ಬೆಂಗಳೂರು : ಪಿಸ್ತೂಲ್ ಡೀಲರ್ ಆಗಿ (Pistol) ಕೆಲಸ ಮಾಡುತ್ತಿದ್ದ ರೌಡಿ ಆಸಾಮಿಗಳನ್ನು ಬೆಂಗಳೂರು ಸಿಸಿಬಿ ಪೊಲೀಸರು (Bangalore CCB) ಬಂಧಿಸಿದ್ದಾರೆ. ಬಂಧಿತರಿಂದ ಒಂದು ನಾಡ ಪಿಸ್ತೂಲ್ ಹಾಗೂ ನಾಲ್ಕು ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಮಹಮ್ಮದ್ ಅರಾಫತ್ ಹಾಗೂ ಮಹಮ್ಮದ್ ಸಾದತ್ ಬಂಧಿತ (Rowdy Sheeter) ಆರೋಪಿಗಳು. ಹಲವು ವರ್ಷಗಳಿಂದ ಈ ಆಸಾಮಿಗಳು ದಂಧೆಯಲ್ಲಿ ತೊಡಗಿದ್ದು ರೌಡಿಗಳು ಸೇರಿದಂತೆ ಭೂಗತ ನಂಟಿರುವ ವ್ಯಕ್ತಿಗಳಿಗೆ ಅಕ್ರಮವಾಗಿ ಪಿಸ್ತೂಲ್, ರಿವಾಲ್ವರ್ ಸೇರಿದಂತೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿರುವುದರ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.
ಏರಿಯಾದಲ್ಲಿ ಹವಾ, ಕಂಡ ಕಂಡಲ್ಲಿ ರಾಬರಿ ಮಾಡಲು ಪಿಸ್ತೂಲ್ ಬಳಕೆ!
ಈ ರೌಡಿಗಳು ಕಂಡ ಕಂಡಲ್ಲಿ ರಾಬರಿ ಮಾಡಲು ಮತ್ತು ನನ್ನ ಬಳಿಯೂ ಪಿಸ್ತೂಲ್ ಇದೆ ಎಂದು ತೋರಿಸಿಕೊಂಡು ಹವಾ ಇಡಲು ಪಿಸ್ತೂಲ್ ಖರೀದಿಸುತ್ತಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಅಷ್ಟೇ ಅಲ್ಲದೇ ಬೇರೆ ಬೇರೆ ರೌಡಿಗಳಿಗೂ ಪಿಸ್ತೂಲ್ ಮಾರಾಟ ಮಾಡುತ್ತಿದ್ದ, ಪಿಸ್ತೂಲ್ ಖರೀದಿಸಿದ ರೌಡಿಗಳು ಕೂಡ ಸಮಾಜಘಾತುಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಅನ್ನೋದು ತನಿಖೆ ವೇಳೆ ಗೊತ್ತಾಗಿದೆ.
ಮುಂಬೈ ಟು ಬೆಂಗಳೂರು ಪಿಸ್ತೂಲ್ ಹೇಗೆ ಬರ್ತಿತ್ತು?
The CCB apprehended 02 rowdy sheeters of Hennur PS, who use to buy pistols from Mumbai and sell them in R T Nagar PS limits. Seized one country pistol and 04 live bullets from the accused. pic.twitter.com/pZmSIHixhD
— Raman Gupta IPS, Joint CP Crime (@CCBBangalore) November 8, 2022
ಪಿಸ್ತೂಲ್ ಮಾರಾಟಕ್ಕೆಂದೇ ಮುಂಬೈನಲ್ಲಿ ಹಲವು ತಂಡಗಳು ಆ್ಯಕ್ಟಿವ್ ಆಗಿವೆ. ಅಂಡರ್ ವರ್ಲ್ಡ್ ಚಟುವಟಿಕೆಗೆ ಹೆಚ್ಚಿನ ಶಸ್ತ್ರಾಸ್ತ್ರಗಳು ಪೂರೈಕೆ ಆಗೋದೇ ಈ ಮಹಾನಗರಿಯಿಂದ. ಭೂಗತ ಲೋಕದ ದೊರೆಗಳಿಗೆ ಈ ಮುಂಬೈ ಅಂದರೆ ಪಂಚಪ್ರಾಣ! ಯಾಕೆಂದರೆ ತಮಗೆ ಬೇಕಾಗುವ ಎಲ್ಲಾ ಮಾದರಿಯ ಪಿಸ್ತೂಲ್ ಗಳು ಇಲ್ಲಿ ಸಿಗುತ್ತವೆ. ಅದೇ ರೀತಿಯಾಗಿ ಮಹಮ್ಮದ್ ಅರಾಫತ್ ಹಾಗೂ ಮಹಮ್ಮದ್ ಸಾದತ್ ಮುಂಬೈನ ಅದೊಂದು ಟೀಂ ಜೊತೆ ಸಂಪರ್ಕ ಮಾಡುತ್ತಾರೆ. ಅವರಿಗೆ ಪಿಸ್ತೂಲ್ ಆರ್ಡರ್ ಮಾಡಿ, ಅದನ್ನು ಬೆಂಗಳೂರಿಗೆ ತರಿಸಿಕೊಳ್ತಿದ್ದರು. ಇಲ್ಲಿ ರೌಡಿ ಆಸಾಮಿ ಸೇರಿದಂತೆ ಬೇಕಾದವರಿಗೆ ಅದನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು.
ಕಡಿಮೆ ಬೆಲೆಗೆ ಪಿಸ್ತೂಲ್ ಖರೀದಿ, ದುಬಾರಿ ಬೆಲೆಗೆ ಮಾರಾಟ:
ಈ ಆರೋಪಿಗಳು ಮುಂಬೈನಲ್ಲಿ 10 ರಿಂದ 12 ಸಾವಿರಕ್ಕೆ ಪಿಸ್ತೂಲ್ ಖರೀದಿ ಮಾಡುತ್ತಿದ್ದರು. ಅದನ್ನು ಮುಂಬೈನಿಂದ ಬೆಂಗಳೂರಿಗೆ ಬಸ್ ಮೂಲಕ ತೆಗೆದುಕೊಂಡು ಬರುತ್ತಿದ್ದರು. ಯಾಕೆಂದರೆ ವಿಮಾನ ಅಥವಾ ರೈಲಿನ ಮೂಲಕ ಬಂದರೆ ಮೆಟಲ್ ಡಿಟೆಕ್ಟರ್ ಗಳು ಇರುತ್ತವೆ ಎಂಬುದು ಅವರ ಲೆಕ್ಕಾಚಾರ. ಜೊತೆಗೆ ತಪಾಸಣೆ ಕೂಡ ತೀವ್ರವಾಗಿರುತ್ತೆ. ಹಾಗಾಗಿ ಸಿಕ್ಕಿಹಾಕಿಕೊಳ್ಳೋ ಭೀತಿಯಿಂದ ಈ ಉಪಾಯ ಕಂಡುಕೊಂಡಿದ್ದರು.
ಬಸ್ ಮೂಲಕ ಬಂದರೆ ಹೆಚ್ಚಿನ ತಪಾಸಣೆ ಕೂಡ ಇರುವುದಿಲ್ಲ. ಇದೇ ಅವರಿಗೆ ವರದಾನವಾಗಿ ಪರಿಣಮಿಸಿತ್ತು. ಹೀಗೆ ಬಸ್ ನಲ್ಲಿ ಬೆಂಗಳೂರಿಗೆ ನಾಡ ಪಿಸ್ತೂಲ್ ತಂದವರನ್ನು ಬೆಂಗಳೂರಿನ ಟೀಂ ಕಾರು ಹಾಗೂ ಬೈಕ್ ನ ಮೂಲಕ ಕರೆದುಕೊಂಡು ಹೋಗುತ್ತಿದ್ದರು.
ಇದೇ ರೀತಿಯಾಗಿ ನಾಡ ಪಿಸ್ತೂಲ್ ಅನ್ನು ರೌಡಿ ಆಸಾಮಿಗಳು ಅಕ್ರಮವಾಗಿ ತಂದು ಇಲ್ಲಿನ ರೌಡಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಆರ್ ಟಿ ನಗರ ಬಳಿ ಕಾಯುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆ, ಸ್ಥಳಕ್ಕೆ ಧಾವಿಸಿದ ಸಿಸಿಬಿಯ ಸಂಘಟಿತ ಅಪರಾಧ ದಳ, ಇನ್ಸ್ ಪೆಕ್ಟರ್ ರಹೀಮ್, ಎಎಸ್ಐ ನಾಸೀರ್, ಇಬ್ಬರು ಸಿಬ್ಬಂದಿ ಆರೋಪಿಗಳನ್ನ ಬಂಧಿಸಿ ಒಂದು ಪಿಸ್ತೂಲ್ ಹಾಗು ನಾಲ್ಕು ಗುಂಡುಗಳನ್ನ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಮತ್ಯಾರಿಗೆಲ್ಲ ಇವರು ಮಾರಾಟ ಮಾಡಿದ್ದಾರೆ ಅನ್ನೋದರ ಪತ್ತೆಗೆ ಮುಂದಾಗಿದ್ದಾರೆ. (ವರದಿ: ರಾಚಪ್ಪ, ಟಿವಿ9, ಬೆಂಗಳೂರು)
Published On - 4:18 pm, Thu, 10 November 22