ಯುಪಿಐ ಆ್ಯಪ್​ಗಳಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ರೆಂಟ್ ಪೇಮೆಂಟ್ ಆಗಲ್ಲ: ಆರ್​ಬಿಐ ಕತ್ತರಿ

RBI's new rules on Rent Payment using Credit Card: ಕ್ರೆಡ್, ಫೋನ್​ಪೇ ಇತ್ಯಾದಿ ಫಿನ್​ಟೆಕ್ ಪ್ಲಾಟ್​ಫಾರ್ಮ್​ಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ರೆಂಟ್ ಪಾವತಿಸಬಹುದಿತ್ತು. ಪಾವತಿದಾರರಿಗೆ ರಿವಾರ್ಡ್ ಪಾಯಿಂಟ್ಸ್ ಕೂಡ ಸಿಗುತ್ತಿತ್ತು. ಆದರೆ, ಆರ್​ಬಿಐನ ಹೊಸ ನಿಯಮದಿಂದಾಗಿ ಈ ರೆಂಟ್ ಪೇಮೆಂಟ್ ಅವಕಾಶ ಇಲ್ಲದಂತಾಗಿದೆ. ವೆರಿಫೈ ಆದ ವರ್ತಕರಿಗೆ ಮಾತ್ರ ಇಂಥ ರೆಂಟ್ ಪಾವತಿಗೆ ಅವಕಾಶ ಇರುತ್ತದೆ.

ಯುಪಿಐ ಆ್ಯಪ್​ಗಳಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ರೆಂಟ್ ಪೇಮೆಂಟ್ ಆಗಲ್ಲ: ಆರ್​ಬಿಐ ಕತ್ತರಿ
ಯುಪಿಐ ಪಾವತಿ

Updated on: Sep 19, 2025 | 3:20 PM

ನವದೆಹಲಿ, ಸೆಪ್ಟೆಂಬರ್ 19: ಬಾಡಿಗೆ ಹಣ ಸಂದಾಯ ಮಾಡುವ ಸಂಬಂಧ ಆರ್​ಬಿಐ ಇತ್ತೀಚೆಗೆ ಒಂದು ನಿಯಮ ಬದಲಾವಣೆ ಮಾಡಿದೆ. ಕ್ರೆಡಿಟ್ ಕಾರ್ಡ್ ಬಳಸಿ ಯುಪಿಐ ಆ್ಯಪ್​ಗಳ ಮೂಲಕ ರೆಂಟ್ ಪೇಮೆಂಟ್ ಮಾಡುವ ಅವಕಾಶ ಇದರೊಂದಿಗೆ ಕೈತಪ್ಪಿದಂತಾಗಿದೆ. ಆರ್​ಬಿಐ ಸೆಪ್ಟೆಂಬರ್ 15ರಂದು ಹೊಸ ನಿಯಮ ತಂದ ಬಳಿಕ ಫೋನ್ ಪೇ, ಪೇಟಿಎಂ, ಕ್ರೆಡ್ ಇತ್ಯಾದಿ ಫಿನ್​ಟೆಕ್ ಪ್ಲಾಟ್​ಫಾರ್ಮ್​ಗಳು ಕ್ರೆಡಿಟ್ ಕಾರ್ಡ್ ಮೂಲಕ ರೆಂಟ್ ಪಾವತಿಸುವ ಸೌಲಭ್ಯವನ್ನು ಹಿಂಪಡೆದಿವೆ.

ಕ್ರೆಡಿಟ್ ಕಾರ್ಡ್ ಮೂಲಕ ರೆಂಟ್ ಪಾವತಿಸಿದ್ದರೆ ಪಾಯಿಂಟ್ಸ್ ಸಿಗ್ತಿತ್ತು…

ಕ್ರೆಡ್, ಫೋನ್ ಪೇ, ಪೇಟಿಎಂ ಇತ್ಯಾದಿ ಪ್ಲಾಟ್​ಫಾರ್ಮ್​ಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಬಾಡಿಗೆ ಹಣ ಪಾವತಿ ಮಾಡಿದರೆ ರಿವಾರ್ಡ್ ಪಾಯಿಂಟ್ಸ್ ಸಿಕ್ತಿತ್ತು. ಈ ಆಸೆಗೆ ಬಿದ್ದು ಅದು ಇತ್ತೀಚೆಗೆ ಟ್ರೆಂಡ್ ಆಗಿತ್ತು. ರಿವಾರ್ಡ್ಸ್ ಆಸೆಗೋಸ್ಕರ ಕ್ರೆಡಿಟ್ ಕಾರ್ಡ್ ಮೂಲಕ ಫಿನ್​ಟೆಕ್ ಆ್ಯಪ್​ಗಳ ಬಳಸಿ ರೆಂಟ್ ಪಾವತಿಸುತ್ತಿದ್ದವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿತ್ತು.

ಈಗ ರೆಂಟ್ ಪಾವತಿ ಸಂಬಂಧ ಆರ್​ಬಿಐ ಮಾಡಿದ ನಿಯವೇನು?

ಆರ್​ಬಿಐನ ಪರಿಷ್ಕೃತ ಮಾರ್ಗಸೂಚಿ ಪ್ರಕಾರ, ಕ್ರೆಡಿಟ್ ಕಾರ್ಡ್ ಬಳಸಿ ಯಾರಂದವರಿಗೆ ಪೇಮೆಂಟ್ ಮಾಡಲಾಗುವುದಿಲ್ಲ. ನೇರ ಒಪ್ಪಂದ ಹೊಂದಿರುವ ವರ್ತಕರಿಗೆ ಮಾತ್ರ ಪೇಮೆಂಟ್ ಮಾಡಲು ಅವಕಾಶ ಕೊಡುವಂತೆ ಪೇಮೆಂಟ್ ಅಗ್ರಿಗೇಟರ್ಸ್ ಮತ್ತು ಪೇಮೆಂಟ್ ಗೇಟ್​ವೇ ಸಂಸ್ಥೆಗಳಿಗೆ ಆರ್​ಬಿಐ ಸೂಚಿಸಿದೆ.

ಇದನ್ನೂ ಓದಿ: Income Tax Refund Delay: ಇನ್ನೂ ರೀಫಂಡ್ ಬಂದಿಲ್ಲವಾ? ಏನು ಕಾರಣ? ಬಡ್ಡಿ ಸಮೇತ ಸಿಗುತ್ತಾ ಹಣ?

ಫಿನ್​ಟೆಕ್ ಕಂಪನಿಗಳು ಸರಿಯಾದ ಕೆವೈಸಿ ಪರಿಶೀಲನೆ ಮಾಡುತ್ತಿಲ್ಲ. ಒಂದು ರೀತಿಯಲ್ಲಿ ಅನಿಯಂತ್ರಿತ ಸ್ಥಳವಾಗಿದೆ ಎಂಬುದು ಆರ್​ಬಿಐನ ಆತಂಕ. ಅದೇ ಕಾರಣಕ್ಕೆ ನಿಯಮ ಬಿಗಿಗೊಳಿಸಿದೆ.

ಈಗ ಹೆಚ್ಚಿನ ಮನೆ ಅಥವಾ ಕಟ್ಟಡ ಮಾಲೀಕರು ವರ್ತಕರಾಗಿ ನೊಂದಾಯಿಸಿಕೊಂಡಿರುವುದಿಲ್ಲ. ಹೀಗಾಗಿ, ಅವರ ಅಕೌಂಟ್​ಗೆ ಕ್ರೆಡಿಟ್ ಕಾರ್ಡ್ ಮೂಲಕ ಪೇಮೆಂಟ್ ಮಾಡಲು ಸಾಧ್ಯವಾಗುವುದಿಲ್ಲ.

ಆರ್​ಬಿಐನ ಈ ಪರಿಷ್ಕೃತ ನಿಯಮ ಜಾರಿಗೆ ಬರುವ ಮುನ್ನವೇ ಈ ಕ್ರೆಡಿಟ್ ಕಾರ್ಡ್ ಟ್ರಾನ್ಸಾಕ್ಷನ್​ಗಳಿಗೆ ಕಡಿವಾಣ ಹಾಕಲು ಕೆಲ ಬ್ಯಾಂಕುಗಳು ಕ್ರಮ ತೆಗೆದುಕೊಂಡಿದ್ದವು. ಕಳೆದ ವರ್ಷ ಎಚ್​ಡಿಎಫ್​ಸಿ ಬ್ಯಾಂಕು ಕ್ರೆಡಿಟ್ ಕಾರ್ಡ್ ಮೂಲಕ ಮಾಡಲಾಗುವ ರೆಂಟ್ ಪೇಮೆಂಟ್ ಮೇಲೆ ಶೇ. 1ರವರೆಗೆ ಶುಲ್ಕ ವಿಧಿಸಲು ಆರಂಭಿಸಿತು. ಐಸಿಐಸಿಐ ಬ್ಯಾಂಕು ಹಾಗೂ ಎಸ್​ಬಿಐ ಕಾರ್ಡ್ ಕಂಪನಿಗಳು ಕೂಡ ತಮ್ಮ ಕ್ರೆಡಿಟ್ ಕಾರ್ಡ್ ಬಳಸಿ ಮಾಡಲಾಗುವ ರೆಂಟ್ ಪಾವತಿಗೆ ರಿವಾರ್ಡ್ ಪಾಯಿಂಟ್ಸ್ ಕೊಡುವುದನ್ನು ನಿಲ್ಲಿಸಿದ್ದವು.

ಇದನ್ನೂ ಓದಿ: ಇಪಿಎಫ್​ಒನಲ್ಲಿ ಹೊಸ ಫೀಚರ್ಸ್; ಪಾಸ್​ಬುಕ್ ಲೈಟ್, ಟ್ರಾನ್ಸ್ಫರ್ ಸರ್ಟಿಫಿಕೇಟ್, ತ್ವರಿತ ಅನುಮೋದನೆ

ಫೋನ್​ಪೆ, ಪೇಟಿಎಂ, ಅಮೇಜಾನ್ ಪೇ ಮೊದಲಾದ ಫಿನ್​ಟೆಕ್ ಪ್ಲಾಟ್​ಫಾರ್ಮ್​ಗಳು ಕಳೆದ ವರ್ಷವೇ ಕ್ರೆಡಿಟ್ ಕಾರ್ಡ್ ಮೂಲಕ ರೆಂಟ್ ಪೇಮೆಂಟ್ ಮಾಡುವ ಅವಕಾಶವನ್ನು ನಿಲ್ಲಿಸಿದ್ದವು. ಕ್ರೆಡ್​ನಂತಹ ಕೆಲ ಪ್ಲಾಟ್​ಫಾರ್ಮ್​ಗಳಲ್ಲಿ ಇದು ಮುಂದುವರಿದಿತ್ತು.

ಈಗ ರೆಂಟ್ ಪೇಮೆಂಟ್ ಹೇಗೆ ಮಾಡುವುದು?

ವ್ಯಕ್ತಿಯಿಂದ ವ್ಯಕ್ತಿಗೆ ಕಳುಹಿಸಲಾಗುವ ಯುಪಿಐ ಮೂಲಕ ಬಾಡಿಗೆ ಹಣ ಪಾವತಿಸಬಹುದು. ಅಥವಾ ಕ್ಯಾಷ್, ನೆಟ್​ಬ್ಯಾಂಕಿಂಗ್, ಚೆಕ್ ಇತ್ಯಾದಿ ಮೂಲಕ ಪಾವತಿಸಬಹುದು. ಆದರೆ, ಇವುಗಳಿಂದ ರಿವಾರ್ಡ್ ಪಾಯಿಂಟ್ಸ್ ಸಿಗುವುದಿಲ್ಲ ಅಷ್ಟೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ