ನವದೆಹಲಿ, ನವೆಂಬರ್ 21: ಗೌತಮ್ ಅದಾನಿ ಸೇರಿದಂತೆ ಎಂಟು ಜನರ ವಿರುದ್ಧ ಅಮೆರಿಕದಲ್ಲಿ ಲಂಚದ ಆರೋಪಗಳು ದಾಖಲಾಗಿವೆ. ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿಗೆ ನ್ಯೂಯಾರ್ಕ್ನ ಡಿಸ್ಟ್ರಿಕ್ಟ್ ಕೋರ್ಟ್ವೊಂದು ಅರೆಸ್ಟ್ ವಾರಂಟ್ ಹೊರಡಿಸಿದೆ. ಕೆಲವೇ ವರ್ಷಗಳ ಹಿಂದೆ ಇದೇ ಅಮೆರಿಕದ ಶಾರ್ಟ್ಸೆಲ್ಲರ್ ಸಂಸ್ಥೆಯಾದ ಹಿಂಡನ್ಬರ್ಗ್ ಅದಾನಿ ಗ್ರೂಪ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿತ್ತು. ಆ ಘಟನೆಯಲ್ಲಿ ಅದಾನಿಯ ಸ್ಟಾಕ್ಗಳು ಬಹುತೇಕ ನೆಲಕಚ್ಚಿದವು. ಈಗಲೂ ಕೂಡ ಎರಡು ವರ್ಷಗಳಾದರೂ ಅದಾನಿ ಷೇರುಗಳು ತಮ್ಮ ಗರಿಷ್ಠ ಮಟ್ಟಕ್ಕೆ ಬರಲಾಗಿಲ್ಲ.
ಇಷ್ಟಾದರೂ ಗೌತಮ್ ಅದಾನಿ ಅವರ ಜಂಘಾಬಲ ಮಾತ್ರ ಉಡುಗಲಿಲ್ಲ. ಬಿಸಿನೆಸ್ಗಳನ್ನು ಬೆಳೆಸುತ್ತಾ ಹೋಗಿದ್ದಾರೆ. ಈ ಸಂದರ್ಭದಲ್ಲೇ ಈಗ ಅಮೆರಿಕದ ಜಸ್ಟಿಸ್ ಡಿಪಾರ್ಟ್ಮೆಂಟ್ ಮತ್ತು ಎಸ್ಇಸಿ ಗೌತಮ್ ಅದಾನಿಯನ್ನು ಟಾರ್ಗೆಟ್ ಮಾಡಿವೆ. ಮೇಲ್ನೋಟಕ್ಕೆ ಇದು ಅಮೆರಿಕದ ಕಾನೂನು ಪ್ರಕಾರ ತೆಗೆದುಕೊಳ್ಳಲಾಗುತ್ತಿರುವ ಕ್ರಮವೆಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ, ಕೆಲ ವರದಿಗಳು ಈ ಬೆಳವಣಿಗೆಯ ಹಿಂದೆ ಒಂದು ದೊಡ್ಡ ಪಿತೂರಿಯನ್ನು ಶಂಕಿಸಿವೆ. ಭಾರತ ಮತ್ತು ಅದಾನಿ ಬೆಳವಣಿಗೆಯನ್ನು ಸಹಿಸದ ಶಕ್ತಿಗಳು ಈ ಪಿತೂರಿಯ ಹಿಂದಿರಬಹುದು ಎಂದು ಅನುಮಾನ ಪಡಲಾಗುತ್ತಿದೆ.
ಇದನ್ನೂ ಓದಿ: ಅದಾನಿ ಸೇರಿ 8 ಮಂದಿ ವಿರುದ್ಧ ಅಮೆರಿಕದಲ್ಲಿ ವಂಚನೆ ಆರೋಪ ದಾಖಲು; ಗೌತಮ್, ಸಾಗರ್ ಅದಾನಿ ವಿರುದ್ಧ ಅರೆಸ್ಟ್ ವಾರಂಟ್
ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿರಾರಾದರೂ ಅವರು ಅಧಿಕಾರದ ಗದ್ದುಗೆ ಹಿಡಿಯಲು ಜನವರಿಯವರೆಗೆ ಕಾಯಬೇಕು. ಅಲ್ಲಿಯವರೆಗೆ ಜೋ ಬೈಡನ್ ಅವರೇ ಆಡಳಿತದಲ್ಲಿ ಮುಂದುವರಿಯುತ್ತಾರೆ. ಇನ್ನು ಒಂದೂವರೆ ತಿಂಗಳಷ್ಟೇ ಅವರಿಗೆ ಅಧಿಕಾರ ಇರುವುದು. ಇಷ್ಟರೊಳಗೆ ಅವರು ಡೊನಾಲ್ಡ್ ಟ್ರಂಪ್ ಅವರ ಅಧಿಕಾರದ ಹಾದಿಯನ್ನು ಕಠಿಣವಾಗಿಸಲು ಬೇಕಾದ ಎಲ್ಲಾ ತಂತ್ರಗಳನ್ನೂ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ. ಇದರ ಭಾಗವಾಗಿ ಅದಾನಿ ವಿರುದ್ಧ ಮಸಲತ್ತು ನಡೆಯುತ್ತಿರಬಹುದು ಎನ್ನಲಾಗಿದೆ.
ಡೊನಾಲ್ಡ್ ಟ್ರಂಪ್ ಅವರು ಅಮೆರಿಕದಲ್ಲಿ ಉತ್ಪಾದನೆಯಾಗಬೇಕು ಎನ್ನುವ ನೀತಿಗೆ ಒತ್ತುಕೊಡುತ್ತಾರೆ. ಅದು ಮರುಬಳಕೆ ಇಂಧನದ ವಿಚಾರದಲ್ಲೂ ಹೌದು. ಅಮೆರಿಕದಲ್ಲೇ ಸೌರ ವಿದ್ಯುತ್ ತಯಾರಿಕೆ ಆಗುವಂತೆ ಅವರ ನೀತಿ ಇರಲಿದೆ. ಅದಾನಿ ಗ್ರೂಪ್ ಈಗಾಗಲೇ ಅಮೆರಿಕದಲ್ಲಿ ರಿನಿವಬಲ್ ಎನರ್ಜಿ ಪ್ರಾಜೆಕ್ಟ್ಗಳಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುವುದಾಗಿ ಘೋಷಿಸಿದೆ.
ವರದಿಗಳ ಪ್ರಕಾರ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ಅಮೆರಿಕದಲ್ಲಿ ಸೌರ ವಿದ್ಯುತ್ ಉತ್ಪಾದನೆಯ ಮಹತ್ವದ ಗುತ್ತಿಗೆಗಳನ್ನು ಅದಾನಿ ಗ್ರೂಪ್ಗೆ ಕೊಡುವ ಸಾಧ್ಯತೆ ಇದೆ. ಈ ಕಾರಣಕ್ಕೆ ಬೈಡನ್ ಸರ್ಕಾರ ಈಗಲೇ ಅದಾನಿಗೆ ಭ್ರಷ್ಟಾಚಾರದ ಮಸಿ ಮೆತ್ತಿ, ಅವರ ಹಾದಿಗೆ ತೊಡರುಗಳನ್ನು ನಿರ್ಮಿಸುವ ಪ್ರಯತ್ನ ಮಾಡಿರಬಹುದು ಎನ್ನುವ ಶಂಕೆ ಇದೆ.
ಇದನ್ನೂ ಓದಿ: ಅಮೆರಿಕದಲ್ಲಿ ಅದಾನಿಗೆ ಲಂಚದ ಮಸಿ; ಆರೋಪ ನಿರಾಧಾರ ಎಂದು ಸ್ಪಷ್ಟಪಡಿಸಿದ ಅದಾನಿ ಗ್ರೂಪ್
ಈ ಅನುಮಾನಕ್ಕೆ ಪುಷ್ಟಿ ಕೊಡುವ ಸಂಗತಿ ಎಂದರೆ, ಬೈಡನ್ ಸರ್ಕಾರ ನಾಲ್ಕೈದು ವರ್ಷ ಯಾಕೆ ಸುಮ್ಮನಿತ್ತು ಎಂಬುದು. ಯಾಕೆಂದರೆ, 2020ರಿಂದ 2024ರವರೆಗೂ ಅದಾನಿಯಿಂದ ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಲಾಗಿದೆ ಎನ್ನುವುದು ಅಮೆರಿಕದಲ್ಲಿ ದಾಖಲಾಗಿರುವ ಆರೋಪವಾಗಿದೆ. ಹಾಗಿದ್ದಾಗ, ಅದಾನಿಯನ್ನು ವಿಚಾರಣೆ ನಡೆಸುವ ಮನಸು ಈಗ ಬಂದಿದ್ದಾದರೂ ಯಾಕೆ ಎಂದು ಯಾರಿಗಾದರೂ ಪ್ರಶ್ನೆ ಹುಟ್ಟಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ