ಪಿಎಂ ಕಿಸಾನ್ ಸಂಪದ ಯೋಜನೆ: ಸರ್ಕಾರದಿಂದ ಹೆಚ್ಚುವರಿ 1,920 ಕೋಟಿ ರೂ ಪುಷ್ಟಿ
PM Kisan Sampada Yojana: ದೇಶದಲ್ಲಿ ಆಹಾರ ಸಂಸ್ಕರಣಾ ಕ್ಷೇತ್ರವನ್ನು ಬಲಪಡಿಸಲು ಮತ್ತು ರೈತರ ಆದಾಯ ಹೆಚ್ಚಿಸಲು ಸರ್ಕಾರ ಪಿಎಂ ಕಿಸಾನ್ ಸಂಪದ ಯೋಜನೆ ತಂದಿದೆ. 14ನೇ ಹಣಕಾಸು ಆಯೋಗದ ಪರಿಧಿಯಲ್ಲಿ 6,000 ಕೋಟಿ ರೂ ಬಿಡುಗಡೆ ಮಾಡಿತ್ತು. ಈಗ 6,520 ಕೋಟಿ ರೂ ಬಿಡುಗಡೆ ಮಾಡಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

ನವದೆಹಲಿ, ಆಗಸ್ಟ್ 7: ರೈತರ (Farmers) ಆದಾಯ ದ್ವಿಗುಣಗೊಳಿಸುವ ಗುರಿಯೊಂದಿಗೆ ಸರ್ಕಾರ ಜಾರಿಗೆ ತಂದಿರುವ ಹಲವು ಯೋಜನೆಗಳಲ್ಲಿ ಪಿಎಂ ಕಿಸಾನ್ ಸಂಪದ ಯೋಜನೆ (PMKSY- PM Kisan Sampada Yojana) ಒಂದು. 15ನೇ ಹಣಕಾಸು ಆಯೋಗದ ಪರಿಧಿಯಲ್ಲಿ ಕೇಂದ್ರ ಸಂಪುಟವು ಈ ಯೋಜನೆಗೆ 6,520 ಕೋಟಿ ರೂ ಪ್ಯಾಕೇಜ್ಗೆ ಅನುಮೋದನೆ ನೀಡಿದೆ. ಇದರಲ್ಲಿ ಹೆಚ್ಚುವರಿಯಾಗಿ 1,920 ಕೋಟಿ ರೂ ನೀಡಲಾಗಿರುವುದೂ ಸೇರಿದೆ.
ಪಿಎಂ ಕಿಸಾನ್ ಸಂಪದ ಯೋಜನೆ ಅಡಿ 2025ರ ಜೂನ್ವರೆಗೆ ಒಟ್ಟು 1,601 ಪ್ರಾಜೆಕ್ಟ್ಗಳಿಗೆ ಅನುಮೋದನೆ ನೀಡಲಾಗಿದೆ. ಈ ಪೈಕಿ 1,133 ಪ್ರಾಜೆಕ್ಟ್ಗಳು ಪೂರ್ಣಗೊಂಡಿವೆ. ಇವುಗಳಿಂದ ವರ್ಷಕ್ಕೆ 255.66 ಲಕ್ಷ ಮೆಟ್ರಿಕ್ ಟನ್ನಷ್ಟು ಆಹಾರ ಸಂಸ್ಕರಣೆ ಸಾಮರ್ಥ್ಯ ನಿರ್ಮಾಣವಾಗಿದೆ. ಅನುಮೋದನೆಗೊಂಡಿರುವ ಎಲ್ಲಾ ಯೋಜನೆಗಳೂ ಕಾರ್ಯಗತಗೊಂಡಲ್ಲಿ 50 ಲಕ್ಷಕ್ಕೂ ಅಧಿಕ ರೈತರಿಗೆ ಲಾಭವಾಗಲಿದೆ. ಏಳು ಲಕ್ಷಕ್ಕೂ ಅಧಿಕ ನೇರ ಅಥವಾ ಪರೋಕ್ಷ ಕಾರ್ಯದಿನಗಳಷ್ಟು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. 21,803.19 ಕೋಟಿ ರೂ ಮೊತ್ತದಷ್ಟು ಹೂಡಿಕೆಗಳಾಗಬಹುದು.
ಇದನ್ನೂ ಓದಿ: ಅಮೆರಿಕದಿಂದ 25 ಅಲ್ಲ 50 ಪರ್ಸೆಂಟ್ ಟ್ಯಾರಿಫ್; ಯಾವ್ಯಾವ ಸೆಕ್ಟರ್ಗಳಿಗೆ ಬಾಧೆ?
ಪಿಎಂ ಕಿಸಾನ್ ಸಂಪದ ಯೋಜನೆ 2017ರಲ್ಲಿ ಮೊದಲು ಶುರುವಾಗಿದೆ. ಸರ್ಕಾರ ಆಗ 31,400 ಕೋಟಿ ರೂ ಬಂಡವಾಳ ನಿರೀಕ್ಷೆಯಲ್ಲಿ ಈ ಯೋಜನೆಗೆ 6,000 ಕೋಟಿ ರೂ ಮೀಸಲಿಟ್ಟಿತು. ಈಗ 15ನೇ ಹಣಕಾಸು ಆಯೋಗದ ಪರಿಧಿಯಲ್ಲಿ ಸರ್ಕಾರ ಹೆಚ್ಚು ವ್ಯಯಿಸುತ್ತಿದೆ.
ಈ ಬಾರಿ ಸರ್ಕಾರ ಹೆಚ್ಚುವರಿಯಾಗಿ 1,920 ಕೋಟಿ ರೂ ನೀಡುತ್ತಿದೆ. ಇದರಲ್ಲಿ 1,000 ಕೋಟಿ ರೂ ಅನ್ನು 50 ಮಲ್ಟಿ ಪ್ರಾಡಕ್ಟ್ ಫುಡ್ ಇರೇಡಿಯೇಶನ್ ಯುನಿಟ್ ಹಾಗೂ 100 ಆಹಾರ ಪರೀಕ್ಷಾ ಲ್ಯಾಬ್ಗಳ ಸ್ಥಾಪನೆಗೆ ವಿನಿಯೋಗಿಸಲಾಗುತ್ತದೆ. 920 ಕೋಟಿ ರೂ ಅನ್ನು ಸಂಪದ ಯೋಜನೆಯಲ್ಲಿ ಚಾಲ್ತಿಯಲ್ಲಿರುವ ವಿವಿಧ ಕಾರ್ಯಗಳಿಗೆ ಬಳಸಲಾಗುತ್ತದೆ.
ಏನಿದು ಪಿಎಂ ಕಿಸಾನ್ ಸಂಪದ ಯೋಜನೆ?
ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಆಧುನಿಕ ಸೌಕರ್ಯ ನಿರ್ಮಿಸಲೆಂದು ಸರ್ಕಾರ ಪಿಎಂ ಕಿಸಾನ್ ಸಂಪದ ಯೋಜನೆ ಆರಂಭಿಸಿದೆ. ರೈತರ ತೋಟದಿಂದ ಹಿಡಿದು ರೀಟೇಲ್ ಅಂಗಡಿಯವರೆಗೆ ಆಹಾರ ವಸ್ತುಗಳ ಸರಬರಾಜು ಸರಪಳಿ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶ ಇದೆ. ಈ ಯೋಜನೆಯಿಂದಾಗಿ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುತ್ತದೆ. ಉತ್ಪನ್ನ ವ್ಯರ್ಥವಾಗುವುದು ಕಡಿಮೆಗೊಂಡು ರೈತರಿಗೆ ಒಳ್ಳೆಯ ಆದಾಯ ಸಿಗುತ್ತದೆ.
ಇದನ್ನೂ ಓದಿ: ವಿದ್ಯುತ್ ಅವಲಂಬನೆ ತಪ್ಪಿಸುವ ಪಿಎಂ ಕುಸುಮ್ ಯೋಜನೆಗೆ ಕರ್ನಾಟಕದ ರೈತರಿಂದ ನೀರಸ ಪ್ರತಿಕ್ರಿಯೆ; ಏನಿದು ಸ್ಕೀಮ್?
ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಾಗುತ್ತದೆ. ಸಂಸ್ಕರಿತ ಆಹಾರ ವಸ್ತುಗಳ ರಫ್ತಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲೂ ಇದು ಸಾಧ್ಯವಾಗಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




