ಕೆಲವೊಂದು ಸಮಯ ಸಂದರ್ಭ ಅಥವಾ ಸನ್ನಿವೇಶಗಳಲ್ಲಿ ಅಯ್ಯೋ ಅವ್ನು ಅದೇನು ಮಂಕುಬೂದಿ ಎರಚಿದ್ನೋ ಅನ್ನೋ ಮಾತುಗಳು ಬರುತ್ತವೆ. ಈ ಮಂಕು ಬೂದಿ ಅನ್ನೋದು ಎಷ್ಟು ನಿಜವೋ ಗೊತ್ತಿಲ್ಲ, ಆದ್ರೆ ಕೊಡಗಿನಲ್ಲಿ ಕುಟುಂಬವೊಂದು ತಮ್ಮ ಮೇಲೆ ಮಂಕು ಬೂದಿ ಎರಚಿ ಮನೆ ಕಳ್ಳತನ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ. ಅದೂ ಕೂಡ ಎರಡು ಮನೆಯವರು. ಹಾಗಾಗಿ ಈ ವಿಲಕ್ಷಣ ಕಳ್ಳತನ ಪ್ರಕರಣ ಇದೀಗ ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕಾರಿನ ಡೋರ್, ಮನೆಯ ಅಂಗಳ, ಮೆಟ್ಟಿಲ ಮೇಲೆ ಬಿದ್ದಿರೋ ಏನೋ ಬೂದಿ ಮಾದರಿಯ ಪೌಡರ್… ಅದೇ ಮನೆಯ ಗೋಡೆ ಮೇಲೆ ಹೆಜ್ಜೆ ಗುರುತುಗಳು.. ಕಳ್ಳರು ಇದೇ ಮಾರ್ಗದಲ್ಲಿ ಬಂದಿದ್ದರು ಅಂತ ತೋರಿಸುತ್ತಿರೋ ಮನೆ ಮಾಲಿಕ. ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಗುಡ್ಡೆ ಹೊಸೂರು ಗ್ರಾಮದ ಯಶ್ವಂತ್ ಮತ್ತು ಇಸ್ಮಾಯಿಲ್ ಎಂಬ ಇಬ್ಬರು ಗ್ರಾಮಸ್ಥರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣವೊಂದು ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಯಾಕಂದ್ರೆ ಮನೆಗೆ ಬಂದಿದ್ದ ಕಳ್ಳರು ತಮ್ಮ ಮೇಲೆ ಮಂಕು ಬೂದಿ ಎರಚಿ ಜ್ಞಾನ ತಪ್ಪಿಸಿ ನಗದು ಒಡವೆ ದೋಚಿದ್ದಾರೆ ಅಂತ ಆರೋಪಿಸಿದಾರೆ. ಹೌದು ಇಸ್ಲಾಯಿಲ್ ಎಂಬುವರು ಮೊನ್ನೆ ಭಾನುವಾರ ರಾತ್ರಿ ಎಂದಿನಂತೆ ತಮ್ಮ ಪತ್ನಿ ಜತೆ ಮನೆಯಲ್ಲಿ ಮಲಗಿದ್ದಾರೆ. ಗಾಢ ನಿದ್ದೆಯಲ್ಲಿದ್ದ ಅವರಿಗೆ ಯಾರೋ ಬೆಡ್ ರೂಂ ಬಾಗಿಲನ್ನು ತೆಗೆದಂತೆ ಭಾಸವಾಗಿದೆಯಂತೆ.
ಯಾರದು ಎಂದು ನೋಡಿದಾಗ ಪ್ರಖರವಾದ ಬೆಳಕು ಬಂದು ಮುಖದ ಮೇಲೆ ಏನೋ ಸಿಂಪಡಿಸದಂತೆ ಆಗಿದೆ. ಅವರ ಪತ್ನಿಗೂ ಇದೇ ಅನುಭವವಾಗಿದೆ. ಅವರಿಬ್ಬರಿಗೆ ಅದಷ್ಟೇ ನೆನಪಿರುವುದು. ಬೆಳಗ್ಗೆ ಮಗ ಬಂದು ಎಬ್ಬಿಸಿದಾಗ ಕಣ್ಣೆಲ್ಲಾ ಉರಿ ಉರಿ! ಮನೆಯ ಮಹಡಿಯಲ್ಲಿದ್ದ ರೂಂ ಗೆ ತೆರಳಿ ನೋಡಿದಾಗ ಬೀರು ತೆರೆದಿದ್ದು ವಸ್ತಗಳು ಚೆಲ್ಲಾಪಿಲ್ಲಿಆಗಿರುವುದು ಕಂಡುಬಂದಿದೆ.
Also read: ದುಬಾರಿ ಐ ಪೋನ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕೊಡಗಿನ ಪೊಲೀಸ್ ಕಾನ್ಸ್‌ಟೇಬಲ್
ಅದರಲ್ಲಿದ್ದ ಸುಮಾರು 45 ಗ್ರಾಂ ಚಿನ್ನ ಮತ್ತು 5 ಸಾವಿರ ರೂ ನಗದನ್ನು ಕದ್ದೊಯ್ದಿದ್ದಾರೆ. ರಾತ್ರಿ ಬಂದಿದ್ದ ಕಳ್ಳರು ಮನೆಯ ಹಿಂದಿನ ಬಾಗಿಲನ್ನ ಕಿಟಕಿ ಮೂಲಕ ದೊಣ್ಣೆಯಿಂದ ತೆಗೆದು ಒಳ ನುಗ್ಗಿರೋದು ಕಂಡು ಬಂದಿದೆ. ಒಳ ನುಗ್ಗಿ ಬಂದ ಕಳ್ಳರು ಮನೆ ಮಾಲೀಕ ಇಸ್ಮಾಯಿಲ್ ಮತ್ತು ಪತ್ನಿ ಮೇಲೆ ಮಂಕು ಬೂದಿ ಎರಚಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂಬುದು ಮನೆಯವರ ಆರೋಪ.
ಇವರ ಮನೆಗೆ ಆಗಮಿಸುವ ಮುನ್ನ ಕಳ್ಳರು ಇವರ ಮನೆಯಿಂದ ಅನತಿ ದೂರದಲ್ಲಿರುವ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಯಶ್ವಂತ್ ಅವರ ಒಂಟಿ ಮನೆಗೂ ನುಗ್ಗಿದ್ದಾರೆ. ಮನೆಯ ಹಿಂಬದಿಗೆ ಆಗಮಿಸಿರೋ ಕಳ್ಳರು ಕಿಟಕಿ ಮೂಲಕ ಮಹಡಿಗೆ ಹತ್ತಿ ಒಳನುಗ್ಗಲು ಯತ್ನಿಸಿದ್ದಾರೆ. ಆದ್ರೆ ಮನೆ ಗಟ್ಟಿಮುಟ್ಟಾಗಿದ್ದುದರಿಂದ ನುಗ್ಗಲು ಸಾಧ್ಯವಾಗಿಲ್ಲ. ಮಧ್ಯ ರಾತ್ರಿ 2 ಗಂಟೆ ಸುಮಾರಿಗೆ ಗೇಟ್ ತೆಗೆದ ಶಬ್ಧ ಯಶ್ವಂತ್ ಅವರಿಗೆ ಕೇಳಿಸಿದೆ.
ಆದ್ರೆ ಒಬ್ಬರೇ ಇದ್ದುದರಿಂದ ಧೈರ್ಯವಾಗದೆ ಹೊರ ಬಂದಿಲ್ಲ. ಆದ್ರೆ ಬೆಳಗೆದ್ದು ನೋಡುವಾಗ ಕಾರಿನ ಡೋರ್ ಮತ್ತು ಕಳ್ಳರು ತಿರುಗಾಡಿದ ಕಡೆ ಒಂದಷ್ಟು ಭಸ್ಮದ ಮಾದರಿಯ ಪೌಡರ್ ಚೆಲ್ಲಿರುವುದು ಕಂಡು ಬಂದಿದೆ. ಮನೆಯ ದ್ವಾರ ಕಿಟಕಿಗಳಲ್ಲಿ ಆಗಂತುಕರ ಫಿಂಗರ್ ಪ್ರಿಂಟ್ ದೊರಕಿದೆ ಎಂದು ಘಟನೆಯ ಬಗ್ಗೆ ಯಶ್ವಂತ್, ನಿವೃತ್ತ ಬ್ಯಾಂಕ್ ಮ್ಯಾನೇಜರ್ ವಿವರಣೆ ನೀಡಿದ್ದಾರೆ.
ಸದ್ಯ ಮಂಕು ಬೂದಿ ಎರಚಿ ಕಳ್ಳತನ ನಡೆಸಲಾಗಿದೆ ಎನ್ನಲಾದ ಈ ಪ್ರಕರಣ ಕೊಡಗಿನಲ್ಲಿ ಸಂಚಲನ ಸೃಷ್ಟಿಸಿದೆ. ರಾತ್ರಿ ಎಲ್ಲಾ ಹೇಗಪ್ಪಾ ಇರುವುದು ಅಂತ ಜನರು ಚಿಂತೆಗೀಡಾಗಿದ್ದಾರೆ. ಅದ್ರಲ್ಲೂ ಕೊಡಗಿನಲ್ಲಿ ಒಂಟಿ ಮನೆಗಳೇ ಹೆಚ್ಚು. ಬಹುತೇಕ ಮನೆಗಳಲ್ಲಿ ವೃದ್ಧ ತಂದೆ ತಾಯಿಗಳೇ ಇದ್ದು ಎಲ್ಲರಲ್ಲೂ ಆತಂಕ ಮನೆ ಮಾಡಿದೆ. ಈ ನಿಟ್ಟಿನಲ್ಲಿ ಪೊಲಿಸರು ಸೂಕ್ತ ತನಿಖೆ ನಡೆಸಿ, ಕಳ್ಳರ ಬಂಧಿಸುವಂತೆ ಒತ್ತಾಯಿಸಲಾಗಿದೆ. ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ