Gaming Industry: ದೇಶದ ಗೇಮಿಂಗ್ ಉದ್ಯಮದಲ್ಲಿ ಸೃಷ್ಟಿಯಾಗಲಿದೆ 1 ಲಕ್ಷ ಉದ್ಯೋಗ; ವರದಿ

| Updated By: ಗಣಪತಿ ಶರ್ಮ

Updated on: Nov 17, 2022 | 6:38 PM

ಪ್ರತಿ ದಿನ ಉದ್ಯೋಗ ಕಡಿತಕ್ಕೆ ಸಂಬಂಧಿಸಿದ ಸುದ್ದಿಗಳ ನಡುವೆ ದೇಶದಲ್ಲಿ ಹೊಸದಾಗಿ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗುವ ಬಗ್ಗೆ ವರದಿಯೊಂದು ಉಲ್ಲೇಖಿಸಿದ್ದು, ಭರವಸೆ ಮೂಡಿಸಿದೆ. ಪ್ರೋಗ್ರಾಮರ್​​ ಮತ್ತು ಡೆವಲಪರ್

Gaming Industry: ದೇಶದ ಗೇಮಿಂಗ್ ಉದ್ಯಮದಲ್ಲಿ ಸೃಷ್ಟಿಯಾಗಲಿದೆ 1 ಲಕ್ಷ ಉದ್ಯೋಗ; ವರದಿ
ಸಾಂದರ್ಭಿಕ ಚಿತ್ರ (ಎಎಫ್​ಪಿ)
Image Credit source: AFP
Follow us on

ನವದೆಹಲಿ: ಪ್ರತಿ ದಿನ ಉದ್ಯೋಗ ಕಡಿತಕ್ಕೆ (Layoff) ಸಂಬಂಧಿಸಿದ ಸುದ್ದಿಗಳ ನಡುವೆ ದೇಶದಲ್ಲಿ ಹೊಸದಾಗಿ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗುವ (Job Creation) ಬಗ್ಗೆ ವರದಿಯೊಂದು ಉಲ್ಲೇಖಿಸಿದ್ದು, ಭರವಸೆ ಮೂಡಿಸಿದೆ. ದೇಶದ ಗೇಮಿಂಗ್ ಉದ್ಯಮದಲ್ಲಿ (gaming industry) ಮುಂದಿನ ಹಣಕಾಸು ವರ್ಷದ ವೇಳೆಗೆ 1 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ‘ಟೀಮ್​ಲೀಸ್ ಡಿಜಿಟಲ್​’ನ ‘ಗೇಮಿಂಗ್ – ಟುಮಾರೋಸ್ ಬ್ಲಾಕ್​ಬಸ್ಟರ್’ ಎಂಬ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವೇಗವಾಗಿ ಬೆಳೆಯುತ್ತಿದೆ ಗೇಮಿಂಗ್ ಉದ್ಯಮ

ಗೇಮಿಂಗ್ ಉದ್ಯಮದಲ್ಲಿ ಸೃಷ್ಟಿಯಾಗಲಿರುವ ಉದ್ಯೋಗಾವಕಾಶಗಳ ಪೈಕಿ 50,000 ದಷ್ಟು ಪ್ರೋಗ್ರಾಮರ್​​ ಮತ್ತು ಡೆವಲಪರ್​ಗಳದ್ದಾಗಿರಲಿದೆ. 2019ನೇ ಹಣಕಾಸು ವರ್ಷದಲ್ಲಿ 7,037 ಕೋಟಿ ಮೌಲ್ಯ ಹೊಂದಿದ್ದ ಗೇಮಿಂಗ್ ಉದ್ಯಮ 2022ರಲ್ಲಿ 14,300 ಕೋಟಿ ತಲುಪಿದೆ. 2026ರ ವೇಳೆಗೆ ಇದು 38,097 ಕೋಟಿ ರೂ. ಮೌಲ್ಯ ಹೊಂದಬಹುದೆಂದು ನಿರೀಕ್ಷಿಸಲಾಗಿದೆ. ಮುಂದಿನ ಏಳು ವರ್ಷಗಳಲ್ಲಿ ಐದು ಪಟ್ಟು ಹೆಚ್ಚಳ ನಿರೀಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ.

ಗೇಮಿಂಗ್ ಉದ್ಯಮ ಬೆಳವಣಿಗೆ ಹೊಂದಲಿರುವ ಕ್ಷೇತ್ರ. ಇದು ಬಳಕೆದಾರರ ನೆಲೆಯನ್ನು ವಿಸ್ತರಿಸುತ್ತಾ ಹೋಗುತ್ತಿದ್ದು, ಅವಕಾಶಗಳೂ ಹೆಚ್ಚಾಗುತ್ತಿವೆ. ಉದ್ಯೋಗಾವಕಾಶಗಳೂ ಹೆಚ್ಚಲಿದ್ದು, ಬೇಡಿಕೆಯಲ್ಲಿ ಏರಿಕೆಯಾಗಲಿದೆ ಎಂದು ‘ಟೀಮ್​ಲೀಸ್ ಡಿಜಿಟಲ್​’ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಚೆಮನ್​ಕೋಟಿಲ್ ಹೇಳಿದ್ದಾರೆ. ‘ಟೀಮ್​ಲೀಸ್ ಡಿಜಿಟಲ್​’ ಮಾನವ ಸಂಪನ್ಮೂಲ ಮತ್ತು ಸಲಹಾ ಸಂಸ್ಥೆಯಾಗಿದೆ.

ಹರಿದು ಬರಲಿದೆ ವಿದೇಶಿ ಹೂಡಿಕೆ

ಗೇಮಿಂಗ್ ಉದ್ಯಮಕ್ಕೆ ಮುಂದಿನ ಹಣಕಾಸು ವರ್ಷದಲ್ಲಿ ಹೆಚ್ಚಿನ ಮೊತ್ತದ ವಿದೇಶಿ ಹೂಡಿಕೆ ಹರಿದುಬರಲಿದೆ. 2023ರಲ್ಲಿ 780 ಕೋಟಿ ರೂ. ನೇರ ವಿದೇಶಿ ಹೂಡಿಕೆ ಬರಲಿದೆ. ಉದ್ದಿಮೆಯು ಶೇಕಡಾ 20-30ರಷ್ಟು ಬೆಳವಣಿಗೆ ಹೊಂದಲಿದೆ. 2026ರ ವೇಳೆಗೆ ಉದ್ಯಮದ ಮೌಲ್ಯವು 38,097 ಕೋಟಿ ರೂ.ಗೆ ಹೆಚ್ಚಲಿದೆ ಎಂದು ‘ಟೀಮ್​ಲೀಸ್ ಡಿಜಿಟಲ್​’ನ ಉದ್ಯಮ ವಿಭಾಗದ ಮುಖ್ಯಸ್ಥೆ ಮುನಿರಾ ಲೋಲಿವಾಲ ತಿಳಿಸಿದ್ದಾರೆ.

ಅತಿದೊಡ್ಡ ಗೇಮಿಂಗ್ ಸಮುದಾಯ

48 ಕೋಟಿ ಗೇಮಿಂಗ್ ಸಮುದಾಯವನ್ನು ಹೊಂದಿರುವ ಭಾರತ ಗೇಮಿಂಗ್ ಉದ್ಯಮದಲ್ಲಿ ಚೀನಾಕ್ಕಿಂತ ನಂತರದ, ಅಂದರೆ ಎರಡನೇ ಸ್ಥಾನ ಪಡೆದಿದೆ. ಈ ಉದ್ಯಮದಲ್ಲಿ ಉದ್ಯೋಗಾವಕಾಶಗಳೂ ಗಣನೀಯವಾಗಿ ಸೃಷ್ಟಿಯಾಗುತ್ತಿವೆ ಎಂದು ಲೋಲಿವಾಲ ಹೇಳಿದ್ದಾರೆ.

ಏನೆಲ್ಲ ಉದ್ಯೋಗಾವಕಾಶಗಳು?

ಪ್ರೋಗ್ರಾಮಿಂಗ್, ಗೇಮ್ ಡೆವಲಪರ್​ಗಳು, ಯುನಿಟಿ ಡೆವಲಪರ್​ಗಳು, ಟೆಸ್ಟಿಂಗ್ (ಗೇಮ್ ಟೆಸ್ಟ್ ಎಂಜಿನಿಯರಿಂಗ್, ಕ್ಯುಎ ಲೀಡ್), ಆ್ಯನಿಮೇಷನ್, ಡಿಸೈನ್, ಆರ್ಟಿಸ್ಟ್ (ವಿಎಫ್​ಎಕ್ಸ್ ಹಾಗೂ ಕಾನ್ಸೆಪ್ಟ್) ಹಾಗೂ ಇತರ (ಕಂಟೆಂಟ್ ಬರಹಗಾರರು, ಗೇಮಿಂಗ್ ಜರ್ನಲಿಸ್ಟ್, ವೆಬ್ ಅನಾಲಿಸ್ಟ್) ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ವರದಿ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ