ಮನೆಗೆಲಸದವಳ ಬಳಿ 60 ಲಕ್ಷ ರೂ ಫ್ಲಾಟ್, ಎರಡಂತಸ್ತಿನ ಮನೆ, ಅಂಗಡಿ; ಮಾಲೀಕರು ಶಾಕ್
This domestic help buys Rs 60 lakh apartment: ತಮ್ಮ ಮನೆಗೆಲಸದಾಕೆ 60 ಲಕ್ಷ ರೂ ಫ್ಲ್ಯಾಟ್ ಖರೀದಿಸಿರುವ ಸಂಗತಿಯನ್ನು ಮನೆ ಮಾಲಕಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆಕೆ ಸೂರತ್ನಲ್ಲಿ ಅಪಾರ್ಟ್ಮೆಂಟ್ ಖರೀದಿ ಮಾಡಿದ್ದಾರೆ. ತಮ್ಮ ಊರಿನಲ್ಲಿ ಎರಡಂತಸ್ತಿನ ಮನೆ ಹಾಗೂ ಅಂಗಡಿಯನ್ನೂ ಹೊಂದಿದ್ದಾರೆ. ಅನಾವಶ್ಯಕ ವಸ್ತುಗಳಿಗೆ ಹಣ ವ್ಯಯಿಸುವ ಬದಲು ಜಾಣ್ಮೆಯಿಂದ ಹಣ ಉಳಿಸಿದರೆ ಇದು ಸಾಧ್ಯ ಎಂಬುದು ನೆಟ್ಟಿಗರ ಅನಿಸಿಕೆ.

ಸೂರತ್, ಅಕ್ಟೋಬರ್ 9: ಯಾರೇ ಆದರೂ ಮನೆ ಕಟ್ಟುವುದಾಗಲೀ, ಮನೆ ಖರೀದಿಸುವುದಾಗಲೀ ಸಾಮಾನ್ಯ ಸಂಗತಿಯಲ್ಲ. ಲಕ್ಷಗಟ್ಟಲೆ ಸಂಬಳ ಪಡೆಯುತ್ತಿರುವವರು ಮನೆ ಪಡೆಯಲು ತಮ್ಮ ಜೀವಮಾನದ ಸಂಪಾದನೆ ಮುಡಿಪಾಗಿಡುತ್ತಾರೆ. ಬಡಬಗ್ಗರೆನಿಸಿಕೊಂಡವರಿಗೆ ಒಳ್ಳೆಯ ಮನೆ (housing) ಹೊಂದಲು ಸಾಧ್ಯವಾ ಎನ್ನುವ ಪ್ರಶ್ನೆ ಬರುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರು ಇದೇ ವಿಚಾರದ ಬಗ್ಗೆ ಹೇಳುತ್ತಾ, ತಮ್ಮ ಮನೆಗೆಲಸದಾಕೆಯ ಆಸ್ತಿಯ ವಿವರ ತಿಳಿಸಿ ಶಾಕ್ ಕೊಟ್ಟಿದ್ದಾರೆ.
ಸೂರತ್ನ ನಳಿನಿ ಉನಾಗರ್ ಎಂಬಾಕೆ ಎಕ್ಸ್ನಲ್ಲಿ ಒಂದು ಪೋಸ್ಟ್ ಹಾಕಿದ್ದು, ಅದೀಗ ವೈರಲ್ ಆಗುತ್ತಿದೆ. ಈಕೆಯ ಮನೆಯ ಕೆಲಸದಾಕೆಯು ತಾನು ಸೂರತ್ನಲ್ಲಿ 60 ಲಕ್ಷ ರೂ ಬೆಲೆಯ ಅಪಾರ್ಟ್ಮೆಂಟ್ ಖರೀದಿಸಿದ್ದಾಗಿ ಹೇಳಿಕೊಂಡಳಂತೆ. ಅದಕ್ಕಾಗಿ ಆಕೆ ಸಾಲ ಮಾಡಿದ್ದು ಕೇವಲ 10 ಲಕ್ಷ ರೂ. ಉಳಿದವನ್ನು ತನ್ನ ಉಳಿತಾಯ ಹಣದಲ್ಲಿ ಪಡೆದದ್ದು. ನಳಿನಿ ಈ ವಿಷಯನ್ನು ಹೇಳುತ್ತಾ, ತನಗೆ ಪ್ರಾಮಾಣಿಕವಾಗಿ ಶಾಕ್ ಆಯಿತು ಎಂದಿದ್ದಾರೆ.
ಇದನ್ನೂ ಓದಿ: ತಿಂಗಳಿಗೆ 10,000 ರೂ ಹೂಡಿಕೆಯಲ್ಲಿ 10 ವರ್ಷದಲ್ಲಿ ಒಂದು ಕೋಟಿ ಸಾಧ್ಯವಾ?
ಮನೆಗೆಲದವಳ ಆಸ್ತಿ ಇದೊಂದೇ ಅಲ್ಲ…
ಮನೆಗೆಲಸದವಳು 60 ಲಕ್ಷ ರೂ ಖರ್ಚು ಮಾಡಿ ಅಪಾರ್ಟ್ಮೆಂಟ್ ಖರೀದಿಸುತ್ತಾಳೆ ಎಂದರೆ ಅದು ಆಕೆಯ ಜೀವಮಾನದ ಸಂಪಾದನೆಯೇ ಆಗಿರಬೇಕು ಎನಿಸಬಹುದು. ಆದರೆ, ಅಚ್ಚರಿ ಎಂಬಂತೆ ಅದು ಆಕೆಯ ಮೊದಲ ಆಸ್ತಿಯಲ್ಲ. ಗುಜರಾತ್ನ ವೇಳಂಜಾ ಗ್ರಾಮದಲ್ಲಿ ಆಕೆ ಎರಡಂತಸ್ತಿನ ಮನೆ ಮತ್ತು ಅಂಗಡಿಯೊಂದನ್ನು ಹೊಂದಿದ್ದು, ಅವನ್ನು ಬಾಡಿಗೆಗೆ ನೀಡಿದ್ದಾಳಂತೆ. ಈ ವಿಚಾರ ಕೇಳಿ ತನಗೆ ಮಾತೇ ಬರದಂತಾಯಿತು ಎಂದು ನಳಿನಿ ಹೇಳಿಕೊಂಡಿದ್ದಾರೆ.
ನಳಿನಿ ಅವರ ಎಕ್ಸ್ ಪೋಸ್ಟ್ನಲ್ಲಿ ಈ ವಿಚಾರ ಕೇಳಿ ನೆಟ್ಟಿಗರೂ ಕೂಡ ಸ್ತಂಬೀಭೂತರಾಗಿದ್ದಾರೆ. ಮನೆಗೆಲಸದವಳಿಗೆ ಇದೆಲ್ಲಾ ಹೇಗೆ ಸಾಧ್ಯವಾಯಿತು? ನಳಿನಿ ಉನಾಗರ್ ಅವರೇ ಒಂದು ಕಮೆಂಟ್ನಲ್ಲಿ ಇದಕ್ಕೆ ಉತ್ತರ ಕೊಡುತ್ತಾರೆ.
ನಳಿನಿ ಅವರ ಎಕ್ಸ್ ಪೋಸ್ಟ್
My house help came in today looking really happy. She told me she just bought a 3BHK flat in Surat worth ₹60 lakhs, spent ₹4 lakh on furniture and took only a ₹10 lakh loan. I was honestly shocked. When I asked more, she mentioned that she already owns a two-floor house and a… pic.twitter.com/OWAPW99F46
— Nalini Unagar (@NalinisKitchen) October 7, 2025
ಬಡವರೂ ಹಣವಂತರಾಗುವುದು ಹೀಗೆ…
ನಳಿನಿ ಉನಾಗರ್ ಅವರ ಪೋಸ್ಟ್ಗೆ ಹಲವು ಮಂದಿ ಪ್ರತಿಕ್ರಿಯಿಸಿದ್ದಾರೆ. ಇದು ಟ್ಯಾಕ್ಸ್ ಕಟ್ಟದ ಹಣದ ಮಹಿಮೆ ಇರಬಹುದು ಎಂದು ಒಬ್ಬರು ಕಾಮೆಂಟಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಳಿನಿ, ‘ಜಾಣ್ಮೆಯಿಂದ ಉಳಿತಾಯ ಮಾಡುವುದು. ಮತ್ತು ಅನಾವಶ್ಯಕ ವಸ್ತುಗಳಿಗೆ ಹಣ ವ್ಯಯಿಸದೇ ಇರುವುದು ಕಾರಣ ಇರಬಹುದು’ ಎಂದಿದ್ದಾರೆ.
ಇದನ್ನೂ ಓದಿ: 45ನೇ ವಯಸ್ಸಿಗೆ 4.7 ಕೋಟಿ ರೂ; ಬ್ಯುಸಿನೆಸ್ ಇಲ್ಲ, ಷೇರು ಇಲ್ಲ, ಆದರೂ ಸಂಪಾದಿಸಿದ್ದು ಹೇಗೆ?
‘ಇಂಥ ಕೆಲಸ ಮಾಡುವವರು ಬಡವರು ಎನ್ನುವ ದೃಷ್ಟಿಕೋನ ಬೆಳೆಸಿಕೊಂಡುಬಿಟ್ಟಿರುತ್ತೇವೆ. ವಾಸ್ತವವಾಗಿ ಇವರುಗಳು ಹಣದ ವಿಚಾರದಲ್ಲಿ ಬುದ್ಧಿವಂತರಿರುತ್ತಾರೆ. ನಾವುಗಳು ಕೆಫೆ, ಫೋನ್, ದುಬಾರಿ ವಸ್ತು, ಟ್ರಿಪ್ ಇತ್ಯಾದಿಗೆ ಹಣ ವ್ಯಯಿಸುತ್ತೇವೆ. ಅವರುಗಳು ಹಣವನ್ನು ಚೆನ್ನಾಗಿ ನಿರ್ವಹಿಸುತ್ತಾರೆ’ ಎಂದು ಮತ್ತೊಂದು ಪ್ರತಿಕ್ರಿಯೆಯಲ್ಲಿ ನಳಿನಿ ತಿಳಿಸಿದ್ದಾರೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




