ಪಂಚಾಯಿತಿ ಮಟ್ಟದಲ್ಲಿ ಬ್ಯಾಂಕ್ ಕೆವೈಸಿ ಶಿಬಿರ; ದಾಖಲೆಗಳೇನು ಬೇಕು? ಇಲ್ಲಿದೆ ವಿವರ
Banks hold camps till Sep 30 for re-KYC of Jan Dhan accounts: ಬ್ಯಾಂಕ್ ಖಾತೆಗಳ ಮರು ಕೆವೈಸಿ ಮಾಡಿಸಲು ಗ್ರಾಹಕರ ಮನೆ ಬಾಗಿಲಿಗೇ ಬ್ಯಾಂಕುಗಳು ಬಂದಿವೆ. ಆರ್ಬಿಐ ಅಣತಿ ಮೇರೆಗೆ ಬ್ಯಾಂಕುಗಳು ಗ್ರಾಮ ಪಂಚಾಯಿತಿಗಳಲ್ಲಿ ಶಿಬಿರ ಸ್ಥಾಪಿಸಿವೆ. ಗ್ರಾಹಕರು ಇಲ್ಲಿಯೇ ತಮ್ಮ ಖಾತೆಗಳ ರೀ-ಕೆವೈಸಿ ಮಾಡಿಸಿ ಬ್ಯಾಂಕ್ ಅಕೌಂಟ್ ನಿಷ್ಕ್ರಿಯಗೊಳ್ಳದಂತೆ ಎಚ್ಚರ ವಹಿಸಬಹುದು. ಜುಲೈ 1ರಿಂದಲೇ ಆರಂಭವಾಗಿರುವ ಈ ಶಿಬಿರ ಸೆ. 30ರವರೆಗೂ ಇರುತ್ತದೆ.

ನವದೆಹಲಿ, ಆಗಸ್ಟ್ 27: ಪಿಎಂ ಜನ್ ಧನ್ ಅಕೌಂಟ್ ಸ್ಕೀಮ್ 10 ವರ್ಷ ಪೂರ್ಣಗೊಂಡಿದ್ದು, ಅದರಡಿ ತೆರೆಯಲಾಗಿರುವ ಬಹಳಷ್ಟು ಬ್ಯಾಂಕ್ ಖಾತೆಗಳಿಗೆ ರೀ-ಕೆವೈಸಿ (Re-KYC) ಮಾಡುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕುಗಳು ಪಂಚಾಯಿತಿ ಮಟ್ಟದಲ್ಲಿ ಜನ್ ಧನ್ ಖಾತೆಗಳಿಗಾಗಿ ಮರು ಕೆವೈಸಿ ಮಾಡಲು ಶಿಬಿರಗಳನ್ನು ನಡೆಸುತ್ತಿವೆ. ಜುಲೈ 1ರಿಂದಲೇ ಕ್ಯಾಂಪ್ಗಳು ಆರಂಭವಾಗಿದ್ದು, ಅಲ್ಲಿ ಮರು ಕೆವೈಸಿಗೆ ಸೆಪ್ಟೆಂಬರ್ 30ರವರೆಗೂ ಅವಕಾಶ ನೀಡಲಾಗಿದೆ. ಈ ಪಂಚಾಯಿತಿ ಮಟ್ಟದ ಕ್ಯಾಂಪ್ಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಮರು-ಕೆವೈಸಿ ಮಾಡುವುದು ಮಾತ್ರವಲ್ಲ, ಖಾತೆಯಲ್ಲಿ ಸಮಸ್ಯೆ ಇದ್ದರೆ ಸರಿಪಡಿಸುವುದು ಸೇರಿದಂತೆ ವಿವಿಧ ಸೇವೆಗಳು ಲಭ್ಯ ಇವೆ. ನಿಮ್ಮ ಮನೆ ಬಾಗಿಲಿನ ಸಮೀಪವೇ ಬಂದಿರುವ ಬ್ಯಾಂಕುಗಳ ಸೌಲಭ್ಯದ ಅವಕಾಶ ಬಳಸಿಕೊಳ್ಳಬಹುದು.
ಬ್ಯಾಂಕ್ ಖಾತೆಯ ಕೆವೈಸಿ ನವೀಕರಣದ ಮಾಹಿತಿ
- ಸ್ಥಳ: ನಿಮ್ಮ ಗ್ರಾಮ ಪಂಚಾಯಿತಿ
- ದಿನ: ಜುಲೈ 1ರಿಂದ ಸೆಪ್ಟೆಂಬರ್ 30ರವರೆಗೆ
- ದಾಖಲೆಗಳು: ನಿಮ್ಮ ಹೆಸರು ಮತ್ತು ವಿಳಾಸದಲ್ಲಿ ಯಾವುದೇ ಬದಲಾವಣೆ ಆಗಿರದಿದ್ದರೆ ಸ್ವಯಂ ಘೋಷಣೆ ಅಥವಾ ಸೆಲ್ಫ್ ಡಿಕ್ಲರೇಶನ್ ಫಾರ್ಮ್ ಭರ್ತಿ ಮಾಡಿಕೊಡಬಹುದು.
ಹೆಸರು ಮತ್ತು ವಿಳಾಸ ಬದಲಾಗಿದ್ದರೆ, ಅದನ್ನು ಪುಷ್ಟೀಕರಿಸುವ ಒಂದು ದಾಖಲೆ ಬೇಕಾಗುತ್ತದೆ. ಆರ್ಬಿಐ ನಿಗದಿ ಮಾಡಿದ ಈ ಕೆಳಗಿನ ಒಂದು ದಾಖಲೆ ನೀಡಿದರೆ ಸಾಕಾಗುತ್ತದೆ:
- ಆಧಾರ್
- ವೋಟರ್ ಐಡಿ
- ನರೇಗಾ ಜಾಬ್ ಕಾರ್ಡ್
- ಡ್ರೈವಿಂಗ್ ಲೈಸೆನ್ಸ್
- ಪಾಸ್ಪೋರ್ಟ್
- ರಾಷ್ಟ್ರೀಯ ಜನಸಂಖ್ಯಾ ನೊಂದಣಿಯಿಂದ ಹೊರಡಿಸಲಾದ ಪತ್ರ
ಇದನ್ನೂ ಓದಿ: ಎಲ್ಐಸಿ ಪಾಲಿಸಿ ಲ್ಯಾಪ್ಸ್ ಆಗಿದೆಯಾ? ರಿವೈವಲ್ಗೆ ಅ. 17ರವರೆಗೂ ಅವಕಾಶ
ಪಿಎಂ ಜನ್ ಧನ್ ಖಾತೆಗಳಿಗೆ
ಭಾರತೀಯ ರಿಸರ್ವ್ ಬ್ಯಾಂಕ್ ಈಗ ಪಂಚಾಯಿತಿ ಮಟ್ಟದಲ್ಲಿ ರೀ-ಕೆವೈಸಿ ಮಾಡಿಸುತ್ತಿರುವುದು ಪಿಎಂ ಜನ್ ಧನ್ ಸ್ಕೀಮ್ ಅಡಿ ತೆರೆಯಲಾಗಿರುವ ಬ್ಯಾಂಕ್ ಖಾತೆಗಳಿಗೆ. ಸರ್ಕಾರದ ಸ್ಕೀಮ್ಗಳಲ್ಲಿ ಫಲಾನುಭವಿಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುವುದು ಬಹುತೇಕ ಈ ಬ್ಯಾಂಕ್ ಖಾತೆಗಳಿಗೆ. ಇವುಗಳ ಕೆವೈಸಿ ಅಪ್ಡೇಟ್ ಆಗದೇ ಹೋದರೆ ಖಾತೆ ಇನಾಪರೇಟಿವ್ ಎಂದು ಪರಿಗಣಿಸಲಾಗಬಹುದು. ಆಗ ಹಣ ರವಾನೆಯಾಗದೇ ಸ್ಥಗಿತಗೊಳ್ಳಬಹುದು. ಈ ಕಾರಣಕ್ಕೆ ಬ್ಯಾಂಕ್ ಖಾತೆಯ ನವೀಕರಣಕ್ಕಾಗಿ ಮರು ಕೆವೈಸಿ ಮಾಡುವುದು ಅತ್ಯಗತ್ಯ.
ಪಂಚಾಯಿತಿ ಮಟ್ಟದಲ್ಲಿ ನಡೆಸಲಾಗುವ ಈ ಶಿಬಿರಗಳಲ್ಲಿ ಬ್ಯಾಂಕ್ ಖಾತೆಗಳಿಗೆ ರೀ-ಕೆವೈಸಿ ಪಡೆಯಲಾಗುತ್ತದೆ. ಜೊತೆಗೆ ಮೈಕ್ರೋ ಇನ್ಷೂರೆನ್ಸ್ ಸ್ಕೀಮ್ಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಪ್ರಯತ್ನವಾಗಲಿದೆ. ಜನರು ಇಂಥ ಸ್ಕೀಮ್ಗಳಲ್ಲಿ ಹಣ ತೊಡಗಿಸುವಂತೆ ಪ್ರೇರೇಪಿಸಬಹುದು. ಆರ್ಬಿಐನ ಬಾಂಡ್ಗಳ ಬಗ್ಗೆಯೂ ಗ್ರಾಹಕರಲ್ಲಿ ತಿಳಿವಳಿಕೆ ಮೂಡಿಸಲು ಈ ಶಿಬಿರದಲ್ಲಿ ಪ್ರಯತ್ನವಾಗಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




