ಡೊನಾಲ್ಡ್ ಟ್ರಂಪ್ ಹಸಿಸುಳ್ಳುಗಳು; ಅಮೆರಿಕಕ್ಕೆ ಭಾರತ ದೊಡ್ಡ ಸುಂಕ ವಿಧಿಸುತ್ತಿದೆಯಾ? ಇಲ್ಲಿದೆ ಸತ್ಯಾಂಶ
India's tariffs lower compared to other countries: ಭಾರತ ಅತಿಯಾಗಿ ಟ್ಯಾರಿಫ್ ಹಾಕುತ್ತದೆ ಎಂದು ಹೇಳಿ ಡೊನಾಲ್ಡ್ ಟ್ರಂಪ್ ಸಿಕ್ಕಾಪಟ್ಟೆ ಸುಂಕ ಹಾಕುತ್ತಿದ್ದಾರೆ. ಎಲ್ಲಾ ದೇಶಗಳಂತೆ ಭಾರತವೂ ಆಮದು ಸುಂಕಗಳನ್ನು ವಿಧಿಸುತ್ತದೆ. ಆದರೆ, ಟ್ರಂಪ್ ಹೇಳುತ್ತಿರುವಂತೆ ಎಲ್ಲರಿಗಿಂತ ಹೆಚ್ಚಿಲ್ಲ. ಇತರ ಹಲವು ದೇಶಗಳಿಗೆ ಹೋಲಿಸಿದರೆ ಭಾರತವು ಅಮೆರಿಕದ ಸರಕುಗಳ ಮೇಲೆ ಕಡಿಮೆ ಟ್ಯಾರಿಫ್ ಹಾಕುತ್ತದೆ.

ನವದೆಹಲಿ, ಆಗಸ್ಟ್ 7: ಡೊನಾಲ್ಡ್ ಟ್ರಂಪ್ ಅವರು ಭಾರತ ವಿಶ್ವದಲ್ಲೇ ಹೆಚ್ಚು ಟ್ಯಾರಿಫ್ (tariffs) ವಿಧಿಸುವ ದೇಶ ಎಂದು ಪದೇ ಪದೇ ಹಂಗಿಸುತ್ತಲೇ ಇದ್ದಾರೆ. ಟ್ರಂಪ್ ಸರ್ಕಾರದ ಕೆಲವರು ಭಾರತವನ್ನು ಟ್ಯಾರಿಫ್ಗಳ ಮಹಾರಾಜ ಎಂದೂ ಮೂದಲಿಸಿರುವುದುಂಟು. ರಷ್ಯನ್ ತೈಲ ಖರೀದಿ ಇತ್ಯಾದಿ ಇನ್ನೂ ಹಲವು ಕುಂಟು ನೆಪಗಳನ್ನು ಹೇಳಿ ಭಾರತದ ಸರಕುಗಳ ಮೇಲೆ ಅಮೆರಿಕ ಮನಬಂದತೆ ಆಮದು ಸುಂಕಗಳನ್ನು ಹೇರುತ್ತಿದೆ ಅಮೆರಿಕ. ಭಾರತವು ವಿದೇಶಗಳಿಂದ ಬರುವ ಸರಕುಗಳ ಮೇಲೆ ಸುಂಕ ಹಾಕುವುದು ಹೌದು. ಆದರೆ, ಟ್ರಂಪ್ ಆರೋಪಿಸಿರುವಷ್ಟು ದೊಡ್ಡ ಪ್ರಮಾಣದಲ್ಲಿ ಸುಂಕ ಹೇರಿಕೆ ಮಾಡುತ್ತಿದೆ ಎನ್ನುವುದು ಸುಳ್ಳು. ಇದಕ್ಕೆ ವಿವಿಧ ದತ್ತಾಂಶಗಳೇ ಸಾಕ್ಷಿಯಾಗಿವೆ.
ಅಮೆರಿಕಕ್ಕೆ ಭಾರತ ಅತಿಯಾಗಿ ಟ್ಯಾರಿಫ್ ಹಾಕುತ್ತಿಲ್ಲ…
ಭಾರತದ ಸರಾಸರಿ ಸುಂಕವು (Weighted tariff) ಶೇ. 4.6 ಇದೆ. ಅಮೆರಿಕದ ಸರಕುಗಳಿಗೆ ಭಾರತ ಹಾಕುತ್ತಿರುವ ಸುಂಕವೂ ಸರಾಸರಿಯಾಗಿ ಶೇ. 4.6ರಷ್ಟಿದೆ. ಯೂರೋಪಿಯನ್ ಯೂನಿಯನ್ (ಶೇ. 5), ವಿಯೆಟ್ನಾಂ (ಶೇ. 5.1), ಇಂಡೋನೇಷ್ಯಾ (ಶೇ. 5.7), ಬಾಂಗ್ಲಾದೇಶ (ಶೇ. 10.6) ಇತ್ಯಾದಿ ದೇಶಗಳಿಗೆ ಹೋಲಿಸಿದರೆ ಭಾರತವು ವಿಧಿಸುತ್ತಿರುವ ಸರಾಸರಿ ಟ್ಯಾರಿಫ್ ಕಡಿಮೆಯೇ ಇದೆ.
ಇದನ್ನೂ ಓದಿ: ರೈತರ ಹಿತಾಸಕ್ತಿ ಕಾಪಾಡಲು ಯಾವುದೇ ವೈಯಕ್ತಿಕ ನಷ್ಟಕ್ಕೂ ಸಿದ್ಧ ಎಂದು ಟ್ರಂಪ್ಗೆ ಸವಾಲೆಸೆದ ಪ್ರಧಾನಿ ಮೋದಿ
ಅಮೆರಿಕದಿಂದ ಭಾರತಕ್ಕೆ ಬರುವ ಶೇ. 45ರಷ್ಟು ಸರಕುಗಳಿಗೆ ಹಾಕಲಾಗುತ್ತಿರುವ ಟ್ಯಾರಿಫ್ ಶೇ. 5ಕ್ಕಿಂತಲೂ ಕಡಿಮೆ. ಇನ್ನೂ ಬಹಳಷ್ಟವಕ್ಕೆ ಶೇ. 10ಕ್ಕಿಂತಲೂ ಕಡಿಮೆ ಸುಂಕ ಹಾಕಲಾಗುತ್ತಿದೆ.
ಕಳೆದ 30-35 ವರ್ಷದಲ್ಲಿ ಭಾರತವು ವಿಧಿಸುತ್ತಿರುವ ಸುಂಕದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. 1990ರಲ್ಲಿ ಭಾರತ ಶೇ. 56ರಷ್ಟು ಟ್ಯಾರಿಫ್ ಹಾಕುತ್ತಿತ್ತು. ಈಗ ಶೇ. 4.6ಕ್ಕೆ ಇಳಿದಿದೆ.
ಅಮೆರಿಕದಿಂದ ಬರುವ ಕಚ್ಛಾ ತೈಲ, ಎಲ್ಎನ್ಜಿ, ಕೈಗಾರಿಕಾ ಯಂತ್ರೋಪಕರಣ, ಔಷಧ ಇತ್ಯಾದಿ ಸರಕುಗಳಿಗೆ ಬಹಳ ಕಡಿಮೆ ಟ್ಯಾರಿಫ್ ಇದೆ. ಪ್ರತೀ ಟನ್ ಕಚ್ಛಾ ತೈಲಕ್ಕೆ 1.1 ರೂ, ಎಲ್ಎನ್ಜಿಗೆ ಶೇ. 2.75 ಸುಂಕ ಹಾಕುತ್ತದೆ ಭಾರತ.
ಅಮೆರಿಕದ ಫಾರ್ಮಾ ಉತ್ಪನ್ನಗಳಿಗೆ ಸೊನ್ನೆಯಿಂದ ಶೇ. 7.5ರವರೆಗೆ, ಕಲ್ಲಿದ್ದಲಿಗೆ ಶೇ. 5, ವಿಮಾನ ಬಿಡಿಭಾಗಗಳಿಗೆ ಶೇ. 2.50, ರಸಗೊಬ್ಬರಗಳಿಗೆ ಶೇ. 7.5ರಿಂದ ಶೇ. 10 ಟ್ಯಾರಿಫ್ಗಳನ್ನು ಭಾರತ ವಿಧಿಸುತ್ತಿದೆ.
ಕೃಷಿ ಮತ್ತು ಹಾಲು ಪದಾರ್ಥಗಳು?
ಹಾಲು ಮತ್ತು ಕೃಷಿ ಉತ್ಪನ್ನಗಳ ಮೇಲೆ ಭಾರತ ಶೇ. 33ರಷ್ಟು ಸುಂಕ ವಿಧಿಸುತ್ತದೆ. ರೈತರ ಹಿತರಕ್ಷಣೆ ದೃಷ್ಟಿಯಿಂದ ಅಧಿಕ ಟ್ಯಾರಿಫ್ ಇದೆ. ಜಪಾನ್, ಸೌತ್ ಕೊರಿಯಾ ಇತ್ಯಾದಿ ಹಲವು ದೇಶಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದ ಟ್ಯಾರಿಫ್ ಇದೆ. ಟ್ರಂಪ್ ಅವರು ಭಾರತವನ್ನು ಮಾತ್ರ ಎತ್ತಿ ತೋರಿಸುತ್ತಿರುವುದು ಅವರ ಆರೋಪದ ಹಿಂದೆ ಬೇರಾವುದೋ ಉದ್ದೇಶ ಇರುವುದನ್ನು ಸೂಚಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:48 pm, Thu, 7 August 25




