
ನವದೆಹಲಿ, ಅಕ್ಟೋಬರ್ 10: ಒಂದು ಸಾಮ್ರಾಜ್ಯ ಕಟ್ಟುವುದು ಎಷ್ಟು ಕಷ್ಟವೋ ಅದನ್ನು ಸುದೀರ್ಘ ಕಾಲ ಮುಂದುವರಿಸಿಕೊಂಡು ಹೋಗುವುದು ಅಷ್ಟೇ ಕಷ್ಟ. ಜಗತ್ತಿನ ಹೆಚ್ಚಿನ ಸಾಮ್ರಾಜ್ಯಗಳು ಮೂರ್ನಾಲ್ಕು ಶತಮಾನ ಉಳಿದದ್ದೇ ಹೆಚ್ಚು. ಬ್ಯುಸಿನೆಸ್ ಸಾಮ್ರಾಜ್ಯಗಳೂ ಅಷ್ಟೇ, ಬಹಳ ಕಾಲ ಉಳಿಯುವುದಿಲ್ಲ. ಈಗಿರುವ ಕಂಪನಿಗಳ ಪೈಕಿ ಅತಿ ಹೆಚ್ಚು ಕಾಲದಿಂದ ಇರುವಂಥವು ಎಷ್ಟಿವೆ ಎಂದು ನೋಡಿದಾಗ ಅಚ್ಚರಿ ಹುಟ್ಟಿಸುವ ಸಂಗತಿ ಬೆಳಕಿಗೆ ಬರುತ್ತದೆ. ಜಗತ್ತಿನ ಐದು ಅತ್ಯಂತ ಹಳೆಯ ಕಂಪನಿಗಳೆಲ್ಲವೂ (Oldest surviving companies) ಜಪಾನ್ ದೇಶದವೇ ಆಗಿವೆ. ಈ ಕಂಪನಿಗಳು 13ರಿಂದ 15 ಶತಮಾನಗಳಷ್ಟು ಹಿಂದಿನಿಂದಲೂ ಅಸ್ತಿತ್ವದಲ್ಲಿವೆ.
ಕ್ರಿ.ಶ. 578ರಲ್ಲಿ (6ನೇ ಶತಮಾನ) ಜಪಾನ್ನ ಒಸಾಕ ಪಟ್ಟಣದಲ್ಲಿ ಸ್ಥಾಪನೆಯಾದ ಕಾಂಗೋ ಗುಮಿ (Kongo Gumi) ಈಗಲೂ ಜೀವಂತ ಇರುವ ವಿಶ್ವದ ಅತ್ಯಂತ ಹಳೆಯ ಕಂಪನಿ ಎನಿಸಿದೆ. ಕಟ್ಟಡ ನಿರ್ಮಾಣ ಮಾಡುವ ಈ ಕಂಪನಿಯು ಬೌದ್ಧ ಮಂದಿರ ವಾಸ್ತುಶಿಲ್ಪದಲ್ಲಿ ಪರಿಣಿತಿ ಹೊಂದಿದೆ. ಸದ್ಯ ಇದು ಸಂಪೂರ್ಣ ಸ್ವತಂತ್ರವಾಗಿ ಅಸ್ತಿತ್ವದಲ್ಲಿಲ್ಲ. 2006ರಲ್ಲಿ ಟಕಮಟ್ಸು ಕನ್ಸ್ಟ್ರಕ್ಷನ್ ಗ್ರೂಪ್ನ ಅಂಗಸಂಸ್ಥೆಯಾಗಿ ಮಾರಲ್ಪಟ್ಟಿದೆ.
ಜಪಾನ್ನ ಯಮನಶಿಯಲ್ಲಿರುವ ನಿಶಿಯಮ ಆನ್ಸೆನ್ ಕೇಯುಂಕನ್ (Nishiyama Onsen Keiunkan) ವಿಶ್ವದ ಎರಡನೇ ಅತಿಹಳೆಯ ಕಂಪನಿ. ಇದು ವಿಶ್ವದ ಅತ್ಯಂತ ಹಳೆಯ ಹೋಟೆಲ್ ಕೂಡ ಹೌದು. ಕ್ರಿ.ಶ. 705ರಲ್ಲಿ ಶುರುವಾದ ಈ ಹೋಟೆಲ್ ಒಂದೇ ಕುಟುಂಬದ 52 ತಲೆಮಾರಿನವರು ನಡೆಸಿಕೊಂಡು ಬಂದಿದ್ದರು. 2017ರಲ್ಲಿ ಮೊದಲ ಬಾರಿಗೆ ಆ ಕುಟುಂಬಕ್ಕೆ ಸೇರದ ವ್ಯಕ್ತಿಯೊಬ್ಬರು ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಆದರೂ ಕೂಡ ಇದು ಅಸ್ತಿತ್ವದಲ್ಲಿ ಇರುವುದು ಗಮನಾರ್ಹ.
ಜಪಾನ್ನ ಕಿನೋಸಾಕಿಯಲ್ಲಿರುವ ಸೆನ್ನೆನ್ ನೊ ಯು ಕೊಮನ್ (Sennen no Yu Koman) 717ರಲ್ಲಿ ಸ್ಥಾಪನೆಯಾದ ಹೋಟೆಲ್. ವಿಶ್ವದ ಮೂರನೇ ಅತಿಹಳೆಯ ಉದ್ಯಮ ಹಾಗೂ ಎರಡನೇ ಅತ್ಯಂತ ಪುರಾತನ ಹೋಟೆಲ್.
ಜಪಾನ್ನ ಅವಝು ಆನ್ಸೆನ್ನಲ್ಲಿ ಕ್ರಿ.ಶ. 718ರಲ್ಲಿ ಜನ್ಮತಳೆದ ಹೋಟೆಲ್ ಹೋಶಿ ರಯೋಕನ್ (Hoshi Ryokan). ತಲೆಮಾರುಗಳು ಕಳೆದರೂ ಒಂದೇ ಕುಟುಂಬದವರು ಇದನ್ನು ನಡೆಸಿಕೊಂಡು ಬಂದಿದ್ದಾರೆ.
ಬಹಳ ವರ್ಷ ಕಾಲ ನಡೆಯುವ ಬ್ಯುಸಿನೆಸ್ಗಳು ಸಾಮಾನ್ಯವಾಗಿ ಫ್ಯಾಮಿಲಿ ಬ್ಯುಸಿನೆಸ್ಗಳೇ. ಜಪಾನ್ನಲ್ಲಿ ಮೊದಲಿಂದಲೂ ಫ್ಯಾಮಿಲಿ ಬ್ಯುಸಿನೆಸ್ಗಳೇ ಹೆಚ್ಚಾಗಿವೆ. ಭಾರತದಲ್ಲಿ ನೇಕಾರರು, ಕುಂಬಾರರು ಇತ್ಯಾದಿ ಜನರು ತಲೆತಲೆಮಾರುಗಳಿಂದ ಅದೇ ಕಸುಬು ಮಾಡಿಕೊಂಡು ಬಂದ ರೀತಿಯಲ್ಲಿ ಜಪಾನ್ನಲ್ಲೂ ಫ್ಯಾಮಿಲಿ ಬ್ಯುಸಿನೆಸ್ ಹೆಚ್ಚಿದೆ. ಹೀಗಾಗಿ, ತಲೆಮಾರಿನಿಂದ ತಲೆಮಾರಿಗೆ ಇದು ಸುಲಭವಾಗ ವರ್ಗಾವಣೆ ಆಗುತ್ತಾ ಬಂದಿದೆ. ಯೂರೋಪ್ನಲ್ಲೂ ಇಂಥ ಪ್ರವೃತ್ತಿಯನ್ನು ಕಾಣಬಹುದು.
ಇದನ್ನೂ ಓದಿ: ಜಗತ್ತಿನಲ್ಲಿ ಎಲ್ಲರೂ ಸಾಲಗಾರರೇ; ಹಾಗಾದ್ರೆ ಸಾಲ ಕೊಡೋರಾರು? ಪತನದತ್ತ ಹೋಗುತ್ತಿದೆಯಾ ಜಾಗತಿಕ ಆರ್ಥಿಕತೆ?
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:20 pm, Fri, 10 October 25