ನವದೆಹಲಿ, ಅಕ್ಟೋಬರ್ 22: ಇಸ್ರೇಲೀ ಮೂಲದ ಟವರ್ ಸೆಮಿಕಂಡಕ್ಟರ್ ಕಂಪನಿ ಭಾರತದಲ್ಲಿ ಚಿಪ್ ತಯಾರಿಕಾ ಘಟಕ (semiconductor fab unit) ಸ್ಥಾಪಿಸಲು ಮತ್ತೆ ಆಸಕ್ತಿ ತೋರಿದೆ. ಭಾರತ ಸರ್ಕಾರ ಜಾರಿಗೆ ತಂದಿರುವ ಪಿಎಲ್ಐ ಸ್ಕೀಮ್ ಅಡಿಯಲ್ಲಿ ಚಿಪ್ ತಯಾರಿಕೆಗೆ 10 ಬಿಲಿಯನ್ ಡಾಲರ್ ಮೀಸಲಿಡಲಾಗಿದೆ. ಈ ಸ್ಕೀಮ್ ಅನ್ನು ಬಳಸಲು ಟವರ್ ಸೆಮಿಕಂಡಕ್ಟರ್ ಆಸಕ್ತವಾಗಿದೆ. ಟವರ್ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ತಯಾರಿಕೆಯಲ್ಲಿ ತೊಡಗಿರುವ ಕಂಪನಿ. ಭಾರತದಲ್ಲಿ ಅದರ ಪ್ರಸ್ತಾವಕ್ಕೆ ಅನುಮೋದನೆ ಸಿಕ್ಕಲ್ಲಿ ಭಾರತದಲ್ಲಿ ನಿಜವಾದ ಮೊದಲ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕ ಸ್ಥಾಪನೆಯಾಗಲಿದೆ.
ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಬಂದಿರುವ ವರದಿ ಪ್ರಕಾರ, ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ರಾಜೀವ್ ಚಂದ್ರಶೇಖರ್ ಅವರು ಟವರ್ ಸೆಮಿಕಂಡಕ್ಟರ್ನ ಸಿಇಒ ರಸೆಲ್ ಸಿ ಎಲ್ವ್ಯಾಂಗರ್ (Russel C Ellwanger) ಅವರನ್ನು ಮಾತುಕತೆಗೆ ಕರೆದಿರುವುದು ತಿಳಿದುಬಂದಿದೆ. ಕೆಲ ದಿನಗಳ ಹಿಂದಷ್ಟೇ ಇಸ್ರೇಲ್ನ ರಾಯಭಾರಿ ನಾವೋರ್ ಗಿಲಾನ್ (Naor Gilon) ಮತ್ತು ರಸೆಲ್ ಎಲ್ವ್ಯಾಂಗರ್ ಅವರಿಬ್ಬರನ್ನು ಸಚಿವರು ಭೇಟಿ ಮಾಡಿದ್ದರು. ಆಗ ನಡೆದ ಭೇಟಿಯ ನಂತರ ಮುಂದುವರಿದ ಭಾಗವಾಗಿ ಟವರ್ ಸೆಮಿಕಂಡಕ್ಟರ್ ಸಿಇಒ ಅವರನ್ನು ಸಚಿವ ರಾಜೀವ್ ಚಂದ್ರಶೇಖರ್ ಮಾತುಕತೆಗೆ ಆಹ್ವಾನಿಸಿರಬಹುದು ಎನ್ನಲಾಗಿದೆ.
ಇದನ್ನೂ ಓದಿ: Google Super App A: ಜನಸಾಮಾನ್ಯರಿಗಾಗಿ ಗೂಗಲ್ ಸೂಪರ್ ಆಪ್, ವಿಶೇಷತೆಗಳು ಹೀಗಿವೆ
ಇಸ್ರೇಲ್ನ ಟವರ್ ಸೆಮಿಕಂಡಕ್ಟರ್ ವಿಶ್ವದ ಪ್ರಮುಖ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳಲ್ಲಿ ಒಂದು. ಹಳೆಯ ತಂತ್ರಜ್ಞಾನದಲ್ಲಿ ಅನಲಾಗ್ ಚಿಪ್ಗಳನ್ನು ತಯಾರಿಸುವ ಒಂದು ಕಂಪನಿ. ಸೆಲ್ ಫೋನ್ ಮತ್ತಿತರ ಉತ್ಪನ್ನಗಳಿಗೆ ವಿದ್ಯುತ್ ನಿರ್ವಹಿಸುವ ಮತ್ತು ಸಿಗ್ನಲ್ಗಳನ್ನು ಆ್ಯಂಪ್ಲಿಫೈ ಮಾಡುವಂತಹ ಕಾರ್ಯಗಳಿಗೆ ಈ ಅನಲಾಗ್ ಚಿಪ್ಗಳನ್ನು ಬಳಸಲಾಗುತ್ತದೆ.
ಇಸ್ರೇಲ್, ಅಮೆರಿಕ ಮತ್ತು ಜಪಾನ್ ದೇಶಗಳಲ್ಲಿ ಟವರ್ ಸೆಮಿಕಂಡಕ್ಟರ್ ಕಂಪನಿ ಫ್ಯಾಬ್ ಘಟಕಗಳನ್ನು ಹೊಂದಿದೆ. ಭಾರತದಲ್ಲಿ ಇದು ಫ್ಯಾಕ್ಟರಿ ತೆರೆದರೆ ಬಹಳ ಗಮನಾರ್ಹ ಸಂಗತಿ ಎನಿಸಲಿದೆ.
ಇದನ್ನೂ ಓದಿ: Forex Reserves: ಅ. 13ರಂದು ಅಂತ್ಯಗೊಂಡ ವಾರದಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ 585.89 ಬಿಲಿಯನ್ ಡಾಲರ್ಗೆ ಏರಿಕೆ
ಡಿಜಿಟಲ್ ಜಗತ್ತಿನಲ್ಲಿ ಬಹಳ ಪ್ರಮುಖ ಪಾತ್ರ ಇರುವ ಸೆಮಿಕಂಡಕ್ಟರ್ಗಳನ್ನು ತಯಾರಿಸಲು ಭಾರತ ಬಹಳ ಆಸಕ್ತವಾಗಿದೆ. ಚೀನಾ ಬಳಿಕ ವಿಶ್ವದ ಮ್ಯಾನುಫ್ಯಾಕ್ಚರಿಂಗ್ ಅಡ್ಡೆಯಾಗುವ ಆಸೆಯಲ್ಲಿರುವ ಭಾರತಕ್ಕೆ ಸೆಮಿಕಂಡಕ್ಟರ್ ತಯಾರಿಕಾ ಕ್ಷೇತ್ರ ಬಹಳ ಮುಖ್ಯ. ಫಾಕ್ಸ್ಕಾನ್, ವೇದಾಂತ, ಮೈಕ್ರೋನ್, ಐಎಸ್ಎಂಸಿ, ಟವರ್ ಮೊದಲಾದ ಕಂಪನಿಗಳು ಆಸಕ್ತಿ ತೋರಿವೆಯಾದರೂ ಇನ್ನೂ ಅದು ಸಾಕಾರಗೊಂಡಿಲ್ಲ. ಐಎಸ್ಎಂಸಿ ಕರ್ನಾಟಕದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ಯೂನಿಟ್ ತೆರೆಯುವುದಾಗಿ ಹೇಳಿತ್ತು.
ಇವ್ಯಾವುವೂ ಕೂಡ ಸಾಕಾರಗೊಂಡಿಲ್ಲ. ಫಾಕ್ಸ್ಕಾನ್ ಮತ್ತು ವೇದಾಂತ ಕಂಪನಿಗಳಿಗೆ ಫ್ಯಾಬ್ರಿಕೇಶನ್ ಅನುಭವ ಇಲ್ಲ. ಜಾಗತಿಕ ಸೆಮಿಕಂಡಕ್ಟರ್ ಫ್ಯಾಬ್ ಕಂಪನಿಗಳೊಂದಿಗೆ ಸಹಭಾಗಿತ್ವದಲ್ಲಿ ಭಾರತದಲ್ಲಿ ಸೆಮಿಕಂಡಕ್ಟರ್ ಫ್ಯಾಕ್ಟರಿ ಮಾಡಲು ಹೊರಟಿವೆ. ಆದರೆ, ಗ್ಲೋಬಲ್ ಪಾರ್ಟ್ನರ್ಗಳು ಇನ್ನೂ ಸಿಕ್ಕಿಲ್ಲ.ಲ ಈ ಹಿನ್ನೆಲೆಯಲ್ಲಿ ಟವರ್ ಸೆಮಿಕಂಡಕ್ಟರ್ ಕಂಪನಿ ಭಾರತದಲ್ಲಿ ಫ್ಯಾಕ್ಟರಿ ಶುರು ಮಾಡಿದರೆ ಅದು ಪ್ರಮುಖ ಮೈಲಿಗಲ್ಲಾಗಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ