ಅಮೆರಿಕದಿಂದ 25 ಅಲ್ಲ 50 ಪರ್ಸೆಂಟ್ ಟ್ಯಾರಿಫ್; ಯಾವ್ಯಾವ ಸೆಕ್ಟರ್ಗಳಿಗೆ ಬಾಧೆ?
Sectors most affected by US tariffs: ಭಾರತದ ಸರಕುಗಳ ಮೇಲೆ ಜುಲೈ 31ರಂದು ಶೇ. 25ರಷ್ಟು ಟ್ಯಾರಿಫ್ ಪ್ರಕಟಿಸಿದ್ದ ಡೊನಾಲ್ಡ್ ಟ್ರಂಪ್ ಈಗ ಹೆಚ್ಚುವರಿ ಶೇ. 25 ಟ್ಯಾರಿಫ್ ಹಾಕಿದ್ದಾರೆ. ರಷ್ಯಾದಿಂದ ತೈಲ ಖರೀದಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಭಾರತದ ಮೇಲೆ ಒಟ್ಟು 50 ಪ್ರತಿಶತದಷ್ಟು ಸುಂಕ ಹಾಕಲಾಗಿದೆ. ಈ ದೊಡ್ಡ ಮಟ್ಟದ ಟ್ಯಾರಿಫ್ನಿಂದ ಭಾರತದ ಯಾವ್ಯಾವ ಕ್ಷೇತ್ರಗಳ ಮೇಲೆ ಪರಿಣಾಮವಾಗುತ್ತದೆ ಎನ್ನುವ ವಿವರ ಇಲ್ಲಿದೆ.

ನವದೆಹಲಿ, ಆಗಸ್ಟ್ 7: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತಿರೇಕದ ನಿರ್ಧಾರಗಳು ಮುಂದುವರಿದಿವೆ. ಭಾರತದ ಮೇಲೆ ಶೇ. 25ರಷ್ಟು ಸುಂಕ ಪ್ರಕಟಿಸಿದ್ದ ಟ್ರಂಪ್ ಇದೀಗ ಹೆಚ್ಚುವರಿಯಾಗಿ ಶೇ. 25ರಷ್ಟು ಟ್ಯಾರಿಫ್ (tariffs) ಹಾಕಿದ್ದಾರೆ. ಅಲ್ಲಿಗೆ ಭಾರತದ ಸರಕುಗಳ ಮೇಲೆ ಅಮೆರಿಕ ವಿಧಿಸುವ ಒಟ್ಟು ಸುಂಕವು ಶೇ. 50ಕ್ಕೆ ಏರಿದೆ. ಅಂದರೆ, ಭಾರತದಿಂದ 100 ಕೋಟಿ ರೂ ಮೌಲ್ಯದ ಸರಕುಗಳು ಅಮೆರಿಕಕ್ಕೆ ರಫ್ತಾಗಲು 50 ಕೋಟಿ ರೂ ಸುಂಕ ಕಟ್ಟಬೇಕಾಗುತ್ತದೆ.
ಭಾರತ ಮತ್ತು ಅಮೆರಿಕ ಮಧ್ಯೆ ವ್ಯಾಪಾರ ಒಪ್ಪಂದ ಏರ್ಪಡಲು ಮಾತುಕತೆ ನಡೆಯುತ್ತಿದೆ. ಅಲ್ಲಿಯವರೆಗೆ ಶೇ. 50ರಷ್ಟು ಆಮದು ಸುಂಕ ಕ್ರಮವನ್ನು ಭಾರತ ಎದುರಿಸುವುದು ಅನಿವಾರ್ಯ.
ಭಾರತದ ಅತಿದೊಡ್ಡ ಟ್ರೇಡಿಂಗ್ ಪಾರ್ಟ್ನರ್ ಆಗಿರುವುದು ಅಮೆರಿಕ. ಹೀಗಾಗಿ, ಈ ಶೇ. 50 ಸುಂಕವು ಭಾರತವನ್ನು ಸೀಮಿತ ಮಟ್ಟದಲ್ಲಾದರೂ ಬಾಧಿಸುವುದು ನಿಶ್ಚಿತ. ಹೆಚ್ಚು ಬಾಧಿತವಾಗುವ ಕೆಲ ಸೆಕ್ಟರ್ಗಳಲ್ಲಿ ಜವಳಿ, ವಾಹನ ಬಿಡಿಭಾಗ ಉದ್ಯಮಗಳೂ ಇವೆ.
ಇದನ್ನೂ ಓದಿ: ವಿಧ ವಲಯಗಳಲ್ಲಿ ಸಹಕಾರ ಹೆಚ್ಚಿಸಲು ಭಾರತ ಮತ್ತು ರಷ್ಯಾ ಮಧ್ಯೆ ಒಡಂಬಡಿಕೆ
ಭಾರತದಿಂದ ಪ್ರತೀ ವರ್ಷ 7 ಬಿಲಿಯನ್ ಡಾಲರ್ (61,000 ಕೋಟಿ ರೂ) ಮೌಲ್ಯದ ವಾಹನ ಬಿಡಿಭಾಗಗಳು ಅಮೆರಿಕಕ್ಕೆ ರಫ್ತಾಗುತ್ತವೆ. ಈಗ ಅಧಿಕ ಟ್ಯಾರಿಫ್ನಿಂದಾಗಿ ಈ ಉದ್ಯಮಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ.
ಆಭರಣ ಕ್ಷೇತ್ರಕ್ಕೆ ಹಿನ್ನಡೆ
ಭಾರತ ಅತಿಹೆಚ್ಚು ಆಭರಣ ರಫ್ತು ಮಾಡುವುದು ಅಮೆರಿಕಕ್ಕೆ. ಹೀಗಾಗಿ, ಭಾರತದ ಆಭರಣ ಉದ್ಯಮ ಈಗ ಟ್ರಂಪ್ ಕ್ರಮದಿಂದಾಗಿ ತಲೆ ಮೇಲೆ ಕೈ ಇಟ್ಟುಕೊಳ್ಳುವಂತಾಗಿದೆ. ಹರಳು ಮತ್ತು ಆಭರಣ ರಫ್ತು ಉತ್ತೇಜಕ ಮಂಡಳಿ ಅಧ್ಯಕ್ಷ ಕಿರೀಟ್ ಬನ್ಸಾಲಿ ಅವರಂತೂ ಈ ಶೇ. 50ರ ಟ್ಯಾರಿಫ್ ಕ್ರಮದ ಬಗ್ಗೆ ವಿಷಾದಿಸಿದ್ದಾರೆ. ಆಭರಣ ರಫ್ತುದಾರರು ಬೇರೆ ದೇಶಗಳಲ್ಲಿ ಮ್ಯಾನುಫ್ಯಾಕ್ಚರಿಂಗ್ ಘಟಕ ಸ್ಥಾಪಿಸಲು ಆಲೋಚಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಜವಳಿ ಉದ್ಯಮದಿಂದ ಹೊಸ ಪ್ರಸ್ತಾಪ…
ಭಾರತವು ಕಚ್ಛಾ ಹತ್ತಿಯ ಆಮದು ಮೇಲೆ ಶೇ. 11ರಷ್ಟು ಸುಂಕ ವಿಧಿಸುತ್ತಿದೆ. ಇದನ್ನು ಹಿಂಪಡೆಯುವಂತೆ ಭಾರತದ ಜವಳಿ ಉದ್ಯಮವು ಸರ್ಕಾರವನ್ನು ಕೇಳಿಕೊಂಡಿದೆ. ಇದರಿಂದ ಗಾರ್ಮೆಂಟ್ಸ್ ರಫ್ತಿಗೆ ಟ್ಯಾರಿಫ್ ಹೊರೆ ಕಡಿಮೆ ಮಾಡಬಹುದು ಎನ್ನುವುದು ಜವಳಿ ಉದ್ಯಮದ ಅನಿಸಿಕೆ. ಅಂತಹದ್ದೊಂದು ಪ್ರಸ್ತಾಪವನ್ನು ಸರ್ಕಾರದ ಮುಂದಿಟ್ಟಿದೆ.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಹಸಿಸುಳ್ಳುಗಳು; ಅಮೆರಿಕಕ್ಕೆ ಭಾರತ ದೊಡ್ಡ ಸುಂಕ ವಿಧಿಸುತ್ತಿದೆಯಾ? ಇಲ್ಲಿದೆ ಸತ್ಯಾಂಶ
ಹತ್ತಿ ಮಾತ್ರವಲ್ಲ, ವಾಲ್ನಟ್, ಆಲ್ಮಂಡ್, ಸೇಬು ಮತ್ತು ಕ್ರ್ಯಾನ್ಬೆರಿ ಇತ್ಯಾದಿ ಅಮೆರಿಕದ ಸರಕುಗಳ ಮೇಲಿನ ತೆರಿಗೆಯನ್ನು ಭಾರತ ತಗ್ಗಿಸಿ, ತನ್ನ ಕೆಲ ರಫ್ತಿಗೆ ತೆರಿಗೆ ವಿನಾಯಿತಿ ಪಡೆಯಲು ಯತ್ನಿಸುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




