರಿತ ನಿರ್ಗಮನದ ಆಫರ್‌ಗಳು ಸಾಮಾನ್ಯವಾಗಬಹುದು ಎಂದು ಐಟಿ ಎಂಪ್ಲಾಯಿಸ್ ಯೂನಿಯನ್ ಜಂಟಿ ಕಾರ್ಯದರ್ಶಿ ಸುದರ್ಶನ್ ರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ಫೋಸಿಸ್, ಆಕ್ಸೆಂಚರ್ ಮತ್ತು ವಿಪ್ರೋದಂತಹ ಕಂಪನಿಗಳ ಉದ್ಯೋಗಿಗಳ ಭವಿಷ್ಯದ ಬಗ್ಗೆಯೂ ಪ್ರಶ್ನೆ ಎತ್ತಿರುವ ಅವರು, ಉದ್ಯೋಗಿಗಳ ಹಿತ ಕಾಪಾಡಲು ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಹೇಳಿದ್ದಾರೆ.

ಎಐ ಬೆಳವಣಿಗೆಯಿಂದ ಬೆಂಗಳೂರಿನ ಐಟಿ ಉದ್ಯೋಗಿಗಳಿಗೂ ಸಂಕಷ್ಟ? ಸರ್ಕಾರ ಮಧ್ಯಪ್ರವೇಶಕ್ಕೆ ಐಟಿ ಎಂಪ್ಲಾಯಿಸ್ ಯೂನಿಯನ್ ಆಗ್ರಹ
ಸುದರ್ಶನ್ ರಾಮಯ್ಯ ಹಾಗೂ ಮೈಕ್ರೋಸಾಫ್ಟ್
ಕಿರಣ್​ ಸೂರ್ಯ
| Edited By: |

Updated on:Oct 29, 2026 | 10:48 AM

Share

ಮುಖ್ಯಾಂಶಗಳು

  • ಎಐ ಬೆಳವಣಿಗೆಯಿಂದ ಐಟಿ ಉದ್ಯೋಗಿಗಳಿಗೆ ಸಂಕಷ್ಟದ ಆತಂಕ
  • ಸರ್ಕಾರ ಮಧ್ಯಪ್ರವೇಶಿಶಕ್ಕೆ ಐಟಿ ಎಂಪ್ಲಾಯೀಸ್ ಯೂನಿಯನ್ ಒತ್ತಾಯ
  • ಕೆಲಸ ತೊರೆಯುವವರಿಗೆ ಹೆಚ್ಚಿನ ಪರಿಹಾರ ನೀಡಲು ಆಗ್ರಹ

ಬೆಂಗಳೂರು, ಅಕ್ಟೋಬರ್ 29: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಬೆಳವಣಿಗೆಯ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಐಟಿ ಉದ್ಯೋಗಿಗಳ ಸ್ವಯಂಪ್ರೇರಿತ ನಿರ್ಗಮನದ ಆಫರ್‌ಗಳು ಸಾಮಾನ್ಯವಾಗುವ ಸಾಧ್ಯತೆಯಿದೆ ಎಂದು ಐಟಿ ಎಂಪ್ಲಾಯಿಸ್ ಯೂನಿಯನ್ ಜಂಟಿ ಕಾರ್ಯದರ್ಶಿ ಸುದರ್ಶನ್ ರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ. ಮೈಕ್ರೋಸಾಫ್ಟ್‌ನಂತಹ ಜಾಗತಿಕ ದೈತ್ಯ ಕಂಪನಿಯೇ ಇಷ್ಟು ಬೇಗ ಇಂತಹ ಕ್ರಮಕ್ಕೆ ಮುಂದಾಗಿರುವುದು ಕಳವಳಕಾರಿ ವಿಚಾರ ಎಂದು ಅವರು ಹೇಳಿದ್ದಾರೆ.

ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿರ್ಗಮನದ ಆಫರ್ (Voluntary Exit Offer – VEO) ನೀಡುತ್ತಿರುವ ಬೆಳವಣಿಗೆಯ ಕುರಿತು ‘ಟಿವಿ9’ ಜೊತೆ ಮಾತನಾಡಿದ ಸುದರ್ಶನ್ ರಾಮಯ್ಯ, ಎಐ ತಂತ್ರಜ್ಞಾನದ ಅಳವಡಿಕೆ ಐಟಿ ವಲಯದ ಉದ್ಯೋಗಿಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಎಐ ಅಳವಡಿಕೆ ಲಾಭದಾಯಕವಾದರೆ ಉದ್ಯೋಗಿಗಳ ಕಥೆಯೇನು?

ಮೈಕ್ರೋಸಾಫ್ಟ್‌ನಂತಹ ದೊಡ್ಡ ಕಂಪನಿಯೇ ಸ್ವಯಂಪ್ರೇರಿತ ನಿರ್ಗಮನದ ಆಫರ್ ನೀಡಲು ಮುಂದಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಎಐ ತಂತ್ರಜ್ಞಾನದ ಬೆಳವಣಿಗೆಯ ವೇಗವನ್ನು ಗಮನಿಸಿದರೆ, ಮುಂಬರುವ ದಿನಗಳಲ್ಲಿ ಇಂತಹ ಬೆಳವಣಿಗೆಗಳು ಸಾಮಾನ್ಯವಾಗಬಹುದು ಎಂದು ಸುದರ್ಶನ್ ರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಸುಮಾರು 320 ಬಿಲಿಯನ್ ವಹಿವಾಟು ಹೊಂದಿರುವ ಕಂಪನಿಯು ಎಐ ತಂತ್ರಜ್ಞಾನ ಅಳವಡಿಕೆಗೆ 175 ಬಿಲಿಯನ್ ಹೂಡಿಕೆ ಮಾಡಲು ಮುಂದಾಗಿದೆ ಎಂದರೆ, ಆ ತಂತ್ರಜ್ಞಾನ ಕಂಪನಿಗೆ ಲಾಭದಾಯಕವಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ, ತಂತ್ರಜ್ಞಾನ ಅಳವಡಿಕೆಯಿಂದ ಉದ್ಯೋಗಿಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆಯೂ ಗಂಭೀರವಾಗಿ ಚಿಂತಿಸಬೇಕಿದೆ ಎಂದು ತಿಳಿಸಿದ್ದಾರೆ.

ಇನ್ಫೋಸಿಸ್, ಆಕ್ಸೆಂಚರ್, ವಿಪ್ರೋ ಉದ್ಯೋಗಿಗಳ ಭವಿಷ್ಯವೇನು?

ಮೈಕ್ರೋಸಾಫ್ಟ್‌ನ ಬೆಳವಣಿಗೆಯ ಬೆನ್ನಲ್ಲೇ ಸೇವಾ ವಲಯದ ಐಟಿ ಕಂಪನಿಗಳ ಉದ್ಯೋಗಿಗಳ ಭವಿಷ್ಯದ ಬಗ್ಗೆಯೂ ಸುದರ್ಶನ್ ರಾಮಯ್ಯ ಪ್ರಶ್ನೆ ಎತ್ತಿದ್ದಾರೆ. ಇನ್ಫೋಸಿಸ್, ಆಕ್ಸೆಂಚರ್ ಮತ್ತು ವಿಪ್ರೋದಂತಹ ಕಂಪನಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳಿದ್ದಾರೆ. ಇಂತಹ ಕಂಪನಿಗಳೂ ಎಐ ತಂತ್ರಜ್ಞಾನವನ್ನು ವ್ಯಾಪಕವಾಗಿ ಅಳವಡಿಸಿಕೊಂಡರೆ, ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

ಆದ್ದರಿಂದ, ಉದ್ಯೋಗಿಗಳು ಮುಂಬರುವ ಬದಲಾವಣೆಗಳಿಗೆ ಸಿದ್ಧರಾಗಬೇಕು. ಎಐ ತಂತ್ರಜ್ಞಾನದಿಂದ ಉದ್ಯೋಗ ಕ್ಷೇತ್ರದಲ್ಲಿ ಉಂಟಾಗಬಹುದಾದ ಸವಾಲುಗಳನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಉದ್ಯೋಗಿಗಳ ಹಿತ ಕಾಪಾಡಲು ಸರ್ಕಾರ ಮಧ್ಯಪ್ರವೇಶಿಸಲಿ

ಐಟಿ ಉದ್ಯೋಗಿಗಳಿಗೆ ಎದುರಾಗಬಹುದಾದ ಸಂಕಷ್ಟವನ್ನು ತಡೆಯಲು ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಸುದರ್ಶನ್ ರಾಮಯ್ಯ ಆಗ್ರಹಿಸಿದ್ದಾರೆ. ಉದ್ಯೋಗಿಗಳಿಗೆ ಅನಗತ್ಯ ತೊಂದರೆಯಾಗದಂತೆ ಸೂಕ್ತ ನಿಯಮಗಳನ್ನು ರೂಪಿಸಿದರೆ ಅನುಕೂಲವಾಗಲಿದೆ. ಇಲ್ಲದಿದ್ದರೆ, ಉದ್ಯೋಗ ನಷ್ಟದಿಂದ ಆರ್ಥಿಕ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಅಸ್ಥಿರತೆ ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ.

ಉದ್ಯೋಗ ಕಳೆದುಕೊಳ್ಳುವವರಿಗೆ ಕಂಪನಿಗಳು ನೀಡುವ ಪರಿಹಾರ ಪ್ಯಾಕೇಜ್‌ಗಳ ಬಗ್ಗೆಯೂ ಅವರು ಸಲಹೆ ನೀಡಿದ್ದಾರೆ. ಕೆಲಸ ತೊರೆಯುವ ಉದ್ಯೋಗಿಗಳಿಗೆ ವರ್ಷಕ್ಕೆ ಒಂದು ತಿಂಗಳ ವೇತನ ನೀಡುವ ಬದಲಿಗೆ, ಪರಿಹಾರದ ಮೊತ್ತವನ್ನು ಎರಡು ಅಥವಾ ಮೂರು ಪಟ್ಟು ಹೆಚ್ಚಿಸಿದರೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಉದ್ಯೋಗ ಕಳೆದುಕೊಂಡ ಬಳಿಕ ಮನೆ ಮತ್ತು ವಾಹನಗಳ ಇಎಂಐ ಪಾವತಿಸುವುದು ಕಷ್ಟವಾಗಬಹುದು. ಹೀಗಾಗಿ, ಉದ್ಯೋಗಿಗಳ ಆರ್ಥಿಕ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಕಂಪನಿಗಳು ಪರಿಹಾರ ನೀಡಬೇಕು ಎಂಬುದು ಅವರ ಅಭಿಪ್ರಾಯವಾಗಿದೆ.

ಸ್ವಯಂಪ್ರೇರಿತ ನಿರ್ಗಮನದ ಆಫರ್‌ಗಳು ಹೆಚ್ಚಾಗುವ ಆತಂಕ

ಮೈಕ್ರೋಸಾಫ್ಟ್ ಉದ್ಯೋಗಿಗಳನ್ನು ನೇರವಾಗಿ ಕೆಲಸದಿಂದ ವಜಾಗೊಳಿಸುವ ಬದಲು ಸ್ವಯಂಪ್ರೇರಿತ ನಿರ್ಗಮನದ ಆಫರ್ ನೀಡುತ್ತಿದೆ ಎಂದು ಸುದರ್ಶನ್ ರಾಮಯ್ಯ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇತರ ಕಂಪನಿಗಳೂ ಇದೇ ಮಾದರಿಯನ್ನು ಅನುಸರಿಸುವ ಸಾಧ್ಯತೆಯಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೈಕ್ರೋಸಾಫ್ಟ್​ನಲ್ಲಿ ಬ್ಲಡ್​ಬಾತ್; ಇನ್ನೋಡಾಟಾ ಬಳಿಕ ಅಮೇಜಾನ್​ನಲ್ಲಿ ದಿಢೀರ್ ಲೇ ಆಫ್; ಕಂಗಾಲಾದ ಟೆಕ್ಕಿಗಳು

ಒಟ್ಟಿನಲ್ಲಿ, ಎಐ ತಂತ್ರಜ್ಞಾನದ ಬೆಳವಣಿಗೆ ಐಟಿ ಉದ್ಯಮಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದ್ದರೂ, ಉದ್ಯೋಗಿಗಳ ಭವಿಷ್ಯದ ಬಗ್ಗೆ ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕಿದೆ. ಉದ್ಯೋಗಿಗಳ ಹಿತಾಸಕ್ತಿ ಕಾಪಾಡಲು ಕಂಪನಿಗಳು ಮತ್ತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂಬುದು ಸುದರ್ಶನ್ ರಾಮಯ್ಯ ಅಭಿಪ್ರಾಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:34 am, Thu, 29 October 26

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More