ಆದಾಯ ತೆರಿಗೆ ಮಸೂದೆ ಹಿಂಪಡೆದ ಸರ್ಕಾರ; ಆ. 11ರಂದು ಬರಲಿದೆ ಪರಿಷ್ಕೃತ ಮಸೂದೆ
Income tax bill: ಫೆಬ್ರುವರಿಯಲ್ಲಿ ಮಂಡನೆ ಮಾಡಲಾಗಿದ್ದ 2025ರ ಆದಾಯ ತೆರಿಗೆ ಮಸೂದೆಯನ್ನು ಸರ್ಕಾರ ಹಿಂಪಡೆದಿದೆ. 1961ರ ಆದಾಯ ತೆರಿಗೆ ಕಾಯ್ದೆ ಬದಲು ಇದನ್ನು ಜಾರಿಗೆ ತರಲು ಮಸೂದೆ ರೂಪಿಸಲಾಗಿತ್ತು. ಆದರೆ, ಕೆಲವಾರು ಬದಲಾವಣೆಗಳಿಗೆ ಸಲಹೆ ಬಂದಿದ್ದರಿಂದ ಪರಿಷ್ಕೃತ ಮಸೂದೆಯನ್ನು ಮಂಡನೆ ಮಾಡಲಾಗುತ್ತಿದೆ.

ನವದೆಹಲಿ, ಆಗಸ್ಟ್ 8: ಸರ್ಕಾರ ಆರು ದಶಕಗಳ ಹಿಂದಿನ ಆದಾಯ ತೆರಿಗೆ ಕಾಯ್ದೆ (Income tax act) ಬದಲು ಹೊಸ ಕಾಯ್ದೆ ತರಲೆಂದು ರೂಪಿಸಲಾಗಿದ್ದ 2025ರ ಆದಾಯ ತೆರಿಗೆ ಮಸೂದೆಯನ್ನು ಹಿಂಪಡೆದುಕೊಂಡಿದೆ. ಫೆಬ್ರುವರಿ 13ರಂದು ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡನೆ ಮಾಡಲಾಗಿತ್ತು. ಬೈಜಯಂತ್ ಪಾಂಡ ನೇತೃತ್ವದ ಸೆಲೆಕ್ಟ್ ಕಮಿಟಿ ಮಾಡಿದ ಕೆಲ ಶಿಫಾರಸುಗಳ ಪ್ರಕಾರ ಮಸೂದೆಯಲ್ಲಿ ಪರಿಷ್ಕರಣೆ ಮಾಡಲಾಗಿದೆ. ಈ ಪರಿಷ್ಕೃತ ಮಸೂದೆಯನ್ನು ಆಗಸ್ಟ್ 11, ಸೋಮವಾರದಂದು ಲೋಕಸಭೆಯಲ್ಲಿ ಮರು ಮಂಡನೆ ಮಾಡಲಾಗುತ್ತದೆ.
ಮಸೂದೆಯಲ್ಲಿ ಪದೇ ಪದೇ ಮಾಡಲಾದ ಬದಲಾವಣೆಗಳಿಂದ ಗೊಂದಲವಾಗುವುದನ್ನು ತಪ್ಪಿಸಲು, ಎಲ್ಲಾ ಬದಲಾವಣೆಗಳನ್ನು ಒಳಗೊಂಡಿರುವ ಹೊಸ ಪರಿಷ್ಕೃತ ಆದಾಯ ತೆರಿಗೆ ಮಸೂದೆಯನ್ನು ತರಲಾಗಿದೆ. ಡ್ರಾಫ್ಟಿಂಗ್, ವಾಕ್ಯ ಜೋಡಣೆ ಶೈಲಿ, ಕ್ರಾಸ್ ರೆಫರೆನ್ಸಿಂಗ್ ಇತ್ಯಾದಿಯಲ್ಲಿ ತಿದ್ದುಪಡಿ ಮಾಡುವುದಿತ್ತು. ಹೊಸ ಪರಿಷ್ಕೃತ ಮಸೂದೆಯಲ್ಲಿ ಈ ಎಲ್ಲಾ ಬದಲಾವಣೆಗಳನ್ನು ಅಳವಡಿಸಲಾಗಿದೆ.
ಇದನ್ನೂ ಓದಿ: ಭಾರತದಿಂದ ಖರೀದಿ ನಿಲ್ಲಿಸಿದ ಅಮೇಜಾನ್, ವಾಲ್ಮಾರ್ಟ್ ಮತ್ತಿತರ ರೀಟೇಲ್ ಮಾರಾಟಗಾರರು
ಈ ಹಿಂದೆ ಇದ್ದ ಆವೃತ್ತಿಯ ಮಸೂದೆಯಲ್ಲಿ ಹಲವು ಡ್ರಾಫ್ಟಿಂಗ್ ದೋಷಗಳಿರುವುದನ್ನು ವಕೀಲರು, ಚಾರ್ಟರ್ಡ್ ಅಕೌಂಟೆಂಟ್ಗಳು ಗುರುತಿಸಿದ್ದರು. ಲೋಸಕಭೆಯ ಆಯ್ಕೆ ಸಮಿತಿಯ ಗಮನಕ್ಕೆ ಈ ದೋಷಗಳನ್ನು ತಂದಿದ್ದರು.
ಹೊಸ ಆದಾಯ ತೆರಿಗೆ ಮಸೂದೆಯಲ್ಲಿ ಏನಿವೆ ವಿಶೇಷತೆಗಳು?
- 1961ರ ಆದಾಯ ತೆರಿಗೆ ಕಾಯ್ದೆಯಲ್ಲಿ ಸಾಕಷ್ಟು ಗೋಜಲು ತರುವಂತಹ ಕ್ಲಿಷ್ಟಕರ ವಿವರಣೆಗಳಿದ್ದುವು. ಹೊಸ ಮಸೂದೆಯಲ್ಲಿ ಕಾನೂನುಗಳನ್ನು ಸರಳಗೊಳಿಸಲಾಗಿದೆ.
- ಸ್ಪಷ್ಟವಾಗಿ ಅರ್ಥೈಸಿಕೊಳ್ಳಬಹುದಾದಂತೆ ನಿಯಮಗಳ ವಿವರಣೆ ಇರುತ್ತದೆ.
- ತೆರಿಗೆ ಪಾವತಿದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಇರುತ್ತದೆ. ಕೆಲ ನಿರ್ದಿಷ್ಟ ಅಪರಾಧಗಳಿಗೆ ದಂಡವನ್ನು ಕಡಿಮೆಗೊಳಿಸಲಾಗುತ್ತದೆ.
- ಟ್ಯಾಕ್ಸ್ ಸ್ಯಾಬ್ ದರ ಸೇರಿದಂತೆ ವಿವಿಧ ಆದಾಯ ತೆರಿಗೆಗಳಲ್ಲಿ ಬದಲಾವಣೆ ಇರುವುದಿಲ್ಲ. ಹೊಸ ತೆರಿಗೆಯ ಪರಿಚಯ ಇರುವುದಿಲ್ಲ.
- 300ಕ್ಕೂ ಅಧಿಕ ಅನವಶ್ಯಕ ನಿಯಮಗಳನ್ನು ತೆಗೆದುಹಾಕಲಾಗುತ್ತದೆ. ನಂಬಿಕೆ ಮತ್ತು ವಿಶ್ವಾಸಕ್ಕೆ ಮೊದಲ ಆದ್ಯತೆ ಕೊಡಲಾಗುತ್ತದೆ.
- ನಿಯಮಗಳನ್ನು ರೂಪಿಸಲು ಸಿಬಿಡಿಟಿಗೆ ಹೆಚ್ಚಿನ ಅಧಿಕಾರ ನೀಡಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




