ಎಚ್1ಬಿ ವೀಸಾ ವ್ಯವಸ್ಥೆಯೇ ಒಂದು ‘ಮೋಸ’; ಹೊಸ ವರಾತ ತೆಗೆದ ಅಮೆರಿಕ; ಭಾರತೀಯರಿಗೆ ಹೊಸ ತಲೆನೋವು

US commerce secretary calls H1B visa system a scam: ಹಲವು ಭಾರತೀಯರ ಅಮೆರಿಕನ್ ಕನಸಿಗೆ ಹೆಬ್ಬಾಗಿಲಾಗಿರುವ ಎಚ್-1ಬಿ ವೀಸಾದಲ್ಲಿ ದೊಡ್ಡ ಬದಲಾವಣೆ ತರಲು ಹೊರಟಿದೆ ಅಮೆರಿಕ. ಎಚ್-1ಬಿ ವೀಸಾ ಸಿಸ್ಟಂ ಅನ್ನು ಸ್ಕ್ಯಾಮ್ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೋವರ್ಡ್ ಲುಟ್ನಿಕ್ ಬಣ್ಣಿಸಿದ್ದಾರೆ. ಎಚ್-1ಬಿ ವೀಸಾ ನೀಡಲು ಲಾಟರಿ ಸಿಸ್ಟಂ ಬದಲು ವೇತನ ಹಾಗೂ ಕೌಶಲ್ಯಗಳ ಮಾನದಂಡ ಇಡಲು ಅಮೆರಿಕ ನಿರ್ಧರಿಸಿದೆ.

ಎಚ್1ಬಿ ವೀಸಾ ವ್ಯವಸ್ಥೆಯೇ ಒಂದು ‘ಮೋಸ’; ಹೊಸ ವರಾತ ತೆಗೆದ ಅಮೆರಿಕ; ಭಾರತೀಯರಿಗೆ ಹೊಸ ತಲೆನೋವು
ಎಚ್-1ಬಿ ವೀಸಾ

Updated on: Aug 27, 2025 | 6:01 PM

ನವದೆಹಲಿ, ಆಗಸ್ಟ್ 27: ಅಮೆರಿಕಕ್ಕೆ ಕೆಲಸಕ್ಕೆ ಹೋಗುವವರ ಬಹುದೊಡ್ಡ ಆಧಾರಸ್ತಂಭವಾಗಿರುವ ಎಚ್1ಬಿ ವೀಸಾ ಸಿಸ್ಟಂ (H-1B visa system) ಬಗ್ಗೆ ಅಮೆರಿಕ ಹೊಸ ರಾಗ ಹಾಡತೊಡಗಿದೆ. ಈ ವಿಧಾನದ ವೀಸಾ ವ್ಯವಸ್ಥೆಯೇ ಸ್ಕ್ಯಾಮ್ ಎಂದು ಅದು ಬಣ್ಣಿಸಿದೆ. ಅಮೆರಿಕದ ಎಚ್-1ಬಿ ವೀಸಾ ಮತ್ತು ಗ್ರೀನ್ ಕಾರ್ಡ್ ವ್ಯವಸ್ಥೆಯಲ್ಲೇ ದೊಡ್ಡ ಬದಲಾವಣೆ ಮಾಡಲು ಟ್ರಂಪ್ ಆಡಳಿತ ಯೋಚಿಸುತ್ತಿದೆ. ಈ ನಿಟ್ಟಿನಲ್ಲಿ ಅಲ್ಲಿನ ಸರ್ಕಾರದ ಇಂಗಿತದ ಬಗ್ಗೆ ಅಲ್ಲಿಯ ವಾಣಿಜ್ಯ ಇಲಾಖೆ ಕಾರ್ಯದರ್ಶಿ ಹೋವಾರ್ಡ್ ಲುಟ್ನಿಕ್ (Howard Lutnick) ಸುಳಿವು ನೀಡಿದ್ದಾರೆ. ಎಚ್-1ಬಿ ವೀಸಾ ಸಿಸ್ಟಂ ಒಂದು ಸ್ಕ್ಯಾಮ್ ಎಂದು ಬಣ್ಣಿಸಿದ್ದು ಅವರೆಯೇ.

ಲುಟ್ನಿಕ್ ಮಾತನಾಡಿರುವ ಪ್ರಕಾರ, ಅಮೆರಿಕ ಸರ್ಕಾರ ಎಚ್-1ಬಿ ವೀಸಾ ಮತ್ತು ಗ್ರೀನ್ ಕಾರ್ಡ್ ಸಿಸ್ಟಂನಲ್ಲಿ ದೊಡ್ಡ ಬದಲಾವಣೆ ಮಾಡಲು ಅಣಿಯಾಗಿದೆ. ಸದ್ಯ ಎಚ್-1ಬಿ ವ್ಯವಸ್ಥೆಯು ಲಾಟರಿ ಆಧಾರಿತವಾಗಿ ಇದೆ. ಅದನ್ನು ವಿವಿಧ ಮಾನದಂಡಗಳ ಆಧಾರವಾಗಿ ನೀಡುವ ಪದ್ಧತಿ ತರುವ ಸಾಧ್ಯತೆ ಇದೆ ಎಂದಿದ್ದಾರೆ. ವೇತನ ಮತ್ತು ಕೌಶಲ್ಯ ಇತ್ಯಾದಿ ಮಾನದಂಡಗಳ ಆಧಾರವಾಗಿ ಈ ವೀಸಾಗಳನ್ನು ನೀಡಬಹುದು. ಅಧಿಕ ವೇತನದವರಿಗೆ ಮೊದಲ ಆದ್ಯತೆ ನೀಡಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಅಮೆರಿಕದ ಶೇ. 50 ಟ್ಯಾರಿಫ್ ಚಾಲ್ತಿಗೆ; ಬಾಧಿತವಾಗುವ ಭಾರತೀಯ ಸೆಕ್ಟರ್​ಗಳ್ಯಾವುವು? ಇಲ್ಲಿದೆ ಡೀಟೇಲ್ಸ್

ಹಾಗೆಯೇ, ಗ್ರೀನ್ ಕಾರ್ಡ್ ವಿತರಣೆಯ ಮಾನದಂಡದಲ್ಲೂ ಬದಲಾವಣೆ ತರಲಾಗುವುದು ಎಂದಿದ್ದಾರೆ ಹೋವರ್ಡ್ ಲುಟ್ನಿಕ್ ತಿಳಿಸಿದ್ದಾರೆ. ಇದೆಲ್ಲವೂ ಒಟ್ಟಾರೆಯಾಗಿ ವಿದೇಶೀ ಕೆಲಸಗಾರರ ಆಗಮನವನ್ನು ಸೀಮಿತಗೊಳಿಸುವುದು ಮತ್ತು ಅಮೆರಿಕನ್ ಕೆಲಸಗಾರರಿಗೆ ಹೆಚ್ಚು ನೌಕರಿಗಳು ಸಿಗುವಂತಾಗುವುದು ಗುರಿಯಾಗಿದೆ.

ಎಚ್-1ಬಿ ವೀಸಾ ಎಂಬುದು ವಿಶೇಷ ಪರಿಣತಿ ಇರುವ ಕೆಲಸಗಾರರನ್ನು ಬೇರೆ ಬೇರೆ ದೇಶಗಳಿಂದ ಅಮೆರಿಕಕ್ಕೆ ತರಲು ಅವಕಾಶ ನೀಡುವ ಒಂದು ವ್ಯವಸ್ಥೆ. ವರ್ಷಕ್ಕೆ ಇಂತಿಷ್ಟು ಸಂಖ್ಯೆಯಲ್ಲಿ ಎಚ್-1ಬಿ ವೀಸಾ ನೀಡಲಾಗುತ್ತದೆ. ಇದರಲ್ಲಿ ಹೆಚ್ಚಿನ ವೀಸಾ ಭಾರತೀಯರಿಗೆ ಸಿಗುತ್ತಾ ಇದೆ.

ಅಮೆರಿಕದ ಸ್ಥಳೀಯ ಕೆಲಸಗಾರರಿಗೆ ತೀರಾ ಹೆಚ್ಚಿನ ವೇತನ ನೀಡಬೇಕಿರುವುದರಿಂದ ಅಮೆರಿಕನ್ ಕಂಪನಿಗಳು ಎಚ್-1ಬಿ ವೀಸಾ ಮೂಲಕ ಕಡಿಮೆ ಸಂಬಳಕ್ಕೆ ವಿದೇಶಗಳಿಂದ ಕೆಲಸಗಾರರನ್ನು ಕರೆತರುತ್ತವೆ. ಐಟಿ ಹಾಗೂ ಟೆಕ್ ಕ್ಷೇತ್ರದಲ್ಲಿ ಭಾರತೀಯರು ಪರಿಣತಿ ಹೊಂದಿರುವುದರಿಂದ ಅವರಿಗೆ ಹೆಚ್ಚಿನ ಮಣೆ ಹಾಕಲಾಗುತ್ತದೆ.

ಇದನ್ನೂ ಓದಿ: ‘ಮ್ಯಾಗ್ನೆಟ್ ನೀಡದಿದ್ದರೆ ಚೀನಾವನ್ನು ನಾಶ ಮಾಡುತ್ತೇವೆ’: ಮತ್ತೆ ಆರ್ಭಟಿಸಿದ ಡೊನಾಲ್ಡ್ ಟ್ರಂಪ್

ಈಗ ಎಚ್-1ಬಿ ವೀಸಾ ವ್ಯವಸ್ಥೆಯಲ್ಲಿ ವೇತನ ಮಾನದಂಡ ತಂದುಬಿಟ್ಟರೆ ಕಂಪನಿಗಳು ವಿದೇಶಗಳಿಂದ ಕಡಿಮೆ ಸಂಬಳಕ್ಕೆ ಕೆಲಸಗಾರರನ್ನು ತರುವ ಅವಕಾಶ ಇರುವುದಿಲ್ಲ. ಅನಿವಾರ್ಯವಾಗಿ ಸ್ಥಳೀಯ ಕೆಲಸಗಾರರನ್ನು ನೇಮಕ ಮಾಡಿಕೊಳ್ಳಬೇಕಾಗುತ್ತದೆ.

ಅಮೆರಿಕವೇನಾದರೂ ಈ ಬದಲಾವಣೆ ಮಾಡಿದಲ್ಲಿ ಅಮೆರಿಕಕ್ಕೆ ಹೋಗಬಯಸುವ ಹಲವು ಭಾರತೀಯರಿಗೆ ನಿರಾಸೆಯಾಗಲಿದೆ. ಅಮೆರಿಕದ ಕಂಪನಿಗಳಿಗೂ ವೇತನದ ಹೊರೆ ಹೆಚ್ಚಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ