ಚಿನ್ನಕ್ಕಿಂತಲೂ ಬಿಟ್‌ಕಾಯಿನ್ ಒಂದು ಕೈ ಮೇಲೆ ಎನ್ನುತ್ತಿದ್ದ ಮಾರ್ಕ್ ಕ್ಯೂಬನ್ ಈಗ ಕೈಚೆಲ್ಲಿ ಕೂತ ಕಥೆ..!
Mark Cuban Sells Bitcoin: ಅಮೆರಿಕದ ಬಿಲಿಯನೇರ್ ಮಾರ್ಕ್ ಕ್ಯೂಬನ್ ತಮ್ಮ ಹೆಚ್ಚಿನ ಬಿಟ್‌ಕಾಯಿನ್ ಹೂಡಿಕೆ ಮಾರಾಟ ಮಾಡಿದ್ದಾರೆ. ಜಾಗತಿಕ ಬಿಕ್ಕಟ್ಟಿನಲ್ಲಿ 'ಸುರಕ್ಷಿತ ಆಸ್ತಿ'ಯಾಗಿ ಬಿಟ್‌ಕಾಯಿನ್ ವಿಫಲವಾಗಿದೆ ಎಂದು ಅವರು ಕಾರಣ ನೀಡಿದ್ದಾರೆ. ಹಿಂದೆ 'ಚಿನ್ನಕ್ಕಿಂತ ಉತ್ತಮ' ಎಂದು ಹೇಳಿದ್ದ ಕ್ಯೂಬನ್, ಈಗ ಕ್ರಿಪ್ಟೋ ವ್ಯವಸ್ಥೆ ಹಾದಿ ತಪ್ಪಿದೆ ಎಂದಿದ್ದಾರೆ. ಆದರೆ, ಎಥೆರಿಯಮ್ ಮೇಲೆ ಅವರಿಗೆ ಇನ್ನೂ ಭರವಸೆ ಇದೆ.

ವಾಷಿಂಗ್ಟನ್, ಮೇ 29: ಒಂದಾನೊಂದು ಕಾಲದಲ್ಲಿ ಕ್ರಿಪ್ಟೋಕರೆನ್ಸಿ (crypto currency) ಪರವಾಗಿ ಅತ್ಯಂತ ಪ್ರಬಲವಾಗಿ ಧ್ವನಿ ಎತ್ತುತ್ತಿದ್ದ ಅಮೆರಿಕದ ಬಿಲಿಯನೇರ್ ಉದ್ಯಮಿ ಮತ್ತು ‘ಶಾರ್ಕ್ ಟ್ಯಾಂಕ್’ (Shark Tank) ಕಾರ್ಯಕ್ರಮದ ಮಾಜಿ ಹೂಡಿಕೆದಾರ ಮಾರ್ಕ್ ಕ್ಯೂಬನ್ (Mark Cuban) ಈಗ ವರಸೆ ಬದಲಿಸಿದ್ದಾರೆ. ತಮಗೆ ಸೇರಿದ ಬಹುಪಾಲು ಬಿಟ್‌ಕಾಯಿನ್ (Bitcoin) ಹೂಡಿಕೆಯನ್ನು ಮಾರಾಟ ಮಾಡಿರುವುದಾಗಿ ಅವರು ಬಹಿರಂಗಪಡಿಸಿದ್ದಾರೆ. ಜಾಗತಿಕ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಸುರಕ್ಷಿತ ಆಸ್ತಿಯಾಗಿ (Hedge against global turmoil) ಕಾರ್ಯನಿರ್ವಹಿಸುವಲ್ಲಿ ಬಿಟ್‌ಕಾಯಿನ್ ವಿಫಲವಾಗಿದೆ ಎಂದು ಅವರು ತಮ್ಮ ಈ ನಿರ್ಧಾರಕ್ಕೆ ಪ್ರಮುಖ ಕಾರಣ ನೀಡಿದ್ದಾರೆ.
“ಇದು ನಾನು ಅಂದುಕೊಂಡಂತೆ ಇಲ್ಲ” ಎಂದ ಕ್ಯೂಬನ್
ಮಾರ್ಕ್ ಕ್ಯೂಬನ್ ಈ ಹಿಂದೆ ಬಿಟ್‌ಕಾಯಿನ್ ಅನ್ನು “ಚಿನ್ನದ ಅತ್ಯಂತ ಸುಧಾರಿತ ಆವೃತ್ತಿ” (Better version of gold than gold) ಎಂದು ಬಣ್ಣಿಸಿದ್ದರು. ಆದರೆ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಈ ಡಿಜಿಟಲ್ ಆಸ್ತಿಯು ಮಾರುಕಟ್ಟೆಯ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಜಾಗತಿಕ ಸವಾಲುಗಳ ನಡುವೆಯೂ 2026-27ರಲ್ಲಿ ಭಾರತದ ಜಿಡಿಪಿ ಶೇ. 6.9 ವೃದ್ಧಿ: ಆರ್ಬಿಐ ವಾರ್ಷಿಕ ವರದಿಯಲ್ಲಿ ಅಂದಾಜು
“ಇರಾನ್ ಯುದ್ಧದಂತಹ ಜಾಗತಿಕ ಉದ್ವಿಗ್ನತೆಗಳು ತಾರಕಕ್ಕೇರಿದಾಗ, ಸಾಂಪ್ರದಾಯಿಕ ಕರೆನ್ಸಿಗಳ ಮೌಲ್ಯ ಕುಸಿತಕ್ಕೆ ಬಿಟ್‌ಕಾಯಿನ್ ಅತ್ಯುತ್ತಮ ಪರ್ಯಾಯವಾಗಬಹುದು ಮತ್ತು ಇದು ಚಿನ್ನಕ್ಕಿಂತಲೂ ಉತ್ತಮವಾಗಿರಬಹುದು ಎಂದು ನಾನು ಭಾವಿಸಿದ್ದೆ. ಆದರೆ ಕಠಿಣ ಪರಿಸ್ಥಿತಿ ಎದುರಾದಾಗ ಚಿನ್ನದ ಬೆಲೆ ಗಗನಕ್ಕೇರಿ (ಸುಮಾರು $5,000 ತಲುಪಿತು), ಬಿಟ್‌ಕಾಯಿನ್ ಮೌಲ್ಯ ಮಾತ್ರ ತೀವ್ರವಾಗಿ ಕುಸಿಯಿತು. ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಇದು ನನಗೆ ಬೇಕಾದ ಸುರಕ್ಷತೆಯನ್ನು ಒದಗಿಸಲಿಲ್ಲ” ಎಂದಿದ್ದಾರೆ ಮಾರ್ಕ್ ಕ್ಯೂಬನ್.
ಕ್ರಿಪ್ಟೋ ಮಾರುಕಟ್ಟೆಯಿಂದ ದೂರ ಸರಿದರಾ ಬಿಲಿಯನೇರ್?
ಮಾರ್ಕ್ ಕ್ಯೂಬನ್ ಅವರ ಈ ಹೇಳಿಕೆಯು ಕ್ರಿಪ್ಟೋ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಏಕೆಂದರೆ 2021ರ ಅವಧಿಯಲ್ಲಿ ಅವರು ಪ್ರತಿದಿನ ಗಂಟೆಗಟ್ಟಲೆ ಕ್ರಿಪ್ಟೋ ಬಗ್ಗೆ ಅಧ್ಯಯನ ಮಾಡುತ್ತಿದ್ದರು ಮತ್ತು ತಮ್ಮ ಬಾಸ್ಕೆಟ್‌ಬಾಲ್ ತಂಡವಾದ ‘ಡಲ್ಲಾಸ್ ಮಾವೆರಿಕ್ಸ್’ನಲ್ಲೂ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಅಳವಡಿಸಿದ್ದರು. ಆ ಸಮಯದಲ್ಲಿ ಅವರ ಒಟ್ಟು ಕ್ರಿಪ್ಟೋ ಪೋರ್ಟ್‌ಫೋಲಿಯೊದಲ್ಲಿ ಶೇ. 60 ರಷ್ಟು ಬಿಟ್‌ಕಾಯಿನ್, ಶೇ. 30 ರಷ್ಟು ಎಥೆರಿಯಮ್ ಮತ್ತು ಶೇ. 10 ರಷ್ಟು ಇತರೆ ಸಣ್ಣ ಟೋಕನ್‌ಗಳಿದ್ದವು.
ಆದರೆ ಪ್ರಸ್ತುತ ಕ್ರಿಪ್ಟೋ ವ್ಯವಸ್ಥೆಯು ತನ್ನ ಹಾದಿ ತಪ್ಪಿದೆ (Lost the plot) ಎಂದಿರುವ ಕ್ಯೂಬನ್, ಇತ್ತೀಚಿನ ಮೀಮ್‌ಕಾಯಿನ್‌ಗಳು (Memecoins) ಮತ್ತು ಸಣ್ಣ ಟೋಕನ್‌ಗಳನ್ನು “ಕಸ” (Garbage) ಎಂದು ಕರೆಯುವ ಮೂಲಕ ತೀವ್ರವಾಗಿ ಟೀಕಿಸಿದ್ದಾರೆ.
ಇದನ್ನೂ ಓದಿ: ನೋಟು ಹಾಳಾಗುವ ಭಯ ಬೇಡ; ಕಾಗದದ ಬದಲು ಪಾಲಿಮರ್ ನೋಟು ಮುದ್ರಿಸಲು ಸರ್ಕಾರದ ಆಲೋಚನೆ
ಎಥೆರಿಯಮ್ ಮೇಲೆ ಇನ್ನೂ ಇದೆ ನಂಬಿಕೆ
ಬಿಟ್‌ಕಾಯಿನ್ ಮಾರಾಟ ಮಾಡಿದ್ದರೂ, ತಮಗೆ ಎಥೆರಿಯಮ್ (Ethereum) ಮೇಲೆ ಅಷ್ಟೊಂದು ನಿರಾಶೆಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹಣಕಾಸು ಅಪ್ಲಿಕೇಶನ್‌ಗಳು ಮತ್ತು ಸ್ಮಾರ್ಟ್ ಕಾಂಟ್ರಾಕ್ಟ್‌ಗಳನ್ನು ರನ್ ಮಾಡಲು ಎಥೆರಿಯಮ್ ಪ್ಲಾಟ್ಫಾರ್ಮ್ ಉತ್ತಮವಾಗಿ ಬಳಕೆಯಾಗುತ್ತಿರುವುದೇ ಇದಕ್ಕೆ ಕಾರಣ ಎಂದಿದ್ದಾರೆ. ಆದಾಗ್ಯೂ, ಕಳೆದ ಐದು ವರ್ಷಗಳ ಮಾರುಕಟ್ಟೆ ಇತಿಹಾಸವನ್ನು ನೋಡಿದರೆ ಬಿಟ್‌ಕಾಯಿನ್ ಎಥೆರಿಯಮ್‌ಗಿಂತ ಹೆಚ್ಚಿನ ಲಾಭ ನೀಡಿದೆ ಎಂಬುದು ಗಮನಾರ್ಹ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ





