ಮೈಸೂರು: ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಮೂವರು ಅಧಿಕಾರಿಗಳ ಮನೆ ಹಾಗೂ ಕಚೇರಿಗಳು ಸೇರಿದಂತೆ ಒಟ್ಟು 7 ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಎಡಿಜಿಪಿ ಪ್ರಶಾಂತ್ ಕುಮಾರ್ ಹಾಗೂ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಡಿಎಸ್‌ಪಿಗಳಾದ ಕೃಷ್ಣಯ್ಯ ಮಾಲ್ತೀಶ್, ಪವನ್ ಕುಮಾರ್, ಎಸ್ಟಿ ಒಡೆಯರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಮೈಸೂರಿನ ಕೆ.ಸಿ.ಬಡಾವಣೆ ನಿವಾಸಿಯಾಗಿರುವ ಮಡಿಕೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪಿಡಬ್ಲ್ಯುಡಿ ಇಲಾಖೆ ಇಇ ಡಿ.ನಾಗರಾಜು ಅವರಿಗೆ ಸೇರಿದ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಮನೆಯನ್ನು ಜಾಲಾಡಿದ ಅಧಿಕಾರಿಗಳು ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.
ಇನ್ನು ನೀರಾವರಿ ಇಲಾಖೆಯ ಜ್ಯೂನಿಯರ್ ಇಂಜಿನಿಯರ್ ಆಗಿರುವ ರಫೀಕ್ ಅವರಿಗೆ ಕುಶಾಲನಗರದಲ್ಲಿರುವ ಮನೆಗೂ ಅಧಿಕಾರಿಗಳು ಎಂಟ್ರಿ ಕೊಟ್ಟು ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ಇದೇ ವೇಳೆ ಮತ್ತೊಂದು ತಂಡ ಮಾದಾಪಟ್ಟಣದಲ್ಲಿರುವ ರಾಜ್ಯ ಗುಪ್ತವಾರ್ತೆ ಪೊಲೀಸ್ ಇನ್ಸ್ಪೆಕ್ಟರ್ ಎಂ.ಮಹೇಶ್ ಅವರಿಗೆ ಸೇರಿದ ಮನೆಯ ಮೇಲೂ ದಾಳಿ ನಡೆಸಿದೆ.
ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಎಇ
ಬೆಂಗಳೂರು: ಲಂಚ ಸ್ವೀಕರಿಸುತ್ತಿದ್ದ ಬೆಸ್ಕಾಂ ಎಇ ನಾಗರಾಜ್ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಬಿಳೇಕಹಳ್ಳಿಯ ಬೆಸ್ಕಾಂ ಇಲಾಖೆ ಎಇ ಆಗಿರುವ ನಾಗರಾಜ್, ಮಂಜೂರಾದ ಕೆಲಸಕ್ಕೆ ಎಕ್ಸಿಕ್ಯೂಟ್ಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ. ಅದರಂತೆ ಆರ್ಆರ್ ನಗರ ಮನೆ ಹತ್ತಿರ ಹಣ ಸಂಬಂಧಪಟ್ಟ ಗುತ್ತಿಗೆದಾರನ ಬಳಿಯಿಂದ 50 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಿದ ಅಧಿಕಾರಿಗಳು ನಾಗರಾಜ್ನನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಎಸ್ಪಿ ಅಶೋಕ್ ನೇತೃತ್ವದ ತಂಡದಿಂದ ಈ ದಾಳಿ ನಡೆದಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:42 pm, Fri, 21 October 22