ನ್ಯೂಯಾರ್ಕ್, ಅಕ್ಟೋಬರ್ 22: ವರ್ಕ್ ಫ್ರಂ ಹೋಮ್ಗೆ ಹೊಂದಿಕೊಂಡಿರುವ ಉದ್ಯೋಗಿಗಳನ್ನು ಕಚೇರಿಗೆ ಬಂದು ಕೆಲಸ ಮಾಡುವಷ್ಟರಲ್ಲಿ ಬಹಳ ಸಂಸ್ಥೆಗಳ ಮ್ಯಾನೇಜರ್ಗಳು ಹೈರಾಣಾಗಿದ್ದಾರೆ. ವರ್ಕ್ ಫ್ರಂ ಆಫೀಸನ್ನು ಕಡ್ಡಾಯಗೊಳಿಸಲಾಗಿದ್ದರೂ ಇನ್ನೂ ಹಲವು ಉದ್ಯೋಗಿಗಳು ಕಚೇರಿಗೆ ಬರದೇ ಮನೆಯಿಂದಲೇ ಕೆಲಸ ಮಾಡುತ್ತಿರುವ ಉದಾಹರಣೆಗಳು ಬಹಳ ಇವೆ. ಕಳೆದ ಒಂದು ವರ್ಷದಲ್ಲಿ ಸಾವಿರಾರು ಮಂದಿ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕಿರುವ ಇಕಾಮರ್ಸ್ ದೈತ್ಯ ಅಮೇಜಾನ್ ಇದೀಗ ಕಚೇರಿಯಲ್ಲಿ ಕೆಲಸ ಮಾಡುವುದರ ವಿಚಾರದಲ್ಲಿ ಬಹಳ ಕಟ್ಟುನಿಟ್ಟಾಗಿರಲು ನಿರ್ಧರಿಸಿದೆ. ವಾರಕ್ಕೆ ಮೂರು ದಿನವಾದರೂ ಕಚೇರಿಗೆ ಬಂದು ಕೆಲಸ ಮಾಡದವರನ್ನು ಕೆಲಸದಿಂದ ತೆಗೆದುಹಾಕುವಂತೆ ಮ್ಯಾನೇಜರುಗಳಿಗೆ ಸಂದೇಶ ರವಾನಿಸಲಾಗಿರುವುದು ತಿಳಿದುಬಂದಿದೆ.
ಬ್ಯುಸಿನೆಸ್ ಇನ್ಸೈಡರ್ ಪತ್ರಿಕೆಯಲ್ಲಿ ಬಂದಿರುವ ವರದಿ ಪ್ರಕಾರ ಅಮೇಜಾನ್ ಸಂಸ್ಥೆ ವರ್ಕ್ ಫ್ರಂ ಆಫೀಸ್ ನಿಯಮಕ್ಕೆ ಬದ್ಧರಾಗದ ಉದ್ಯೋಗಿಗಳನ್ನು ಹೇಗೆ ಕೆಲಸದಿಂದ ತೆಗೆಯಬೇಕು ಎಂಬುದನ್ನು ವಿವರಿಸಿ ಮ್ಯಾನೇಜರುಗಳಿಗೆ ಮಾರ್ಗಸೂಚಿ ನೀಡಿದೆಯಂತೆ.
ವಾರಕ್ಕೆ ಮೂರು ದಿನ ವರ್ಕ್ ಫ್ರಂ ಆಫೀಸ್ ಮಾಡಬೇಕೆನ್ನುವ ನೀತಿಗೆ ಯಾರು ಬದ್ಧರಾಗಿಲ್ಲವೋ ಆ ಉದ್ಯೋಗಿಯೊಂದಿಗೆ ಮ್ಯಾನೇಜರ್ ವೈಯಕ್ತಿಕವಾಗಿ ಮಾತನಾಡಬೇಕು. ಈ ಮಾತುಕತೆಯನ್ನು ಒಂದು ಮೇಲ್ ಮುಖಾಂತರ ದಾಖಲಿಸಬೇಕು. ಇದಾದ ಬಳಿಕವೂ ಉದ್ಯೋಗಿಯು ಕಚೇರಿಗೆ ಬಂದು ಕೆಲಸ ಮಾಡಲು ನಿರಾಕರಿಸಿದರೆ, ಆಗ ಮ್ಯಾನೇಜರ್ ಮತ್ತೊಂದು ಬಾರಿ ಆ ಉದ್ಯೋಗಿ ಜೊತೆ ಮಾತನಾಡಬೇಕು. ಅಗತ್ಯಬಿದ್ದರೆ ಆ ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕಲು ಮ್ಯಾನೇಜರ್ ನಿರ್ಧರಿಸಬಹುದು ಎನ್ನಲಾಗಿದೆ.
ಉದ್ಯೋಗಿಯೊಂದಿಗೆ ಮ್ಯಾನೇಜರ್ ಮಾತನಾಡುವಾಗ ಕಚೇರಿಯಿಂದ ಕೆಲಸ ಮಾಡುವುದು ಎಷ್ಟು ಅಗತ್ಯ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಸಕಾರಣ ಇಲ್ಲದೇ, ಕಚೇರಿಗೆ ಬಂದು ಕೆಲಸ ಮಾಡದೇ ಹೋದರೆ ಶಿಸ್ತು ಕ್ರಮ ಎದುರಿಸಬೇಕಾದೀತು, ಕೆಲಸವನ್ನೂ ಕಳೆದುಕೊಳ್ಳಬೇಕಾದೀತು ಎಂಬ ಸಂಗತಿಯನ್ನು ಉದ್ಯೋಗಿಗೆ ತಿಳಿಸಬೇಕು ಎಂದು ಮ್ಯಾನೇಜರುಗಳಿಗೆ ನೀಡಿರುವ ಗೈಡ್ಲೈನ್ಸ್ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: 2028ರಷ್ಟರಲ್ಲಿ ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಪಾಲು ಶೇ. 18ಕ್ಕೆ ಏರಿಕೆ: ಐಎಂಎಫ್ ಅಂದಾಜು
ಕಚೇರಿಗೆ ಹೋಗಿ ಕೆಲಸ ಮಾಡಲು ಒಪ್ಪದವರಲ್ಲಿ ಹೆಚ್ಚಿನವರು ಅಮೇಜಾನ್ ಉದ್ಯೋಗಿಗಳೇ ಆಗಿದ್ದಾರೆ. ವಾರಕ್ಕೆ ಮೂರು ದಿನ ಕಚೇರಿಗೆ ಬಂದು ಕೆಲಸ ಮಾಡಬೇಕು ಎಂದು ಅಮೇಜಾನ್ ಆಡಳಿತವು ಕಡ್ಡಾಯಪಡಿಸಿದಾಗ ಸಾವಿರಾರು ಉದ್ಯೋಗಿಗಳು ಪ್ರತಿರೋಧ ತೋರಿದ್ದಾರೆ. ಇಂಟರ್ನಲ್ ಪೆಟಿಶನ್ ಕೂಡ ದಾಖಲಾಗಿದೆ. ಕೋವಿಡ್ ಸಂದರ್ಭದಲ್ಲಿ ತಮ್ಮನ್ನೆಲ್ಲಾ ಮನೆಯಿಂದ ಕೆಲಸ ಮಾಡಲೆಂದೇ ನೇಮಕ ಮಾಡಲಾಗಿತ್ತು. ಈಗ ಕಚೇರಿಗೆ ಬಂದು ಕೆಲಸ ಮಾಡುವಂತೆ ಕಡ್ಡಾಯಪಡಿಸುವುದು ಸರಿ ಅಲ್ಲ ಎಂಬುದು ಹಲವು ಉದ್ಯೋಗಿಗಳ ವಾದ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ