ಭಾರತೀಯ ಅಕ್ಕಿ ಮೇಲೆ ಟ್ರಂಪ್ ಕಣ್ಣು; ಟ್ಯಾರಿಫ್ ಹೆಚ್ಚಿಸಿದರೆ ಭಾರತದ ಮೇಲೇನು ಪರಿಣಾಮ?

Donald Trump threatens to impose more tariffs on Indian rice: ಅಮೆರಿಕದಲ್ಲಿ ಭಾರತದ ಅಕ್ಕಿಯನ್ನು ಡಂಪ್ ಮಾಡಲಾಗುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಸಿಡಿಗುಟ್ಟುತ್ತಿದ್ದು, ಟ್ಯಾರಿಫ್ ಹಾಕುವುದಾಗಿ ಬೆದರಿಸಿದ್ದಾರೆ. ಭಾರತದ ಅಕ್ಕಿ ಮೇಲೆ ಈಗಾಗಲೇ ಶೇ. 50-53ರಷ್ಟು ಸುಂಕವನ್ನು ಅಮೆರಿಕ ಹಾಕುತ್ತಿದೆ. ಇದರ ಮೇಲೆ ಮತ್ತಷ್ಟು ವಸೂಲಿ ಮಾಡಲಾಗಬಹುದು. ಒಂದು ವೇಳೆ, ಅಕ್ಕಿ ಅಮೆರಿಕಕ್ಕೆ ರಫ್ತಾಗಲಿಲ್ಲವೆಂದರೆ ಭಾರತಕ್ಕೆ ಎಷ್ಟು ನಷ್ಟವಾಗಬಹುದು?

ಭಾರತೀಯ ಅಕ್ಕಿ ಮೇಲೆ ಟ್ರಂಪ್ ಕಣ್ಣು; ಟ್ಯಾರಿಫ್ ಹೆಚ್ಚಿಸಿದರೆ ಭಾರತದ ಮೇಲೇನು ಪರಿಣಾಮ?
ಡೊನಾಲ್ಡ್ ಟ್ರಂಪ್

Updated on: Dec 09, 2025 | 2:41 PM

ನವದೆಹಲಿ, ಡಿಸೆಂಬರ್ 9: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇದೀಗ ಭಾರತದ ಅಕ್ಕಿ ಮೇಲೆ ಕಣ್ಣಿಟ್ಟಿದ್ದಾರೆ. ಅಮೆರಿಕದಲ್ಲಿ ಭಾರತದ ಅಕ್ಕಿಯನ್ನು ಡಂಪ್ ಮಾಡಲಾಗುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದು, ಟ್ಯಾರಿಫ್ ಹಾಕುವುದಾಗಿ ಬೆದರಿಕೆಯನ್ನೂ ಒಡ್ಡಿದ್ದಾರೆ. ಭಾರತದ ಹೆಚ್ಚಿನ ಸರಕುಗಳ ಮೇಲೆ ಅಮೆರಿಕ ಶೇ. 50ರಷ್ಟು ಟ್ಯಾರಿಫ್ ಹಾಕುತ್ತಿದೆ. ಅಕ್ಕಿಯ ಮೇಲೆ ಶೇ. 53ರಷ್ಟು ಟ್ಯಾರಿಫ್ ಇದೆ. ಇದರ ಮೇಲೆ ಇನ್ನೂ ಅಧಿಕ ಸುಂಕ ಹೇರಲು ಯೋಜಿಸುತ್ತಿದ್ದಾರೆ ಅಮೆರಿಕ ಅಧ್ಯಕ್ಷರು.

ಭಾರತದ ಅಕ್ಕಿ ಮೇಲೆ ಟ್ರಂಪ್​ಗೆ ಯಾಕೆ ಕೆಂಗಣ್ಣು?

ಡೊನಾಲ್ಡ್ ಟ್ರಂಪ್ ಅವರಿಗೆ ನಿಷ್ಠರಾಗಿರುವ ಮತದಾರರಲ್ಲಿ ಅಮೆರಿಕನ್ ರೈತರೂ ಇದ್ದಾರೆ. ಹೀಗಾಗಿ, ರೈತರಿಗೆ ಪೂರಕವಾಗಿರುವ ಕ್ರಮಗಳನ್ನು ಟ್ರಂಪ್ ಸರ್ಕಾರ ಕೈಗೊಳ್ಳುತ್ತಿದೆ. ಹೊರದೇಶಗಳಿಂದ ಅಕ್ಕಿ ಮತ್ತು ರಸಗೊಬ್ಬರ ಬರುತ್ತಿರುವುದು ಅಮೆರಿಕದ ರೈತರ ಉತ್ಪನ್ನಗಳಿಗೆ ಬೇಡಿಕೆ ಕಡಿಮೆ ಆಗುತ್ತಿದೆ. ಭಾರತ, ಥಾಯ್ಲೆಂಡ್ ಮುಂತಾದ ದೇಶಗಳಿಂದ ಅಮೆರಿಕಕ್ಕೆ ಅಕ್ಕಿ ಬರುತ್ತದೆ. ಕೆನಡಾದಿಂದ ರಸಗೊಬ್ಬರ ಬರುತ್ತದೆ. ಇವೆಲ್ಲದಕ್ಕೂ ಟ್ಯಾರಿಫ್ ಹಾಕುವುದಾಗಿ ಟ್ರಂಪ್ ಹೇಳಿದ್ದಾರೆ. ಅದೇ ವೇಳೆ, ಅಮೆರಿಕನ್ ರೈತರಿಗೆ ನೆರವಾಗಲು 12 ಬಿಲಿಯನ್ ಡಾಲರ್ ಪ್ಯಾಕೇಜ್ ಕೂಡ ಘೋಷಿಸಿದ್ದಾರೆ.

ಇದನ್ನೂ ಓದಿ: ನವೆಂಬರ್​ನಲ್ಲಿ ವಾಹನಗಳ ಮಾರಾಟ ಹೆಚ್ಚಳ; ಡಿಸೆಂಬರ್​ನಲ್ಲೂ ಇದೇ ಟ್ರೆಂಡ್

ಟ್ರಂಪ್ ಟ್ಯಾರಿಫ್, ಭಾರತದ ಅಕ್ಕಿ ರಫ್ತಿಗೆ ಎಷ್ಟು ಪರಿಣಾಮ?

2024-25ರಲ್ಲಿ ಅಮೆರಿಕಕ್ಕೆ ಭಾರತ 392 ಮಿಲಿಯನ್ ಡಾಲರ್​ನಷ್ಟು ಮೌಲ್ಯದ, 2.74 ಲಕ್ಷ ಮೆಟ್ರಿಕ್ ಟನ್​ಗಳಷ್ಟು ಅಕ್ಕಿಯನ್ನು ರಫ್ತು ಮಾಡಿದೆ. ಭಾರತ ಒಟ್ಟಾರೆ ರಫ್ತಿನಲ್ಲಿ ಇದು ಶೇ. 3 ಮಾತ್ರವೇ. ಹೀಗಾಗಿ, ಅಮೆರಿಕಕ್ಕೆ ಅಕ್ಕಿ ರಫ್ತು ನಿಂತು ಹೋದರೆ ಭಾರತಕ್ಕೆ ಅಂಥ ದೊಡ್ಡ ಘಾಸಿಯೇನೂ ಆಗುವುದಿಲ್ಲ.

ಅಮೆರಿಕಕ್ಕೆ ರಫ್ತಾಗುವ ಅಕ್ಕಿಯಲ್ಲಿ ಬಾಸ್ಮತಿಯೇ ಶೇ. 86ರಷ್ಟಿದೆ. ಭಾರತದ ಬಾಸ್ಮತಿ ಅಕ್ಕಿಗೆ ಅಮೆರಿಕ 4ನೇ ಅತಿದೊಡ್ಡ ಮಾರುಕಟ್ಟೆ ಎನಿಸಿದೆ. ಭಾರತದ ಇತರ ಸಾಮಾನ್ಯ ಅಕ್ಕಿಗೆ ಅಮೆರಿಕ 24ನೇ ಅತಿದೊಡ್ಡ ಮಾರುಕಟ್ಟೆ ಎನಿಸಿದೆ.

ಇದನ್ನೂ ಓದಿ: ಮನೆಯಲ್ಲಿ ತಯಾರಿಸುವ ಸಸ್ಯಾಹಾರ, ಮಾಂಸಾಹಾರ ಅಡುಗೆ ವೆಚ್ಚದಲ್ಲಿ ಇಳಿಕೆ; ತರಕಾರಿ, ಕೋಳಿ ಬೆಲೆ ಇಳಿಕೆ ಪರಿಣಾಮ

ಭಾರತದ ಬಾಸ್ಮತಿ ಅಕ್ಕಿ ಬಹಳ ವಿಶೇಷ ಗುಣ ಹೊಂದಿದೆ. ಅದರ ಸುವಾಸನೆ, ಆಕಾರ, ರುಚಿ, ಇವ್ಯಾವುದಕ್ಕೂ ಸಾಟಿಯಾಗುವ ಅಕ್ಕಿ ಅಮೆರಿಕದಲ್ಲಿ ಇಲ್ಲ. ಹೀಗಾಗಿ, ಭಾರತದ ಬಾಸ್ಮತಿ ಅಕ್ಕಿಗೆ ಬಹಳ ಬೇಡಿಕೆ ಇದೆ. ಟ್ರಂಪ್ ಅವರು ಅಧಿಕ ಸುಂಕ ಹಾಕಿದರೂ ಬಾಸ್ಮತಿ ಅಕ್ಕಿಗಿರುವ ಬೇಡಿಕೆ ಕಡಿಮೆ ಆಗದೇ ಇರಬಹುದು. ಟ್ಯಾರಿಫ್​ನ ಹೊರೆಯನ್ನು ಅಂತಿಮವಾಗಿ ಅಮೆರಿಕದ ಗ್ರಾಹಕರೇ ಹೊರಬೇಕಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ