ಬೈಯಪ್ಪನಹಳ್ಳಿ ರೈಲ್ವೇ ಸ್ಟೇಷನ್​ ಬಳಿ ಡ್ರಮ್​ನಲ್ಲಿ ಮಹಿಳೆ ಶವ ಪತ್ತೆ ಕೇಸ್: ಹಂತಕರ ಸುಳಿವು ನೀಡಿದ ಡ್ರಮ್​ ಮೇಲಿದ್ದ ಸ್ಟಿಕ್ಕರ್​

|

Updated on: Mar 16, 2023 | 2:01 PM

ಬೆಂಗಳೂರಿನ ಬೈಯಪ್ಪನಹಳ್ಳಿ ರೈಲ್ವೇ ಸ್ಟೇಷನ್​ ಬಳಿ ಮಹಿಳೆ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಮ್​ ಮೇಲಿದ್ದ ಸಿಕ್ಟರ್ ಸುಳಿವಿನ​ ಮೇಲೆ ಪೊಲೀಸರು ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾದ್ರೆ, ಆ ಮಹಿಳೆ ಯಾರು? ಯಾಕೆ ಕೊಲೆ ಮಾಡಿದ್ರು? ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಬೈಯಪ್ಪನಹಳ್ಳಿ ರೈಲ್ವೇ ಸ್ಟೇಷನ್​ ಬಳಿ ಡ್ರಮ್​ನಲ್ಲಿ ಮಹಿಳೆ ಶವ ಪತ್ತೆ ಕೇಸ್: ಹಂತಕರ ಸುಳಿವು ನೀಡಿದ ಡ್ರಮ್​ ಮೇಲಿದ್ದ ಸ್ಟಿಕ್ಕರ್​
ತಮನ್ನಾ, ಕೊಲೆಯಾದ ಮಹಿಳೆ
Follow us on

ಬೆಂಗಳೂರು: ನಗರದ ಬೈಯಪ್ಪನಹಳ್ಳಿ ರೈಲ್ವೇ ಸ್ಟೇಷನ್​ನಲ್ಲಿ(Baiyappanahalli railway station )ಪ್ಲಾಸ್ಟಿಕ್​ ಡ್ರಮ್​ನೊಳಗೆ ಮಹಿಳೆ ಶವ ಪತ್ತೆ ಪ್ರಕರಣವನ್ನು ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡ್ರಮ್​ನಲ್ಲಿದ್ದ ಮಹಿಳೆ ಶವ ಯಾರದ್ದೆಂದು ರೈಲ್ವೇ ಪೊಲೀಸರು ಪತ್ತೆ ಹಚ್ಚಿದ್ದು,  ತಮನ್ನಾ ಎಂಬಾಕೆ ಕೊಲೆಯಾಗಿರುವ ಮಹಿಳೆ ಎಂದು ತಿಳಿದುಬಂದಿದೆ.  ಡ್ರಮ್ ಮೇಲಿದ್ದ ಒಂದು ಸ್ಟಿಕ್ಕರ್ ಸುಳಿವಿನೊಂದಿಗೆ ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ಮೂವರು ಕೊಲೆ ಆರೋಪಿಗಳನ್ನು  ಹಿಡಿದಿದ್ದಾರೆ. ನವಾಬ್, ಜಮಾಲ್, ಮಜರ್, ಅಸ್ಸಾಬ್, ಸಬೂಲ್, ಕಮಾಲ್ , ತನ್ವೀರ್, ಶಾಕೀಬ್ ಸೇರಿ ಒಟ್ಟು ಎಂಟು ಜನರು ತಮನ್ನಾ ಕೊಲೆಯಲ್ಲಿ ಭಾಗಿಯಾಗಿದ್ದು, ಇವರಲ್ಲಿ ಕಮಾಲ್, ತನ್ವೀರ್, ಶಾಕೀಬ್ ಸದ್ಯ ಸಿಕ್ಕಿಬಿದಿದ್ದಾರೆ. ಈ ಮೂವರೂ ಬಿಹಾರದ ಅರಾರಿಯಾ ಜಿಲ್ಲೆಯವರಾಗಿದ್ದು, ಬೆಂಗಳೂರಿನ ಸಿಟಿ ಮಾರ್ಕೆಟ್‌ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಉಳಿದ ಐದು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಬಳಿ ಡ್ರಮ್​ನಲ್ಲೇ ಮತ್ತೊಂದು ಮಹಿಳೆ ಶವ ಪತ್ತೆ, ಒಂದೇ ಮಾದರಿಯ 3ನೇ ಕೇಸ್​ ಬೆಳಕಿಗೆ

ಹಂತಕರ ಸುಳಿವು ನೀಡಿ ಡ್ರಮ್ ಮೇಲಿದ್ದ ಸ್ಟಿಕ್ಕರ್

ಕಲಾಸಿಪಾಳ್ಯದಲ್ಲಿ ಕೊಲೆ ಮಾಡಿ ಬಳಿಕ ಡ್ರಮ್​ನಲ್ಲಿ ತುಂಬಿಕೊಂಡು ಬಂದು ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಬಳಿ ಇಟ್ಟು ಪರಾರಿಯಾಗಿದ್ದರು. ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳ ಸುಳಿವು ನೀಡಿದ್ದು ಡ್ರಮ್​ನ ಮೇಲಿದ್ದ ಒಂದು ಸ್ಟಿಕ್ಟರ್. ಡ್ರಮ್​ನ ಮೇಲೆ ಆರೋಪಿ ಕಮಾಲ್ ಹೆಸರು ಮತ್ತು ವಿಳಾಸ ಪತ್ತೆಯಾಗಿದೆ. ಇದೇ ಸ್ಟಿಕ್ಕರ್ ಬೆನ್ನತ್ತಿ ಹೋದ ಪೊಲೀಸರಿಗೆ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಐವರು ಆರೋಪಿಗಳ ಪತ್ತೆಗೆ ಕಾರ್ಯಚರಣೆ ನಡೆಸಿದ್ದಾರೆ.

ತಮನ್ನಾ ಕೊಲೆಗೆ ಕಾರಣ ಏನು..?

ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ತಮನ್ನಾಳನ್ನ ಕೊಲೆ ಮಾಡಿದ್ದಾರೆ ಎಂದು ತನಿಖೆ ವೇಳೆ ಬಹಿರಂಗವಾಗಿದೆ. ತಮನ್ನಾ ಮೊದಲು ಅಫ್ರೋಜ್ ಎಂಬಾತನನ್ನ ಮದುವೆ ಆಗಿದ್ದಳು. ಆದ್ರೆ, ಅಫ್ರೋಜ್ ವಿಶೇಷ ಚೇತನನಾಗಿದ್ದರಿಂದ ಆತನ ಜೊತೆ ಡಿವೋರ್ಸ್ ಪಡೆದು ಇಂತಿಕಾಬ್​ನೊಂದಿಗೆ ವಿವಾಹವಾಗಿ ಜಿಗಣಿಯಲ್ಲಿ ವಾಸವಿದ್ದಳು. ಆದ್ರೆ, ತಮನ್ನಾ ವಿಚ್ಛೇದನ ಪಡೆದುಕೊಂಡಿದ್ದ ಅಫ್ರೋಜ್, ಎರಡನೇ ಪತಿ ಇಂತಿಕಾಬ್​ನ ದೊಡ್ಡಪ್ಪನ ಮಗನಾಗಿದ್ದ. ತಮನ್ನಾ ವಿಚ್ಛೇದನ ಪಡೆದು ಮೊದಲ ಗಂಡನ ಸಹೋದರನನ್ನೇ ಮದುವೆ ಆಗಿರುವುದು ಕುಟುಂಬಸ್ಥರ ಆಕ್ರೋಶಕ್ಕೂ ಕಾರಣವಾಗಿತ್ತು. ಹೀಗಾಗಿ ತಮನ್ನಾ ನಮ್ಮ ಇಡೀ ಕುಟುಂಬವನ್ನೇ ಹಾಳು ಮಾಡಿದ್ದಾಳೆ ಎಂದು ಕೊಲೆ ಮಾಡಿದ್ದರು.

ಪಾರ್ಟಿ ನೆಪದಲ್ಲಿ ಹತ್ಯೆ

ಕುಟುಂಬವನ್ನೇ ಹಾಳು ಮಾಡುತ್ತಿದ್ದಾಳೆಂದು ತಮನ್ನಾಳ ಕೊಲೆಗೆ ಸ್ಕೆಚ್​ ಹಾಕಿದ್ದ ಆರೋಪಿಗಳು, ಪ್ಲಾನ್​ನಂತೆ ಪಾರ್ಟಿ ಮಾಡುವುದಾಗಿ ಜಿಗಣಿಯಿಂದ ತಮನ್ನಾಳನ್ನು ಭಾನುವಾರ(ಮಾ.12) ಮಧ್ಯಾಹ್ನ ಎರಡು ಗಂಟೆಗೆ ಕರೆಯಿಸಿಕೊಂಡಿದ್ದರು. ಪಾರ್ಟಿ ಬಳಿಕ ಸಂಜೆ 6 ಗಂಟೆಗೆ ವೇಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದರು. ಬಳಿಕ ಶವವನ್ನು ಡ್ರಮ್​ನಲ್ಲಿ ಹಾಕಿಕೊಂಡು ಆಟೋ ಮೂಲಕ ರಾತ್ರಿ ‌ 11.45ಕ್ಕೆ ಬೈಯಪ್ಪನಹಳ್ಳಿ ರೈಲ್ವೇ ಸ್ಟೇಷನ್​ನ ಗೇಟ್​ ಬಳಿ ಇಟ್ಟುಬಂದಿದ್ದರು ಎಂದು ಪೊಲೀಸ್​ ತನಿಖೆ ವೇಳೆ ತಿಳಿದುಬಂದಿದೆ.

ಪ್ರಕರಣ ಹಿನ್ನೆಲೆ

ಬೆಳಗ್ಗೆ ಡ್ರಮ್​ ಅನ್ನು ​ ಮೂವರು ಆಟೋದ ಮೂಲಕ ತಂದು ಬೈಯಪ್ಪನಹಳ್ಳಿ ರೈಲ್ವೇ ಸ್ಟೇಷನ್ ಮೇನ್ ಗೇಟ್ ಬಳಿಯೇ ಶವ ಇದ್ದ ಡ್ರಮ್​ ಇಟ್ಟು ಹೋಗಿದ್ದ, ಇದು ಸಿಸಿಟಿವಿ ದೃಶ್ಯಾವಳಿ ಮೂಲಕ ತಿಳಿದುಬಂದಿತ್ತು. ಬಳಿಕ ಡ್ರಮ್​ ಮೂಲಕ ದುರ್ವಾಸನೆ ಬರಲಾರಂಭಿಸಿದ್ದು, ಅದನ್ನು ಆಟೋ ಚಾಲಕನೊಬ್ಬ ತೆರೆದು ನೋಡಿದಾಗ ಒಳಗೆಡೆ ಮಹಿಳೆ ಶವ ಇರುವುದು ಬೆಳಕಿಗೆ ಬಂದಿತ್ತು. ಕೂಡಲೇ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು. ನಂತರ ರೈಲ್ವೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ತನಿಖೆಗೆ ಕೈಗೊಂಡಿದ್ದರು.

 

Published On - 1:26 pm, Thu, 16 March 23