ನವದೆಹಲಿ, ಅಕ್ಟೋಬರ್ 1: ಭಾರತದ ಅತಿದೊಡ್ಡ ಉದ್ಯಮಸಮೂಹಗಳಲ್ಲಿ ಒಂದಾದ ವೇದಾಂತ ಲಿ ಸಂಸ್ಥೆ (Vedanta Ltd) ಆರು ಪ್ರತ್ಯೇಕ ಕಂಪನಿಗಳಾಗಿ ವಿಭಜನೆ (demerger) ಹೊಂದಲು ನಿರ್ಧರಿಸಿದೆ. ವೇದಾಂತ ಲಿ ಸಂಸ್ಥೆಯಿಂದ ಐದು ಹೊಸ ಕಂಪನಿಗಳು ಪ್ರತ್ಯೇಕಗೊಳ್ಳಲಿವೆ. ತನ್ನ ಬೇರೆ ಬೇರೆ ವಿಭಾಗಗಳನ್ನು ಪ್ರತ್ಯೇಕ ಕಂಪನಿಯಾಗಿ ಮಾಡಿ ವ್ಯವಹಾರ ವೃದ್ಧಿಸುವುದು ವೇದಾಂತ ರಿಸೋರ್ಸಸ್ ಲಿಮಿಟೆಡ್ನ ಆಲೋಚನೆ. ವೇದಾಂತ ಲಿ ಸಂಸ್ಥೆ ಈಗಾಗಲೇ ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಕಂಪನಿ. ಇದರಿಂದ ಡೀಮರ್ಜ್ ಆಗುವ ಇತರ ಐದು ಕಂಪನಿಗಳನ್ನೂ ಷೇರುಪೇಟೆಯಲ್ಲಿ ಲಿಸ್ಟ್ ಮಾಡಲು ಚಿಂತಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಕಾರ್ಪೂಲಿಂಗ್ ನಿಷೇಧಕ್ಕೆ ಸಾರಿಗೆ ಇಲಾಖೆ ಮುಂದು; 10,000 ರೂ ವರೆಗೆ ದಂಡ ವಿಧಿಸುವ ಸಾಧ್ಯತೆ
ತನ್ನ ವ್ಯವಹಾರಗಳನ್ನು ಸ್ವತಂತ್ರವಾಗಿ ಬೆಳೆಸುವ ಉದ್ದೇಶದಿಂದ ವೇದಾಂತ ರಿಸೋರ್ಸಸ್ ಲಿ ಸಂಸ್ಥೆ ಈ ಕ್ರಮಕ್ಕೆ ಮುಂದಾಗಿದೆ. ವಿವಿಧ ರೇಟಿಂಗ್ ಸಂಸ್ಥೆಗಳು ವೇದಾಂತ ಬಗ್ಗೆ ಋಣಾತ್ಮಕವಾಗಿ ರೇಟಿಂಗ್ ಕೊಟ್ಟಿರುವ ಸಂದರ್ಭದಲ್ಲೇ ಡೀಮರ್ಜಿಂಗ್ ಮಾಡುವ ನಿರ್ಧಾರ ಹೊರಬಂದಿರುವುದು ಗಮನಾರ್ಹ.
ಡೀಮರ್ಜಿಂಗ್ ಪ್ರಸ್ತಾಪದ ಪ್ರಕಾರ, ವೇದಾಂತ ಲಿ ಸಂಸ್ಥೆಯ ಷೇರುಗಳನ್ನು ಆರು ಷೇರುಗಳಾಗಿ ವಿಭಜಿಸಲಾಗುತ್ತದೆ. ಈಗ ಅದರ ಷೇರುಬೆಲೆ 222 ರೂ ಇದೆ. ಆರು ಷೇರುಗಳಾಗಿ ವಿಭಜಿಸಿದರೆ ಪ್ರತೀ ಷೇರಿನ ಬೆಲೆ 37 ರೂ ಆಗುತ್ತದೆ. ಈಗಾಗಲೇ ಇರುವ ವೇದಾಂತದ ಷೇರುದಾರರಿಗೆ ಇತರ ಐದು ಸಂಸ್ಥೆಯ ಷೇರುಗಳು ಉಚಿತವಾಗಿ ಸಿಗುತ್ತದೆ. ಅಂತಿಮವಾಗಿ ಅವರ ಷೇರುಮೌಲ್ಯದಲ್ಲಿ ಏರುಪೇರಾಗುವುದಿಲ್ಲ. ಆದರೆ, ಆರು ಕಂಪನಿಗಳು ಉತ್ತಮ ಲಾಭ ಕಂಡರೆ ಷೇರುಬೆಲೆ ಏರುವ ಸಾಧ್ಯತೆ ದಟ್ಟವಾಗಿದೆ. ಇದರಿಂದ ಷೇರುದಾರರಿಗೆ ಲಾಭವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ನಿಮ್ಮ ಮ್ಯುಚುವಲ್ ಫಂಡ್ ಅಕೌಂಟ್ಗೆ ನಾಮಿನಿ ಅಪ್ಡೇಟ್ ಮಾಡುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ಅನಿಲ್ ಅಗರ್ವಾಲ್ ಮಾಲಕತ್ವದ ವೇದಾಂತ ಲಿ ಸಂಸ್ಥೆಯ ವ್ಯವಹಾರಗಳು ಬಹುತೇಕ ಗಣಿಗಾರಿಕೆಗೆ ಸಂಬಂಧಿಸಿದವು. ಭೂಮಿಯಿಂದ ಜಿಂಕ್, ಅಲೂಮಿನಿಯಮ್ ಇತ್ಯಾದಿ ಖನಿಜಗಳನ್ನು ಹೆಕ್ಕಿ ತಯಾರಿಸುತ್ತದೆ. ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಇತರ ಕೆಲ ದೇಶಗಳಲ್ಲೂ ಇದರ ಕಾರ್ಯಾಚರಣೆ ಇದೆ.
ಇದರ ಅಂಗಸಂಸ್ಥೆಯಾದ ಹಿಂದೂಸ್ತಾನ್ ಜಿಂಕ್ ವಿಶ್ವದಲ್ಲೇ ಅತಿದೊಡ್ಡ ಜಿಂಕ್ ಗಣಿಯನ್ನು ನಿರ್ವಹಿಸುತ್ತಿದೆ. ತಾಮ್ರದ ಉತ್ಪಾದನೆಯಲ್ಲಿ ವೇದಾಂತ ವಿಶ್ವದ ಪ್ರಮುಖ ಕಂಪನಿಗಳಲ್ಲಿ ಒಂದು. ಇದೀಗ ಸೆಮಿಕಂಡಕ್ಟರ್ ತಯಾರಿಕೆಗೆ ವೇದಾಂತ ಲಗ್ಗೆಹಾಕಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ