ಬೆಂಗಳೂರು: ಕೆಮ್ಮಿನ ಸಿರಪ್ ಅನ್ನು ನಿಷೇಧಿತ ಮಾದಕ ವಸ್ತುಗಳೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ಪೊಲೀಸರು, ಕಾರ್ಯಾಚರಣೆ ನಡೆಸಿ ಓರ್ವ ಆರೋಪಿಯ ಸಹಿತ 300ಕ್ಕೂ ಹೆಚ್ಚು ಇಎಸ್ಕೆಯುಎಫ್ ಬಾಟಲಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, 356 ಬಾಟಲಿಗಳು ಮತ್ತು ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಕೆಮ್ಮಿನ ಸಿರಫ್ ದಂಧೆಯಲ್ಲಿ ತೊಡಗಿದ್ದ ಅಮನ್ ಉಲ್ಲಾ ಅಲಿಯಾಸ್ ಅಮೀರ್ ಪಾಷಾ ಎಂಬ ಆರೊಪಿಯನ್ನು ಜಯನಗರ ಪೊಲೀಸ್ ವ್ಯಾಪ್ತಿಯಲ್ಲಿ ಸೆರೆಹಿಡಿಯಲಾಗಿದೆ.
ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಪಿ.ಕೃಷ್ಣಕಾಂತ್ ಈ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, “ಮಾದಕ ದ್ರವ್ಯ ಇಎಸ್ಕೆಯುಎಫ್ (ಕೆಮ್ಮಿನ ಸಿರಪ್) ಅನ್ನು ಮಾರಾಟ ಮಾಡುತ್ತಿದ್ದ ಅಮನ್ ಉಲ್ಲಾ @ ಅಮೀರ್ ಪಾಷಾ ಎಂಬಾತನನ್ನು ಜೆಪಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. 356 ಇಎಸ್ಕೆಯುಎಫ್ ಬಾಟಲಿಗಳು ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ” ಎಂದಿದ್ದಾರೆ.
ಇಎಸ್ಕೆಯುಎಫ್ ಕೆಮ್ಮಿನ ಸಿರಪ್ ಅನ್ನು ಸರಿಯಾದ ವೈದ್ಯಕೀಯ ಸಲಹೆ ಮೇರೆಗೆ ಮಾತ್ರ ಮಾರಾಟ ಮಾಡಬಹುದು. ಇಂತಹ ಔಷದವನ್ನು ನಿಷೇಧಿತ ಮಾದಕ ವಸ್ತುಗಳೊಂದಿಗೆ ಮಿಶ್ರಣ ಮಾಡುವ ಮೂಲಕ ಈ ಔಷಧವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಆದರೆ ಅನೇಕ ಔಷಧ ವಿತರಕರು ಅದನ್ನು ಮಾದಕ ವ್ಯಸನಿಗಳಿಗೆ ಮಾರಾಟ ಮಾಡಲು ಇಎಸ್ಕೆಯುಎಫ್ ಸಿರಪ್ ಸಂಗ್ರಹಿಸಿಡುತ್ತಾರೆ.
ಇದಕ್ಕೂ ಮುನ್ನ ಕರ್ನಾಟಕ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ಅವರು ಡ್ರಗ್ಸ್ ಬಳಕೆಯನ್ನು ತಡೆಯಲು ರಾಜ್ಯದಲ್ಲಿ ‘ಆಪರೇಷನ್ ನಾರ್ಕೋಸ್’ ಅನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು. “ಆರ್ಪಿಎಸ್ ಮತ್ತು ಕರ್ನಾಟಕ ರೈಲ್ವೆ ಪೊಲೀಸರು ಆಪರೇಷನ್ ನಾರ್ಕೋಸ್ ಅಡಿಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಕಳೆದ 30 ದಿನಗಳಲ್ಲಿ 24 ಕೆಜಿಗೂ ಹೆಚ್ಚು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ ಮತ್ತು 9 ಆರೋಪಿಗಳನ್ನು ಬಂಧಿಸಿದ್ದಾರೆ. ಡ್ರಗ್ ಪೆಡ್ಲಿಂಗ್ ಮತ್ತು ಕಳ್ಳಸಾಗಣೆಯಂತಹ ಚಟುವಟಿಕೆಗಳನ್ನು ನಿಯಂತ್ರಿಸಲು ಇಂತಹ ಜಂಟಿ ಕಾರ್ಯಾಚರಣೆಗಳು ಮುಂದುವರೆಯುತ್ತವೆ” ಎಂದು ಅವರು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಸೆಪ್ಟೆಂಬರ್ನಲ್ಲಿ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿಗಳು ನಗರದ ಡ್ರಗ್ ಪೆಡ್ಲರ್ಗೆ ಸೇರಿದ 1.6 ಕೋಟಿ ರೂ.ಗಳ ಆಸ್ತಿಯನ್ನು ವಶಪಡಿಸಿಕೊಂಡಿದ್ದರು. ಡ್ರಗ್ಸ್ ಪೆಡ್ಲಿಂಗ್ ಮತ್ತು ಸೇವನೆಯನ್ನು ರಾಜ್ಯದಲ್ಲಿ ಸಹಿಸಲಾಗುವುದಿಲ್ಲ ಎಂದು ಕರ್ನಾಟಕ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:59 pm, Sun, 9 October 22