ದುಬಾರಿ ಐ ಪೋನ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕೊಡಗಿನ ಪೊಲೀಸ್ ಕಾನ್ಸ್‌ಟೇಬಲ್
ಗೋಣಿಕೊಪ್ಪಲು ಠಾಣೆ ವ್ಯಾಪ್ತಿಯಲ್ಲಿ ಕಾರಿನಲ್ಲಿ ಸಾಗಿದ್ದ ಸಿಜೋಮ್ ತಮಗೆ ಅರಿವಿಲ್ಲದೆ ತಮ್ಮ ಮೊಬೈಲ್ ಬೀಳಿಸಿ ಕೊಂಡಿದ್ದರು. ಅದು ಕಾನ್ಸ್‌ಟೇಬಲ್ ರಾಘವೇಂದ್ರ ಅವರಿಗೆ ಸಿಕ್ಕಿತ್ತು. ಹಾಗಾಗಿ ಠಾಣೆಗೆ ಬಂದು ಮೊಬೈಲ್ ಪಡೆಯುವಂತೆ ಸೂಚಿಸಿದ್ದರು. ರಾಘವೇಂದ್ರ ಪ್ರಾಮಾಣಿಕತೆಗೆ ಗೋಣಿಕೊಪ್ಪ ಠಾಣೆ ಸಿಬ್ಬಂದಿ, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿರಾಜಪೇಟೆ, ಡಿಸೆಂಬರ್ 5: ಕೊಡಗಿನ ಕಲಿಗಳು- ಅವರು ಪೊಲೀಸರೆ ಇರಲೀ, ದೇಶ ಸೇವೆಗೆ ಟೊಂಕಕಟ್ಟಿ ನಿಲ್ಲುವ ಯೋಧರೇ ಆಗಿರಲಿ… ಅವರಲ್ಲಿ ಪ್ರಾಮಾಣಿಕತೆ ಎಂಬುದು ತುಸು ಹೆಚ್ಚಾಗಿಯೇ, ಬೇರೆಯವರಿಗೆ ಮಾದರಿಯಾಗುವಂತೆ ತುಂಬಿತುಳುಕುತ್ತಿರುತ್ತದೆ. ತಾಜಾ ಪ್ರಕರಣದಲ್ಲಿ ಪ್ರವಾಸಿಗರೊಬ್ಬರು ಆಕಸ್ಮಿಕವಾಗಿ ಕಳೆದುಕೊಂಡಿದ್ದ ದುಬಾರಿ ಐಫೋನ್ (iPhone) ಅನ್ನು ಪೊಲೀಸರು ಅದರ ಮಾಲೀಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಕೊಡಗು ( Kodagu) ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪಲು ಠಾಣೆಯ ಕಾನ್ಸ್‌ಟೇಬಲ್ (police constable) ರಾಘವೇಂದ್ರ ಈ ಸ್ತುತ್ಯರ್ಹ ಕಾರ್ಯವೆಸಗಿದ್ದಾರೆ.
ಕಾನ್ಸ್‌ಟೇಬಲ್ ರಾಘವೇಂದ್ರ ಅವರು ಮೊನ್ನೆ ಭಾನುವಾರ ಡಿಸೆಂಬರ್ 3 ರಂದು ಆನೆಚೌಕೂರು ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದರು. ಈ ಸಂದರ್ಭ ರಸ್ತೆ ಬದಿ ದುಬಾರಿ ಬೆಲೆಯ ಐಫೋನ್ ಒಂದು ಅವರ ಕಣ್ಣಿಗೆ ಬಿದ್ದಿದೆ. ಐಫೋನ್ ನಲ್ಲಿ ಬಹಳಷ್ಟು ಮಿಸ್ಡ್ ಕಾಲ್ ಗಳಿದ್ದವು. ಅದರಲಿ ಅತಿ ಹೆಚ್ಚು ಮಿಸ್ಡ್ ಕಾಲ್ ಬಂದ ನಂಬರ್ ಗೆ ರಾಘವೇಂದ್ರ ಕರೆ ಮಾಡಿದಾಗ ಆ ಮೊಬೈಲ್ ನ ಮಾಲೀಕ ಕೇರಳ ಮೂಲದ ಸಿಜೋಮ್ ಎಂಬುದು ಗೊತ್ತಾಗಿದೆ.
ಇದನ್ನೂ ಓದಿ: ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂಪಾಯಿ ಠಾಣೆಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್ ಸಿಬ್ಬಂದಿ
ಕಾರಿನಲ್ಲಿ ಅದೇ ದಾರಿಯಲ್ಲಿ ಸಾಗಿದ್ದ ಸಿಜೋಮ್ ತಮಗೆ ಅರಿವಿಲ್ಲದೆ ತಮ್ಮ ಮೊಬೈಲ್ ಬೀಳಿಸಿ ಕೊಂಡಿದ್ದರು. ಅವರನ್ನು ಸಂಪರ್ಕಿಸಿದ ಕಾನ್ಸ್‌ಟೇಬಲ್ ರಾಘವೇಂದ್ರ ಅವರು ಪೊಲೀಸ್ ಠಾಣೆಗೆ ಬಂದು ಮೊಬೈಲ್ ಪಡೆಯುವಂತೆ ಸೂಚಿಸಿದ್ದಾರೆ. ಅದರಂತೆ ಸಿಜೋಮ್ ಠಾಣೆಗೆ ದೌಡಾಯಿಸಿದ್ದಾರೆ. ಠಾಣೆಯಲ್ಲಿ ಕಾನ್ಸ್‌ಟೇಬಲ್ ರಾಘವೇಂದ್ರ ಮೊಬೈಲ್ ಹಿಂದಿರುಗಿಸಿದ್ದಾರೆ. ರಾಘವೇಂದ್ರ ಅವರ ಪ್ರಾಮಾಣಿಕತೆಗೆ ಗೋಣಿಕೊಪ್ಪ ಠಾಣೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಂಶಿಸಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ