ನವದೆಹಲಿ, ಫೆಬ್ರುವರಿ 18: ಭಾರತದ ಅತಿದೊಡ್ಡ ಖಾಸಗಿ ವಲಯದ ರೈಲ್ವೆ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಎನಿಸಿರುವ ತೀತಾಗಡ್ ರೈಲ್ ಸಿಸ್ಟಮ್ಸ್ಗೆ (Titagarh Rail Systems Ltd) ಈಗ ರಕ್ಷಣಾ ಸಚಿವಾಲಯದ ಒಪ್ಪಂದ ಸಿಕ್ಕಿದೆ. 250 ವಿಶೇಷ ವ್ಯಾಗನ್ ಬೋಗಿಗಳನ್ನು ತಯಾರಿಸಿ ಕೊಡಲು ತೀತಾಗಡ್ 170 ಕೋಟಿ ರೂ ಮೊತ್ತದ ಈ ಒಪ್ಪಂದ ಪಡೆದಿದೆ. 36 ತಿಂಗಳ ಒಳಗೆ ಈ ವ್ಯಾಗನ್ಗಳನ್ನು ತಯಾರಿಸಿ ಕೊಡಬೇಕೆಂದು ಒಪ್ಪಂದದಲ್ಲಿ ತಿಳಿಸಲಾಗಿದೆ. ಫೆಬ್ರುವರಿ 17, ಶನಿವಾರ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, 12 ತಿಂಗಳ ಬಳಿಕ ಒಪ್ಪಂದ ಚಾಲನೆಗೊಳ್ಳಲಿದೆ. ಅದಾಗಿ 36 ತಿಂಗಳೊಳಗೆ ವ್ಯಾಗನ್ ತಯಾರಿಕೆ ಪೂರ್ಣಗೊಂಡು, ಎಲ್ಲಾ 250 ಬೋಗಿಗಳನ್ನು ರಕ್ಷಣಾ ಇಲಾಖೆಗೆ ಹಸ್ತಾಂತರಿಸಬೇಕಾಗುತ್ತದೆ.
ತೀತಾಗಡ್ ರೈಲ್ವೆ ಸಿಸ್ಟಮ್ಸ್ ವ್ಯಾಗನ್ ಮತ್ತು ರೈಲು ಬೋಗಿಗಳನ್ನು ತಯಾರಿಸುವ ಕಂಪನಿಯಾಗಿದೆ. ವ್ಯಾಗನ್ ಎಂದರೆ ರೈಲುಗಳಲ್ಲಿ ಸರಕು ಸಾಗಣೆಗೆ ಬಳಸುವ ಬೋಗಿಗಳು. ಪ್ಯಾಸೆಂಜರ್ ವಾಹನಗಳಲ್ಲಿ ಪ್ರಯಾಣಿಕರನ್ನು ಬೋಗಿಗಳಲ್ಲಿ ಸಾಗಿಸಲಾಗುತ್ತದೆ. ಸರಕು ಸಾಗಣೆ ರೈಲುಗಳಲ್ಲಿ ಸರಕುಗಳನ್ನು ಸಾಗಿಸಲು ವ್ಯಾಗನ್ ಬಳಸಲಾಗುತ್ತದೆ.
ಇದನ್ನೂ ಓದಿ: ಮುಂಬೈನಲ್ಲಿ ಅಮಿತಾಭ್ ಬಚ್ಚನ್ ಕಚೇರಿ ಸ್ಥಳ ಬಾಡಿಗೆಗೆ ಪಡೆದ ವಾರ್ನರ್ ಸಂಸ್ಥೆ; ಇದರ ಬಾಡಿಗೆ ದರ ಇತ್ಯಾದಿ ವಿವರ
ಕೋಲ್ಕತಾ ಮೂಲದ ತೀತಾಗಡ್ ರೈಲ್ ಸಿಸ್ಟಮ್ಸ್ ಸಂಸ್ಥೆ ಕೇವಲ ಬೋಗಿ ಮತ್ತು ವ್ಯಾಗನ್ಗಳ ತಯಾರಿಕೆ ಮಾತ್ರವಲ್ಲ, ರೈಲುಗಳ ಬೇರೆ ಬಿಡಿಭಾಗ ಮತ್ತು ಸಬ್ಸಿಸ್ಟಮ್ಗಳ ತಯಾರಿಕೆಗೂ ಇಳಿದಿದೆ. ಇದಕ್ಕಾಗಿ ದೆಹಲಿಯ ಆಂಬರ್ ಗ್ರೂಪ್ ಜೊತೆ ಕೈಜೋಡಿಸಿದೆ. ಈ ಎರಡೂ ಕಂಪನಿಗಳು ಸೇರಿ ಎಸ್ಪಿವಿ ವಾಹನಗಳನ್ನು ತಯಾರಿಸಿವೆ. ಇದನ್ನು ಭಾರತ ಮಾತ್ರವಲ್ಲದೆ ಯೂರೋಪಿಯನ್ ಮಾರುಕಟ್ಟೆಗೂ ವಿಸ್ತರಿಸಲು ಬಳಸಲಾಗುತ್ತಿದೆ.
ತೀತಾಗಡ್ ರೈಲ್ ಸಿಸ್ಟಂನ ನಿವ್ಳ ಲಾಭ ಬಹಳಷ್ಟು ಹೆಚ್ಚಾಗಿದೆ. ಅಂತೆಯೇ ಅದರ ಷೇರಿಗೂ ಬಲು ಬೇಡಿಕೆ ಇದೆ. ಕಳೆದ ಒಂದು ವರ್ಷದಿಂದ ಅದರ ಷೇರುಬೆಲೆ ಶೇ. 104.04ರಷ್ಟು ಏರಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ 432 ರೂಗೆ ಅದರ ಷೇರು ಬೆಲೆ ಇಳಿದಿದ್ದರೂ ಒಂದು ತಿಂಗಳ ಹಿಂದೆ (ಜನವರಿ) ದಾಖಲೆಯ 1248 ರೂಗೆ ಏರಿತ್ತು. ಈಗ ಅದರ ಷೇರುಬೆಲೆ 953.70 ರೂನಲ್ಲಿದೆ.
ಇದನ್ನೂ ಓದಿ: 2 ಲಕ್ಷ ರೂ ಸಾಲದಿಂದ ಹಿಡಿದು ಆಧನಿಕ ಕೌಶಲ ತರಬೇತಿ; ಪಿಎಂ ವಿಶ್ವಕರ್ಮ ಯೋಜನೆಯ ಲಾಭಗಳೇನು, ತಿಳಿದಿರಿ
ಈಗ ಡಿಫೆನ್ಸ್ ಮಿನಿಸ್ಟ್ರಿ ಒಪ್ಪಂದ ಸಿಕ್ಕಿರುವ ಹಿನ್ನೆಲೆಯಲ್ಲಿ ಸೋಮವಾರ ಆರಂಭವಾಗುವ ಷೇರುಪೇಟೆ ವಹಿವಾಟಿನಲ್ಲಿ ತೀತಾಗಡ್ ರೈಲ್ ಸಿಸ್ಟಮ್ಸ್ನ ಷೇರುಬೆಲೆ ಮತ್ತೆ 1,000 ರೂ ಗಡಿ ದಾಟುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ