ಬೆಂಗಳೂರು: ನಗರದಲ್ಲಿ ಕಾರುಗಳನ್ನ ಬಾಡಿಗೆಗೆ ಪಡೆದು ವಂಚಿಸುತ್ತಿದ್ದ ಇಬ್ಬರು ಖದೀಮರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಗಿರೀಶ್ ಗೌಡ ಹಾಗೂ ಮೋಹನ್ ಬಂಧಿತ ಆರೋಪಿಗಳಾಗಿದ್ದು, ಈ ಖದೀಮರು ಹೈಫೈ ಕಾರುಗಳನ್ನೇ ಟಾರ್ಗೆಟ್ ಮಾಡಿ ವಂಚಿಸುತ್ತಿದ್ದರು. ಒಟ್ಟಾರೆ ಈ ಚಾಲಾಕಿಗಳು 12 ಇನೋವಾ ಕ್ರಿಸ್ತಾ, ಮಾರುತಿ ಕಂಪನಿಯ 5 ಕಾರುಗಳು, ಹೊಂಡೈ ಕಂಪನಿಯ 4 ಕಾರುಗಳು, 3 ಟೊಯೋಟಾ ಫಾರ್ಚುನರ್, ಹೋಂಡಾ ಕಂಪನಿಯ 1 ಕಾರು, ನಿಸಾನ್ ಕಂಪನಿಯ 1 ಕಾರು ಹಾಗೂ ಟಾಟಾ ಕಂಪನಿಯ 1 ಕಾರು ಸೇರಿ ಒಟ್ಟು 27 ಕಾರುಗಳ ಕಳ್ಳತನ ಮಾಡಿದ್ದರು.
ಬಂಧಿತರಿಂದ ಲಕ್ಷಾಂತರ ಬೆಲೆಬಾಳುವ ಕಾರುಗಳು ಹಾಗೂ 75 ಗ್ರಾಂ ಚಿನ್ನಾಭರಣ, 2 ಬೆಲೆ ಬಾಳುವ ಮೊಬೈಲ್ ಫೋನ್, 6 ಲಕ್ಷ ನಗದನ್ನು ಸಿಸಿಬಿ ಪೊಲೀಸರು ಜಫ್ತಿ ಮಾಡಿದ್ದಾರೆ. ORIX AISL ಕಂಪನಿಯ ಜನರಲ್ ಮ್ಯಾನೇಜರ್ ಮೋಹಲ್ ವೇಲು ಎಂಬುವವರ ದೂರನ್ನ ಆಧರಿಸಿ ಆರೋಪಿಗಳ ಬಂಧಿಸಲಾಗಿದೆ. ಬಾಡಿಗೆಗೆ ಕಾರನ್ನ ಪಡೆದುಕೊಂಡು ಎಲ್ಲೋ ಬೋರ್ಡ್ ವೈಕಲ್ನ್ನ, ವೈಟ್ ಬೋರ್ಡ್ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಮ್ಯಾನೇಜರ್ ಮೊದಲು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಈ ಪ್ರಕರಣ ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು.
Published On - 8:40 am, Sun, 17 January 21