ಲಿಂಕ್ಡ್ಇನ್ನಲ್ಲಿ ಹೊಸ ಫೀಚರ್ಗಳು; ನೇಮಕಾತಿದಾರರ ಗಮನ ಸೆಳೆಯುವುದು ಹೇಗೆ?
LinkedIn's Open to Work badge: ಲಿಂಕ್ಡ್ಇನ್ನಲ್ಲಿ ‘ಓಪನ್ ಟು ವರ್ಕ್’ ಫೀಚರ್ ಬಹಳ ಮಂದಿಗೆ ಉಪಯುಕ್ತವಾಗಿದೆ. ಉದ್ಯೋಗಾಕಾಂಕ್ಷಿಗಳು, ನೇಮಕಾತಿದಾರರಿಗೂ ಸುಲಭವಾಗಿದೆ. ವೃತ್ತಿಪರರು ತಾವು ಹೊಸ ಕೆಲಸಕ್ಕೆ ಎದಿರು ನೋಡುತ್ತಿರುವುದಾಗಿ ನೇಮಕಾತಿದಾರರಿಗೆ ತಿಳಿಸಬಹುದು. ಈಗಿರುವ ಕಂಪನಿಯಲ್ಲಿ ನೋಟೀಸ್ ಪೀರಿಯಡ್ ಅವಧಿ ಎಷ್ಟು, ತಮ್ಮ ಅಪೇಕ್ಷಿತ ಸಂಬಳ ಎಷ್ಟು ಎಂಬುದನ್ನು ನಮೂದಿಸಬಹುದು.

ಬೆಂಗಳೂರು, ಅಕ್ಟೋಬರ್ 9: ಲಿಂಕ್ಡ್ ಇನ್ನ ‘ಓಪನ್ ಟು ವರ್ಕ್’ (LinkedIn’s Open to Work) ಫೀಚರ್ ಬಹಳ ಕಾಲದಿಂದ ವೃತ್ತಿಪರರಿಗೆ ಬಹಳ ಉಪಯುಕ್ತ ಎನಿಸಿದೆ. ತಾವು ಹೊಸ ಉದ್ಯೋಗಾವಕಾಶಕ್ಕೆ ಎದಿರು ನೋಡುತ್ತಿರುವುದನ್ನು ಸೂಚಿಸಲು ಈ ಫೀಚರ್ ನೆರವಾಗುತ್ತದೆ. ಜಾಗತಿಕ ಮಟ್ಟದಲ್ಲಿ ಲಿಂಕ್ಡ್ ಇನ್ ನಲ್ಲಿ ‘ಓಪನ್ ಟು ವರ್ಕ್’ ಎಂದು ಹೇಳಿಕೊಂಡ ಶೇ.85ರಷ್ಟು ವೃತ್ತಿಪರರು ತಮ್ಮ ಕನೆಕ್ಷನ್ಗಳಿಂದ ಸಹಾಯ ಅಥವಾ ಪ್ರೋತ್ಸಾಹ ಪಡೆದಿರುವುದಾಗಿ ತಿಳಿಸುತ್ತಾರೆ. ಈ ಯಶಸ್ಸಿನ ಆಧಾರದ ಮೇಲೆ ಲಿಂಕ್ಡ್ ಇನ್ ತನ್ನ ಸದಸ್ಯರಿಗೆ ಉದ್ಯೋಗ ಹುಡುಕಾಟದಲ್ಲಿ ಹೆಚ್ಚಿನ ನಿಯಂತ್ರಣ ಮತ್ತು ಪಾರದರ್ಶಕತೆಯನ್ನು ಒದಗಿಸುವ ಕೆಲವು ಅಪ್ಡೇಟ್ಗಳನ್ನು ಪರಿಚಯಿಸುತ್ತಿದೆ.
‘ಓಪನ್ ಟು ವರ್ಕ್’ ಫೀಚರ್ ಅನ್ನು ಆನ್ ಮಾಡುವಾಗ ಸದಸ್ಯರು ಈಗ ತಾವು ಎಷ್ಟು ಬೇಗ ಉದ್ಯೋಗ ಸೇರಲು ಲಭ್ಯರಿರುತ್ತಾರೆ ಎಂಬುದನ್ನು ತಿಳಿಸಲು ತಮ್ಮ ಹಾಲಿ ಕಂಪನಿಯಲ್ಲಿನ ನೋಟೀಸ್ ಪೀರಿಯಡ್ ಅನ್ನು ನಮೂದಿಸಬಹುದು. ಹಾಗೆಯೇ, ಹೊಸ ಕೆಲಸಕ್ಕೆ ಸೇರಲು ಎಷ್ಟು ಸಂಬಳದ ನಿರೀಕ್ಷೆ ಮಾಡುತ್ತಿದ್ದೀರಿ ಎಂಬುದನ್ನೂ ನಮೂದಿಸಬಹುದು. ಈ ಆಪ್ಷನ್ಗಳು ವೃತ್ತಿಪರರಿಗೆ ಆರಂಭದಲ್ಲೇ ಸ್ಪಷ್ಟತೆ ಒದಗಿಸಲು ಸಹಾಯವಾಗುತ್ತವೆ. ತಮ್ಮ ನಿರೀಕ್ಷೆಗೆ ತಕ್ಕುದಲ್ಲದ ಉದ್ಯೋಗಾವಕಾಶಗಳಿಗೆ ಅನಗತ್ಯ ಮಾತುಕತೆ ಮತ್ತು ಇಂಟರ್ವ್ಯೂ ಎದುರಿಸಿ ಸಮಯ ಹಾಳು ಮಾಡಿಕೊಳ್ಳುವ ಪ್ರಮೇಯ ತಪ್ಪಿಸಬಹುದು. ಮತ್ತೊಂದು ವಿಶೇಷ ಎಂದರೆ, ಲಿಂಕ್ಡ್ಇನ್ ಸದಸ್ಯರ ‘ಓಪನ್ ಟು ವರ್ಕ್’ ಬ್ಯಾಡ್ಜ್ ಸಾರ್ವಜನಿಕವಾಗಿ ಗೋಚರಿಸಿದರೂ ಮೇಲೆ ತಿಳಿಸಿದ ನೋಟೀಸ್ ಪೀರಿಯಡ್ ಮತ್ತು ಎಕ್ಸ್ಪೆಕ್ಟೆಡ್ ಸ್ಯಾಲರಿ ಮಾಹಿತಿ ನೇಮಕಾತಿದಾರರಿಗೆ (ರೆಕ್ರೂಟರ್ಸ್) ಮಾತ್ರ ಕಾಣುತ್ತದೆ.
ಲಿಂಕ್ಡ್ ಇನ್ ಇಂಡಿಯಾದ ಟ್ಯಾಲೆಂಟ್ ಮತ್ತು ಲರ್ನಿಂಗ್ ಸೊಲ್ಯೂಷನ್ಸ್ ನ ಮುಖ್ಯಸ್ಥೆ ರುಚೀ ಆನಂದ್ ಅವರು ವೃತ್ತಿಪರರ ‘ಓಪನ್ ಟು ವರ್ಕ್’ ಸ್ಟೇಟಸ್ ಅನ್ನು ಮೂರು ರೀತಿಯಲ್ಲಿ ವಿಂಗಡಿಸುತ್ತಾರೆ. ಟ್ರಾಫಿಕ್ ಲೈಟ್ನಂತೆ ಇವು ಕೆಂಪು, ಹಳದಿ ಮತ್ತು ಹಸಿರು ಸಂಕೇತಗಳನ್ನು ನೀಡುತ್ತವೆ. ಅದು ಹೇಗೆ ಎನ್ನುವ ವಿವರ ಇಲ್ಲಿದೆ.
ಇದನ್ನೂ ಓದಿ: ಯುಪಿಐ ಟ್ರಾನ್ಸಾಕ್ಷನ್ಗೆ ಬಯೋಮೆಟ್ರಿಕ್ ಅಥೆಂಟಿಕೇಶನ್; ನವಿ ಆ್ಯಪ್ನಲ್ಲಿ ಹೊಸ ಫೀಚರ್
ಕೆಂಪು ಸಂಕೇತ (ರೆಡ್ ಫ್ಲ್ಯಾಗ್)- ಎಚ್ಚರವಾಗಿರಿ: ಉದ್ಯೋಗಾಕಾಂಕ್ಷಿಗಳ ಲಿಂಕ್ಡ್ಇನ್ ಪ್ರೊಫೈಲ್ ನೇಮಕಾತಿದಾರರಿಗೆ ಸಂಶಯ ಹುಟ್ಟಿಸಬಹುದು. ಪ್ರೊಫೈಲ್ನಲ್ಲಿ ಉದ್ಯೋಗಗಳ ಮಧ್ಯೆ ಅಸಹಜ ಗ್ಯಾಪ್‌ಗಳು ಕಂಡಿರಬಹುದು. ಅಥವಾ ಸರಿಯಾದ ಕಾರಣವಿಲ್ಲದೆ ಉದ್ಯೋಗ ತೊರೆದಿರುವುದು ಕಾಣಿಸಬಹುದು. ಬಹು ಆಫರ್ಗಳನ್ನು ಇಟ್ಟುಕೊಂಡಿರುವುದು, ಗೋಸ್ಟಿಂಗ್ ಮಾಡುವುದು ಇವೆಲ್ಲವೂ ರೆಕ್ರುಟರ್ಸ್ಗೆ ತಪ್ಪು ಸಂದೇಶ ರವಾನಿಸುತ್ತವೆ. ಲೇ ಆಫ್, ವೃತ್ತಿಜೀವನ ಬದಲಾವಣೆ, ಬ್ರೇಕ್ ಪಡೆದಿರುವುದು ಮೊದಲಾದವುಗಳಿದ್ದರೆ ಅವನ್ನು ನಿಮ್ಮ ಪ್ರೊಫೈಲ್ನಲ್ಲಿ ಸೇರಿಸಬೇಕು. ಇದರಿಂದ ನಿಮ್ಮ ಮಾಹಿತಿಗೆ ಅಧಿಕೃತತೆ ದೊರಕುತ್ತದೆ. ನಿಮ್ಮ ಮೇಲೆ ವಿಶ್ವಾಸ ಮೂಡಲು ಸಹಾಯವಾಗುತ್ತದೆ.
ಹಳದಿ ಸಂಕೇತ (ಯೆಲ್ಲೋ ಫ್ಲ್ಯಾಗ್)- ಸ್ಪಷ್ಟತೆಯೊಂದಿಗೆ ಮುಂದುವರಿಯಿರಿ: ಕೆಲಸಕ್ಕೆ ಸೇರುವ ಸಮಯಾವಧಿ ಮತ್ತು ನಿರೀಕ್ಷಿತ ಸಂಬಳದ ಮಾಹಿತಿ ಸೇರಿಸಿದರಷ್ಟೇ ಸಾಕಾಗುವುದಿಲ್ಲ, ತಮಗೆ ಇರುವ ವಿವಿಧ ಕೌಶಲ್ಯಗಳ ಕುರಿತೂ ಸ್ಪಷ್ಟವಾಗಿ ತಿಳಿಸಬೇಕು. ಜಾಗತಿಕವಾಗಿ ಶೇ.42ರಷ್ಟು ನೇಮಕಾತಿದಾರರು ಪ್ರತೀ ವಾರ ಲಿಂಕ್ಡ್ ಇನ್ ನಲ್ಲಿ ಸ್ಕಿಲ್ ಫಿಲ್ಟರ್ ಬಳಸಿಕೊಂಡು ಅಭ್ಯರ್ಥಿಗಳನ್ನು ಹುಡುಕುತ್ತಾರೆ. ಆದರೆ ಕೆಲವು ಪ್ರೊಫೈಲ್ಗಳು ಅರ್ಹತೆ ಇದ್ದರೂ ಕೌಶಲ್ಯ ವಿಭಾಗವನ್ನು ಖಾಲಿ ಬಿಟ್ಟಿರುವ ಕಾರಣ ಅವಕಾಶ ತಪ್ಪಿಹೋಗುತ್ತವೆ. ಐದು ಅಥವಾ ಹೆಚ್ಚಿನ ಕೌಶಲ್ಯಗಳನ್ನು ಪಟ್ಟಿಮಾಡಿದರೆ ಲಿಂಕ್ಡ್ ಇನ್ ಪ್ರೊಫೈಲ್ ಗಳನ್ನು ರಿಕ್ರೂಟರ್ಗಳು ವೀಕ್ಷಿಸುವ ಸಾಧ್ಯತೆ ಐದಾರು ಪಟ್ಟು ಹೆಚ್ಚು ಇರುತ್ತದೆ.
ಹಸಿರು ಸಂಕೇತಗಳು (ಗ್ರೀನ್ ಫ್ಲ್ಯಾಗ್)- ವಿಶ್ವಾಸದಿಂದ ಮುಂದಕ್ಕೆ ಸಾಗಿ: ಗುರಿ ಸ್ಪಷ್ಟತೆ ಇದ್ದಾಗ ನೇಮಕಾತಿದಾರರು ನಿಮ್ಮ ಕುರಿತು ಉತ್ಸಾಹ ತೋರಬಹುದು. ಯಾವ ಹುದ್ದೆಗಳನ್ನು ಬಯಸುತ್ತಾರೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ, ಪ್ರಮುಖ ವಿವರಗಳೊಂದಿಗೆ ಪ್ರೊಫೈಲ್ ಗಳನ್ನು ಅಪ್ಡೇಟ್ ಮಾಡಿದ ಮತ್ತು “ಓಪನ್ ಟು ವರ್ಕ್” ಆನ್ ಮಾಡಿದ ಅಭ್ಯರ್ಥಿಗಳು ಕರೆಗಳನ್ನು ಸ್ವೀಕರಿಸುವ ಸಾಧ್ಯತೆ ಹೆಚ್ಚು. ವಾಸ್ತವವಾಗಿ, “ಓಪನ್ ಟು ವರ್ಕ್” ಫೀಚರ್ ಅನ್ನು ಆನ್ ಮಾಡುವುದರಿಂದ ವೃತ್ತಿಪರರಿಗೆ ನೇಮಕಾತಿದಾರರು ಸಂದೇಶ ಕಳುಹಿಸುವ ಸಾಧ್ಯತೆಯನ್ನು ದ್ವಿಗುಣಗೊಳಿಸುತ್ತದೆ.
ಇದನ್ನೂ ಓದಿ: ವೃತ್ತಿಯಲ್ಲಿ ಮುಂದೆ ಬರಬೇಕಾ? ಅಲ್ಲಿ ಕೆಲಸ ಆರಂಭಿಸಿ: ಯುವಜನರಿಗೆ ಅಮೇಜಾನ್ ಸಂಸ್ಥಾಪಕರ ಕಿವಿಮಾತು
‘ಓಪನ್ ಟು ವರ್ಕ್’ ಬ್ಯಾಡ್ಜ್ ಆನ್ ಮಾಡುವುದು ಮತ್ತು ನೇಮಕಾತಿದಾರರಿಗೆ ಸರಿಯಾದ ಸಂಕೇತಗಳನ್ನು ಕಳುಹಿಸುವ ಕ್ರಮ
- ಹಂತ 1: ನಿಮ್ಮ ಲಿಂಕ್ಡ್ ಇನ್ ಪ್ರೊಫೈಲ್‌ಗೆ ಭೇಟಿ ನೀಡಿ, “ಓಪನ್ ಟು” ಕ್ಲಿಕ್ ಮಾಡಿ ಮತ್ತು “ಫೈಂಡಿಂಗ್ ಎ ನ್ಯೂ ಜಾಬ್” ಆಯ್ಕೆಮಾಡಿ.
- ಹಂತ 2: ನೀವು ಯಾವ ರೀತಿಯ ಕೆಲಸಕ್ಕೆ ಆಸಕ್ತಿ ಹೊಂದಿರುವಿರಿ ಎಂಬ ವಿವರಗಳನ್ನು ತಿಳಿಸಲು ನಿಮ್ಮ ಆದ್ಯತೆಯ ಹುದ್ದೆಗಳ ಶೀರ್ಷಿಕೆಗಳನ್ನು ನಮೂದಿಸಿ.
- ಹಂತ 3: ನೀವು ಎಷ್ಟು ಬೇಗ ಉದ್ಯೋಗ ಸೇರಲು ಲಭ್ಯರಿರುವಿರಿ ಎಂಬುದನ್ನು ತೋರಿಸಲು ನೋಟೀಸ್ ಪೀರಿಯಡ್ ಅನ್ನು ನಮೂದಿಸಿ. (ನೇಮಕಾತಿದಾರರಿಗೆ ಮಾತ್ರ ಕಾಣಿಸುತ್ತದೆ)
- ಹಂತ 4: ಆರಂಭದಲ್ಲಿಯೇ ನಿಮ್ಮ ಆದ್ಯತೆಯ ವೇತನವನ್ನು ಸೂಚಿಸಲು ನಿರೀಕ್ಷಿತ ವಾರ್ಷಿಕ ವೇತನದ ಸರಿಯಾದ ಶ್ರೇಣಿಯನ್ನು ಸೂಚಿಸಿ. (ನೇಮಕಾತಿದಾರರಿಗೆ ಮಾತ್ರ ಗೋಚರಿಸುತ್ತದೆ)
- ಹಂತ 5: ನಿಮ್ಮ ‘ಓಪನ್ ಟು ವರ್ಕ್’ ಬ್ಯಾಡ್ಜ್ ಯಾರಿಗೆ ಕಾಣಿಸಬೇಕು ಎಂಬುದನ್ನು ನೀವೇ ನಿರ್ಧರಿಸಬಹುದು. ಒಂದೋ ನೇಮಕಾತಿದಾರರಿಗೆ ಮಾತ್ರ ಅಥವಾ ಎಲ್ಲಾ ಲಿಂಕ್ಡ್ ಇನ್ ಸದಸ್ಯರಿಗೆ ಕಾಣಿಸುವಂತೆ ಆಯ್ಕೆ ಮಾಡಬಹುದು. ‘ರಿಕ್ರೂಟರ್ಸ್ ಓನ್ಲಿ’ ಎಂಬ ಆಯ್ಕೆಯನ್ನು ಆರಿಸಿದರೆ ನಿಮ್ಮ ಸಂಪೂರ್ಣ ನೆಟ್ವರ್ಕ್ಗೆ ತಿಳಿಸದೆ ಕೇವಲ ನೇಮಕಾತಿದಾರರ ಗಮನಕ್ಕೆ ತಲುಪಿಸಲು ಸಹಾಯ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:54 pm, Thu, 9 October 25




