Gold loan: ಕೊರೊನಾ ಎರಡನೇ ಅಲೆಗೆ ಜನರು ಬೆಂಡು; ಚಿನ್ನದ ಮೇಲಿನ ಸಾಲಕ್ಕೆ ಮತ್ತೆ ಡಿಮ್ಯಾಂಡ್

|

Updated on: May 19, 2021 | 1:25 PM

ಚಿನ್ನದ ಮೇಲೆ ಸಾಲ ಪಡೆಯವುದಕ್ಕೆ ಮತ್ತೆ ಬೇಡಿಕೆ ಹೆಚ್ಚಾಗಿದೆ. ಜನರು ಮತ್ತೆ ಗೋಲ್ಡ್​ ಲೋನ್​ಗಾಗಿ ಎನ್​ಬಿಎಫ್​ಸಿಗಳು ಮತ್ತು ಬ್ಯಾಂಕ್​ಗಳ ಬಳಿ ಎಡತಾಕುತ್ತಿದ್ದಾರೆ.

Gold loan: ಕೊರೊನಾ ಎರಡನೇ ಅಲೆಗೆ ಜನರು ಬೆಂಡು; ಚಿನ್ನದ ಮೇಲಿನ ಸಾಲಕ್ಕೆ ಮತ್ತೆ ಡಿಮ್ಯಾಂಡ್
ಸಾಂದರ್ಭಿಕ ಚಿತ್ರ
Follow us on

ಸಾಲ ನೀಡುವವರು ಮತ್ತೆ ಚಿಂತೆಗೆ ಗುರಿಯಾಗಿದ್ದಾರೆ. ಕೊರೊನಾ ಎರಡನೇ ಅಲೆಯ ಪರಿಣಾಮ ಏನಾಗಬಹುದು ಎಂಬ ದುಗುಡ ಅವರನ್ನು ಕಾಡುತ್ತಿದೆ. ಯಾವುದೇ ಅಡಮಾನ ಇಲ್ಲದೆ ಸಾಲ ನೀಡುವುದನ್ನು ಕಡಿಮೆ ಮಾಡುತ್ತಿದ್ದು, ಮತ್ತೊಮ್ಮೆ ಚಿನ್ನದ ಮೇಲಿನ ಸಾಲಕ್ಕೆ ಬೇಡಿಕೆ ಬಂದಿದೆ. ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸುವ ಸಲುವಾಗಿ ಭಾರತದ ಹಲವು ರಾಜ್ಯಗಳಲ್ಲಿ ಕಠಿಣ ಲಾಕ್​ಡೌನ್ ಅಥವಾ ನಿರ್ಬಂಧಗಳನ್ನು ಹೇರಲಾಗಿದೆ. ಇದರಿಂದಾಗಿ ದಿನಗೂಲಿ ನೌಕರರು ಮತ್ತು ಸಣ್ಣ- ಪುಟ್ಟ ವ್ಯಾಪಾರ, ಉದ್ಯಮ ಇರುವವರ ದೈನಂದಿನ ಜೀವನಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ. ಭಾರತದ ಪ್ರತಿ ಕುಟುಂಬದಲ್ಲಿ ಅತ್ಯಲ್ಪ ಪ್ರಮಾಣದಲ್ಲಾದರೂ ಚಿನ್ನ ಇದ್ದೇ ಇರುತ್ತದೆ. ಯಾವಾಗ ಉದ್ಯೋಗ ಕಳೆದುಕೊಳ್ಳುವಂತಾಗುತ್ತದೋ ಅಥವಾ ಆದಾಯ ನಷ್ಟವಾಗುತ್ತದೋ ಆಗ ಚಿನ್ನವನ್ನು ಅಡಮಾನ ಮಾಡಿ, ಸಾಲ ಪಡೆಯುವುದು ಆಯ್ಕೆಯಾಗುವುದು. ಈ ಬೆಳವಣಿಗೆ ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತಿದೆ.

ಚಿನ್ನದ ಮೇಲೆ ಸಾಲ ಪಡೆಯುವುದಕ್ಕೆ ಮತ್ತೊಂದು ಕಾರಣ ಏನೆಂದರೆ, ಆರ್ಥಿಕ ಕಷ್ಟದ ಕಾಲದಲ್ಲಿ ಸುಲಭವಾಗಿ ನಗದು ಸಿಗುತ್ತದೆ. ಯಾವುದೇ ಹಣಕಾಸು ಸಂಸ್ಥೆಗೆ ಹೋಗಿ, ತಮ್ಮ ಬಳಿ ಇರುವ ಚಿನ್ನದ ಶುದ್ಧತೆ ಪರಿಶೀಲನೆ ಮಾಡಿಸಿಕೊಂಡು, ಆ ದಿನದ ದರದ ಆಧಾರದಲ್ಲಿ ಅದರ ಒಟ್ಟು ಮೌಲ್ಯಮಾಪನದ ಶೇ 75ರಷ್ಟನ್ನು ಸಾಲವಾಗಿ ಪಡೆಯಬಹುದು. ಯಾವಾಗ ಅನ್​ಸೆಕ್ಯೂರ್ಡ್ ಸಾಲ (ಪರ್ಸನಲ್ ಲೋನ್ ಮತ್ತು ಗುಂಪು ಸಾಲ) ಸಿಗುವುದು ಕಷ್ಟವಾಗುತ್ತದೋ ಆಗ ಚಿನ್ನದ ಮೇಲೆ ಸಾಲಕ್ಕೆ ಸಾಮಾನ್ಯವಾಗಿ ಬೇಡಿಕೆ ಹೆಚ್ಚಾಗುತ್ತದೆ. ಇನ್ನು ಈಗಿರುವಂಥ ಅನಿಶ್ಚಿತತೆ ಸಮಯದಲ್ಲಿ ಅನ್​ಸೆಕ್ಯೂರ್ಡ್ ಲೋನ್ (ಏನನ್ನೂ ಅಡಮಾನ ಅಥವಾ ಶ್ಯೂರಿಟಿಯಾಗಿ ಮಾಡಿಕೊಳ್ಳದೆ ನೀಡುವ ಸಾಲ) ದೊರೆಯುವುದಿಲ್ಲ ಎನ್ನುತ್ತಾರೆ ಚಿನ್ನವನ್ನು ಅಡಮಾನ ಮಾಡಿಕೊಂಡು ಸಾಲ ನೀಡುವ ಕಂಪೆನಿಯೊಂದರ ಅಧ್ಯಕ್ಷ. ಈಗಂತೂ ಭಾರತದ ಎಲ್ಲ ಭಾಗದಲ್ಲೂ, ಉತ್ತರ, ದಕ್ಷಿಣ, ಪೂರ್ವ- ಪಶ್ಚಿಮ ಎಲ್ಲೆಡೆಯಿಂದ ಚಿನ್ನದ ಮೇಲಿನ ಸಾಲಕ್ಕೆ ಬೇಡಿಕೆ ಇದ್ದೇ ಇದೆ. ಅದರಲ್ಲೂ ತೆಲಂಗಾಣ ಮತ್ತು ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಬೇಡಿಕೆ ಬಹಳ ಹೆಚ್ಚಾಗಿದೆ. ಸದ್ಯಕ್ಕೆ ಕೆಲವು ನಿರ್ಬಂಧಗಳ ಜತೆಗೆ ಶಾಖೆಗಳ ಕಾರ್ಯ ನಿರ್ವಹಣೆ ನಡೆಯುತ್ತಿರುವುದರಿಂದ ನಿರ್ದಿಷ್ಟವಾಗಿ ಬೇಡಿಕೆ ಇಷ್ಟೇ ಎಂದು ಹೇಳುವುದು ಕಷ್ಟವಾಗುತ್ತಿದೆ ಎನ್ನುತ್ತಾರೆ ಅದೇ ವ್ಯಕ್ತಿ.

ಚಿನ್ನದ ಮೇಲಿನ ಸಾಲಕ್ಕೆ ಆದ್ಯತೆ ಏಕೆ?
ಮತ್ತೊಬ್ಬ ವಿಶ್ಲೇಷಕರ ಪ್ರಕಾರ, ಚಿನ್ನದ ಮೇಲಿನ ಸಾಲ ತೆಗೆದುಕೊಳ್ಳುವುದಕ್ಕೆ ಜನರು ಆದ್ಯತೆ ನೀಡುವುದರಲ್ಲಿ ಹಲವು ಕಾರಣಗಳಿವೆ. ಚಿನ್ನ ಎಂಬುದು ಸೆಕ್ಯೂರ್ಡ್ ಲೋನ್. ಅಂದರೆ ಗ್ರಾಹಕರ ಬಳಿಯ ಬೆಲೆಬಾಳುವ ವಸ್ತುವನ್ನು ಅಡಮಾನ ಮಾಡಿ ಪಡೆದುಕೊಳ್ಳುವ ಸಾಲ. ಬಡ್ಡಿಯ ಪ್ರಮಾಣ ಉಳಿದ ಸಾಲಗಳಿಗೆ ಹೋಲಿಸಿದಲ್ಲಿ ಕಡಿಮೆ ಇರುತ್ತದೆ. ಇನ್ನು ಹಣಕಾಸು ಸಂಸ್ಥೆಗೆ ಹೋದ 30ರಿಂದ 45 ನಿಮಿಷದಲ್ಲಿ ಸಾಲ ಪಡೆದುಕೊಂಡು ಹಿಂತಿರುಗಬಹುದು. ಗ್ರಾಹಕರ ಮೇಲೆ ಹೊರೆ ಕೋಡ ಕಡಿಮೆ. ಪ್ರತಿ ತಿಂಗಳು ಬಡ್ಡಿ ಮಾತ್ರ ಕಟ್ಟುತ್ತಾ ಹೋಗಿ ಕೊನೆಗೆ ಅಸಲು ಮೊತ್ತವನ್ನು ಪಾವತಿಸಿ, ಸಾಲ ಚುಕ್ತಾ ಮಾಡಬಹುದು. ಆದರೆ ಏಪ್ರಿಲ್- ಮೇ ತಿಂಗಳಲ್ಲಿ ಲಾಕ್​ಡೌನ್​ ಕಾರಣಕ್ಕೆ ಸೀಮಿತ ಸಮಯದಲ್ಲಿ ಕಾರ್ಯ ನಿರ್ವಹಣೆ ಇರುವುದರಿಂದ ಸಾಲ ವಿತರಣೆ ಅಂದುಕೊಂಡ ವೇಗದಲ್ಲಿ ಆಗುತ್ತಿಲ್ಲ. ಒಂದು ಸಲ ಲಾಕ್​ಡೌನ್, ನಿರ್ಬಂಧ ಎಲ್ಲ ಮುಗಿದ ಮೇಲೆ ವೈಯಕ್ತಿಕವಾಗಿ ಹಣ ಬೇಕಾದವರು ಅಥವಾ ಸಣ್ಣ ಉದ್ಯಮಿಗಳು- ವ್ಯಾಪಾರಸ್ಥರು ಚಿನ್ನದ ಮೇಲೆ ಸಾಲ ಪಡೆದುಕೊಳ್ಳು ದೊಡ್ಡ ಪ್ರಮಾಣದಲ್ಲಿ ಬರುತ್ತಾರೆ. ಕಳೆದ ವರ್ಷ ಆಗಿದ್ದು ಹೀಗೆ. ದಿಢೀರ್ ಘೋಷಣೆಯಾದ ಲಾಕ್​ಡೌನ್​ನಿಂದ ಅನಿಶ್ಚಿತತೆ ಎದುರಾಯಿತು. ಆ ನಂತರ ಲಾಕ್​ಡೌನ್ ತೆರವು ಮಾಡಿದ ಮೇಲೆ ದೊಡ್ಡ ಮಟ್ಟದಲ್ಲಿ ವಹಿವಾಟುಗಳು ನಡೆದವು ಎಂದು ಅಭಿಪ್ರಾಯ ಪಡುತ್ತಾರೆ ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ತಜ್ಞರು.

ಕೊರೊನಾ ಅಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಆಧಾರದಲ್ಲಿ ಬೇಡಿಕೆ ಅವಲಂಬನೆ ಆಗಿದೆ. ಕಳೆದ ಹಣಕಾಸು ವರ್ಷದಲ್ಲಿ ಬ್ಯಾಂಕ್​ಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಚಿನ್ನದ ಮೇಲಿನ ಸಾಲಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಕಂಡುಬಂದಿತ್ತು. ಕಳೆದ ವರ್ಷ ಎನ್​ಬಿಎಫ್​ಸಿಗಳ ಚಿನ್ನದ ಮೇಲಿನ ಸಾಲದ ಪೋರ್ಟ್​ಫೋಲಿಯೋದಲ್ಲಿ ಶೇ 15ರಷ್ಟು ಹೆಚ್ಚಾಗಿತ್ತು ಎಂಬ ಅಂದಾಜು ಮಾಡಲಾಗಿದೆ. ಅದೇ ರೀತಿ ಚಿನ್ನದ ಮೇಲೆ ಕೊಟ್ಟಿದ್ದ ಸಾಲ ಬ್ಯಾಂಕ್​ಗಳಿಗೆ ವಾಪಸ್ ಬರಬೇಕಾದದ್ದು ಸಹ ಶೇ 82ರಷ್ಟು ಹೆಚ್ಚಾಗಿ ಮಾರ್ಚ್ 2021ಕ್ಕೆ 60,464 ಕೋಟಿ ರೂಪಾಯಿ ಮುಟ್ಟಿದೆ. ಕಳೆದ ವರ್ಷ, ಅಂದರೆ 2020ರ ಮಾರ್ಚ್​ನಲ್ಲಿ ಈ ಪ್ರಮಾಣ 33,303 ಕೋಟಿ ರೂಪಾಯಿ ಇತ್ತು ಎಂಬ ಅಂಶವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತೆರೆದಿಟ್ಟಿದೆ.

ಚಿನ್ನದ ಮೌಲ್ಯದ ಮೇಲೆ ಶೇ 90ರ ತನಕ ಸಾಲ
ಮಾರ್ಚ್ 31ರ ತನಕ ಆರ್​ಬಿಐ ನೀಡಿದ ಅವಕಾಶದ ಪ್ರಕಾರ, ಚಿನ್ನದ ಮೌಲ್ಯದ ಮೇಲೆ ಶೇ 90ರ ತನಕ ಸಾಲ ನೀಡಲು ಅನುವು ಮಾಡಿಕೊಡಲಾಯಿತು. ನಿಮಗೆ ಗೊತ್ತಿರಲಿ ಕಳೆದ ವರ್ಷ ಉಳಿದ ಸಾಲಗಳು (ಪರ್ಸನಲ್ ಲೋನ್, ಹೌಸಿಂಗ್ ಟಾಪ್ ಅಪ್ ಲೋನ್ ಮುಂತಾದವು) ತೆಗೆದುಕೊಳ್ಳುವುದು ಕಡಿಮೆಯಾದರೂ ಚಿನ್ನದ ಮೇಲಿನ ಸಾಲದ ಬೇಡಿಕೆ ಟ್ರೆಂಡ್ ಹಾಗೇ ಉಳಿದಿತ್ತು. ಇದನ್ನೇ ಕ್ರಿಸಿಲ್ ರೇಟಿಂಗ್​ನ ಹಿರಿಯ ನಿರ್ದೇಶಕ ಕೃಷ್ಣನ್ ಸೀತಾರಾಮನ್ ಹೇಳಿದ್ದಾರೆ. ಕೊರೊನಾದಂಥ ಅಪಾಯಕಾರಿ ಸನ್ನಿವೇಶದಲ್ಲಿ ಬ್ಯಾಂಕ್​ಗಳು ಮತ್ತು ಎನ್​ಬಿಎಫ್​ಸಿಗಳು ಚಿನ್ನದ ಮೇಲಿನ ಸಾಲವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿದೆ. ಬೇರೆ ಎಲ್ಲ ಹಣಕಾಸಿನ ಸಾಲದ ಮೂಲ ಮುಚ್ಚಿಕೊಂಡಾಗ ಬೆಳ್ಳಿ ಚುಕ್ಕೆಯಂತೆ ಕಾಣುವುದು ಚಿನ್ನದ ಸಾಲ. ಇನ್ನು ಭಾರತದಲ್ಲಿ ಕುಟುಂಬದಲ್ಲಿನ ಚಿನ್ನವನ್ನು ಆಪತ್ಕಾಲದ ಹಣಕ್ಕೆ ಮೂಲ ಅಂತಲೇ ಪರಿಗಣಿಸಲಾಗುತ್ತದೆ. ಎಲ್ಲಿಯ ತನಕ ಸಾಲದ ಇತರ ಪ್ರಾಡಕ್ಟ್​ಗಳ ಅಪಾಯ ಹೆಚ್ಚಿರುತ್ತದೋ ಅಲ್ಲಿಯ ತನಕ ಚಿನ್ನದ ಮೇಲೆ ಸಾಲ ಪಡೆಯುವುದು ಹಾಗೂ ನೀಡುವುದು ಎರಡೂ ಆಕರ್ಷಕವಾಗಿಯೇ ಇರುತ್ತದೆ.

ಸಾಲ ಪಡೆದವರು ಹಣ ಪಾವತಿಸದಿದ್ದಾಗ ಬ್ಯಾಂಕ್​ಗಳು ಹಾಗೂ ಎನ್​ಬಿಎಫ್​ಸಿಗಳು ನೋಟಿಸ್​ ನೀಡುತ್ತವೆ. ಅದಕ್ಕೆ ಪ್ರತಿಕ್ರಿಯೆ ಇಲ್ಲ ಎಂದಾದಾಗ ಚಿನ್ನವನ್ನು ಹರಾಜು ಹಾಕುತ್ತವೆ. ಕಳೆದ ವರ್ಷದ ಮೊದಲಾರ್ಧದಲ್ಲಿ ಸಾಲ ಪಡೆದವರಿಗೆ ಹಣ ಹಿಂತಿರುಗಿಸುವುದಕ್ಕೆ ಬಹಳ ಸಮಯ ಕೊಡಲಾಯಿತು. ಆ ನಂತರ ಏರುತ್ತಿದ್ದ ಚಿನ್ನದ ಬೆಲೆಯಿಂದ ಸಂಸ್ಥೆಗಳಿಗೆ ನಿರಾಳ ಆಯಿತು. ಆದರೆ ಚಿನ್ನದ ಬೆಲೆ ಈಗ ಬೀಳುವಾಗ ಹರಾಜು ಪ್ರಕ್ರಿಯೆಗೆ ವೇಗ ಸಿಕ್ಕಿದೆ ಮತ್ತು ಈ ಹಿಂದೆ ಇದ್ದಂತೆ ನಿರಾಳವಾಗಿ ಇರುವುದಕ್ಕೆ ಸಂಸ್ಥೆಗಳಿಗೆ ಸಾಧ್ಯವೂ ಆಗುತ್ತಿಲ್ಲ. ಕಳೆದ ವರ್ಷ ಆಗಸ್ಟ್​ನಲ್ಲಿ 10 ಗ್ರಾಮ್ ಚಿನ್ನದ ಬೆಲೆ 57,000 ರೂಪಾಯಿ ಇತ್ತು. ಅಲ್ಲಿಂದ ಈ ವರ್ಷದ ಮಾರ್ಚ್ ಹೊತ್ತಿಗೆ 45,500 ರೂಪಾಯಿಗೆ ಕುಸಿಯಿತು. ಈಗ ಮತ್ತೆ 49 ಸಾವಿರದ ಸಮೀಪ ಚೇತರಿಸಿಕೊಂಡಿದೆ.

ಚಿನ್ನದ ಹರಾಜು ಎಂಬುದು ಬ್ಯಾಂಕ್​- ಎನ್​ಬಿಎಫ್​ಸಿಗಳ ಕೊನೆ ಆಯ್ಕೆ
ಸಾಮಾನ್ಯವಾಗಿ ಹರಾಜು ಎಂಬುದು ಕೊನೆ ಆಯ್ಕೆ ಆಗಿರುತ್ತದೆ. ಇನ್ನು ಚಿನ್ನದ ಮೇಲೆ ಸಾಲ ನೀಡುವ ವಿಚಾರಕ್ಕೆ ಬಂದರೆ ಅದು ಎನ್​ಪಿಎ ಆಗುವುದು ಸಹ ಕಡಿಮೆ ಮತ್ತು ಸಾಲದ ವೆಚ್ಚ ಸಹ ತೀರಾ ತಲೆ ಕೆಡಿಸಿಕೊಳ್ಳುವಂಥದ್ದಲ್ಲ. ಇನ್ನು ಚಿನ್ನದ ಮೌಲ್ಯದ ಶೇ 75ರಷ್ಟು ಸಾಲ ನೀಡಲಾಗಿರುತ್ತದೆ. ಮತ್ತೆ ಕೆಲವು ಎನ್​ಬಿಎಫ್​ಸಿಗಳು ಅದಕ್ಕೂ ಕಡಿಮೆ ನೀಡಿರುತ್ತವೆ. ಆದ್ದರಿಂದ ಒತ್ತಡ ಹೆಚ್ಚಿರುವುದಿಲ್ಲ. ಆದರೆ ಯಾವಾಗ ಚಿನ್ನದ ಮೌಲ್ಯದ ಶೇ 90ರಷ್ಟು ಸಾಲ ನೀಡಬೇಕು ಎಂಬ ಆರ್​ಬಿಐ ಹೇಳಿತೋ ಆಗಿನಿಂದ ಒತ್ತಡ ಹೆಚ್ಚಾಯಿತು. ಈ ಬಗ್ಗೆ ಕ್ರಿಸಿಲ್ ರೇಟಿಂಗ್ ವರದಿ ನೀಡಿದ್ದು, ಡಿಸೆಂಬರ್ 31, 2020ಕ್ಕೆ ಎನ್​ಬಿಎಫ್​ಸಿಗಳು ಚಿನ್ನದ ಒಟ್ಟು ಮೌಲ್ಯಕ್ಕೆ ಶೇ 63ರಿಂದ 67ರಷ್ಟು ನೀಡಿದ್ದರೆ, ಬ್ಯಾಂಕ್​ಗಳು ಶೇ 75ರಿಂದ 80ರಷ್ಟು ನೀಡಿವೆ ಎಂದು ತಿಳಿಸಿದೆ.

ಇದನ್ನೂ ಓದಿ: SBI Gold Loan: ಹಣದ ತುರ್ತು ಅಗತ್ಯಕ್ಕೆ ಚಿನ್ನದ ಮೇಲೆ ಸಾಲ ಏಕೆ ಬೆಸ್ಟ್?

(Why there is more demand for gold loan in NBFC’s and banks amidst corona second wave? Here is an explainer)