ಟ್ರಂಪ್ ಟ್ಯಾರಿಫ್ ಬರೆ, ಭಾರತಕ್ಕೆ ಸಿಕ್ಕಿರುವ ದೊಡ್ಡ ಅವಕಾಶ: ಅಮಿತಾಭ್ ಕಾಂತ್
Amitabh Kant on India using crisis to its benefit: ಡೊನಾಲ್ಡ್ ಟ್ರಂಪ್ ವಿಧಿಸಿರುವ ಶೇ. 50ರಷ್ಟು ಸುಂಕವು ಭಾರತಕ್ಕೆ ದೊಡ್ಡ ಅವಕಾಶ ಕೊಟ್ಟಿದೆ ಎಂದು ಅಮಿತಾಭ್ ಕಾಂತ್ ಬಣ್ಣಿಸಿದ್ದಾರೆ. ತಲೆಮಾರಿಗೊಮ್ಮೆ ಸಿಗುವ ಈ ಅವಕಾಶವನ್ನು ಭಾರತ ಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಮಾಜಿ ನೀತಿ ಆಯೋಗ್ ಸಿಇಒ ಕರೆ ನೀಡಿದ್ದಾರೆ. ಈ ಅವಕಾಶ ಬಳಸಿ ಭಾರತವು ದೊಡ್ಡ ಮಟ್ಟದಲ್ಲಿ ಸುಧಾರಣೆ ಕ್ರಮ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.

ನವದೆಹಲಿ, ಆಗಸ್ಟ್ 8: ಭಾರತದ ಸರಕುಗಳ ಮೇಲೆ ಅಮೆರಿಕ ಶೇ. 50ರಷ್ಟು ಟ್ಯಾರಿಫ್ ಹಾಕುತ್ತಿದೆ. ಇದರಿಂದ ಭಾರತೀಯ ಉದ್ಯಮಗಳಿಗೆ ದೊಡ್ಡ ಮಟ್ಟದ ಘಾಸಿಯಾಗಬಹುದು ಎನ್ನುವ ಕಳವಳವನ್ನು ಉದ್ಯಮ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ. ಆದರೆ, ನೀತಿ ಆಯೋಗ್ನ ಮಾಜಿ ಸಿಇಒ ಅಮಿತಾಭ್ ಕಾಂತ್ (Amitabh Kant) ಇದಕ್ಕೆ ಭಿನ್ನವಾದ ಅಭಿಪ್ರಾಯ ನೀಡಿದ್ದಾರೆ. ಅವರ ಪ್ರಕಾರ, ಅಮೆರಿಕವು ಹಾಕಿರುವ ತೆರಿಗೆಯು (tariffs) ಭಾರತಕ್ಕೆ ಒಳ್ಳೆಯ ಅವಕಾಶ ಒದಗಿಸಿದೆ. ತಲೆಮಾರಿಗೆ ಒಮ್ಮೆ ಸಿಗುವ ಅವಕಾಶ ಇದು ಎಂದು ಅವರು ಬಣ್ಣಿಸಿದ್ದಾರೆ.
ತಮ್ಮ ಎಕ್ಸ್ ಅಕೌಂಟ್ನಲ್ಲಿ ಪೋಸ್ಟ್ ಹಾಕಿದ ಅವರು, ಬಿಕ್ಕಟ್ಟನ್ನು ಸರಿಯಾಗಿ ಉಪಯೋಗಿಸಬೇಕು ಎಂದು ಕರೆ ನೀಡಿದ್ದಾರೆ. ‘ಮುಂದಿನ ದೊಡ್ಡ ಸುಧಾರಣೆಗಳನ್ನು ಮಾಡಲು ಟ್ರಂಪ್ ನಮಗೆ ತಲೆಮಾರಿಗೊಮ್ಮೆ ಸಿಗುವ ಅವಕಾಶ ಒದಗಿಸಿದ್ದಾರೆ. ಬಿಕ್ಕಟ್ಟನ್ನು ಪೂರ್ಣವಾಗಿ ಬಳಸಿಕೊಳ್ಳಬೇಕು’ ಎಂದು ಅಮಿತಾಭ್ ಕಾಂತ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಭಾರತದಿಂದ ಖರೀದಿ ನಿಲ್ಲಿಸಿದ ಅಮೇಜಾನ್, ವಾಲ್ಮಾರ್ಟ್ ಮತ್ತಿತರ ರೀಟೇಲ್ ಮಾರಾಟಗಾರರು
ಕಳೆದ ಬಾರಿಯ ಜಿ20ಯಲ್ಲಿ ಭಾರತದ ಶೆರ್ಪಾ ಆಗಿದ್ದ ಅಮಿತಾಭ್ ಕಾಂತ್ ಅವರ ಈ ಅಭಿಪ್ರಾಯಕ್ಕೆ ಸಾಕಷ್ಟು ಜನರು ಸಹಮತ ವ್ಯಕ್ತಪಡಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಭಾರತಕ್ಕೆ ವರದಾನವೆಂದು ಭಾವಿಸೋಣ. ಈಗ ಆಗುತ್ತಿರುವುದು ಬಹಳ ದೊಡ್ಡ ಎಚ್ಚರಿಕೆಯ ಕರೆಗಂಟೆ. ಇದು ಭಾರತವನ್ನು ಹೆಚ್ಚು ಸ್ವಾವಲಂಬನೆಯತ್ತ ಸಾಗಿಸುತ್ತಿದೆ ಎಂದು ಒಬ್ಬರು ಕಾಮೆಂಟಿಸಿದ್ದಾರೆ.
ಅಮಿತಾಭ್ ಕಾಂತ್ ಅವರ ಎಕ್ಸ್ ಪೋಸ್ಟ್
Trump has provided us a once in a generation opportunity to take the next big leap on reforms. Crisis must be fully utilised.
— Amitabh Kant (@amitabhk87) August 6, 2025
ರಷ್ಯನ್ ತೈಲ ಖರೀದಿಸುತ್ತಿರುವುದಕ್ಕೆ ಭಾರತಕ್ಕೆ ಹೆಚ್ಚುವರಿ ಶೇ. 25 ತೆರಿಗೆ
ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳದ ದೇಶಗಳ ಮೇಲೆ ಅಧಿಕ ಟ್ಯಾರಿಫ್ ಹಾಕಲಾಗುತ್ತದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು. ಅದರಂತೆ ಭಾರತದ ಮೇಲೆ ಶೇ. 25ರಷ್ಟು ಸುಂಕ ವಿಧಿಸಿದ್ದರು. ಇದು ಆಗಸ್ಟ್ 7ರಂದು ಚಾಲ್ತಿಗೆ ಬಂದಿದೆ. ಆದರೆ, ರಷ್ಯನ್ ತೈಲ ಖರೀದಿಸುತ್ತಿದೆ ಎಂದು ಆರೋಪಿಸಿ ಭಾರತದ ಮೇಲೆ ಶೇ. 25ರಷ್ಟು ಹೆಚ್ಚುವರಿ ಟ್ಯಾರಿಫ್ ಹಾಕುವುದಾಗಿ ಟ್ರಂಪ್ ತಿಳಿಸಿದ್ದಾರೆ. ಈ ಹೆಚ್ಚುವರಿ ಸುಂಕವು 21 ದಿನಗಳ ನಂತರ ಜಾರಿಗೆ ಬರುತ್ತದೆ. ಆಗಸ್ಟ್ 29ರಿಂದ ಶೇ. 50 ಟ್ಯಾರಿಫ್ ಜಾರಿಗೆ ಬರಬಹುದು.
ಇದನ್ನೂ ಓದಿ: ಅಮೆರಿಕದಿಂದ 25 ಅಲ್ಲ 50 ಪರ್ಸೆಂಟ್ ಟ್ಯಾರಿಫ್; ಯಾವ್ಯಾವ ಸೆಕ್ಟರ್ಗಳಿಗೆ ಬಾಧೆ?
ಭಾರತದಿಂದ ಅಮೆರಿಕಕ್ಕೆ ರಫ್ತಾಗುತ್ತಿರುವ ಹೆಚ್ಚಿನ ಸರಕುಗಳಿಗೆ ಶೇ. 50ರಷ್ಟು ಟ್ಯಾರಿಫ್ ಅನ್ವಯ ಆಗಲಿದೆ. ಬಟ್ಟೆ, ಹವಳ, ಆಭರಣ, ಉಕ್ಕು, ಅಲೂಮಿನಿಯಂ, ತಾಮ್ರ, ಯಂತ್ರೋಪಕರಣ, ರಾಸಾಯನಿಕ ಇತ್ಯಾದಿ ವಸ್ತುಗಳಿಗೆ ಅಧಿಕ ಸುಂಕ ಇರಲಿದೆ. ವಾಹನಗಳಿಗೆ ಶೇ. 26, ಪೆಟ್ರೋಲಿಯಂ ಉತ್ಪನ್ನಗಳಿಗೆ ಶೇ. 6.9 ಟ್ಯಾರಿಫ್ ಇರಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




