
ನವದೆಹಲಿ, ಅಕ್ಟೋಬರ್ 20: ವಿಶ್ವದ ಅತ್ಯಂತ ಶಕ್ತಿಶಾಲಿ ಕ್ಷಿಪಣಿಗಳಲ್ಲಿ ಭಾರತದ ಬ್ರಹ್ಮೋಸ್ ಕೂಡ ಇದೆ. ಆಪರೇಷನ್ ಸಿಂದೂರ್ (Operation Sindoor) ವೇಳೆ ಬ್ರಹ್ಮೋಸ್ನ ರಕ್ಕಸ ಶಕ್ತಿ ಜಗಜ್ಜಾಹೀರು ಆಗಿದೆ. ಪಾಕಿಸ್ತಾನದ ಉಗ್ರರ ಸ್ಥಳಗಳು ಹಾಗೂ ಅಲ್ಲಿಯ ಸೇನಾ ನೆಲೆಗಳನ್ನು ಬ್ರಹ್ಮೋಸ್ ಕ್ಷಿಪಣಿಗಳು ಚಿಂದಿ ಉಡಾಯಿಸಿದ್ದನ್ನು ಇಡೀ ಜಗತ್ತು ಗಮನಿಸಿದೆ. ಅದಾದ ಬಳಿಕ ಬ್ರಹ್ಮೋಸ್ ಕ್ಷಿಪಣಿ ಬಗ್ಗೆ ಜಾಗತಿಕ ಟಾಕ್ ಹೆಚ್ಚಿದೆ. ಅದಕ್ಕೆ ಬೇಡಿಕೆಯೂ ಹೆಚ್ಚಿದೆ. ಬಹಳಷ್ಟು ದೇಶಗಳು ಈ ಕ್ಷಿಪಣಿ ಪಡೆಯಲು ಹಾತೊರೆಯುತ್ತಿವೆ. ಕೆಲ ಮಾಧ್ಯಮಗಳಲ್ಲಿ ಬಂದ ಮಾಹಿತಿ ಪ್ರಕಾರ ಎರಡು ದೇಶಗಳು ಬ್ರಹ್ಮೋಸ್ ಕ್ಷಿಪಣಿ ಖರೀದಿಗೆ ಒಪ್ಪಂದ ಮಾಡಿಕೊಂಡಿವೆ ಎಂದು ಹೇಳಲಾಗಿದೆ.
ಕಳೆದ ತಿಂಗಳು ಈ ದೇಶಗಳು ಮಾಡಿಕೊಂಡಿರುವ ಈ ಒಪ್ಪಂದದ ಒಟ್ಟು ಮೌಲ್ಯ 4,000 ಕೋಟಿ ರೂ. ಇವನ್ನು ಖರೀದಿಸುತ್ತಿರುವ ಎರಡು ದೇಶಗಳು ಯಾವುವು ಎಂಬುದು ಇನ್ನೂ ರಹಸ್ಯವಾಗಿಯೇ ಇದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎರಡು ದೇಶಗಳೊಂದಿಗೆ ಬ್ರಹ್ಮೋಸ್ ರಫ್ತು ಒಪ್ಪಂದ ಮಾಡಿಕೊಳ್ಳಲಾಗಿರುವ ವಿಚಾರವನ್ನು ತಿಳಿಸಿದ್ದಾರೆ.
ಇದನ್ನೂ ಓದಿ: ಶಕ್ತಿಶಾಲಿ ಏರ್ ಫೋರ್ಸ್; ಚೀನಾವನ್ನು ಹಿಂದಿಕ್ಕಿದ ಭಾರತ ವಿಶ್ವದ ನಂ. 3
ಫಿಲಿಪ್ಪೈನ್ಸ್ ದೇಶ ಸದ್ಯ ಬ್ರಹ್ಮೋಸ್ ಕ್ಷಿಪಣಿಯನ್ನು ಖರೀದಿಸಿರುವ ಏಕೈಕ ದೇಶವಾದರೂ, ಹಲವು ಆಗ್ನೇಯ ಏಷ್ಯನ್ ಮತ್ತು ಆಫ್ರಿಕನ್ ದೇಶಗಳು ಖರೀದಿಗೆ ಆಸಕ್ತಿ ತೋರಿವೆ. ಸದ್ಯ 4,000 ಕೋಟಿ ರೂ ಮೊತ್ತಕ್ಕೆ ಬ್ರಹ್ಮೋಸ್ ಖರೀದಿಸಲು ಒಪ್ಪಂದ ಮಾಡಿಕೊಂಡಿರುವ ಆ ಎರಡು ದೇಶಗಳು ಯಾವುವು ಎಂಬುದನ್ನು ಸರ್ಕಾರ ಗೌಪ್ಯವಾಗಿ ಇಟ್ಟಿದೆ. ಜಾಗತಿಕ ರಾಜಕೀಯ ಸೂಕ್ಷ್ಮತೆ ಹಿನ್ನೆಲೆಯಲ್ಲಿ ಇದನ್ನು ರಹಸ್ಯವಾಗಿ ಇಟ್ಟಿರಲು ಸಾಧ್ಯ.
ಇಂಡೋನೇಷ್ಯಾ, ವಿಯೆಟ್ನಾಂ, ಮಲೇಷ್ಯಾ ದೇಶಗಳು ಕೆಲವಾರು ವರ್ಷಗಳಿಂದ ಬ್ರಹ್ಮೋಸ್ ಖರೀದಿಗೆ ಮಾತುಕತೆಯಲ್ಲಿ ಅಂತಿಮ ಹಂತಕ್ಕೆ ಬಂದಿವೆ. ಇವುಗಳೇ ಒಪ್ಪಂದ ಮಾಡಿಕೊಂಡಿದ್ದಿರಲೂ ಬಹುದು. ಮಧ್ಯಪ್ರಾಚ್ಯ, ಲ್ಯಾಟಿನ್ ಅಮೆರಿಕ, ಆಫ್ರಿಕನ್ ದೇಶಗಳೂ ಕೂಡ ಬ್ರಹ್ಮೋಸ್ ಖರೀದಿಗೆ ಆಸಕ್ತವಾಗಿವೆ.
ಇದನ್ನೂ ಓದಿ: ಬ್ರಿಟನ್ನ ಮಾರ್ಟ್ಲೆಟ್ ಮಿಸೈಲ್ ಪಡೆಯಲಿದೆ ಭಾರತ; 350 ಮಿಲಿಯನ್ ಪೌಂಡ್ ಮೊತ್ತಕ್ಕೆ ಡೀಲ್
ರಷ್ಯಾದ ಮಷಿನೋಸ್ಟ್ರೋಯೆನಿಯಾ ಹಾಗೂ ಭಾರತದ ಡಿಆರ್ಡಿಒ ಸಂಸ್ಥೆಗಳು ಜಂಟಿಯಾಗಿ ಬ್ರಹ್ಮೋಸ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿವೆ. ಇವುಗಳ ವೇಗ ಮ್ಯಾಕ್ 3 ಮಟ್ಟದಲ್ಲಿರುತ್ತದೆ. ಅಂದರೆ ಗಂಟೆಗೆ 3,000-4,000 ಕಿಮೀ ವೇಗದಲ್ಲಿ ಸಾಗಬಲ್ಲುವು. ಈಗಿನ ಕ್ಷಿಪಣಿಗಳು ಮ್ಯಾಕ್ 5 ವೇಗಕ್ಕಿಂತಲೂ ಹೆಚ್ಚಿರುತ್ತವೆಯಾದರೂ ಬ್ರಹ್ಮೋಸ್ ಕ್ಷಿಪಣಿಯ ಸಾಮರ್ಥ್ಯ ಅಗಾಧವಾದುದು. ಇದು ಆಪರೇಷನ್ ಸಿಂದೂರ್ನಲ್ಲಿ ಸಾಬೀತಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ