ಬೆಳಗಾವಿ: ಪಾದಚಾರಿಗೆ ಬೈಕ್ ಡಿಕ್ಕಿಯಾಗಿದ್ದಕ್ಕೆ ಕಾಲಿನಿಂದ ಒದ್ದು ಸವಾರನ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರಿನ ಚೌಕಿಮಠ ಕ್ರಾಸ್‌ನಲ್ಲಿ ನಡೆದಿದೆ. ವಿಜಯಮಹಾಂತೇಶ್ ಹಿರೇಮಠ ಎಂಬುವವರು ಬೈಕ್ ಮೇಲೆ ಬರುತ್ತಿದ್ದರು. ಬೈಕ್ಗೆ ಹಿಂದಿನಿಂದ ಕಾರು ಗುದ್ದಿದ ಕಾರಣ, ಪಾದಚಾರಿಗೆ ಹೋಗಿ ಬೈಕ್ ಡಿಕ್ಕಿ ಹೊಡೆದಿದೆ. ಬೈಕ್ ಗುದ್ದುತ್ತಿದ್ದಂತೆ ಆರೋಪಿ ಆಕ್ರೋಶಗೊಂಡು ಸವಾರ ವಿಜಯ ಮಹಾಂತೇಶ್‌ಗೆ ಕಾಲಿನಿಂದ ಒದ್ದಿದ್ದಾನೆ. 67 ವರ್ಷದ ವಿಜಯ ಮಹಾಂತೇಶ್ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.ಕಿತ್ತೂರು ತಾಲೂಕಿನ ಮಲ್ಲಾಪೂರ ಗ್ರಾಮದ ಅದೃಶ್ಯ ಎಂಬಾತನಿಂದ ಕೃತ್ಯ ನಡೆದಿದ್ದು, ಸಿಸಿಟಿವಿಯಲ್ಲಿ ಕೃತ್ಯದ ದೃಶ್ಯ ದಾಖಲಾಗಿದೆ. ಕೂಡಲೇ ಆರೋಪಿ ಅದೃಶ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಉಳುಮೆ ಮಾಡುವಾಗ ಟ್ರಾಕ್ಟರ್ ಪಲ್ಟಿಯಾಗಿ ಭತ್ತದ ಗದ್ದೆಯಲ್ಲೇ ರೈತ ಸಾವು:
ಉಳುಮೆ ಮಾಡುವಾಗ ಟ್ರಾಕ್ಟರ್ ಪಲ್ಟಿಯಾಗಿ ಭತ್ತದ ಗದ್ದೆಯಲ್ಲೇ ರೈತ ಕೊನೆಯುಸಿರೆಳೆದಿರುವ ದಾರುಣ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಗುಂಡಾಲ್ ರಸ್ತೆಯ ಜಮೀನಿನಲ್ಲಿ ಪ್ರಕರಣ ನಡೆದಿದೆ. ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಗ್ರಾಮದ ಪ್ರಕಾಶ್ (43) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಭತ್ತದ ಗದ್ದೆ ಉಳುಮೆ ಮಾಡುವ ವೇಳೆ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು, ಪರಿಣಾಮ ತಲೆ ಮತ್ತು ಮುಖಕ್ಕೆ ತೀವ್ರ ಪೆಟ್ಟಾದ್ದರಿಂದ ಕೆಸರು ಗದ್ದೆಯಲ್ಲೇ ಸಾವನ್ನಪ್ಪಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕದ್ದ ಬೊಲೆರೊ ಹಿಂಬಾಲಿಸಿದವರಿಗೆ ಗನ್ ತೋರಿಸಿ ಪರಾರಿಯಾದ ಕಳ್ಳರು:
ಕದ್ದ ಬೊಲೆರೊ ಹಿಂಬಾಲಿಸಿದವರಿಗೆ ಗನ್ ತೋರಿಸಿ ಸಿನಿಮೀಯ ರೀತಿಯಲ್ಲಿ ಮುಸುಕುಧಾರಿಗಳು ಪರಾರಿಯಾಗಿರುವ ಘಟನೆ ನಡೆದಿದೆ. ಬೆನ್ನು ಹತ್ತಿದವರ ಮೇಲೆ ಗುಂಡುಹಾರಿಸಲು ಕಳ್ಳರು ಗುಂಡುಹಾರಿಸಲು ಯತ್ನಿಸಿದ್ದರು. ತಮಿಳುನಾಡಿನ ಹೊಸೂರಿನ ರಾಕೇಶ್ ಎಂಬುವವರಿಗೆ ಬೊಲೆರೊ ಸೇರಿತ್ತು. ಸೋಮವಾರ ಮಧ್ಯರಾತ್ರಿ ಮನೆ ಮುಂದೆ ನಿಲ್ಲಿಸಿದ್ದಾಗ ಕಳವು ಮಾಡಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ರಾಕೇಶ್ ಫೋಟೋ ಹಾಕಿದ್ದರು. ನೆಲಮಂಗಲ ಬಳಿ ಕಾಣಿಸಿಕೊಂಡಿದ್ದ ಬೊಲೆರೊ ವಾಹನವು, ಧರ್ಮಸ್ಥಳಕ್ಕೆ ತೆರಳುತ್ತಿತ್ತು. ಕಳವು ಮಾಡಿದ್ದ ಬೊಲೆರೊವನ್ನು ಗ್ಯಾಂಗ್ ರಸ್ತೆಯಲ್ಲಿ ನಿಲ್ಲಿಸಿಕೊಂಡಿತ್ತು. ಇದನ್ನು ಗಮನಿಸಿ ಮಾಲೀಕ ರಾಕೇಶ್ಗೆ ಸ್ನೇಹಿತರು ತಿಳಿಸಿದ್ದರು.
ಬೆಂಗಳೂರಿನಲ್ಲಿರುವ ಸಂಬಂಧಿಕರಾದ ನಂದಕಿಶೋರ್, ಹ್ಯಾರಿಸ್ಗೆ ರಾಕೇಶ್ ಮಾಹಿತಿ ನೀಡಿದ್ದರು. ಬೊಲೆರೊ ಹುಡುಕಿಕೊಂಡು ನೆಲಮಂಗಲಕ್ಕೆ ತೆರಳಿದ್ದರು. ತುಮಕೂರು ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೊಲೆರೊ ವಾಹನವನ್ನು ತಡೆಯಲು ಯತ್ನಿಸಿದ್ದ ನಂದಕಿಶೋರ್, ಹ್ಯಾರಿಸ್ ಮೇಲೆ ಗ್ಯಾಂಗ್ ಗುಂಡುಹಾರಿಸಲು ಯತ್ನಿಸಿತ್ತು. ಉತ್ತರ ಭಾರತ ಮೂಲದ ದರೋಡೆಕೋರರೆಂಬ ಅನುಮಾನ ವ್ಯಕ್ತವಾಗಿದ್ದು, ಕದ್ದ ಬೊಲೆರೊಗೆ ತಮಿಳುನಾಡು ಬೋರ್ಡ್ ತೆಗೆದು ಮಹಾರಾಷ್ಟ್ರ ಬೋರ್ಡ್ ಹಾಕಿದ್ದರು. ನೆಲಮಂಗಲ, ಮಧುಗಿರಿ ಠಾಣೆಗಳ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಖಾಸಗಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವು
ತುಮಕೂರು: ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ತಾಲೂಕಿನ ಅರಕೆರೆ ಗ್ರಾಮದ ಬಳಿ ನಡೆದಿದೆ. ಬೈಕ್ ಸವಾರ ಮಧು ಪುರಾಣಿಕ(40) ಸ್ಥಳದಲ್ಲೇ ಸಾವನ್ನಪ್ಪಿದ್ದು, ತುಮಕೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಘಟನೆ ನಡೆದಿದೆ.
ಇದನ್ನೂ ಓದಿ:
Mandya: ಮಂಡ್ಯ ಎಸ್ಪಿ ಹುದ್ದೆ ಹರಾಜಿಗಿದೆ; ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್
ತ್ರಿಪುರದಲ್ಲಿ ಎಲ್ಲ ಮಸೀದಿಗಳಿಗೂ ಪೊಲೀಸ್ ಬಿಗಿ ಭದ್ರತೆ; ಎರಡು ಸ್ಥಳಗಳಲ್ಲಿ ಸೆಕ್ಷನ್ 144 ಜಾರಿ
Published On - 5:41 pm, Thu, 28 October 21