ಮಾಸಿದ ನೋಟುಗಳನ್ನು ಎಷ್ಟು ವಿನಿಯಮ ಮಾಡಬಹುದು? ಎಂಥ ನೋಟುಗಳು ಅಮಾನ್ಯ? ಇಲ್ಲಿದೆ ಆರ್ಬಿಐ ಮಾರ್ಗಸೂಚಿ
RBI guidelines on soiled notes: ಬಸ್ಸುಗಳಲ್ಲಿ ಅಥವಾ ಅಂಗಡಿಗಳಲ್ಲಿ ಹರಿದ ಅಥವಾ ಮಾಸಿದ ನೋಟುಗಳನ್ನು ಸ್ವೀಕರಿಸುವುದಿಲ್ಲ. ಇಂಥ ನೋಟುಗಳನ್ನು ಏನು ಮಾಡುವುದು? ಯಾವುದೇ ಸ್ಥಿತಿಯಲ್ಲಿರುವ ನೋಟುಗಳನ್ನು ಬ್ಯಾಂಕುಗಳಲ್ಲಿ ಡೆಪಾಸಿಟ್ ಮಾಡಲು ಅವಕಾಶ ಇದೆಯಾ? ಭಾರತೀಯ ರಿಸರ್ವ್ ಬ್ಯಾಂಕ್ ಈ ವಿಚಾರದಲ್ಲಿ ಸ್ಪಷ್ಟ ನಿಯಮಾವಳಿ ರೂಪಿಸಿದೆ. ಈ ಬಗ್ಗೆ ಸಂಕ್ಷಿಪ್ತ ಮಾಹಿತಿ:

ಯಾವುದೇ ನೋಟಾದರೂ ಅದಕ್ಕೊಂದು ಜೀವಿತಾವಧಿ ಎಂದು ನಿಗದಿ ಮಾಡಲಾಗಿರುತ್ತದೆ. ಸಾಮಾನ್ಯವಾಗಿ ಒಂದು ನೋಟು ಐದರಿಂದ ಹತ್ತು ವರ್ಷ ಬಳಕೆಯಲ್ಲಿ ಇರುವಂತಿರುತ್ತವೆ. ಆ ಬಳಿಕ ಆ ನೋಟುಗಳ ಬದಲು ಹೊಸ ನೋಟುಗಳನ್ನು ಮುದ್ರಿಸಲಾಗುತ್ತದೆ. ಕೆಲವೊಮ್ಮೆ ನೋಟುಗಳು ತಮ್ಮ ಜೀವಿತಾವಧಿಗಿಂತ ಬಹಳ ಮುಂಚೆಯೇ ಹಾಳಾಗಿ ಹೋಗಬಹುದು. ಅದರಲ್ಲೂ 10 ರೂ ಮತ್ತು 20 ರೂ ಮುಖಬೆಲೆಯ ನೋಟುಗಳು ಬಹಳ ಹೆಚ್ಚು ಚಲಾವಣೆಯಲ್ಲಿ ಇರುವುದರಿಂದ ಬೇಗ ಹಾಳಾಗುವ ಸಾಧ್ಯತೆ ಇರುತ್ತದೆ. ನೋಟು ಮಾಸುವುದು, ಹರಿಯುವುದು ಇತ್ಯಾದಿ ಆಗಿ ಅದರ ಬಳಕೆ ಅಸಾಧ್ಯ ಎಂಬಂತಾಗುತ್ತದೆ. ಇಂಥ ನೋಟುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡಲು ಅವಕಾಶ ಇದೆ. ಆದರೆ, ಪಿನ್ ಮಾಡಿದ ನೋಟುಗಳು, ಪೆನ್ನಿನಲ್ಲಿ ಗೀಚಿರುವ ನೋಟುಗಳು ಹೀಗೆ ಬೇರೆ ರೀತಿಯಲ್ಲಿ ತಿರುಚಲ್ಪಟ್ಟ ನೋಟುಗಳನ್ನು ವಿನಿಯಮ ಮಾಡಲು ಅವಕಾಶ ಇರುವುದಿಲ್ಲ. ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಮಾವಳಿ ರೂಪಿಸಿದೆ. ಯಾವ ರೀತಿಯ ನೋಟುಗಳನ್ನು ವಿನಿಮಯ ಮಾಡಬಹುದು, ಮಾಡಬಾರದು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
1. ಕೊಳಕು ನೋಟು (Soiled notes)
ಹೆಚ್ಚು ಬಳಕೆ ಕಾರಣದಿಂದ ನೋಟು ಮಸುಕಾಗಿರಬಹುದು. ನೋಟು ಎರಡು ತುಂಡಾಗಿದ್ದು, ಯಾವ ಭಾಗವೂ ತಪ್ಪಿಹೋಗದಂತೆ ಅದನ್ನು ಅಂಟಿಸಿರಬಹುದು. ಇಂಥ ನೋಟುಗಳನ್ನು ಯಾವುದೇ ಬ್ಯಾಂಕ್ ಕಚೇರಿಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು.
ನೋಟು ವಿನಿಮಯಕ್ಕೆ ಮಿತಿ: ಮೇಲೆ ತಿಳಿಸಿದ ಮಾಸಿದ ನೋಟುಗಳನ್ನು ಯಾವುದೇ ಬ್ಯಾಂಕ್ ಕಚೇರಿಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು. ಆದರೆ, ಅದಕ್ಕೆ ನಿರ್ಬಂಧಗಳಿವೆ. ಒಬ್ಬ ವ್ಯಕ್ತಿ ಬ್ಯಾಂಕ್ಗೆ ಹೋಗಿ ಕೌಂಟರ್ನಲ್ಲಿ 20 ನೋಟುಗಳನ್ನು ಉಚಿತವಾಗಿ ವಿನಿಮಯ ಮಾಡಬಹುದು.
20ಕ್ಕಿಂತ ಹೆಚ್ಚು ನೋಟುಗಳಿದ್ದರೆ ಬ್ಯಾಂಕ್ ನಿಮಗೆ ತತ್ಕ್ಷಣಕ್ಕೆ ವಿನಿಮಯ ಮಾಡುವುದಿಲ್ಲ. ಕೆಲ ದಿನಗಳ ಬಳಿಕ ನಿಮಗೆ ಬದಲೀ ನೋಟು ನೀಡಬಹುದು. ಅಥವಾ ಅಕೌಂಟ್ಗೆ ಹಣ ಕ್ರೆಡಿಟ್ ಮಾಡಬಹುದು. ಇದಕ್ಕೆ ಸರ್ವಿಸ್ ಚಾರ್ಜ್ ಹಾಕಲಾಗುತ್ತದೆ.
ಇದನ್ನೂ ಓದಿ: ಜಿಎಸ್ಟಿ ಆಯ್ತು, ದೀಪಾವಳಿಗೆ ಮುನ್ನ ನಿರೀಕ್ಷಿಸಿ ಮತ್ತೊಂದು ಸುಧಾರಣಾ ಹೆಜ್ಜೆ: ನೀತಿ ಆಯೋಗ್ ಸಿಇಒ
2. ಹರಿದ ನೋಟುಗಳು (Mutilated Notes)
ಎರಡಕ್ಕೂ ಹೆಚ್ಚು ಭಾಗವಾಗಿ ನೋಟು ಹರಿದುಹೋಗಿ ಅಂಟಿಸಿರಬಹುದು. ಅಥವಾ ಯಾವುದೋ ಒಂದು ಭಾಗ ತುಂಡರಿಸಿಹೋಗಿರಬಹುದು. ಇಂತ ನೋಟುಗಳನ್ನು ಮ್ಯುಟಿಲೇಟೆಡ್ ಅಥವಾ ಹರಿದ ನೋಟುಗಳೆಂದು ಪರಿಗಣಿಸಲಾಗುತ್ತದೆ. ಇಂಥ ನೋಟುಗಳನ್ನೂ ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು.
ಇವುಗಳ ವಿನಿಮಯ ಹೇಗೆ?: ಮೇಲೆ ತಿಳಿಸಿದ ಇಂಥ ನೋಟುಗಳನ್ನು ವಿನಿಮಯ ಮಾಡಲು ನಿರ್ಬಂಧಗಳಿವೆ. ಒಬ್ಬ ವ್ಯಕ್ತಿ ಯಾವುದೇ ಬ್ಯಾಂಕ್ ಬ್ರ್ಯಾಂಚ್ಗೆ ಹೋಗಿ ಐದು ನೋಟುಗಳನ್ನು ಉಚಿತವಾಗಿ ವಿನಿಮಯ ಮಾಡಬಹುದು. ಬ್ಯಾಂಕಿಗೆ ಈ ನೋಟುಗಳ ಬಗ್ಗೆ ಗೊಂದಲ ಇದ್ದಲ್ಲಿ ವ್ಯಕ್ತಿಗೆ ರಿಸಿಪ್ಟ್ ನೀಡಿ ಆ ನೋಟುಗಳನ್ನು ಕರೆನ್ಸಿ ಚೆಸ್ಟ್ ಬ್ರ್ಯಾಂಚ್ಗೆ (ಆರ್ಬಿಐ ನಿಗದಿ ಮಾಡಿದ ಬ್ಯಾಂಕ್ ಬ್ರ್ಯಾಂಚ್) ಅದನ್ನು ಕಳುಹಿಸಿ ಇತ್ಯರ್ಥ ಮಾಡಬಹುದು.
ಈ ನೋಟುಗಳ ಸಂಖ್ಯೆ ಐದಕ್ಕಿಂತ ಹೆಚ್ಚು ಇದ್ದರೆ ಚೆಸ್ಟ್ ಬ್ರ್ಯಾಂಚ್ಗೆ ಹೋಗಿ ವಿನಿಮಯ ಮಾಡಿಕೊಳ್ಳಬಹುದು.
3. ಸುಟ್ಟಿರುವ, ಅಂಟಿಕೊಂಡಿರುವ, ತೀರಾ ಶಿಥಿಲಗೊಂಡಿರುವ ನೋಟುಗಳು
ಸ್ವಲ್ಪ ಭಾಗ ಸುಟ್ಟಿರುವ, ಅಂಟಿಕೊಂಡಿರುವ, ಮತ್ತು ಇನ್ನೇನು ಹರಿದೇ ಹೋಗಬಹುದು ಎನ್ನುವಷ್ಟು ಶಿಥಿಲಗೊಂಡಿರುವ ನೋಟುಗಳಿವು. ಇವುಗಳನ್ನು ಸಾಮಾನ್ಯ ಬ್ಯಾಂಕ್ ಕಚೇರಿಗಳಲ್ಲಿ ಸ್ವೀಕರಿಸಲಾಗುವುದಿಲ್ಲ. ಆರ್ಬಿಐನ ಇಷ್ಯೂ ಆಫೀಸ್ಗೆ ಹೋಗಿ ಅಲ್ಲಿ ನೋಟು ವಿನಿಯಮ ಮಾಡಬಹುದು.
ಇನ್ನೂ ಓದಿ: ಯುಪಿಐ ಅಪ್ಡೇಟ್; ಪೇಮೆಂಟ್ಗೆ ಪಿನ್ ನೀಡಬೇಕಿಲ್ಲ; ಬಳಕೆದಾರರಿಗೆ ಹೆಚ್ಚಿನ ಆಯ್ಕೆ
ವಿನಿಮಯ ಮಾಡಲಾಗದ ನೋಟುಗಳು
ಆರ್ಬಿಐನ ‘PAY’, ‘PAID’, ‘REJECT’ ಮುದ್ರೆ ಇರುವ ನೋಟುಗಳು: ಹಳೆಯ ನೋಟುಗಳ ವಿನಿಮಯ ಮಾಡಿದಾಗ ಆರ್ಬಿಐ ಅವುಗಳ ಮೇಲೆ ‘PAY’ ಅಥವಾ ‘PAID’ ಅಥವಾ ‘REJECT’ ಎಂದು ಮುದ್ರೆ ಹಾಕಬಹುದು. ಅಂದರೆ, ಅವುಗಳನ್ನು ಇತ್ಯರ್ಥಪಡಿಸಲಾಗಿರುತ್ತದೆ. ಇಂಥ ನೋಟುಗಳು ಅಕಸ್ಮಾತ್ ಆಗಿ ಮತ್ತೆ ಚಲಾವಣೆಗೆ ಬಂದು ಬಿಟ್ಟರೆ ಅಂಥವನ್ನು ಯಾರೂ ಸ್ವೀಕರಿಸಬಹುದು. ಬ್ಯಾಂಕುಗಳೂ ಕೂಡ ಇಂಥ ನೋಟುಗಳನ್ನು ಸ್ವೀಕರಿಸುವುದಿಲ್ಲ. ಇದು ಗಮನದಲ್ಲಿರಲಿ
ಘೋಷವಾಕ್ಯ, ರಾಜಕೀಯ ಸಂದೇಶ ಬರೆದಿರುವ ನೋಟುಗಳು: ನೋಟುಗಳಲ್ಲಿ ಒಂದು ಬದಿಯಲ್ಲಿ ಖಾಲಿ ಇರುವ ಜಾಗದಲ್ಲಿ ಏನಾದರೂ ಬರೆದಿದ್ದರೆ ಅಂಥವನ್ನು ಬ್ಯಾಂಕುಗಳು ಸ್ವೀಕರಿಸುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಅಥವಾ ಸಂಘಟನೆಗಳು ಈ ನೋಟುಗಳ ಮೇಲೆ ತಮ್ಮ ಚಿಹ್ನೆಯನ್ನೋ, ಘೋಷವಾಕ್ಯವನ್ನೋ ಬರೆಯುವ ಚಾಳಿ ಹೊಂದಿರುತ್ತವೆ. ಇಂಥ ನೋಟುಗಳನ್ನು ತಪ್ಪಿಯೂ ಸ್ವೀಕರಿಸಬೇಡಿ.
ಉದ್ದೇಶಪೂರ್ವಕವಾಗಿ ತುಂಡರಿಸಿದ ನೋಟುಗಳು: ಉದ್ದೇಶಪೂರ್ವಕವಾಗಿ ತುಂಡರಿಸಲಾದ ನೋಟುಗಳನ್ನು ವಿನಿಮಯ ಮಾಡಬಾರದು ಎಂದು ಆರ್ಬಿಐ ಹೇಳಿದೆ. ಆದರೆ, ಉದ್ದೇಶಪೂರ್ವಕವಾಗಿ ತುಂಡರಿಸಲಾಗಿದ್ದನ್ನು ಹೇಗೆ ಪತ್ತೆ ಹಚ್ಚುವುದು ಎಂಬುದಕ್ಕೆ ಸ್ಪಷ್ಟ ಸೂಚನೆಗಳಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಇಂಥ ನೋಟುಗಳನ್ನು ತರಲಾಗಿರುವುದು ಇತ್ಯಾದಿ ಅಂಶಗಳನ್ನು ಗಮನಿಸಿ ಬ್ಯಾಂಕ್ ಬ್ರ್ಯಾಂಚುಗಳು ನಿರ್ಣಯಕ್ಕೆ ಬರಬಹುದು.
ಇದನ್ನೂ ಓದಿ: ಭಾರತದ ಮುಂದಿನ ಸ್ಟಾರ್ಟಪ್ ಕೇಂದ್ರ ಕರ್ನಾಟಕದ ಈ ಬಂದರುನಗರಿ: ಸುನೀಲ್ ಶೆಟ್ಟಿ, ಮೋಹನದಾಸ್ ಪೈ ಅನಿಸಿಕೆ
ನೋಟುಗಳಿಗೆ ಸ್ಟೇಪ್ಲಿಂಗ್ ಮಾಡಬೇಡಿ
ಹಿಂದೆ ನೋಟಿನ ಕಂತೆಗಳಿಗೆ ಬ್ಯಾಂಕ್ ಕಚೇರಿಗಳಲ್ಲಿ ಸ್ಟೇಪ್ಲಿಂಗ್ ಮಾಡಲಾಗುತ್ತಿತ್ತು. ಇದರಿಂದ ನೋಟು ಹಾಳಾಗುವ ಸಾಧ್ಯತೆ ಇರುತ್ತದೆ. ಇತ್ತೀಚಿನ ವರ್ಷಗಳಿಂದ ಬ್ಯಾಂಕುಗಳು ಒಂದು ಬಂಡಲ್ ನೋಟಿಗೆ ಸ್ಪೇಪಲ್ ಪಿನ್ ಬದಲು ರಬ್ಬರ್ ಬ್ಯಾಂಡ್ ಹಾಕುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




