ವೃತ್ತಿಯಲ್ಲಿ ಮುಂದೆ ಬರಬೇಕಾ? ಅಲ್ಲಿ ಕೆಲಸ ಆರಂಭಿಸಿ: ಯುವಜನರಿಗೆ ಅಮೇಜಾನ್ ಸಂಸ್ಥಾಪಕರ ಕಿವಿಮಾತು
Jeff Bezos suggests youngsters to work at Mcdonald's: ವಿಶ್ವದ ಐದನೇ ಅತಿದೊಡ್ಡ ಶ್ರೀಮಂತ ಎನಿಸಿರುವ ಜೆಫ್ ಬೇಜೋಸ್ ಯುವಜನರಿಗೆ ಬಹಳ ಅಚ್ಚರಿಯ ಸಲಹೆಯೊಂದನ್ನು ನೀಡಿದ್ದಾರೆ. ಮೆಕ್ಡೊನಾಲ್ಡ್ಸ್ ಸ್ಟೋರ್ಗಳಲ್ಲಿ ಕೆಲಸ ಮಾಡಿ ಎಂದು ಅಮೇಜಾನ್ ಸಂಸ್ಥಾಪಕರು ಕಿವಿಮಾತು ಹೇಳಿದ್ದಾರೆ. ಅಲ್ಲಿ ಕೆಲಸ ಮಾಡಿದರೆ ಟೀಮ್ ವರ್ಕ್, ಶಿಸ್ತು, ಚುರುಕುತನ, ಗ್ರಾಹಕರನ್ನು ಸಂಭಾಳಿಸುವುದು ಇವೇ ಮುಂತಾದವನ್ನು ಕಲಿಯಬಹುದು ಎನ್ನುವುದು ಅವರ ಅನಿಸಿಕೆ.

ನವದೆಹಲಿ, ಅಕ್ಟೋಬರ್ 8: ಸಾಧಕರ ಮಾತುಗಳಿಗೆ ಯಾವತ್ತೂ ತೂಕ ಇರುತ್ತದೆ. ಕಾರ್ಪೊರೇಟ್ ಲೋಕದ ದೊರೆಗಳೆನಿಸಿದವರು ನೀಡುವ ಸಲಹೆ ಯುವಜನರಿಗೆ ಸ್ಫೂರ್ತಿ ನೀಡುತ್ತದೆ. ವಿಶ್ವದ ಅತಿದೊಡ್ಡ ಇಕಾಮರ್ಸ್ ಕಂಪನಿಯಾದ ಅಮೇಜಾನ್ನ ಸಂಸ್ಥಾಪಕ ಜೆಫ್ ಬೇಜೋಸ್ (Jeff Bezos) ಇತ್ತೀಚಿನ ಸಂದರ್ಶನವೊಂದರಲ್ಲಿ ಯುವಜನರಿಗೆ ಅಚ್ಚರಿ ಮೂಡಿಸುವಂತಹ ಟಿಪ್ಸ್ ಕೊಟ್ಟಿದ್ದಾರೆ. ಯಶಸ್ವಿ ವೃತ್ತಿಜೀವನ ಹೊಂದಬೇಕೆನ್ನುವ ಯುವಜನರು ಮೆಕ್ಡೊನಾಲ್ಡ್ಸ್ನಲ್ಲಿ (McDonald’s) ಮೊದಲು ಕೆಲಸ ಆರಂಭಿಸಬೇಕು. ಅಲ್ಲಿ ಕೆಲಸ ಮಾಡಿದರೆ, ಯಾವ ಕ್ಲಾಸ್ರೂಮ್ನಲ್ಲಿ ಸಿಗದ ಪಾಠಗಳನ್ನು ಕಲಿಯಬಹುದು. ಯಾವ ಸ್ಟಾರ್ಟಪ್ಗಳಲ್ಲಿ ಸಿಗದ ಉತ್ಸಾಹ ಅಲ್ಲಿ ದೊರಕುತ್ತದೆ ಎಂಬುದು ಅವರ ಅನಿಸಿಕೆ.
‘ಯುವಜನರಿಗೆ ನಾನು ಯಾವಾಗಲೂ ಹೇಳುವುದೆಂದರೆ, ಮೆಕ್ಡೊನಾಲ್ಡ್ಸ್ನಲ್ಲಿ ಕೆಲಸ ಮಾಡಿ. ಅಲ್ಲಿ ನೀವು ಜವಾಬ್ದಾರಿ ಕಲಿಯುತ್ತೀರಿ. ಹೇಗೆ ಪ್ರದರ್ಶಿಸಬೇಕು ಎಂದು ಕಲಿಯುತ್ತೀರಿ. ಜನರೊಂದಿಗೆ ಹೇಗೆ ವ್ಯವಹರಿಸಬೇಕು ಎಂದು ತಿಳಿಯುತ್ತೀರಿ. ಹೇಗೆ ಚುರುಕಾಗಿ ಕೆಲಸ ಮಾಡಬೇಕು ಎಂಬುದನ್ನು ಕಲಿಯುತ್ತೀರಿ’ ಎಂದು ಜೆಫ್ ಬೇಜೋಸ್ ಹೇಳುತ್ತಾರೆ.
ಇದನ್ನೂ ಓದಿ: ಝೋಹೋ ಅರಟ್ಟೈ, ಗೌಪ್ಯತೆ, ಸೀಕ್ರೆಟ್ ಲವರ್ ಮತ್ತು ಸೀಕ್ರೆಟ್ ರೆಬೆಲ್ ಪ್ರಸಂಗ
ಫಾಸ್ಟ್ಫುಡ್ ತಿನಿಸುಗಳ ಸ್ಟೋರ್ ಆದ ಮೆಕ್ಡೊನಾಲ್ಡ್ಸ್ ಸದಾ ಗಿಜಿಗುಡುವ ಸ್ಥಳ. ಅಲ್ಲಿ ಕೆಲಸ ಮಾಡುವ ಜನರು ಬಹಳ ಚುರುಕಾಗಿರಬೇಕು. ಅಂಥ ಸ್ಥಳಗಳಲ್ಲಿ ಕೆಲಸ ಮಾಡಿದಾಗ ಟೀಮ್ ವರ್ಕ್ ಹೇಗಿರುತ್ತೆ, ಗ್ರಾಹಕರನ್ನು ಸಂಭಾಳಿಸುವುದು, ಸಮಯದ ನಿರ್ವಹಣೆ, ತಮ್ಮಿಂದ ನಿರೀಕ್ಷೆಗಳೇನು ಮೊದಲಾದ ನೈಜ ಪ್ರಪಂಚದ ಜ್ಞಾನ ಸಿಗುತ್ತದೆ ಎಂಬುದ ಜೆಫ್ ಬೇಜೋಸ್ ಅನಿಸಿಕೆ.
ವಿಶ್ವದ ಟಾಪ್-5 ಅತಿ ಶ್ರೀಮಂತರಲ್ಲಿ ಒಬ್ಬರಾದ ಜೆಫ್ ಬೇಜೋಸ್, ‘ನೀವು 20ರ ವಯಸ್ಸಲ್ಲಿ ಕಂಪನಿ ಶುರು ಮಾಡುವ ಅಗತ್ಯ ಇಲ್ಲ. ಈ ಪ್ರಪಂಚ ಹೇಗೆ ಕೆಲಸ ಮಾಡುತ್ತೆ ಎಂದು ಕಲಿಯುವುದು ಅಗತ್ಯ’ ಎನ್ನುತ್ತಾರೆ.
ಇದನ್ನೂ ಓದಿ: ಮಾಸಿದ ನೋಟುಗಳನ್ನು ಎಷ್ಟು ವಿನಿಯಮ ಮಾಡಬಹುದು? ಎಂಥ ನೋಟುಗಳು ಅಮಾನ್ಯ? ಇಲ್ಲಿದೆ ಆರ್ಬಿಐ ಮಾರ್ಗಸೂಚಿ
ಜೆಫ್ ಬೇಜೋಸ್ ತಮ್ಮ 30ರ ವಯಸ್ಸಿನಲ್ಲಿ ಅಮೇಜಾನ್ ಸಂಸ್ಥೆಯನ್ನು ಕಟ್ಟಿದರು. 1994ರಲ್ಲಿ ಒಂದು ಗ್ಯಾರೇಜ್ನಲ್ಲಿ ಆರಂಭವಾದ ಅಮೇಜಾನ್ ಇವತ್ತು ವಿಶ್ವದ ಅತಿದೊಡ್ಡ ಕಂಪನಿಗಳ ಸಾಲಿಗೆ ಸೇರಿದೆ. ವೈಯಕ್ತಿಕವಾಗಿ ಜೆಫ್ ಅವರ ಆಸ್ತಿಮೌಲ್ಯ 234 ಬಿಲಿಯನ್ ಡಾಲರ್. ಕಂಪನಿ ಕಟ್ಟುವ ಮುನ್ನ ಅವರು ಹತ್ತು ವರ್ಷ ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿದ್ದರು. ಆ ಅನುಭವವೇ ಬೇಜೋಸ್ ಅವರನ್ನು ಯಶಸ್ವಿ ಉದ್ಯಮಿಯನ್ನಾಗಿಸಿದೆ. ಈ ಮಾತನ್ನು ಅವರೇ ಸ್ವತಃ ಹೇಳಿಕೊಂಡಿದ್ದುಂಟು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




