ರಾಜ್ಯದ 30 ಮಂದಿ ಕೈದಿಗಳಿಗೆ ಜೈಲಿಂದ ಬಿಡುಗಡೆ ಭಾಗ್ಯ: ಸನ್ನಡತೆ ಆಧಾರದಲ್ಲಿ ರಿಲೀಸ್
ರಾಜ್ಯ ಸರ್ಕಾರವು 30 ಜೀವಾವಧಿ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಬಿಡುಗಡೆ ಮಾಡಲು ಆದೇಶಿಸಿದೆ. ರಾಜ್ಯಪಾಲರ ಅನುಮೋದನೆಯೊಂದಿಗೆ, ಸಂವಿಧಾನದ ಆರ್ಟಿಕಲ್ 161ರ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಪರಿಶೀಲನಾ ಸಮಿತಿಯ ಶಿಫಾರಸಿನ ಮೇರೆಗೆ, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಜೈಲುಗಳಿಂದ ಮೂವರು ಮಹಿಳೆಯರೂ ಸೇರಿದಂತೆ ಕೈದಿಗಳಿಗೆ ಬಿಡುಗಡೆ ಭಾಗ್ಯ ದೊರೆತಿದೆ.

ಬೆಂಗಳೂರು, ಮಾರ್ಚ್ 13: ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ 30 ಜೀವಾವಧಿ ಕೈದಿಗಳನ್ನು ಉತ್ತಮ ನಡೆಗುಣದ ಆಧಾರದ ಮೇಲೆ ಮುಂಗಡವಾಗಿ ಬಿಡುಗಡೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಪರಿಶೀಲನಾ ಸಮಿತಿ (Life Convict Review – LCR) ಶಿಫಾರಸಿನ ಮೇರೆಗೆ ರಾಜ್ಯ ಸರ್ಕಾರ ಈ ಕುರಿತು ಆದೇಶ ಹೊರಡಿಸಿದ್ದು, ಸಂವಿಧಾನದ ಆರ್ಟಿಕಲ್ 161 ಅನ್ವಯ ರಾಜ್ಯಪಾಲರ ಅನುಮೋದನೆಯೂ ಇದಕ್ಕೆ ದೊರೆತಿದೆ. ವಿವಿಧ ಕೇಂದ್ರ ಕಾರಾಗೃಹಗಳಿಂದ ಬಂದ 54 ಪ್ರಕರಣಗಳನ್ನು ಪರಿಶೀಲಿಸಿದ LCR ಸಮಿತಿ, ಅವುಗಳಲ್ಲಿ 30 ಜೀವಾವಧಿ ಕೈದಿಗಳನ್ನು ಬಿಡುಗಡೆಗೆ ಆಯ್ಕೆ ಮಾಡಿದೆ.
ಬಿಡುಗಡೆಯಾಗಲಿರುವ 30 ಕೈದಿಗಳಲ್ಲಿ ಮೂರು ಮಂದಿ ಮಹಿಳೆಯರು ಸೇರಿದ್ದಾರೆ. ಈ ಮಹಿಳಾ ಕೈದಿಗಳು ಪ್ರಸ್ತುತ ಮೈಸೂರು, ಕಲಬುರಗಿ ಮತ್ತು ಶಿವಮೊಗ್ಗ ಮಹಿಳಾ ಕೇಂದ್ರ ಕಾರಾಗೃಹಗಳಲ್ಲಿ ಬಂಧನದಲ್ಲಿದ್ದಾರೆ. ಪರಪ್ಪನ ಅಗ್ರಹಾರದಲ್ಲಿರುವ ಬೆಂಗಳೂರು ಕೇಂದ್ರ ಕಾರಾಗೃಹದಿಂದ 14 ಮಂದಿ ಜೀವಾವಧಿ ಕೈದಿಗಳು ಬಿಡುಗಡೆಗೊಳ್ಳಲಿದ್ದರೆ, ಮೈಸೂರು ಕಾರಾಗೃಹದಿಂದ ಒಬ್ಬ ಮಹಿಳಾ ಕೈದಿ, ಬೆಳಗಾವಿ ಮತ್ತು ಕಲಬುರಗಿ ಕಾರಾಗೃಹಗಳಿಂದ ತಲಾ ಓರ್ವ ಮಹಿಳೆ ಸೇರಿ ಇಬ್ಬರು ರಿಲೀಸ್ ಆಗಲಿದ್ದಾರೆ. ಶಿವಮೊಗ್ಗ ಜೈಲಿನಿಂದ ಒಬ್ಬರು, ವಿಜಯಪುರ ಕಾರಾಗೃಹದಿಂದ ಐವರು, ಬಳ್ಳಾರಿಯಿಂದ ಮೂವರು ಮತ್ತು ಧಾರವಾಡ ಕಾರಾಗೃಹದಿಂದ ಒಬ್ಬ ಜೀವಾವಧಿ ಕೈದಿ ಬಿಡುಗಡೆಗೊಳ್ಳಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಮದುವೆಗೆ ಹೊರಡಬೇಕೆನ್ನುವಷ್ಟರಲ್ಲಿ ಸಂಪ್ಗೆ ಮಗು ಬಿದ್ದು ಸಾವು
ಸೈಬರ್ ಅಪರಾಧ ಪ್ರಕರಣಗಳು ಇಳಿಕೆ
ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಜೆಡಿಎಸ್ ಸದಸ್ಯ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2023ರಲ್ಲಿ ರಾಜ್ಯದಲ್ಲಿ 22,225 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದವು. 2025ರ ವೇಳೆಗೆ ಅವು 14,899ಕ್ಕೆ ಇಳಿಕೆಯಾಗಿವೆ. ಪೊಲೀಸ್ ಇಲಾಖೆ ಕೈಗೊಂಡ ಪರಿಣಾಮಕಾರಿ ಕ್ರಮಗಳು, ಪ್ರಕರಣಗಳ ತ್ವರಿತ ಪತ್ತೆ ಮತ್ತು ಸಾರ್ವಜನಿಕರಲ್ಲಿ ಮೂಡಿಸಿದ ಜಾಗೃತಿ ಕಾರಣದಿಂದ ಈ ಇಳಿಕೆ ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
