
ನವದೆಹಲಿ, ಡಿಸೆಂಬರ್ 23: ಭಾರತದ ವರುಣ್ ಬೆವರೇಜಸ್ ಲಿಮಿಟೆಡ್ ಸಂಸ್ಥೆಯು ಸೌತ್ ಆಫ್ರಿಕಾ ಮೂಲದ ಟ್ವಿಜ್ಜಾ ಎನ್ನುವ ಕಂಪನಿಯನ್ನು ಪೂರ್ಣವಾಗಿ ಖರೀದಿಸಲಿದೆ. ಈ ವಿಷಯವನ್ನು ಸ್ವತಃ ವರುಣ್ ಬೆವರೇಜಸ್ ಸಂಸ್ಥೆಯೇ ಬಹಿರಂಗಪಡಿಸಿದೆ. ಸೌತ್ ಅಫ್ರಿಕಾದಲ್ಲಿರುವ ತನ್ನ ಅಂಗಸಂಸ್ಥೆಯಾದ ಬೆವ್ಕೋ (ದಿ ಬೆವರೇಜಸ್ ಕಂಪನಿ ಪ್ರಾಪ್ರಿಯೇಟರಿ ಲಿ) ಮೂಲಕ ಟ್ವಿಜ್ಜಾವನ್ನು ಖರೀದಿಸುತ್ತಿರುವುದಾಗಿ ಹೇಳಿದೆ. ವರದಿ ಪ್ರಕರ 1,118.7 ಕೋಟಿ ರೂ ಬೆಲೆಗೆ (ಎಂಟರ್ಪ್ರೈಸ್ ಮೌಲ್ಯ) ಖರೀದಿಸಲು ಡೀಲ್ ನಡೆದಿದೆ ಎನ್ನಲಾಗಿದೆ.
ವರುಣ್ ಬೆವರೇಜಸ್ ಸಂಸ್ಥೆಯು ಪೆಪ್ಸಿಕೋದ ಅತಿದೊಡ್ಡ ಫ್ರಾಂಚೈಸಿ ಬಾಟ್ಲರ್ ಕಂಪನಿ ಎನಿಸಿದೆ. ಟ್ವಿಜ್ಜಾ ಕಂಪನಿಯು ಅದರದ್ದೇ ಬ್ರ್ಯಾಂಡ್ನ ಪಾನೀಯಗಳನ್ನು ತಯಾರಿಸಿ ವಿತರಿಸುವ ಬ್ಯುಸಿನೆಸ್ ಹೊಂದಿದೆ. ಸೌತ್ ಆಫ್ರಿಕಾದ ಕೇಪ್ಟೌನ್, ಕ್ವೀನ್ಸ್ಟೌನ್ ಮತ್ತು ಮಿಟಲ್ಬರ್ಗ್ನಲ್ಲಿ ಮೂರು ಉತ್ಪಾದನಾ ಘಟಕಗಳನ್ನು ಹೊಂದಿದೆ. ಇಲ್ಲಿ ಒಟ್ಟು 100 ಮಿಲಿಯನ್ ಕೇಸ್ಗಳ ಉತ್ಪಾದನೆ ಒಂದು ವರ್ಷದಲ್ಲಿ ಆಗುತ್ತದೆ ಎನ್ನಲಾಗಿದೆ. ಈ ಕಂಪನಿಯು ಕಳೆದ ಹಣಕಾಸು ವರ್ಷದಲ್ಲಿ ನಡೆಸಿದ ಒಟ್ಟು ವಹಿವಾಟು ಮೌಲ್ಯ 901 ಕೋಟಿ ರೂ ಎಂದು ತಿಳಿದುಬಂದಿದೆ.
ಇದನ್ನೂ ಓದಿ: WhatsApp vs Govt: ತಿಂಗಳಿಗೆ ಕೋಟಿ ನಂಬರ್ಸ್ ನಿಷೇಧಿಸಿದರೂ ಸರ್ಕಾರಕ್ಕೆ ಗುಟ್ಟು ಬಿಟ್ಟುಕೊಡದ ವಾಟ್ಸಾಪ್
2026ರ ಜೂನ್ 30ರೊಳಗೆ ಈ ಖರೀದಿ ಪೂರ್ಣಗೊಳ್ಳಬಹುದು ಎಂದು ವರುಣ್ ಬೆವರೇಜಸ್ ಸಂಸ್ಥೆಯು ರೆಗ್ಯುಲೇಟರಿ ಫೈಲಿಂಗ್ನಲ್ಲಿ ತಿಳಿಸಿದೆ. ಟ್ವಿಜ್ಜಾವನ್ನು ಖರೀದಿಸಲು ಬಳಸಿದ ದಿ ಬೆವರೇಜ್ ಕಂಪನಿಯು ವರುಣ್ ಬೆವರೇಜಸ್ನ ಪಾಲಾಗಿದ್ದು 2024ರಲ್ಲಿ. ಆ ಡೀಲ್ನಿಂದಾಗಿ ವಿಬಿಎಲ್ ಅಥವಾ ವರುಣ್ ಬೆವರೇಜಸ್ ಲಿಮಿಟೆಡ್ ಕಂಪನಿಯು ಸೌತ್ ಆಫ್ರಿಕಾ, ಲೆಸೋತೋ, ಇಸ್ವಾಟಿನಿ ಮೊದಲಾದೆಡೆ ತನ್ನ ಉಪಸ್ಥಿತಿ ಹೆಚ್ಚಿಸಿಕೊಳ್ಳಲು ಸಹಾಯವಾಗಿದೆ. ನಮೀಬಿಯಾ, ಬೋಟ್ಸ್ವಾನ, ಮೊಜಾಂಬಿಕ್ ಮತ್ತು ಮಡಗಾಸ್ಕರ್ನಲ್ಲೂ ಇದಕ್ಕೆ ಉಪಸ್ಥಿತಿ ಹೆಚ್ಚಿದಂತಾಗಿದೆ.
ಪೆಪ್ಸಿಕೋ ವಿತರಣೆಯ ಬ್ಯುಸಿನೆಸ್ ಅನ್ನು ಆಫ್ರಿಕಾದ ಹೆಚ್ಚಿನ ದೇಶಗಳಲ್ಲಿ ನೆಲೆಗೊಳಿಸಲು ವಿಬಿಎಲ್ ಯಶಸ್ವಿಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ