ರೈತರ ಹಿತರಕ್ಷಣೆಗೆ ಪ್ರಧಾನಿ ಮೋದಿಗಿರುವ ಬದ್ಧತೆಯನ್ನು ಮೆಚ್ಚಿದ ಮಾಜಿ ಡಬ್ಲ್ಯುಎಚ್ಒ ಡಿಡಿಜಿ ಸೌಮ್ಯಾ ಸ್ವಾಮಿನಾಥನ್
Soumya Swaminathan appreciates PM Narendra Modi: ಅಮೆರಿಕ ಸೇರಿದಂತೆ ಜಾಗತಿಕ ರಾಜಕೀಯ ಒತ್ತಡಗಳ ನಡುವೆಯೂ ಪ್ರಧಾನಿ ಮೋದಿ ರೈತರ ಹಿತರಕ್ಷಣೆಗೆ ಆದ್ಯತೆ ಕೊಡುತ್ತಿದ್ದಾರೆ. ಈ ಸಂಗತಿಯನ್ನು ಡಬ್ಲ್ಯುಎಚ್ಒದ ಮಾಜಿ ಉಪ ಮಹಾನಿರ್ದೇಶಕಿಯಾದ ಸೌಮ್ಯಾ ಸ್ವಾಮಿನಾಥನ್ ಎತ್ತಿತೋರಿಸಿ ಶ್ಲಾಘಿಸಿದ್ದಾರೆ. ನರೇಂದ್ರ ಮೋದಿ ಅವರ ಈ ಧೋರಣೆಯನ್ನು ತಮ್ಮ ತಂದೆಯವರೂ ಮೆಚ್ಚಿಕೊಳ್ಳುತ್ತಿದ್ದರು ಎಂದವರು ಹೇಳಿದ್ದಾರೆ.

ನವದೆಹಲಿ, ಆಗಸ್ಟ್ 8: ಯಾವುದೇ ಬಾಹ್ಯ ಒತ್ತಡಕ್ಕೆ ಮಣಿಯದೆ ರೈತರ ಹಿತ ರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹೊಂದಿರುವ ಬದ್ಧತೆಯನ್ನು ಸೌಮ್ಯ ಸ್ವಾಮಿನಾಥನ್ ಶ್ಲಾಘಿಸಿದ್ದಾರೆ. ರೈತರ ಹಿತರಕ್ಷಣೆ ಬಲಿಕೊಟ್ಟು ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಸರ್ಕಾರ ಸುತಾರಾಂ ಒಪ್ಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸೌಮ್ಯ ಸ್ವಾಮಿನಾಥನ್ (Soumya Swaminathan) ಅವರು ಸರ್ಕಾರದ ನಿಲುವನ್ನು ಮೆಚ್ಚಿಕೊಂಡಿದ್ದಾರೆ.
ರೈತರು, ಮೀನುಗಾರರು ಮತ್ತು ಬುಡಕಟ್ಟು ಸಮುದಾಯದವರನ್ನು ಬೆಂಬಲಿಸುವಂತಹ ಪ್ರಬಲ ಸಂದೇಶವನ್ನು ಪ್ರಧಾನಿಗಳು ರವಾನಿಸಿರುವುದನ್ನು ಕಂಡಿದ್ದರೆ ತಮ್ಮ ತಂದೆ ಬಹಳ ಸಂತೋಷಪಡುತ್ತಿದ್ದರು ಎಂದು ಖ್ಯಾತ ಕೃಷಿ ವಿಜ್ಞಾನಿ ಹಾಗೂ ಆರ್ಥಿಕ ತಜ್ಞರೂ ಆದ ಎಂಎಸ್ ಸ್ವಾಮಿನಾಥನ್ ಅವರ ಮಗಳಾದ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ಇದನ್ನೂ ಓದಿ: ಟ್ರಂಪ್ ಟ್ಯಾರಿಫ್ ಬರೆ, ಭಾರತಕ್ಕೆ ಸಿಕ್ಕಿರುವ ದೊಡ್ಡ ಅವಕಾಶ: ಅಮಿತಾಭ್ ಕಾಂತ್
ಸೌಮ್ಯಾ ಅವರು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಮಾಜಿ ಡಿಡಿಜಿ (ಉಪ ಮಹಾನಿರ್ದೇಶಕಿ) ಆಗಿದ್ದರು. ಪ್ರಸಕ್ತ ಎಂಎಸ್ ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ನ ಮುಖ್ಯಸ್ಥೆಯಾಗಿದ್ದಾರೆ.
ಜಾಗತಿಕ ರಾಜಕೀಯ ಒತ್ತಡವನ್ನು ಎದುರಿಸಲು ಸಜ್ಜಾಗಬೇಕಾದ ಮಹತ್ವವನ್ನು ಎತ್ತಿತೋರಿಸಿದ ಸೌಮ್ಯ ಸ್ವಾಮಿನಾಥನ್, ಈ ಪರಿಸ್ಥಿತಿಯಲ್ಲಿ ವಿಜ್ಞಾನಿಗಳು, ತಂತ್ರಜ್ಞರು, ನೀತಿ ರೂಪಕರು ಮತ್ತು ರೈತರು ಒಟ್ಟುಗೂಡಿ ಮುಂದಡಿ ಇಡುವ ಅವಶ್ಯಕತೆ ಇದೆ. ತಮ್ಮ ತಂದೆ ಇದ್ದರೆ ಅವರೂ ಇದೇ ಸಲಹೆ ನೀಡುತ್ತಿದ್ದರು. ದೇಶ ಹೇಗೆ ಮುಂದಿನ ಹೆಜ್ಜೆಗಳನ್ನು ಇಡಬೇಕು, ಈ ಜಾಗತಿಕ ರಾಜಕೀಯ ಒತ್ತಡಗಳನ್ನು ಹೇಗೆ ಎದುರಿಸಬೇಕು ಎನ್ನುವ ಸವಾಲುಗಳಿಗೆ ಉತ್ತರ ಕಂಡುಕೊಳ್ಳಲು ಚಿಂತನೆ ಆಗಬೇಕಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದಿಂದ ಖರೀದಿ ನಿಲ್ಲಿಸಿದ ಅಮೇಜಾನ್, ವಾಲ್ಮಾರ್ಟ್ ಮತ್ತಿತರ ರೀಟೇಲ್ ಮಾರಾಟಗಾರರು
ಭಾರತದ ಪ್ರಮುಖ ಕೃಷಿ ವಿಜ್ಞಾನಿ ಹಾಗೂ ಐಸಿಎಆರ್ನ ಮಾಜಿ ನಿರ್ದೇಶಕರಾದ ಪ್ರೊಫೆಸರ್ ಕೆ.ಸಿ. ಬನ್ಸಾಲ್ ಅವರು ಸೌಮ್ಯಾ ಅವರ ಈ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ. ರೈತರಿಗೆ ತಂತ್ರಜ್ಞಾನ ನೆರವು ನೀಡಲು ಭಾರತ ಸಮರ್ಥವಾಗಿದೆ. ಪ್ರಧಾನಿಗಳು ನೀಡಿದ ಸಂದೇಶ ಬಹಳ ಪ್ರಬಲವಾಗಿದೆ. ತಾವು ಪರಿಪೂರ್ಣವಾಗಿ ಸ್ವಾವಲಂಬನೆ ಸಾಧಿಸುವತ್ತ ಕೆಲಸ ಮುಂದುವರಿಸಬೇಕು ಎಂದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




