
ನವದೆಹಲಿ, ಮೇ 11: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಿನ್ನೆ ನಿರ್ದಿಷ್ಟವಾಗಿ ಒಂದಷ್ಟು ಕಾರ್ಯಗಳ ಪಟ್ಟಿ ಮಾಡಿ, ಅದನ್ನು ಮಾಡಲು ಯತ್ನಿಸಬೇಕೆಂದು ದೇಶದ ಜನತೆಗೆ ಕರೆ ಕೊಟ್ಟಿದ್ದಾರೆ. ಕೋವಿಡ್ ಕಾಲದಲ್ಲಿ ತುರ್ತಾಗಿ ಜಾರಿಯಾದ ವರ್ಕ್ ಫ್ರಂ ಹೋಮ್ ಅನ್ನು ಮಾಡಬೇಕೆಂಬ ಕರೆಯೂ ಅದರಲ್ಲಿ ಒಳಗೊಂಡಿದೆ. ಒಂದು ವರ್ಷ ಚಿನ್ನ ಖರೀದಿಸಬೇಡಿ ಎಂದೂ ಮೋದಿ ಅವರು ಕರೆ ಕೊಟ್ಟಿದ್ದಾರೆ. ಮೋದಿ ಅವರ ಈ ಕರೆಗಳು ಮುಂಬರುವ ದೊಡ್ಡ ವಿದ್ಯಮಾನದ ಮುನ್ಸೂಚನೆ ಇರಬಹುದೇ ಎಂದು ಹಲವರು ಶಂಕಿಸಿದ್ದಾರೆ. ವಾಸ್ತವದಲ್ಲಿ ಪ್ರಧಾನಿಗಳು ಯಾಕೆ ಈ ಕರೆ ನೀಡಿದರು? ಕೋವಿಡ್ನಂತಹ ವಿಪತ್ತು ಕಾದಿದೆಯಾ?
ಇದನ್ನೂ ಓದಿ: ಜಾಗತಿಕ ತೈಲ ಸಂಕಷ್ಟದ ನಡುವೆ ಇಂಧನ ಬಳಕೆ ಕಡಿತಕ್ಕೆ ಮೋದಿ ಕರೆ: ಚಿನ್ನ ಖರೀದಿ ತಪ್ಪಿಸುವಂತೆಯೂ ಮನವಿ
ನರೇಂದ್ರ ಮೋದಿ ಅವರು ದೇಶದ ವಿದೇಶೀ ವಿನಿಮಯ ಮೀಸಲು ನಿಧಿಯನ್ನು ಉಳಿಸುವ ಉದ್ದೇಶದಿಂದ ಈ ಮೇಲಿನ ಕರೆಗಳನ್ನು ನೀಡಿದ್ದಾರೆ. ಮೇಲೆ ಅವರು ನೀಡಿರುವ ಸಲಹೆಗಳನ್ನು ಗಮನಿಸಿದರೆ ಅವೆಲ್ಲವೂ ಕೂಡ ಆಮದು ಪದಾರ್ಥಗಳಿಗೆ ಸಂಬಂಧಿಸಿದ್ದೇ ಆಗಿವೆ. ಪೆಟ್ರೋಲಿಯಂ ಉತ್ಪನ್ನಗಳು, ಚಿನ್ನ, ಅಡುಗೆ ಎಣ್ಣೆ, ವಿದೇಶೀ ಬ್ರ್ಯಾಂಡ್ ವಸ್ತುಗಳು ಇವೆಲ್ಲವನ್ನೂ ಆಮದು ಮಾಡಿಕೊಳ್ಳುತ್ತಿದ್ದೇವೆ. ಇದರಿಂದ ದೇಶದ ಕರೆಂಟ್ ಅಕೌಂಟ್ ಡೆಫಿಸಿಟ್ ಗಣನೀಯವಾಗಿ ಹೆಚ್ಚುತ್ತಿದೆ.
ಚೀನಾ ಬಿಟ್ಟರೆ ಅತಿಹೆಚ್ಚು ಚಿನ್ನವನ್ನು ಆಮದು ಮಾಡಿಕೊಳ್ಳುವ ದೇಶವೆಂದರೆ ಭಾರತವೇ. ಪ್ರತೀ ವರ್ಷ 700-800 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. 2025-26ರ ವರ್ಷದಲ್ಲಿ ಭಾರತದಿಂದ 72 ಬಿಲಿಯನ್ ಡಾಲರ್ನಷ್ಟು ಚಿನ್ನದ ಆಮದು ಮಾಡಲಾಗಿದೆ. ಭಾರತದ ಒಟ್ಟು ಆಮದು ವೆಚ್ಚದಲ್ಲಿ ಚಿನ್ನದ ಪಾಲೇ ಶೇ. 9ರಷ್ಟಿದೆ.
ಇನ್ನು, ಭಾರತ 2025-26ರಲ್ಲಿ 134.7 ಬಿಲಿಯನ್ ಡಾಲರ್ ಮೊತ್ತದಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ. ರಸಗೊಬ್ಬರ ಹಾಗೂ ಅಡುಗೆ ಎಣ್ಣೆಗಳೂ ಸಾಕಷ್ಟು ಆಮದಾಗುತ್ತವೆ. 2025-26ರಲ್ಲಿ ಭಾರತದ ಒಟ್ಟು ಆಮದು ವೆಚ್ಚ 775 ಬಿಲಿಯನ್ ಡಾಲರ್ ಇದೆ. ಮೋದಿ ತಿಳಿಸಿದ ಈ ಮೇಲಿನ ನಾಲ್ಕು ಪದಾರ್ಥಗಳ ಆಮದುಗಳೇ 240.7 ಬಿಲಿಯನ್ ಡಾಲರ್ ಇದೆ. ಭಾರತದ ಶೇ. 31.1ರಷ್ಟು ಆಮದು ವೆಚ್ಚ ಈ ನಾಲ್ಕು ವಸ್ತುಗಳಿಂದ ಆಗುತ್ತಿದೆ.
ಇದನ್ನೂ ಓದಿ: ಕಾಂಗ್ರೆಸ್ ಒಂದು ಊಸರವಳ್ಳಿ; ಸ್ಟಾನ್ಫೋರ್ಡ್ ಯೂನಿವರ್ಸಿಟಿಯಲ್ಲಿ ಕೈ ಪಕ್ಷವನ್ನು ಕುಟುಕಿದ ಅಣ್ಣಾಮಲೈ
ನರೇಂದ್ರ ಮೋದಿ ಅವರು ನೀಡಿರುವ ಕರೆಯನ್ನು ಅರ್ಧದಷ್ಟಾದರೂ ಪಾಲನೆ ಆದರೆ ಭಾರತದ ಆಮದು ವೆಚ್ಚ ಶೇ. 20ರಷ್ಟು ಕಡಿಮೆ ಆಗಬಹುದು. ಟ್ರೇಡ್ ಡೆಫಿಸಿಟ್ ಕೂಡ ಗಣನೀಯವಾಗಿ ತಗ್ಗಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:49 am, Mon, 11 May 26