Jet Fuel: ಅಡುಗೆ ಎಣ್ಣೆಯನ್ನು ಜೆಟ್ ಇಂಧನವಾಗಿ ಪರಿವರ್ತನೆ: ಭಾರತದಲ್ಲಿ ಇದೇ ಮೊದಲು
Cooking oil to be used with ATF: ವರ್ಜಿತವಾದ ಅಡುಗೆ ಎಣ್ಣೆಯನ್ನು ಬಿಸಾಡುವ ಬದಲು ಸುಸ್ಥಿರ ವೈಮಾನಿಕ ಇಂಧನವಾಗಿ ಸಂಸ್ಕರಿಸಲಾಗುತ್ತಿದೆ. ಇಂಡಿಯನ್ ಆಯಿಲ್ನ ಪಾಣಿಪತ್ ರಿಫೈನರಿಯಲ್ಲಿ ಈ ಸಹ-ಸಂಸ್ಕರಣೆ ನಡೆಯಲಿದೆ. ಸ್ವಿಟ್ಜರ್ಲ್ಯಾಂಡ್ ಮೂಲದ Cotecna ಎನ್ನುವ ಸಂಸ್ಥೆಯು ಪಾನಿಪತ್ ರಿಫೈನರಿಗೆ ಅನುಮತಿ ನೀಡಿದೆ. ಭಾರತದಲ್ಲಿ ಈ ಅನುಮತಿ ನೀಡಲಾಗಿರುವುದು ಇದೇ ಮೊದಲು.

ನವದೆಹಲಿ, ಆಗಸ್ಟ್ 8: ಭಾರತದಲ್ಲಿ ಅಡುಗೆ ಎಣ್ಣೆಯನ್ನು ಬಳಸಿ ವೈಮಾನಿಕ ಇಂಧನ (fuel) ತಯಾರಿಸುವ ಕಾರ್ಯ ಮೊದಲುಗೊಂಡಿದೆ. ವಿಮಾನಕ್ಕೆ ಸಾಂಪ್ರದಾಯಿಕವಾಗಿ ಎಟಿಎಫ್ ಅಥವಾ ಏವಿಯೇಶನ್ ಟರ್ಬೈನ್ ಫುಯೆಲ್ ಅನ್ನು ಬಳಸಲಾಗುತ್ತದೆ. ಈಗ ಬಳಸಿದ ಅಡುಗೆ ಎಣ್ಣೆಯನ್ನು ವೈಮಾನಿಕ ಇಂಧನವಾಗಿ ಮಾರ್ಪಡಿಸುವ ರೀತಿಯಲ್ಲಿ ಸಂಸ್ಕರಿಸಲಾಗುತ್ತದೆ. ಇಂಡಿಯನ್ ಆಯಿಲ್ ಸಂಸ್ಥೆಯ ಪಾನಿಪತ್ ಘಟಕದಲ್ಲಿ ಈ ಸಂಸ್ಕರಣೆಗೆ ಅನುಮತಿ ಕೊಡಲಾಗಿದೆ. ಈ ರೀತಿ ಅನುಮತಿ ಪಡೆದ ಭಾರತದ ಮೊದಲ ಘಟಕ ಇದಾಗಿದೆ.
ವರ್ಜಿತ ಅಡುಗೆ ಎಣ್ಣೆಯನ್ನು ಜೆಟ್ ಗ್ರೇಡ್ ಇಂಧನವಾಗಿ ಪರಿವರ್ತಿಸುವ ಮೂಲಕ ಸುಸ್ಥಿರವೆನಿಸುವ ವೈಮಾನಿಕ ಇಂಧನ ಉತ್ಪತ್ತಿ ಮಾಡಲಾಗುತ್ತದೆ ಈ ಘಟಕದಲ್ಲಿ. ಈ ಮೂಲಕ ವೈಮಾನಿಕ ಕ್ಷೇತ್ರದಲ್ಲಿ ಹಸಿರು ಇಂಧನ ಅಳವಡಿಸುವ ಕಾರ್ಯಕ್ಕೆ ಪುಷ್ಟಿ ಸಿಕ್ಕಂತಾಗಿದೆ. ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರೂ ಕೂಡ ಈ ಬೆಳವಣಿಗೆಯನ್ನು ತಮ್ಮ ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಭಾರತದಿಂದ ಖರೀದಿ ನಿಲ್ಲಿಸಿದ ಅಮೇಜಾನ್, ವಾಲ್ಮಾರ್ಟ್ ಮತ್ತಿತರ ರೀಟೇಲ್ ಮಾರಾಟಗಾರರು
ಸ್ವಿಟ್ಜರ್ಲ್ಯಾಂಡ್ ಮೂಲಕ Cotecna ಎನ್ನುವ ಸಂಸ್ಥೆಯು ಏವಿಯೇಶನ್ ಇಂಧನದ ಪರೀಕ್ಷೆ ಮತ್ತು ಪ್ರಮಾಣಪತ್ರದ ಸೇವೆಗಳನ್ನು ನೀಡುತ್ತದೆ. ಇಂಡಿಯನ್ ಆಯಿಲ್ನ ಪಾನಿಪತ್ ರಿಫೈನರಿ ಘಟಕಕ್ಕೆ ಅಡುಗೆ ಎಣ್ಣೆಯನ್ನು ಸಹ-ಸಂಸ್ಕರಿತ ಏವಿಯೇಶನ್ ಇಂಧನವಾಗಿ ಪರಿವರ್ತಿಸಲು ಅನುಮತಿಸಿ ಪ್ರಮಾಣಪತ್ರ ಕೊಟ್ಟಿದೆ.
ಅಂತಾರಾಷ್ಟ್ರೀಯ ಏವಿಯೇಶನ್ ಕ್ಷೇತ್ರದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಯೋಜನೆ ಹೊಂದಿರುವ CORSIA ಎನ್ನುವ ಜಾಗತಿಕ ಕ್ರಮದ ಅವಶ್ಯಕತೆಗಳನ್ನು ಪಾನಿಪತ್ ರಿಫೈನರಿ ಘಟಕವು ಪೂರೈಸುತ್ತದೆ. ಭಾರತದಲ್ಲಿ ಈ ಶ್ರೇಯಸ್ಸು ಪಡೆದ ಮೊದಲ ರಿಫೈನರಿ ಅದು.
ಭಾರತದಲ್ಲಿ ಜಟ್ರೋಫಾ ಬಳಸಿ ಜೈವಿಕ ಇಂಧನವನ್ನು ಈ ಹಿಂದೆ ತಯಾರಿಸಲಾಗಿತ್ತು. ರೆಗ್ಯುಲರ್ ಎಟಿಎಫ್ ಇಂಧನದ ಜೊತೆ ಶೇ. 25ರಷ್ಟು ಜೈವಿಕ ಇಂಧನ ಬೆರಸುವ ಪ್ರಯೋಗ ಯಶಸ್ವಿಯಾಗಿತ್ತು. ಈ ಮಿಶ್ರ ಇಂಧನದಿಂದ ವಿಮಾನಗಳ ಹಾರಾಟ ಕೂಡ ನಡೆಸಲಾಗಿದೆ. ಆದರೆ, ಸಾಕಷ್ಟು ಪ್ರಮಾಣದಲ್ಲಿ ಜೈವಿಕ ಇಂಧನ ಅಲಭ್ಯ ಇರುವುದರಿಂದ ಇದರ ಬಳಕೆ ನಿರಂತರವಾಗಿ ನಡೆಯುತ್ತಿಲ್ಲ.
ಇದನ್ನೂ ಓದಿ: ತಿಂಗಳಿಗೆ 2 ಲಕ್ಷ ರೂ ಸ್ಟೈಪೆಂಡ್; ಶಾಲಾ ಮಕ್ಕಳಾದರೂ ಪರವಾಗಿಲ್ಲ; ವರ್ಕ್ ಫ್ರಂ ಹೋಮ್; ರೆಫರ್ ಮಾಡಿದವರಿಗೆ ಐಫೋನ್ ಗಿಫ್ಟ್
ಈಗ ಅಡುಗೆ ಎಣ್ಣೆಯನ್ನು ವೈಮಾನಿಕ ಇಂಧನಕ್ಕೆ ಬಳಸುವ ಯತ್ನವಾಗುತ್ತಿದೆ. ಅಡುಗೆ ಎಣ್ಣೆಯನ್ನು ಮೊದಲಿಗೆ ಸುಸ್ಥಿರ ವೈಮಾನಿಕ ಇಂಧನವಾಗಿ ಪರಿವರ್ತಿಸಲಾಗುತ್ತದೆ. ಆ ಬಳಿಕ ಅದನ್ನು ಎಟಿಎಫ್ಗೆ ಬೆರೆಸಲಾಗುತ್ತದೆ. ಈ ಮಿಶ್ರಣವನ್ನು ವಿಮಾನ ಇಂಧನವಾಗಿ ಬಳಸಲಾಗುತ್ತದೆ. ಈ ಪ್ರಯೋಗ ಯಶಸ್ವಿಯಾದಲ್ಲಿ, ಮನೆಮನೆಗಳಲ್ಲಿ, ಹೋಟೆಲುಗಳಲ್ಲಿ ಬಳಸಲಾಗುವ ಅಡುಗೆಯನ್ನು ಬಿಸಾಡುವ ಅಥವಾ ಪದೇಪದೇ ಬಳಸುವ ಬದಲು ಮಾರಿ ಹಣ ಗಳಿಸುವ ಅವಕಾಶ ಸಿಗುತ್ತದೆ. ಕೃಷಿಕರಿಗೂ ಒಳ್ಳೆಯ ಆದಾಯ ಸಿಕ್ಕಂತಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




