ಪ್ರಯಾಣಿಕರ ಹಣ ಕದ್ದು ಪರಾರಿಯಾಗುತ್ತಿದ್ದ ಕಳ್ಳಿಯನ್ನು ಹಿಡಿದ ಆಟೋ ಚಾಲಕ: ಆರೋಪಿಯನ್ನ ಚೇಸ್​ ಮಾಡಿದ್ದೇ ರೋಚಕ

|

Updated on: Dec 12, 2023 | 11:26 AM

ಬಿಎಂಟಿಸಿ ಬಸ್​​ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ 11 ಸಾವಿರ ರೂ.ಗಳನ್ನು ಕದ್ದು ಪರಾರಿಯಾಗುತ್ತಿದ್ದ ಕಳ್ಳಿಯನ್ನು 37 ವರ್ಷದ ಆಟೊರಿಕ್ಷಾ ಚಾಲಕರೊಬ್ಬರ ಸಹಾಯದಿಂದ ಹಿಡಿಯಲಾಗಿದೆ. ಯಲಹಂಕ ನಿವಾಸಿ ಕವಿತಾ ಎಂ (33) ಬಿಎಂಟಿಸಿ ಮಹಿಳಾ ಪ್ರಯಾಣಿಕರೊಬ್ಬರ 11 ಸಾವಿರ ರೂ.ಗಳನ್ನು ಕದ್ದು ಪರಾರಿಯಾಗುತ್ತಿದ್ದಳು. ಮುಂದೇನಾಯ್ತು ಈ ಸ್ಟೋರಿ ಓದಿ

ಪ್ರಯಾಣಿಕರ ಹಣ ಕದ್ದು ಪರಾರಿಯಾಗುತ್ತಿದ್ದ ಕಳ್ಳಿಯನ್ನು ಹಿಡಿದ ಆಟೋ ಚಾಲಕ: ಆರೋಪಿಯನ್ನ ಚೇಸ್​ ಮಾಡಿದ್ದೇ ರೋಚಕ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಡಿಸೆಂಬರ್​​ 12: ಬಿಎಂಟಿಸಿ (BMTC) ಬಸ್​​ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ (Woman) 11 ಸಾವಿರ ರೂ.ಗಳನ್ನು ಕದ್ದು ಪರಾರಿಯಾಗುತ್ತಿದ್ದ ಕಳ್ಳಿಯನ್ನು (Cactus) 37 ವರ್ಷದ ಆಟೊರಿಕ್ಷಾ (Auto) ಚಾಲಕರೊಬ್ಬರ ಸಹಾಯದಿಂದ ಹಿಡಿಯಲಾಗಿದೆ. ಯಲಹಂಕ ನಿವಾಸಿ ಕವಿತಾ ಎಂ (33) ಬಿಎಂಟಿಸಿ ಮಹಿಳಾ ಪ್ರಯಾಣಿಕರೊಬ್ಬರ 11 ಸಾವಿರ ರೂ.ಗಳನ್ನು ಕದ್ದು ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಪರಾರಿಯಾಗಲು ಯತ್ನಿಸುತ್ತಿದ್ದಾಗ ತಿಲಕ್ ನಗರದ ನಿವಾಸಿ, ಆಟೋ ಚಾಲಕ ಯೂಸುಫ್ ಅವರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಆಟೋ ಚಾಲಕ ಯೂಸುಫ್ ಸಿಲ್ಕ್ ಬೋರ್ಡ್ ಜಂಕ್ಷನ್ ಬಸ್ ನಿಲ್ದಾಣದ ಬಳಿ ಪ್ರಯಾಣಿಕರಿಗಾಗಿ ಕಾಯುತ್ತಿದ್ದರು. ಈ ವೇಳೆ ಯೂಸುಫ್ ಅವರ ಬಳಿ ಬಂದ ಓರ್ವ ಮಹಿಳೆ “ನೀವು (ಯೂಸುಫ್​) ಕಪ್ಪು ಸ್ಕಾರ್ಫ್‌ನಿಂದ ಮುಖವನ್ನು ಮುಚ್ಚಿದ ಮತ್ತು ಅವಸರವಾಗಿ ಹೋಗುತ್ತಿರುವ ಮಹಿಳೆಯನ್ನು ನೋಡಿದ್ದೀರಾ?” ಎಂದು ಪ್ರಶ್ನಿಸಿದ್ದಾರೆ. ಆಗ ಯಸುಫ್​ ಹೌದು ನೋಡಿದ್ದೇನೆ. ಕೆಲ ನಿಮಿಷಗಳ ಹಿಂದೆ ಇಲ್ಲಿಯೇ ಹಾದು ಹೋದರು. ನಾನು ಆಟೋ ಬೇಕಾ ಎಂದು ಕೇಳಿದೆ. ಆದರೆ ಮಹಿಳೆ ಉತ್ತರಿಸದೆ ರೂಪೇನಾ ಅಗ್ರಹಾರದ ಕಡೆಗೆ ಹೊರಟು ಹೋದಳು ಎಂದು ಯೂಸುಫ್ ಹೇಳಿದರು.

ಹಾ, ಕಪ್ಪು ಸ್ಕಾರ್ಪ್​​ನಿಂದ ಮುಖ ಮುಚ್ಚಿಕೊಂಡ ಹೋದ ಮಹಿಳೆ ನನ್ನ ಹಣವನ್ನು ಕದ್ದಿದ್ದಾಳೆ ಎಂದು ಯುಸೂಫ್ ಅವರಿಗೆ ಹಣ ಕಳೆದುಕೊಂಡ ಮಹಿಳೆ ಹೇಳಿದರು.​ ಆಗ ಯುಸೂಫ್​ ತಕ್ಷಣ ಹಣ ಕಳೆದುಕೊಂಡ ಮಹಿಳೆಯನ್ನು ತಮ್ಮ ಆಟೋರಿಕ್ಷಾದಲ್ಲಿ ಕೂರಿಸಿಕೊಂಡು ಆರೋಪಿ ಕವಿತಾಳನ್ನು ಹುಡುಕಿಕೊಂಡು ಹೋದರು. ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಸುಮಾರು 800 ಮೀಟರ್ ದೂರದಲ್ಲಿರುವ ರೂಪನ ಅಗ್ರಹಾರ ಬಸ್ ನಿಲ್ದಾಣದ ಬಳಿ ಹೋಗುತ್ತಿದ್ದಾಗ ಆರೋಪಿ ಕವಿತಾ ಕಂಡಳು.

ಆರೋಪಿ ಕವಿತಾ ಇವರನ್ನು ಯುಸೂಫ್ ಮತ್ತು ಮಹಿಳೆಯನ್ನು ಕಂಡ ಕೂಡಲೇ ಓಡಲು ಪ್ರಾರಂಭಿಸಿದಳು. ಕೂಡಲೆ ಆಟೋ ಚಾಲಕ ಹಿಂಬಾಲಿಸಿ ಕಳ್ಳಿಯನ್ನು ಹಿಡಿದರು. ನಂತರ ಆಕೆಯ ಬಳಿ ಇದ್ದ ಬ್ಯಾಗ್​ ಅನ್ನು ತೋರಿಸುವಂತೆ ಯುಸೂಫ್​ ಹೇಳಿದರು. ಆದರೆ ಆರೋಪಿ ಕವಿತಾ ಕಿರುಚಾಡಲು ಶುರುಮಾಡಿದಳು. ಮತ್ತು ಬ್ಯಾಗ್​ ಅನ್ನು ತೋರಿಸಲು ನಿರಾಕರಿಸಿದಳು.

ಇದನ್ನೂ ಓದಿ: ಚಿತ್ರದುರ್ಗ: ಚಿನ್ನ ಖರೀದಿಸುವ ಸೋಗಿನಲ್ಲಿ ಬಾಲಕನ ಜೊತೆ ಬಂದು ಕಳ್ಳಿಯ ಕೈಚಳಕ, ವಿಡಿಯೋ ವೈರಲ್

ಆಗ ಯುಸೂಫ್​ ಮತ್ತು ಮಹಿಳೆ ಆರೋಪಿ ಕವಿತಾಳ ಬ್ಯಾಗ್ ಅನ್ನು ಬಲವಂತವಾಗಿ ತೆಗೆದುಕೊಳ್ಳಲು ಪ್ರಯತ್ನಿಸಿದಾಗ, ಕಳ್ಳಿ ಜೋರಾಗಿ ಗಲಾಟೆ ಮಾಡಿದಳು. ಹೀಗೆ ಕೆಲವು ನಿಮಿಷಗಳ ಕಾಲ ಹೈಡ್ರಾಮಾ ನಡೆಯಿತು. ಕೊನೆಗೂ ಯುಸೂಫ್​ ಮತ್ತು ಮಹಿಳೆ ಕಳ್ಳಿಯ ಬ್ಯಾಗ್ ಅನ್ನು ಪರಿಶೀಲಿಸಿದಾಗ ಅದರಲ್ಲಿ 11,000 ರೂ. ಇತ್ತು.

ಮಹಿಳೆ ಹಣ ಎಣಿಸುತ್ತಿದ್ದಾಗ ಆರೋಪಿ ಕವಿತಾ, ಯೂಸುಫ್ ಅವರ ಮೊಬೈಲ್ ಫೋನ್ ಅನ್ನು ಕದಿಯಲು ಮಾಡಲು ಪ್ರಯತ್ನಿಸಿದಳು. ಸ್ಥಳದಲ್ಲಿ ಜಮಾಯಿಸಿದ ಕೆಲವು ಆಟೋ ಚಾಲಕರು ಈ ಬಗ್ಗೆ ಯೂಸುಫ್ ಅವರಿಗೆ ಎಚ್ಚರಿಕೆ ನೀಡಿದರು. ನಂತರ ಉದ್ರಿಕ್ತ ಗುಂಪು ಕವಿತಾ ಮೇಲೆ ಹಲ್ಲೆ ಮಾಡಲು ಯತ್ನಿಸಿತು, ಆದರೆ ಯೂಸುಫ್ ಅವರನ್ನು ತಡೆದು ಆಕೆಯನ್ನು ಪೊಲೀಸರಿಗೆ ಒಪ್ಪಿಸುವಂತೆ ಸೂಚಿಸಿದರು.

ಆದಾಗ್ಯೂ, ಹಣವನ್ನು ಕಳೆದುಕೊಂಡ ಮಹಿಳೆ ತುರ್ತಾಗಿ ಆಸ್ಪತ್ರೆಗೆ ಹೋಗಬೇಕಿದ್ದರಿಂದ ಪೊಲೀಸ್ ಠಾಣೆಗೆ ಹೋಗಲು ನಿರಾಕರಿಸಿದರು. ಆಗ ಆಟೋ ಚಾಲಕ ಯುಸೂಫ್​ ಮತ್ತೊಬ್ಬ ಆಟೋರಿಕ್ಷಾ ಚಾಲಕನ ಸಹಾಯದಿಂದ ಆರೋಪಿ ಕವಿತಾಳನ್ನು ಠಾಣೆಗೆ ಕರೆದುಕೊಂಡು ಹೋದರು. ಪೊಲೀಸ್ ಠಾಣೆಯಲ್ಲೂ ಆರೋಪಿ ಕವಿತಾ ಗಲಾಟೆ ಮಾಡಿದಳು. ಕವಿತಾ ವಿರುದ್ಧ ಯಾವುದೇ ಪ್ರಕರಣಗಳಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:26 am, Tue, 12 December 23