ಭಾರತದಿಂದ ಖರೀದಿ ನಿಲ್ಲಿಸಿದ ಅಮೇಜಾನ್, ವಾಲ್ಮಾರ್ಟ್ ಮತ್ತಿತರ ರೀಟೇಲ್ ಮಾರಾಟಗಾರರು

Indian garments exporters getting no orders from US: ಅಮೆರಿಕ ಮೂಲದ ರೀಟೇಲ್ ಮಾರಾಟಗಾರರಾದ ಅಮೇಜಾನ್, ವಾಲ್ಮಾರ್ಟ್, ಟಾರ್ಗೆಟ್, ಗ್ಯಾಪ್ ಮೊದಲಾದ ಸಂಸ್ಥೆಗಳು ಭಾರತದಿಂದ ಆರ್ಡರ್ ನಿಲ್ಲಿಸಿವೆ. ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ. 50ರಷ್ಟು ಸುಂಕ ವಿಧಿಸಿರುವುದು ಭಾರತದ ಗಾರ್ಮೆಂಟ್ಸ್ ಉದ್ಯಮಕ್ಕೆ ಘಾಸಿ ಮಾಡಿದೆ. ಭಾರತದ ಬದಲು ಬಾಂಗ್ಲಾದೇಶ, ವಿಯೆಟ್ನಾಂ ದೇಶಗಳಿಂದ ಅಮೆರಿಕನ್ನರು ಉಡುಪು ಆಮದು ಮಾಡಿಕೊಳ್ಳುತ್ತಿದ್ದಾರೆ.

ಭಾರತದಿಂದ ಖರೀದಿ ನಿಲ್ಲಿಸಿದ ಅಮೇಜಾನ್, ವಾಲ್ಮಾರ್ಟ್ ಮತ್ತಿತರ ರೀಟೇಲ್ ಮಾರಾಟಗಾರರು
ಅಮೇಜಾನ್

Updated on: Aug 08, 2025 | 2:25 PM

ನವದೆಹಲಿ, ಆಗಸ್ಟ್ 8: ಭಾರತದ ಸರಕುಗಳ ಮೇಲೆ ಡೊನಾಲ್ಡ್ ಟ್ರಂಪ್ (Donald Trump) ಶೇ. 50ರಷ್ಟು ಟ್ಯಾರಿಫ್ ಹೇರಿದ ಬೆನ್ನಲ್ಲೇ ಇದೀಗ ಅಮೆರಿಕದ ಪ್ರಮುಖ ರೀಟೇಲ್ ಮಾರಾಟಗಾರರು ಭಾರತದಿಂದ ಸರಕುಗಳ ಖರೀದಿಯನ್ನು ನಿಲ್ಲಿಸಿದ್ದಾರೆ. ಎನ್​ಡಿಟಿವಿ ಪ್ರಾಫಿಟ್​ನಲ್ಲಿ ಈ ಬಗ್ಗೆ ವರದಿ ಬಂದಿದ್ದು, ಭಾರತದ ಜವಳಿ ಉದ್ಯಮದ ಮೇಲೆ ಇದು ದೊಡ್ಡ ಪರಿಣಾಮ ಬೀರುತ್ತಿರುವುದು ನಿಚ್ಚಳವಾಗಿದೆ.

ಭಾರತದ ಸರಕುಗಳ ಮೇಲೆ ಅಮೆರಿಕ ಶೇ. 50 ಸುಂಕ ವಿಧಿಸುತ್ತಿರುವುದರಿಂದ ರಫ್ತು ವೆಚ್ಚ ಅಧಿಕವಾಗುತ್ತಿದೆ. ಸುಂಕದ ವೆಚ್ಚದ ಹೊರೆಯನ್ನು ರಫ್ತುದಾರರೇ ಭರಿಸಬೇಕೆಂದು ಅಮೆರಿಕನ್ ಮಾರಾಟಗಾರರು ಹೇಳುತ್ತಿದ್ದಾರೆ. ಅಂದರೆ, ಭಾರತೀಯ ಕಂಪನಿಗಳು ತಮ್ಮ ಸರಕುಗಳನ್ನು ಶೇ. 50ರಷ್ಟು ಕಡಿಮೆ ಬೆಲೆಗೆ ರಫ್ತು ಮಾಡಬೇಕಾದ ಪರಿಸ್ಥಿತಿ ಬಂದಿದೆ.

ಇದನ್ನೂ ಓದಿ: ವಿದ್ಯುತ್ ಅವಲಂಬನೆ ತಪ್ಪಿಸುವ ಪಿಎಂ ಕುಸುಮ್ ಯೋಜನೆಗೆ ಕರ್ನಾಟಕದ ರೈತರಿಂದ ನೀರಸ ಪ್ರತಿಕ್ರಿಯೆ; ಏನಿದು ಸ್ಕೀಮ್?

ವರದಿ ಪ್ರಕಾರ, ರಫ್ತು ವೆಚ್ಚ ಶೇ. 30-35ರಷ್ಟು ಹೆಚ್ಚಾಗಬುದು. ಇದರಿಂದ ಅಮೆರಿಕಕ್ಕೆ ರಫ್ತಾಗುವ ಈ ಉದ್ಯಮದ ಸರಕುಗಳಲ್ಲಿ ಶೇ. 40-50ರಷ್ಟು ಇಳಿಮುಖವಾಗಬಹುದು. ಉದ್ಯಮದ ಅಂದಾಜು ಪ್ರಕಾರ, ಹೀಗಾದಲ್ಲಿ ಜವಳಿ ಉದ್ಯಮಕ್ಕೆ 4-5 ಬಿಲಿಯನ್ ಡಾಲರ್​ನಷ್ಟು ನಷ್ಟವಾಗಬಹುದು.

ಭಾರತದ ಪ್ರಮುಖ ಗಾರ್ಮೆಂಟ್ಸ್ ಕಂಪನಿಗಳಾದ ವೆಲ್​ಸ್ಪನ್ ಲಿವಿಂಗ್, ಗೋಕಲ್​ದಾಸ್ ಎಕ್ಸ್​ಪೋರ್ಟ್ಸ್, ಇಂಡೋ ಕೌಂಟ್, ಟ್ರಿಡೆಂಟ್ ಮೊದಲಾದವುಗಳ ಪ್ರಮುಖ ಮಾರುಕಟ್ಟೆ ಅಮೆರಿಕವೇ ಆಗಿದೆ. ಇವುಗಳ ಮಾರಾಟ ಶೇ. 40-70ರಷ್ಟು ಕಡಿಮೆ ಆಗುವ ಸಂಭವ ಇದೆ.

ಇದನ್ನೂ ಓದಿ: ಅಮೆರಿಕದಿಂದ 25 ಅಲ್ಲ 50 ಪರ್ಸೆಂಟ್ ಟ್ಯಾರಿಫ್; ಯಾವ್ಯಾವ ಸೆಕ್ಟರ್​ಗಳಿಗೆ ಬಾಧೆ?

ಬಾಂಗ್ಲಾ, ವಿಯೆಟ್ನಾಂಗಳ ಮೇಲುಗೈ

ಬಾಂಗ್ಲಾದೇಶ, ವಿಯೆಟ್ನಾಂ ಮೊದಲಾದ ದೇಶಗಳು ಗಾರ್ಮೆಂಟ್ಸ್ ಉದ್ಯಮದಲ್ಲಿ ಪ್ರಬಲವಾಗಿವೆ. ಇವುಗಳಿಗೆ ಅಮೆರಿಕ ಶೇ. 20ರಷ್ಟು ಮಾತ್ರವೇ ಟ್ಯಾರಿಫ್ ಹಾಕಿರುವುದು. ಭಾರತಕ್ಕಿರುವ ಶೇ. 50ಕ್ಕೆ ಹೋಲಿಸಿದರೆ ಈ ಟ್ಯಾರಿಫ್ ಕಡಿಮೆ. ಹೀಗಾಗಿ, ಅಮೆರಿಕ ಇಕಾಮರ್ಸ್ ಕಂಪನಿಗಳು ಭಾರತೀಯ ಕಂಪನಿಗಳ ಬದಲು ಬಾಂಗ್ಲಾ, ವಿಯೆಟ್ನಾಂ ಮೊದಲಾದ ದೇಶಗಳ ಗಾರ್ಮೆಂಟ್ಸ್ ಕಂಪನಿಗಳಿಂದ ಖರೀದಿಸಲು ಮುಂದಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:58 pm, Fri, 8 August 25