ಶ್ರೀಲಂಕಾದಲ್ಲಿ ಅದಾನಿ ನೇತೃತ್ವದ ಡಬ್ಲ್ಯುಸಿಟಿ ಪೋರ್ಟ್ ಟರ್ಮಿನಲ್ ಪ್ರಾಜೆಕ್ಟ್​ಗೆ ಅಮೆರಿಕದ ಹಣಕಾಸು ನೆರವು

|

Updated on: Nov 08, 2023 | 2:48 PM

Columbo WCT Port Terminal Project: ಶ್ರೀಲಂಕಾದ ಕೊಲಂಬೋ ಪೋರ್ಟ್​ನಲ್ಲಿ ಅದಾನಿ ಗ್ರೂಪ್​ನಿಂದ ನಡೆಯುತ್ತಿರುವ ಟರ್ಮಿನಲ್​ ನಿರ್ಮಾಣ ಯೋಜನೆಗೆ ಅಮೆರಿಕ ಧನಸಹಾಯ ಒದಗಿಸಲಿದೆ. ಈ ಪ್ರಾಜೆಕ್ಟ್​ಗೆ ಅಮೆರಿಕದ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಶನ್ ಸಂಸ್ಥೆ 553 ಮಿಲಿಯನ್ ಡಾಲರ್ ನೀಡಲಿದೆ. ಕೊಲಂಬೋ ಬಂದರಿನಲ್ಲಿ ವಿವಿಧ ಟರ್ಮಿನಲ್​ಗಳಿವೆ, ಇನ್ನೂ ಕೆಲವನ್ನು ನಿರ್ಮಿಸಲಾಗುತ್ತಿದೆ. ಚೀನಾದ ಒಂದು ಕಂಪನಿಯಿಂದ ಒಂದು ಟರ್ಮಿನಲ್ ನಿರ್ಮಾಣವಾಗಿದೆ. ಅದಾನಿ ಗ್ರೂಪ್​ನಿಂದ ವೆಸ್ಟ್ ಕಂಟೇನರ್ ಟರ್ಮಿನಲ್ ನಿರ್ಮಾಣವಾಗುತ್ತಿದೆ.

ಶ್ರೀಲಂಕಾದಲ್ಲಿ ಅದಾನಿ ನೇತೃತ್ವದ ಡಬ್ಲ್ಯುಸಿಟಿ ಪೋರ್ಟ್ ಟರ್ಮಿನಲ್ ಪ್ರಾಜೆಕ್ಟ್​ಗೆ ಅಮೆರಿಕದ ಹಣಕಾಸು ನೆರವು
ಕೊಲಂಬೋ ಪೋರ್ಟ್
Follow us on

ಕೊಲಂಬೋ, ನವೆಂಬರ್ 8: ಇಲ್ಲಿಯ ಪೋರ್ಟ್​ನಲ್ಲಿ (Columbo Port) ಅದಾನಿ ಗ್ರೂಪ್​ನಿಂದ ನಡೆಯುತ್ತಿರುವ ಟರ್ಮಿನಲ್ (West Terminal Project)​ ನಿರ್ಮಾಣ ಯೋಜನೆಗೆ ಅಮೆರಿಕ ಧನಸಹಾಯ ಒದಗಿಸಲಿದೆ. ಈ ಪ್ರಾಜೆಕ್ಟ್​ಗೆ ಅಮೆರಿಕದ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಶನ್ ಸಂಸ್ಥೆ 553 ಮಿಲಿಯನ್ ಡಾಲರ್ (4,600 ಕೋಟಿ ರೂ) ನೀಡಲಿದೆ. ಸರ್ಕಾರಿ ಸ್ವಾಮ್ಯದ ಡಿಎಫ್​ಸಿ (DFC) ಸಂಸ್ಥೆಯೇ ಈ ವಿಚಾರವನ್ನು ಖಚಿತಪಡಿಸಿದೆ.

‘ಡಿಎಫ್​ಸಿ ಕೇವಲ ನಾಲ್ಕು ವರ್ಷದಲ್ಲಿ ಶ್ರೀಲಂಕಾದ್ಯಂತ 20 ಮಿಲಿಯನ್ ಡಾಲರ್ (166 ಕೋಟಿ ರೂ) ಇದ್ದ ಹೂಡಿಕೆಯನ್ನು 1 ಬಿಲಿಯನ್ ಡಾಲರ್​ಗೆ (ಸುಮಾರು 8,300 ಕೋಟಿ ರೂ) ಹೆಚ್ಚಿಸಿದೆ. ಇವತ್ತು ಡಿಎಫ್​ಸಿ ಸಿಇಒ ನೇಥನ್ ಅವರು ಸರ್ಕಾರದ ಜೊತೆ ಮಾತನಾಡಿ ಶ್ರೀಲಂಕಾದೊಂದಿಗಿನ ಸಂಬಂಧವನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ಯುವ ಅವಕಾಶಗಳ ಬಗ್ಗೆ ಚರ್ಚಿಸಿದರು,’ ಎಂದು ಟ್ವೀಟ್ ಮಾಡಲಾಗಿದೆ.

ಇದನ್ನೂ ಓದಿ: ಈ ಎರಡು ಯುದ್ಧಗಳು ವಿಶ್ವವನ್ನು ಆರ್ಥಿಕ ಹಿಂಜರಿತಕ್ಕೆ ನೂಕುತ್ತಿವೆ: ಜಾಗತಿಕ ಹಣಕಾಸು ತಜ್ಞರು ಕಂಗಾಲು

‘ಕೊಲಂಬೋ ಪೋರ್ಟ್​ನ ವೆಸ್ಟ್ ಕಂಟೇನರ್ ಟರ್ಮಿನಲ್​ನ ದೀರ್ಘಕಾಲದ ಅಭಿವೃದ್ಧಿಗೆ ಡಿಎಫ್​ಸಿ 553 ಮಿಲಿಯನ್ ಡಾಲರ್​ನಷ್ಟು ಹೂಡಿಕೆ ಮಾಡಲಿದೆ. ಶ್ರೀಲಂಕಾದಲ್ಲಿ ಖಾಸಗಿ ವಲಯದ ನೇತೃತ್ವದಲ್ಲಿ ಪ್ರಗತಿ ಹೊಂದಲು ಈ ಟರ್ಮಿನಲ್ ಸಹಾಯವಾಗುತ್ತದೆ. ಲಂಕಾದ ಆರ್ಥಿಕ ಚೇತರಿಕೆ ಸಾಧ್ಯವಾಗುವಂತೆ ವಿದೇಶೀ ವಿನಿಮಯ ಹರಿದುಬರಲು ಅನುವು ಮಾಡಿಕೊಡುತ್ತದೆ. ಶ್ರೀಲಂಕಾದ ಅಭಿವೃದ್ಧಿ ಮತ್ತು ಅದರ ಜನರ ಕಲ್ಯಾಣಕ್ಕಾಗಿ ಅಮೆರಿಕ ಹೊಂದಿರುವ ದೀರ್ಘಕಾಲೀನ ಬದ್ಧತೆಗೆ ಈ ಧನಸಹಾಯ ಒಂದು ಸಂಕೇತವಾಗಿದೆ. ಶ್ರೀಲಂಕಾದ ಆರ್ಥಿಕತೆ ಚೇರಿಸಿಕೊಂಡರೆ, ಇಂಡೋ ಪೆಸಿಫಿಕ್ ಪ್ರದೇಶ ಮುಕ್ತ ಮತ್ತು ಸಂಪದ್ಭರಿತವಾಗಬೇಕೆನ್ನುವ ಆಶಯ ಈಡೇರಲು ಸಾಧ್ಯವಾಗುತ್ತದೆ,’ ಎಂದು ಶ್ರೀಲಂಕಾಗೆ ಅಮೆರಿಕದ ರಾಯಭಾರಿಯಾಗಿರುವ ಜೂಲೀ ಚುಂಗ್ ಹೇಳಿಕೆ ನೀಡಿದ್ದಾರೆ.

ಏನಿದು ಟರ್ಮಿನಲ್ ಪ್ರಾಜೆಕ್ಟ್?

ಕೊಲಂಬೋ ಬಂದರಿನಲ್ಲಿ ವಿವಿಧ ಟರ್ಮಿನಲ್​ಗಳಿವೆ, ಇನ್ನೂ ಕೆಲವನ್ನು ನಿರ್ಮಿಸಲಾಗುತ್ತಿದೆ. ಚೀನಾದ ಒಂದು ಕಂಪನಿಯಿಂದ ಒಂದು ಟರ್ಮಿನಲ್ ನಿರ್ಮಾಣವಾಗಿದೆ. ಅದಾನಿ ಗ್ರೂಪ್​ನಿಂದ ವೆಸ್ಟ್ ಕಂಟೇನರ್ ಟರ್ಮಿನಲ್ ನಿರ್ಮಾಣವಾಗುತ್ತಿದೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಆರಂಭವಾದ ಟರ್ಮಿನಲ್ ಪ್ರಾಜೆಕ್ಟ್​ನ ಮೊದಲ ಹಂತವು 2024ರ ಮೂರನೇ ತ್ರೈಮಾಸಿಕದಲ್ಲಿ ಮುಗಿಯಲಿದ್ದು, 2025ರ ವರ್ಷಾಂತ್ಯದೊಳಗೆ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಇದನ್ನೂ ಓದಿ: Jobs In Israel: ಪ್ಯಾಲೆಸ್ಟೀನೀಯರ ಬದಲು ಭಾರತದಿಂದ 1 ಲಕ್ಷ ಕಾರ್ಮಿಕರನ್ನು ನೇಮಕ ಮಾಡಲಿರುವ ಇಸ್ರೇಲ್

ವೆಸ್ಟ್ ಟರ್ಮಿನಲ್ ಪ್ರಾಜೆಕ್ಟ್​ನ ಶೇ. 51ರಷ್ಟು ಪಾಲನ್ನು ಅದಾನಿ ಗ್ರೂಪ್ ಹೊಂದಿದೆ. ಶ್ರೀಲಂಕಾದ ಇನ್ನೊಂದು ಖಾಸಗಿ ಸಂಸ್ಥೆ ಜಾನ್ ಕೀಲ್ಸ್ ಹೋಲ್ಡಿಂಗ್ಸ್​ಗೆ ಶೇ. 34ರಷ್ಟು ಪಾಲಿದ್ದರೆ, ಉಳಿದವನ್ನು ಸರ್ಕಾರಿ ಸ್ವಾಮ್ಯದ ಶ್ರೀಲಂಕಾ ಪೋರ್ಟ್ಸ್ ಅಥಾರಿಟಿ ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:46 pm, Wed, 8 November 23