ಮೈಸೂರು, (ಆಗಸ್ಟ್ 31): ಬೆಂಗಳೂರು ಮೂಲದ ಟಿಕ್ ಟಾಕ್ ಸ್ಟಾರ್ (tiktok ) ನವೀನ್ ಅಪಹರಣ, ಕೊಲೆ ಪ್ರಕರಣವನ್ನು ಮೈಸೂರಿನ ನಂಜನಗೂಡು ಪೊಲೀಸರು ಬೇಧಿಸಿದ್ದಾರೆ. ನವೀನ್ ಕೊಲೆ ಸಂಬಂಧ ಎಂಟು ಜನ ಆರೋಪಿಗಳನ್ನ ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ. ಬೆಂಗಳೂರಿನ ಮಾಜಿ ಕಾರ್ಪೋರೆಟರ್ ಅಣ್ಣನ ಮಗನ ಕೊಲೆ ಸೇಡಿಗಾಗಿ ನವೀನ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹೌದು…ಈ ಹಿಂದೆ ಬೆಂಗಳೂರಿನ ಕಗ್ಗಲಿಪುರ ವ್ಯಾಪ್ತಿಯಲ್ಲಿ ನಡೆದಿದ್ದ ವಿನೋದ್ ಎಂಬುವವರ ಕೊಲೆ ಪ್ರಕರಣದಲ್ಲಿ ನವೀನ್ ಜೈಲಿಗೆ ಹೋಗಿ ಬಂದಿದ್ದ. ಬಳಿಕ ಟಿಕ್ ಟಾಕ್ ಮಾಡುತ್ತಿದ್ದರಿಂದ ನವೀನ್ ಟಿಕ್ ಟಾಕ್ ಸ್ಟಾರ್ ಎಂದೆ ಗುರುತಿಸಿಕೊಂಡಿದ್ದ. ಹೀಗಾಗಿ ಆ ಕೊಲೆ ಸೇಡಿಗಾಗಿ ನವೀನ್ ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಸಿಕ್ಕಿದ್ದು, ಈ ಬಗ್ಗೆ ನಂಜನಗೂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ನಡುರಸ್ತೆಯಲ್ಲೇ ಯುವಕನ ಬರ್ಬರ ಕೊಲೆ, ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯಾವಳಿ ಸೆರೆ
ಇದೇ ತಿಂಗಳು ಇದೇ ಆಗಸ್ಟ್ 27ರಂದು ಟಿಕ್ ಟಾಕ್ ಸ್ಟಾರ್ ನವೀನ್ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ್ದ. ಇಬ್ಬರು ಯುವತಿಯರ ಜೊತೆ ಮೈಸೂರಿಗೆ ಆಗಮಿಸಿ ಅರಮನೆ ಮುಂದೆ ರೀಲ್ಸ್ ಮಾಡುತ್ತಿದ್ದ ವೇಳೆ ದುಷ್ಕರ್ಮಿಗಳು ರಾತ್ರಿ 9.45ರ ಸಮಯದಲ್ಲಿ ಕಾರಿನಲ್ಲಿ ಬಂದು ಅಪಹರಣ ಮಾಡಿಕೊಂಡು ಹೋಗಿದ್ದರು. ಬಳಿಕ ನಂಜನಗೂಡಿನ ಗೋಳೂರಿನ ನಾಲೆಯಲ್ಲಿ ಶವ ಪತ್ತೆಯಾಗಿತ್ತು. ಅಪರಿಚಿತ ವ್ಯಕ್ತಿಯ ಕೊಲೆ ಎಂದು ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ನಷ್ಟು ಮೈಸೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 12:53 pm, Thu, 31 August 23