ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂಪಾಯಿ ಠಾಣೆಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್ ಸಿಬ್ಬಂದಿ
ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂಪಾಯಿ ಇದ್ದ ಬ್ಯಾಗ್ ಅನ್ನು ಪೊಲೀಸ್ ಠಾಣೆಗೆ ಹಸ್ತಾಂತರಿಸಿ ಛತ್ತೀಸ್‌ಗಢದ ಪೊಲೀಸ್ ಸಿಬ್ಬಂದಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ಇವರ ಪ್ರಾಮಾಣಿಕತೆಯನ್ನು ಮೆಚ್ಚಿ ಪೊಲೀಸ್ ಇಲಾಖೆ ಬಹುಮಾನ ಘೋಷಿಸಿದೆ. ಹಣದ ಮೂಲದ ತನಿಖೆಯನ್ನು ನಡೆಸಲಾಗುತ್ತಿದೆ.
ಟ್ರೆಂಡಿಂಗ್ : ರಸ್ತೆಯಲ್ಲಿ ನಡೆದುಕೊಂಡು ಹೋಗುವಾದ 10ರೂಪಾಯಿಯೋ ಅಥವಾ 100 ರೂಪಾಯಿ ಸಿಕ್ಕರೆ ತಮ್ಮ ಜೇಬಿಗೆ ಹಾಕಿಕೊಳ್ಳುವ ಈ ಸಮಾಜದಲ್ಲಿ ಒಂದಷ್ಟು ಪ್ರಾಮಾಣಿಕ ವ್ಯಕ್ತಿಗಳನ್ನು ಕೂಡ ಕಾಣುತ್ತೇವೆ. ಇಂತಹ ವ್ಯಕ್ತಿಗಳು ಕಂಡವರ ದುಡ್ಡು ನಮಗ್ಯಾಕೆ ಎಂದು ಹೇಳಿ ಹಣವನ್ನು ಸಂಬಂಧಪಟ್ಟ ವ್ಯಕ್ತಿಗಳಿಗೆ ನೀಡುವಷ್ಟು ಉದಾರ ಮನಸ್ಸನ್ನು ಹೊಂದಿರುತ್ತಾರೆ. ಇದಕ್ಕೆ ಹಲವಾರು ನಿದರ್ಶನಗಳನ್ನು ಕಾಣಬಹುದು. ಇಲ್ಲೊಬ್ಬ ಪೊಲೀಸ್ ಮನಸು ಮಾಡಿದರೆ ರಸ್ತೆಯಲ್ಲಿ ಸಿಕ್ಕ ಹಣದಲ್ಲಿ ಐಷಾರಾಮಿ ಕಾರು ಅಥವಾ ಸಣ್ಣ ಆಸ್ತಿಯನ್ನು ಖರೀದಿಸಬಹುದಿತ್ತು. ಆದರೆ ಇವರಲ್ಲಿನ ಒಳ್ಳೆಯ ಮನಸ್ಸು ಹಾಗೂ ಮನುಷ್ಯತ್ವ ಇದ್ದಿದ್ದರಿಂದ ತಮಗೆ ಸಿಕ್ಕ ಲಕ್ಷಾಂತರ ರೂಪಾಯಿ ಹಣವನ್ನು ಠಾಣೆಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.
ಛತ್ತೀಸ್‌ಗಢದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೊಬ್ಬರು ರಸ್ತೆಯಲ್ಲಿ ನಡೆದುಕೊಂಡ ಹೋಗುತ್ತಿದ್ದಾ 45 ಲಕ್ಷ ರೂಪಾಯಿ ಉಳ್ಳ ಬ್ಯಾಗ್ ಸಿಕ್ಕಿದೆ. ಈ ಬ್ಯಾಗ್ ಅನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದು, ಇವರ ಪ್ರಾಮಾಣಿಕತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಯೊಬ್ಬರು, ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಶನಿವಾರ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು 45 ಲಕ್ಷ ಇರುವ ಬ್ಯಾಗನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆಯನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದ್ದಾರೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಖನಂದನ್ ರಾಥೋರ್ ಮಾತನಾಡಿ, ನವ ರಾಯ್‌ಪುರದ ಕಯಾಬಂಧ ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಟ್ರಾಫಿಕ್ ಕಾನ್‌ಸ್ಟೆಬಲ್ ನಿಲಂಬರ್ ಸಿನ್ಹಾ ಅವರು ಬೆಳಿಗ್ಗೆ ಮಾನಾ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಯೊಂದರಲ್ಲಿ ಬ್ಯಾಗ್ ಅನ್ನು ಕಂಡುಕೊಂಡಿದ್ದಾರೆ. ಬ್ಯಾಗ್ ಪರಿಶೀಲಿಸಿದಾಗ ಅದರೊಳಗೆ 2000 ಮತ್ತು 500 ರೂ. ನೋಟುಗಳ ಕಂತೆ ಕಂಡುಬಂದಿದೆ. ಈ ಬ್ಯಾಗ್ನಲ್ಲಿ ಒಟ್ಟು 45 ಲಕ್ಷ ರೂಪಾಯಿ ಪತ್ತೆಯಾಗಿದ್ದು, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಿವಿಲ್ ಲೈನ್ಸ್ ಠಾಣೆಗೆ ಬ್ಯಾಗ್ ಅನ್ನು ಹಸ್ತಾಂತರಿಸಿದ್ದಾರೆ ಎಂದರು.
ಸದ್ಯ ಪೊಲೀಸ್ ಸಿಬ್ಬಂದಿಯ ಮಾನವೀಯ ಹಾಗೂ ಪ್ರಾಮಾಣಿಕತೆಯನ್ನು ಮೆಚ್ಚಿದ ಪೊಲೀಸ್ ಇಲಾಖೆ ನಿಲಂಬರ್ ಸಿನ್ಹಾ ಅವರಿಗೆ ಬಹುಮಾನವನ್ನು ಘೋಷಿಸಿದ್ದಾರೆ. ಅಲ್ಲದೆ ಪತ್ತೆಯಾದ ಹಣ ಯಾರಿಗೆ ಸೇರಿದ್ದು ಎಂಬ ತನಿಖೆಯನ್ನು ಪೊಲೀಸರು ಆರಂಭಿಸಿದ್ದಾರೆ.