AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗತ್ತಿನಲ್ಲಿ ಎಲ್ಲರೂ ಸಾಲಗಾರರೇ; ಹಾಗಾದ್ರೆ ಸಾಲ ಕೊಡೋರಾರು? ಪತನದತ್ತ ಹೋಗುತ್ತಿದೆಯಾ ಜಾಗತಿಕ ಆರ್ಥಿಕತೆ?

Investment banker Sarthak Ahuja explains world debt trap: ಇಡೀ ಜಗತ್ತಿನಲ್ಲಿ ಎಲ್ಲಾ ದೇಶಗಳು ಹೊಂದಿರುವ ಸಾಲಗಳನ್ನು ಒಟ್ಟುಗೂಡಿಸಿದರೆ 300 ಟ್ರಿಲಿಯನ್ ಡಾಲರ್ ಆಗಬಹುದು. ಸಾಲದ ಸೋಲದಲ್ಲಿ ಮುಳುಗಿರುವ ವಿಶ್ವದ ಆರ್ಥಿಕತೆಯ ನಿಜಮೌಲ್ಯ 100 ಟ್ರಿಲಿಯನ್ ಡಾಲರ್ ಇರಬಹುದು. ಪರಸ್ಪರ ಸಾಲಗಳ ಮೂಲಕ ಜಗತ್ತಿನ ಆರ್ಥಿಕತೆ ಪತನದ ಅಂಚಿಗೆ ಹೋಗುತ್ತಿದೆ ಎನ್ನುತ್ತಾರೆ ಇನ್ವೆಸ್ಟ್​ಮೆಂಟ್ ಬ್ಯಾಂಕರ್ ಸಾರ್ಥಕ್ ಅಹುಜಾ.

ಜಗತ್ತಿನಲ್ಲಿ ಎಲ್ಲರೂ ಸಾಲಗಾರರೇ; ಹಾಗಾದ್ರೆ ಸಾಲ ಕೊಡೋರಾರು? ಪತನದತ್ತ ಹೋಗುತ್ತಿದೆಯಾ ಜಾಗತಿಕ ಆರ್ಥಿಕತೆ?
ಡಾಲರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 09, 2025 | 6:16 PM

Share

ಆಫ್ರಿಕನ್ ದೇಶಗಳಿಗೆ, ಪಾಕಿಸ್ತಾನಕ್ಕೆ, ಶ್ರೀಲಂಕಾಗೆ, ಮಾಲ್ಡೀವ್ಸ್​ಗೆ ಹೀಗೆ ಹಲವು ದೇಶಗಳಿಗೆ ಚೀನಾ ಸಾಲ ಕೊಡುತ್ತದೆ. ಆದರೆ, ಚೀನಾ ದೇಶವೇ 18 ಟ್ರಿಲಿಯನ್ ಡಾಲರ್​ನಷ್ಟು ಸಾಲ (debt) ಹೊಂದಿದೆ. ಅಮೆರಿಕಕ್ಕೆ ಜಪಾನ್ ಸಾಕಷ್ಟು ಸಾಲ ಕೊಟ್ಟಿದೆ. ಆ ದೇಶ ಕೂಡ ಸಾಲದಲ್ಲಿ ಮುಳುಗುತ್ತಿದೆ. ಅಮೆರಿಕವಂತೂ ವಿಶ್ವದ ಹಲವು ದೇಶಗಳಿಗೆ ಆರ್ಥಿಕ ನೆರವು ನೀಡುತ್ತದೆ. ಆದರೆ, ಅದು ವಿಶ್ವದಲ್ಲೇ ಅತಿಹೆಚ್ಚು ಸಾಲ ಹೊಂದಿದ ದೇಶವೆಂಬ ಅಪಕೀರ್ತಿಗೆ ಪಾತ್ರವಾಗಿದೆ. ಹೆಚ್ಚಿನ ದೇಶಗಳು ಮೈತುಂಬ ಸಾಲ ಮಾಡಿಕೊಂಡಿರುವುದು ಹೌದು. ಹಾಗಾದರೆ, ಸಾಲ ಕೊಡೋದು ಯಾರು?

ಇಡೀ ಜಗತ್ತಿನಲ್ಲಿ 300 ಟ್ರಿಲಿಯನ್ ಡಾಲರ್ ಸಾಲ

ಎಲ್ಲಾ ದೇಶಗಳು ಪರಸ್ಪರ ಸಾಲಗಳನ್ನು ನೀಡುತ್ತಾ ಹೋಗುತ್ತಿದ್ದು, ಒಂದು ರೀತಿಯಲ್ಲಿ ಸಾಲಗಳ ವರ್ತುಲವೇ ನಿರ್ಮಾಣವಾಗಿದೆ. ಜಾಗತಿಕ ಆರ್ಥಿಕತೆಯು ಮುಳುಗಡೆಯ ಅಂಚಿನತ್ತ ಸಾಗುತ್ತಿದೆ ಎಂದು ಹೇಳುತ್ತಾರೆ ಇನ್ವೆಸ್ಟ್​ಮೆಂಟ್ ಬ್ಯಾಂಕರ್ ಸಾರ್ಥಕ್ ಅಹುಜಾ.

ಲಿಂಕ್ಡ್​ಇನ್ ಪೋಸ್ಟ್​ವೊಂದರಲ್ಲಿ ಸಾರ್ಥಕ್ ಅಹುಜಾ ಅವರು, ಸಾಲಗಳು ಕಡಿಮೆ ಆಗುವುದಿಲ್ಲ. ಬದಲಾಗಿ ಹೆಚ್ಚುತ್ತಲೇ ಹೋಗುತ್ತವೆ ಎನ್ನುತ್ತಾರೆ. ಅವರ ಪ್ರಕಾರ ಜಾಗತಿಕ ಆರ್ಥಿಕತೆಯ ಮೌಲ್ಯ 100 ಟ್ರಿಲಿಯನ್ ಡಾಲರ್ ಮಾತ್ರವೇ. ಆದರೆ, 300 ಟ್ರಿಲಿಯನ್ ಡಾಲರ್ ಸಾಲದಲ್ಲಿ ಮುಳುಗಿ ಹೋಗಿದೆಯಂತೆ. ಅಮೆರಿಕದ ಅರ್ಥಿಕತೆಯ ಹತ್ತು ಪಟ್ಟು ಮೊತ್ತದಷ್ಟು ಸಾಲವನ್ನು ಇಡೀ ಜಗತ್ತು ಹೊಂದಿದೆ.

ಇದನ್ನೂ ಓದಿ: ಲಿಂಕ್ಡ್​ಇನ್​ನಲ್ಲಿ ಹೊಸ ಫೀಚರ್​ಗಳು; ನೇಮಕಾತಿದಾರರ ಗಮನ ಸೆಳೆಯುವುದು ಹೇಗೆ?

ಜನಸಾಮಾನ್ಯರೇ ಸಾಲ ನೀಡುಗರು…

ವಿವಿಧ ದೇಶಗಳಿಗೆ ಆರ್ಥಿಕತೆ ಬೆಳೆಸಲು ಹಣ ಬೇಕು. ಸರ್ಕಾರಗಳು ವಿವಿಧ ರೀತಿಯ ಬಾಂಡ್ ಅಥವಾ ಸಾಲಪತ್ರಗಳ ಮೂಲಕ ಜನಸಾಮಾನ್ಯರು ಮತ್ತು ಖಾಸಗಿ ಸಂಸ್ಥೆಗಳಿಂದ ಸಾಲ ಪಡೆಯುತ್ತವೆ. ಅಮೆರಿಕ ಬರೋಬ್ಬರಿ 36 ಟ್ರಿಲಿಯನ್ ಡಾಲರ್ ಸಾಲ ಹೊಂದಿದೆ. ಇದರಲ್ಲಿ ಜನಸಾಮಾನ್ಯರಿಗೆ ನೀಡಬೇಕಿರುವ ಸಾಲವೇ ಶೇ. 70ರಷ್ಟು.

ಅಮೆರಿಕ ಮಾತ್ರವಲ್ಲ, ಹೆಚ್ಚಿನ ದೇಶಗಳ ಸಾಲದ ಕಥೆಯೇ ಅಷ್ಟು. ಅವುಗಳ ಪಬ್ಲಿಕ್ ಡೆಟ್ ಬಹಳ ಅಧಿಕ ಇರುತ್ತವೆ. ಇದರ ಜೊತೆಗೆ, ಸರ್ಕಾರಗಳು ಹೆಚ್ಚಿನ ಹಣದ ಆಸೆಗೆ ನೋಟುಗಳನ್ನು ಅಗತ್ಯಕ್ಕಿಂತ ಹೆಚ್ಚು ಮುದ್ರಿಸುತ್ತವೆ. ಇದರಿಂದ ಹಣದುಬ್ಬರ ಹೆಚ್ಚುತ್ತದೆ. ಬೆಲೆ ಏರಿಕೆಯ ಬಿಸಿ ಆರ್ಥಿಕತೆಯನ್ನು ಕುಂಠಿತಗೊಳಿಸುತ್ತದೆ.

ಇದನ್ನೂ ಓದಿ: ವೃತ್ತಿಯಲ್ಲಿ ಮುಂದೆ ಬರಬೇಕಾ? ಅಲ್ಲಿ ಕೆಲಸ ಆರಂಭಿಸಿ: ಯುವಜನರಿಗೆ ಅಮೇಜಾನ್ ಸಂಸ್ಥಾಪಕರ ಕಿವಿಮಾತು

ಬಾಂಡ್​ಗಳನ್ನು ಮಾರಲು ಸರ್ಕಾರವು ಹೆಚ್ಚಿನ ಬಡ್ಡಿ ಆಫರ್ ಮಾಡುತ್ತದೆ. ಇದರ ಪರಿಣಾಮವಾಗಿ ಷೇರು ಮಾರುಕಟ್ಟೆ ಕುಸಿಯುತ್ತದೆ. ಹೀಗೆ ಒಂದು ಕ್ರಮ, ಅದರ ಪರಿಣಾಮ, ಮತ್ತದರಿಂದ ಪರಿಣಾಮ, ಹೀಗೆ ಆರ್ಥಿಕತೆ ದಿಕ್ಕೆಟ್ಟ ಸ್ಥಿತಿಯಲ್ಲಿ ಸಾಗುತ್ತಾ ಹೋಗುತ್ತಿದೆ ಎಂದು ಹಣಕಾಸು ತಜ್ಞರಾದ ಸಾರ್ಥಕ್ ಅಹುಜಾ ಹೇಳುತ್ತಾರೆ.

ಅವರ ಪ್ರಕಾರ, ಸರ್ಕಾರಗಳ ಕರೆನ್ಸಿಗಳ ವಿಶ್ವಾಸಾರ್ಹತೆ ಕಡಿಮೆಗೊಳ್ಳುತ್ತಿರುವಂತೆಯೇ, ಚಿನ್ನ, ಬೆಳ್ಳಿಗಳಂತಹ ಸಾಂಪ್ರದಾಯಿಕ ಅಮೂಲ್ಯ ಲೋಹಗಳಿಗೆ ಮಹತ್ವ ಹೆಚ್ಚುತ್ತದೆ. ಅನಿಶ್ಚಿತ ಪರಿಸ್ಥಿತಿಯಲ್ಲಿ ಅವುಗಳ ಅಗತ್ಯ ಹಿಂದೆಂದಿಗಿಂತ ಹೆಚ್ಚುತ್ತಿದೆ ಎಂಬುದು ತಜ್ಞರ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ