Forex Reserves: ಅ. 13ರಂದು ಅಂತ್ಯಗೊಂಡ ವಾರದಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ 585.89 ಬಿಲಿಯನ್ ಡಾಲರ್ಗೆ ಏರಿಕೆ
ಅಕ್ಟೋಬರ್ 13ರಂದು ಅಂತ್ಯಗೊಂಡ ವಾರದಲ್ಲಿ ಭಾರತದ ಫಾರೆಕ್ಸ್ ಮೀಸಲು ನಿಧಿ 1.153 ಬಿಲಿಯನ್ ಡಾಲರ್ನಷ್ಟು ಏರಿ 585.895 ಬಿಲಿಯನ್ ಡಾಲರ್ ಮೊತ್ತ ಮುಟ್ಟಿದೆ. ಫಾರೀನ್ ಕರೆನ್ಸಿ ಸಂಗ್ರಹ ಕಡಿಮೆ ಆದರೂ ಚಿನ್ನದ ಮೀಸಲು ಪ್ರಮಾಣ ಗಣನೀಯವಾಗಿ ಹೆಚ್ಚಿದ್ದು ಒಟ್ಟಾರೆ ಫಾರೆಕ್ಸ್ ರಿಸರ್ವ್ಸ್ ಹೆಚ್ಚಲು ಕಾರಣವಾಗಿದೆ. ಸರಿಯಾಗಿ ಎರಡು ವರ್ಷಗಳ ಹಿಂದೆ ಭಾರತದ ವಿದೇಶ ವಿನಿಮಯ ಮೀಸಲು ನಿಧಿ ಸಾರ್ವಕಾಲಿಕ ಗರಿಷ್ಠವಾದ 645 ಬಿಲಿಯನ್ ಡಾಲರ್ ಗಡಿ ದಾಟಿ ಹೋಗಿತ್ತು.
ನವದೆಹಲಿ, ಅಕ್ಟೋಬರ್ 22: ಭಾರತದ ವಿದೇಶ ವಿನಿಮಯ ಮೀಸಲು ನಿಧಿ (Forex Reserves) ಅಕ್ಟೋಬರ್ 13ರಂದು ಅಂತ್ಯಗೊಂಡ ವಾರದಲ್ಲಿ 1.153 ಬಿಲಿಯನ್ ಡಾಲರ್ನಷ್ಟು ಏರಿದೆ. ಅಂದರೆ, ಸುಮಾರು 9,600 ಕೋಟಿ ರೂನಷ್ಟು ಏರಿಕೆಯಾಗಿ 585.896 ಬಿಲಿಯನ್ ಡಾಲರ್ (48.77 ಲಕ್ಷ ಕೋಟಿ ರೂ) ಮೊತ್ತ ತಲುಪಿದೆ. ಹಿಂದಿನ ಕೆಲ ವಾರಗಳಿಂದ ಸತತವಾಗಿ ಕುಸಿಯುತ್ತಿದ್ದ ಫಾರೆಕ್ಸ್ ರಿಸರ್ವ್ಸ್ ಈ ವಾರ ಏರಿಕೆ ಕಂಡಿದೆ. ಹಿಂದಿನ ವಾರದಲ್ಲಿ, ಅಂದರೆ ಅಕ್ಟೋಬರ್ 6ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ಮೀಸಲು ನಿಧಿ 2.166 ಬಿಲಿಯನ್ ಡಾಲರ್ನಷ್ಟು ಇಳಿಕೆಯಾಗಿ 584.742 ಬಿಲಿಯನ್ ಡಾಲರ್ ಮೊತ್ತಕ್ಕೆ ಕುಸಿದಿತ್ತು.
ಅಕ್ಟೋಬರ್ 13ರಂದು ಅಂತ್ಯಗೊಂಡ ವಾರದಲ್ಲಿ ವಿದೇಶೀ ಕರೆನ್ಸಿ ಸಂಪತ್ತು ತುಸು ಕರಗಿದರೂ ಒಟ್ಟಾರೆಯಾಗಿ ಮೀಸಲು ನಿಧಿ ಏರಿರುವುದು ಗಮನಾರ್ಹ. ಫಾರೆಕ್ಸ್ ರಿಸರ್ವ್ಸ್ನಲ್ಲಿ ನಾಲ್ಕು ಭಾಗಳಿರುತ್ತವೆ. ಅವುಗಳ ಪೈಕಿ ವಿದೇಶೀ ಕರೆನ್ಸಿಗಳ ಸಂಗ್ರಹ ಪ್ರಮುಖವಾದುದು. ಚಿನ್ನದ ಸಂಗ್ರಹ, ಸ್ಪೆಷಲ್ ಡ್ರಾಯಿಂಗ್ ರೈಟ್ಸ್ ಮತ್ತು ಐಎಂಎಫ್ವೊಂದಿಗಿನ ಮೀಸಲು ಹಂಚಿಕೆ ಇನ್ನಿತರ ಭಾಗಗಳಾಗಿವೆ. ಎಸ್ಡಿಆರ್ ಮತ್ತು ಐಎಂಎಫ್ ಪಾಲುಗಳೇನು ಎಂಬ ವಿವರ ಈ ಸುದ್ದಿಯಲ್ಲಿ ಮುಂದಿದೆ.
ಈ ಬಾರಿ ವಿದೇಶೀ ಕರೆನ್ಸಿ ಸಂಪತ್ತು 178 ಮಿಲಿಯನ್ ಡಾಲರ್ನಷ್ಟು ಕಡಿಮೆ ಆಗಿದೆ. ಆರ್ಬಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಫಾರೀನ್ ಕರೆನ್ಸಿ ಅಸೆಟ್ಗಳ ಮೊತ್ತ 519.351 ಬಿಲಿಯನ್ ಡಾಲರ್ ಆಗಿದೆ. ಒಟ್ಟಾರೆ ಫಾರೆಕ್ಸ್ ಮೀಸಲು ನಿಧಿಯಾದ 585 ಬಿಲಿಯನ್ ಡಾಲರ್ ಪೈಕಿ ವಿದೇಶೀ ಕರೆನ್ಸಿಗಳ ಮೊತ್ತವೇ 519 ಡಾಲರ್ನಷ್ಟಿದೆ.
ಇನ್ನು, ಫಾರೆಕ್ಸ್ ರಿಸರ್ವ್ಸ್ನಲ್ಲಿ ಎರಡನೇ ಪ್ರಮುಖ ಭಾಗವಾಗಿರುವ ಗೋಲ್ಡ್ ರಿಸರ್ವ್ಸ್ 1.268 ಬಿಲಿಯನ್ ಡಾಲರ್ನಷ್ಟು ಹೆಚ್ಚಾಗಿ 43.575 ಬಿಲಿಯನ್ ಡಾಲರ್ ತಲುಪಿದೆ. ಚಿನ್ನದ ಸಂಗ್ರಹ ಹೆಚ್ಚದೇ ಹೋಗಿದ್ದರೆ ಒಟ್ಟಾರೆ ಫಾರೆಕ್ಸ್ ಮೀಸಲು ನಿಧಿ ಮತ್ತಷ್ಟು ಕರಗುತ್ತಿತ್ತು.
ಹಾಗೆಯೇ, ಎಸ್ಡಿಆರ್ಗಳು 72 ಬಿಲಿಯನ್ ಡಾಲರ್ನಷ್ಟು ಏರಿವೆ. ಐಎಂಎಫ್ನೊಂದಿಗಿನ ಭಾರತದ ಮೀಸಲು ಸ್ಥಾನ 8 ಬಿಲಿಯನ್ ಡಾಲರ್ನಷ್ಟು ಕಡಿಮೆ ಆಗಿದೆ.
ಎಸ್ಡಿಆರ್ ಎಂದರೇನು?
ಸ್ಪೆಷಲ್ ಡ್ರಾಯಿಂಗ್ ರೈಟ್ಸ್ ಎಂಬುದು ಐಎಂಎಫ್ ಸದಸ್ಯ ರಾಷ್ಟ್ರಗಳಿಗೆ ಸಿಗುವ ಅಂತಾರಾಷ್ಟ್ರೀಯ ವಿಶೇಷ ಕರೆನ್ಸಿ. ಇದನ್ನು ಬೇರೆ ದೇಶಗಳ ಕರೆನ್ಸಿ ಜೊತೆ ವಿನಿಮಯ ಮಾಡಿಕೊಳ್ಳಬಹುದು. ಡಾಲರ್ ಕರೆನ್ಸಿ ಕಡಿಮೆ ಆದರೆ ಎಸ್ಡಿಆರ್ಗಳನ್ನು ಬಳಕೆ ಮಾಡಬಹುದು.
ಇದನ್ನೂ ಓದಿ: ಕಚ್ಚಾತೈಲಕ್ಕೆ ಚೀನಾ ಕರೆನ್ಸಿಯಲ್ಲಿ ಹಣ ಪಾವತಿಸುವ ರಷ್ಯಾ ಒತ್ತಾಯವನ್ನು ತಿರಸ್ಕರಿಸಿದ ಭಾರತ
ಇನ್ನು, ಐಎಂಎಫ್ವೊಂದಿಗಿನ ಮೀಸಲು ಸ್ಥಾನದ ವಿಚಾರ. ಐಎಂಎಫ್ ಒಂದು ತುರ್ತು ಖಾತೆಯನ್ನು ಹೊಂದಿದ್ದು, ಪ್ರತಿಯೊಂದು ದೇಶವೂ ತಮ್ಮ ಕರೆನ್ಸಿಯ ನಿರ್ದಿಷ್ಟ ಭಾಗವನ್ನು ಈ ಎಮರ್ಜೆನ್ಸಿ ಖಾತೆಗೆ ಕೊಡಬೇಕು. ಒಂದು ದೇಶದ ಎಷ್ಟು ಕರೆನ್ಸಿ ಈ ಖಾತೆಯಲ್ಲಿ ಇರುತ್ತದೆ ಎಂಬುದನ್ನು ರಿಸರ್ವ್ ಪೊಸಿಶನ್ ಸೂಚಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ