ನವದೆಹಲಿ, (ಫೆಬ್ರವರಿ 02): ಭಾರತದ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಪಾವತಿ ವ್ಯವಸ್ಥೆಯು ಇದೀಗ ಫ್ರಾನ್ಸ್‌ಗೂ ತಲುಪಿದೆ. ಇಂದು (ಫೆಬ್ರವರಿ 02) ಪ್ಯಾರೀಸ್ನಲ್ಲಿ ನಡೆದ ಗಣರಾಜ್ಯೋತ್ಸವ (Republic Day )ಸಮಾರಂಭದಲ್ಲಿ ಯುಪಿಐ ಪಾವತಿಗೆ ಚಾಲನೆ ನೀಡಲಾಗಿದೆ. ಈ ಬಗ್ಗೆ ಫ್ರಾನ್ಸ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು X ನಲ್ಲಿ ಹಂಚಿಕೊಂಡಿದ್ದು, ಯುಪಿಐ ಪಾವತಿಯನ್ನು ಜಾಗತಿಕಗೊಳಿಸುವ ದೃಷ್ಟಿ ಪ್ರಧಾನಿ ನರೇಂದ್ರ ಮೋದಿಯವರದ್ದಾಗಿದೆ ಎಂದು ಬರೆದುಕೊಂಡಿದೆ.
ಭಾರತೀಯ ಪ್ರವಾಸಿಗರು ಈಗ ಯುಪಿಐ ಬಳಸಿ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಖರೀದಿಸಬಹುದು ಮತ್ತು ಐಫೆಲ್ ಟವರ್‌ಗೆ ಭೇಟಿ ನೀಡಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಎನ್‌ಪಿಸಿಐ ಹೇಳಿದೆ. ಈ ವಹಿವಾಟು ಪ್ರಕ್ರಿಯೆಯು ಯಾವುದೇ ತೊಂದರೆಗಳಿಲ್ಲದೆ ತ್ವರಿತ ಮತ್ತು ಸುಲಭವಾಗಿರುತ್ತದೆ. ಐಫೆಲ್ ಟವರ್‌ಗೆ ಭೇಟಿ ನೀಡುವ ಅಂತರರಾಷ್ಟ್ರೀಯ ಪ್ರವಾಸಿಗರಲ್ಲಿ ಭಾರತೀಯರು 2ನೇ ಸ್ಥಾನದಲ್ಲಿದ್ದಾರೆ . ಹಾಗಾಗಿ ಈ ಸೌಲಭ್ಯವನ್ನು ಜಾರಿ ಮಾಡಲಾಗಿದ್ದು, ಭಾರತೀಯ ಪ್ರವಾಸಿಗರು QR ಕೋಡ್ ಮೂಲಕ ಸ್ಕ್ಯಾನ್ ಮಾಡಿ ಪಾವತಿ ಮಾಡಬಹುದಾಗಿದೆ.
ಇನ್ನು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಭಾರತಕ್ಕೆ ಭೇಟಿ ನೀಡಿ ರಾಜ್‌ಪಥ್‌ನಲ್ಲಿ ನಡೆದ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆ ಫೋಟೋಗಳನ್ನು ಇಂದು ಫ್ರಾನ್ಸ್‌ನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರದರ್ಶಿಸಲಾಯಿತು.
ಭಾರತದಿಂದ UPI ಅನ್ನು ಅಳವಡಿಸಿಕೊಳ್ಳಲು ಫ್ರಾನ್ಸ್ ಬಲವಾದ ಆಸಕ್ತಿಯನ್ನು ತೋರಿಸಿತ್ತು. ಜುಲೈನಲ್ಲಿ ಮೋದಿಯವರು ಫ್ರಾನ್ಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಐಫೆಲ್ ಟವರ್‌ನಿಂದ ಪ್ರಾರಂಭವಾಗುವ ಯುಪಿಐ ಪಾವತಿ ಕಾರ್ಯವಿಧಾನವನ್ನು ಬಳಸಲು ಭಾರತ ಮತ್ತು ಫ್ರಾನ್ಸ್ ಒಪ್ಪಿಕೊಂಡಿವೆ. ಫ್ರಾನ್ಸ್‌ನಲ್ಲಿರುವ ಭಾರತೀಯ ಪ್ರವಾಸಿಗರು ಈಗ ರೂಪಾಯಿಗಳಲ್ಲಿ ಪಾವತಿ ಮಾಡಲು ಸಾಧ್ಯವಾಗುತ್ತದೆ ಎಂದು ಮೋದಿ ಹೇಳಿದ್ದರು. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ (ಎನ್‌ಸಿಪಿಐ) ಅಂತಾರಾಷ್ಟ್ರೀಯ ಅಂಗವು ಯುಪಿಐ ಮತ್ತು ರುಪೇ ಸ್ವೀಕರಿಸಲು ಫ್ರಾನ್ಸ್‌ನ ಲೈರಾ ನೆಟ್‌ವರ್ಕ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಜೈಪುರದ ಹವಾ ಮಹಲ್ ಬಳಿಯ ಅಂಗಡಿಯಲ್ಲಿ ಮ್ಯಾಕ್ರಾನ್ ಮತ್ತು ಮೋದಿ ಕುಲ್ಹಾಡ್ ಚಹಾ ಸೇವಿಸಿದ್ದರು. ಮೋದಿ ಅದಕ್ಕೆ ತಮ್ಮ ಫೋನ್‌ನಲ್ಲಿ ಯುಪಿಐ ಬಳಸಿ ಚಹಾಕ್ಕೆ ಹಣ ಪಾವತಿಸಿದ್ದರು. ಮ್ಯಾಕ್ರಾನ್ ಇದನ್ನು ಆಶ್ಚರ್ಯಚಕಿತರಾಗಿ ವೀಕ್ಷಿಸಿದ್ದರು. ಅಂಗಡಿ ಮಾಲೀಕರು ತಮ್ಮ ಫೋನ್‌ನಲ್ಲಿ ಪಾವತಿಯ ದೃಢೀಕರಣ ಪಡೆದಿದ್ದನ್ನು ಸಹ ಮೋದಿ ಮ್ಯಾಕ್ರಾನ್ಗೆ ತಿಳಿಸಿದ್ದರು.
ವಿಶ್ವಾದ್ಯಂತ ಎಲ್ಲಾ ವಹಿವಾಟುಗಳಲ್ಲಿ 46 ಪ್ರತಿಶತದಷ್ಟು UPI ಮೂಲಕ ಮಾಡಲಾಗುತ್ತದೆ. ಯುಪಿಐ ಪಾವತಿ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಎಂದು ರಾಯಭಾರಿ ಕಚೇರಿ ತಿಳಿಸಿದೆ. ಯುಪಿಐ ಅನ್ನು ಫ್ರಾನ್ಸ್‌ನಲ್ಲಿ ಲೈರಾ ಸಹಯೋಗದೊಂದಿಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಪ್ರಾರಂಭಿಸಿದೆ. ಎರಡೂ ದೇಶಗಳ ಆನ್‌ಲೈನ್ ಪಾವತಿ ವ್ಯವಸ್ಥೆಗಳ ಹಂಚಿಕೆಗೆ ಸಂಬಂಧಿಸಿದಂತೆ ಭಾರತ ಹಾಗೂ ಫ್ರಾನ್ಸ್ ದೇಶಗಳ ಪರಸ್ಪರ ಒಪ್ಪಂದ ಮಾಡಿಕೊಂಡಿದ್ದವು.
Published On - 10:28 pm, Fri, 2 February 24