AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಶೇ. 50 ಟ್ಯಾರಿಫ್ ಚಾಲ್ತಿಗೆ; ಬಾಧಿತವಾಗುವ ಭಾರತೀಯ ಸೆಕ್ಟರ್​ಗಳ್ಯಾವುವು? ಇಲ್ಲಿದೆ ಡೀಟೇಲ್ಸ್

Important sectors in India to be affected with new US tariffs: ಭಾರತದ ಹೆಚ್ಚಿನ ಸರಕುಗಳ ಮೇಲೆ ಅಮೆರಿಕ ಇಂದಿನಿಂದ ಶೇ. 50 ಹಾಗೂ ಹೆಚ್ಚಿನ ಟ್ಯಾರಿಫ್ ವಿಧಿಸುತ್ತಿದೆ. ರಷ್ಯನ್ ತೈಲ ಖರೀದಿಸುತ್ತಿದೆ ಎನ್ನುವ ಕಾರಣ ಇಟ್ಟು ಅಮೆರಿಕ ಈ ಅಧಿಕ ಸುಂಕವನ್ನು ಭಾರತದ ಮೇಲೆ ಹೇರಿದೆ. ಟೆಕ್ಸ್​ಟೈಲ್ ಮತ್ತು ಜ್ಯುವೆಲರಿ ಸೆಕ್ಟರ್​ಗಳು ಅತಿಹೆಚ್ಚು ಬಾಧಿತಗೊಳ್ಳಬಹುದು. ಆಟೊಮೊಬೈಲ್ ಇತ್ಯಾದಿ ಇನ್ನೂ ಕೆಲ ಕ್ಷೇತ್ರಗಳಿಗೆ ಹಿನ್ನಡೆಯಾಗಬಹುದು.

ಅಮೆರಿಕದ ಶೇ. 50 ಟ್ಯಾರಿಫ್ ಚಾಲ್ತಿಗೆ; ಬಾಧಿತವಾಗುವ ಭಾರತೀಯ ಸೆಕ್ಟರ್​ಗಳ್ಯಾವುವು? ಇಲ್ಲಿದೆ ಡೀಟೇಲ್ಸ್
ಡೊನಾಲ್ಡ್ ಟ್ರಂಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 27, 2025 | 4:39 PM

Share

ನವದೆಹಲಿ, ಆಗಸ್ಟ್ 27: ಭಾರತದ ಸರಕುಗಳಿಗೆ ಅಮೆರಿಕ ವಿಧಿಸುವ ಶೇ. 50 ಟ್ಯಾರಿಫ್ (US tariffs) ಕ್ರಮ ಇವತ್ತಿಂದ ಜಾರಿಗೆ ಬಂದಿದೆ. ಅಮೆರಿಕದ ಜೊತೆ ಟ್ರೇಡ್ ಡೀಲ್ ಮಾಡಿಕೊಳ್ಳದೇ ಇರುವುದಕ್ಕೆ ಮುಯ್ಯಿಯಾಗಿ ಅಮೆರಿಕ ಮೊದಲಿಗೆ ಶೇ. 25ರಷ್ಟು ಬೇಸ್​ಲೈನ್ ಟ್ಯಾರಿಫ್ ಹಾಕಿತು. ರಷ್ಯನ್ ತೈಲ ಖರೀದಿಸುತ್ತಿರುವುದಕ್ಕೆ ದಂಡವಾಗಿ ಹೆಚ್ಚುವರಿ ಶೇ. 25 ಟ್ಯಾರಿಫ್ ಹಾಕುತ್ತಿದೆ. ವಿವಿಧ ದೇಶಗಳು ಅಮೆರಿಕದ ಆರ್ಥಿಕತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಾ ಬರುತ್ತಿವೆ ಎಂದು ಹೇಳಿ ಡೊನಾಲ್ಡ್ ಟ್ರಂಪ್ ಮನಬಂದಂತೆ ಸುಂಕ ಹೇರಿಕೆ ಮಾಡುತ್ತಿದ್ಧಾರೆ. ಅಮೆರಿಕದ ಸಾಂಪ್ರದಾಯಿಕ ಮಿತ್ರ ದೇಶಗಳನ್ನೂ ಅವರು ಬಿಟ್ಟಿಲ್ಲ.

ಭಾರತದ ಮೇಲೆ ಪರಿಣಾಮ ಬೀರಲಿರುವ ಸುಂಕ

ಭಾರತದ ರಫ್ತಿಗೆ ಅಮೆರಿಕವೇ ಅತಿದೊಡ್ಡ ಮಾರುಕಟ್ಟೆ. 2024-25ರಲ್ಲಿ ಭಾರತದಿಂದ ಅಮೆರಿಕಕ್ಕೆ ಮಾಡಲಾದ ರಫ್ತಿನ ಮೌಲ್ಯ 86.5 ಬಿಲಿಯನ್ ಡಾಲರ್. ಈ ಪೈಕಿ 60.2 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳು ಶೇ. 50 ಟ್ಯಾರಿಫ್ ವ್ಯಾಪ್ತಿಗೆ ಬರುತ್ತವೆ. ಹೀಗಾಗಿ, ಟ್ರಂಪ್ ಟ್ಯಾರಿಫ್​ಗಳು ಭಾರತದ ಆರ್ಥಿಕತೆ ಮೇಲೆ ಸೀಮಿತ ಮಟ್ಟದಲ್ಲಾದರೂ ನಕಾರಾತ್ಮಕ ಪರಿಣಾಮ ಬೀರಬಲ್ಲುದು.

ಅಮೆರಿಕದ ಟ್ಯಾರಿಫ್​ನಿಂದ ಬಾಧಿತವಾಗುವ ಸೆಕ್ಟರ್​ಗಳ್ಯಾವುವು?

ಜವಳಿ ಉದ್ಯಮ: ಭಾರತದಿಂದ 10.8 ಬಿಲಿಯನ್ ಡಾಲರ್​ನಷ್ಟು ಉಡುಪುಗಳು ಒಂದು ವರ್ಷದಲ್ಲಿ ರಫ್ತಾಗುತ್ತವೆ. ಅಮೆರಿಕವೇ ಅತಿದೊಡ್ಡ ಮಾರುಕಟ್ಟೆ ಎನಿಸಿದೆ. ಈಗ ಭಾರತದ ಜವಳಿ ಉದ್ಯಮಿಗಳು ತಲೆ ಕೆಡಿಸಿಕೊಳ್ಳುವಂತಾಗಿದೆ. ಅದರಲ್ಲೂ ತಮಿಳುನಾಡಿವ ತಿಪ್ಪೂರ್ ಕ್ಲಸ್ಟರ್​ನಲ್ಲಿರುವ ಜವಳಿ ಉದ್ದಿಮೆಗಳಿಗೆ ಅನಿಶ್ಚಿತ ಪರಿಸ್ಥಿತಿ ಎದುರಾಗಿದೆ.

ಇದನ್ನೂ ಓದಿ: ‘ಮ್ಯಾಗ್ನೆಟ್ ನೀಡದಿದ್ದರೆ ಚೀನಾವನ್ನು ನಾಶ ಮಾಡುತ್ತೇವೆ’: ಮತ್ತೆ ಆರ್ಭಟಿಸಿದ ಡೊನಾಲ್ಡ್ ಟ್ರಂಪ್

ಆಭರಣ ಮತ್ತು ಹರಳು ಉದ್ಯಮ: ಜವಳಿ ಬಿಟ್ಟರೆ ಅಮೆರಿಕಕ್ಕೆ ಭಾರತದಿಂದ ಅತಿಹೆಚ್ಚು ರಫ್ತಾಗುವುದು ಹರಳು ಮತ್ತು ಆಭರಣ ವಸ್ತುಗಳು. ಅಮೆರಿಕಕ್ಕೆ 9.94 ಬಿಲಿಯನ್ ಡಾಲರ್ ಮೌಲ್ಯದ ಆಭರಣಗಳು ರಫ್ತಾಗುತ್ತವೆ. ಇವುಗಳಿಗೆ ಈಗ ಶೇ. 52.1ರಷ್ಟು ಸುಂಕ ವಿಧಿಸಲಾಗುತ್ತದೆ.

ಸಮುದ್ರ ಆಹಾರ ಉದ್ಯಮ: ಭಾರತದ ಸಿಗಡಿ ಮತ್ತು ಸಮುದ್ರ ಆಹಾರ ಉದ್ಯಮದ ಶೇ. 50ರಷ್ಟು ರಫ್ತಿಗೆ ಅಮೆರಿಕವೇ ಮಾರುಕಟ್ಟೆ. ಒಟ್ಟು ಸುಂಕ ಶೇ. 60ರಷ್ಟು ಪಾವತಿಸಬೇಕು. ದಕ್ಷಿಣ ಅಮೆರಿಕದ ದೇಶವಾದ ಈಕ್ವಡಾರ್​ಗೆ ಈಗ ಅನುಕೂಲವಾಯಿತು.

ಕಾರ್ಪೆಟ್, ಪೀಠೋಕರಣಗಳ ಉದ್ಯಮ: ಭಾರತದಿಂದ ಕಾರ್ಪೆಟ್, ಪೀಠೋಪಕರಣಗಳು ಕಳೆದ ವರ್ಷ ಅಮೆರಿಕಕ್ಕೆ 1.2 ಬಿಲಿಯನ್ ಡಾಲರ್​ನಷ್ಟು ರಫ್ತಾಗಿದ್ದವು. ಇವುಗಳಿಗೆ ಈಗ ಶೇ. 52.9ರಷ್ಟು ಟ್ಯಾರಿಫ್ ಸಂಕಟ ಎದುರಾಗಿದೆ.

ವಾಹನ ಬಿಡಿಭಾಗಗಳ ಉದ್ಯಮ: 2024ರಲ್ಲಿ ಭಾರತದಿಂದ ವಾಹನ ಬಿಡಿಭಾಗಗಳು ಅಮೆರಿಕಕ್ಕೆ 6.6 ಬಿಲಿಯನ್ ಡಾಲರ್​ನಷ್ಟು ರಫ್ತಾಗಿತ್ತು. ಕಾರು ಮತ್ತು ಸಣ್ಣ ಟ್ರಕ್ಕುಗಳ ಭಾಗಗಳಿಗೆ ಶೇ. 25 ಟ್ಯಾರಿಫ್ ಇರುತ್ತದೆ. ಉಳಿದ ಬಿಡಿಭಾಗಗಳಿಗೆ ಶೇ. 50 ಟ್ಯಾರಿಫ್ ಅನ್ವಯ ಆಗುತ್ತದೆ.

ರಾಸಾಯನಿಕ ಉದ್ಯಮ, ಲೆದರ್ ಮತ್ತು ಪಾದರಕ್ಷೆ, ಕೃಷಿ, ಸಂಸ್ಕರಿತ ಆಹಾರ ಮತ್ತಿತರ ವಿವಿಧ ಉದ್ಯಮಗಳಿಗೆ ಅಮೆರಿಕ ಒಳ್ಳೆಯ ಮಾರುಕಟ್ಟೆಯಾಗಿತ್ತು. ಇವುಗಳಿಗೆ ಸಂಕಷ್ಟ ಎದುರಾಗಬಹುದು.

ಇದನ್ನೂ ಓದಿ: ಅಮೆರಿಕಕ್ಕೆ ಪೋಸ್ಟಲ್ ಸರ್ವಿಸ್ ನಿಲ್ಲಿಸಿದ ಭಾರತ; ಐರೋಪ್ಯ ದೇಶಗಳಿಂದಲೂ ಇದೇ ಕ್ರಮ

ಅಮೆರಿಕದ ಟ್ಯಾರಿಫ್​ನಿಂದ ವಿನಾಯಿತಿ ಪಡೆದ ಸೆಕ್ಟರ್​ಗಳಿವು…

ಔಷಧ, ಎಲೆಕ್ಟ್ರಾನಿಕ್ಸ್, ಉಕ್ಕು, ಮೂಲ ಲೋಹಗಳು, ಪೆಟ್ರೋಲಿಯಂ ಉತ್ಪನ್ನಗಳು, ಪುಸ್ತಕ, ಪ್ಲಾಸ್ಟಿಕ್ಸ್, ಬ್ರೋಶರ್ಸ್, ಸೆಲೂಲೋಸ್ ಈಥರ್ಸ್, ಫೆರೋ ಮ್ಯಾಂಗನೀಸ್, ಫೆರೋ ಕ್ರೋಮಿಯಂ, ಸರ್ವರ್ ಹಾರ್ಡ್​ವೇರ್ ಇತ್ಯಾದಿ ವಸ್ತುಗಳಿಗೆ ಸುಂಕ ವಿನಾಯಿತಿ ಕೊಡಲಾಗಿದೆ. ಅಂದಾಜು ಪ್ರಕಾರ ಸುಮಾರು 27.6 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳಿಗೆ ಅಮೆರಿಕವು ಸುಂಕ ಹಾಕುತ್ತಿಲ್ಲ. ಹೀಗಾಗಿ, ಭಾರತಕ್ಕೆ ಹೆಚ್ಚಿನ ಆಘಾತದ ಸಂಭವನೀಯತೆ ಕಡಿಮೆ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ