ಎಕ್ಸ್​ರೇ ತೆಗೆಯಲು ಮಹಿಳೆಗೆ ಬಟ್ಟೆ ಬಿಚ್ಚಲು ಹೇಳಿದ ವ್ಯಕ್ತಿಗೆ 3 ವರ್ಷ ಜೈಲು ಶಿಕ್ಷೆ

ಫಿಲಿಪ್ಪೀನ್ಸ್‌ನ ಮಹಿಳೆ ಈ ಘಟನೆ ನಡೆದ 2 ದಿನಗಳ ನಂತರ ಮೈಲಾಪುರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಗೆ ಎಕ್ಸ್-ರೇ ತೆಗೆದುಕೊಳ್ಳುವ ಅಗತ್ಯವಿಲ್ಲದಿದ್ದರೂ ಖಾಸಗಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ತನಗೆ ಬಟ್ಟೆಗಳನ್ನು ಬಿಚ್ಚುವಂತೆ ಉದ್ದೇಶಪೂರ್ವಕವಾಗಿ ಸೂಚಿಸಿದ್ದಾರೆ ಎಂದು ಹೇಳಿದ್ದರು.

ಎಕ್ಸ್​ರೇ ತೆಗೆಯಲು ಮಹಿಳೆಗೆ ಬಟ್ಟೆ ಬಿಚ್ಚಲು ಹೇಳಿದ ವ್ಯಕ್ತಿಗೆ 3 ವರ್ಷ ಜೈಲು ಶಿಕ್ಷೆ
ಜೈಲು ಶಿಕ್ಷೆ
Image Credit source: iStock

Updated on: Sep 25, 2023 | 3:47 PM

ಚೆನ್ನೈ: ಎಕ್ಸ್​ರೇ ತೆಗೆಯಲೆಂದು ಫಿಲಿಪಿನೋ ಮಹಿಳೆಯೊಬ್ಬರಿಗೆ ಬಟ್ಟೆ ಬಿಚ್ಚುವಂತೆ ಹೇಳಿದ ಲ್ಯಾಬ್ ಟೆಕ್ನಿಷಿಯನ್​ಗೆ ಚೆನ್ನೈನ ಸೆಷನ್ಸ್​ ಕೋರ್ಟ್​ 3 ವರ್ಷಗಳ ಜೈಲು ಶಿಕ್ಷೆಯನ್ನು ಎತ್ತಿ ಹಿಡಿದಿದೆ. ಆತ ತನಗೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಧಿಸಿದ್ದ 3 ವರ್ಷಗಳ ಜೈಲು ಶಿಕ್ಷೆಯನ್ನು ಪ್ರಶ್ನಿಸಿ ಚೆನ್ನೈ ಸೆಷನ್ಸ್ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಆತನ ಅರ್ಜಿಯನ್ನು ತಿರಸ್ಕರಿಸಿರುವ ಸೆಷನ್ಸ್ ಕೋರ್ಟ್​ 3 ವರ್ಷಗಳ ಜೈಲು ಶಿಕ್ಷೆಯನ್ನು ಘೋಷಿಸಿದೆ.

ವೆಲ್ಲೂರು ಜಿಲ್ಲೆಯ ಇ. ಕಾರ್ತಿಕೇಯನ್ 2014ರ ಆಗಸ್ಟ್ 11ರಂದು ಈ ಘಟನೆ ನಡೆದಾಗ ಚೆನ್ನೈನ ಎಂಆರ್‌ಸಿ ನಗರದ ಖಾಸಗಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಸಿಯನ್​ ಆಗಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: ಪ್ರೀತಿಸಿದ ಹುಡುಗಿಯ ಜತೆಗೆ ಜಗಳ, ಮನನೊಂದು ಶಾಸಕರ ಫ್ಲಾಟ್​​​​ನಿಂದ​ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ

ಫಿಲಿಪ್ಪೀನ್ಸ್‌ನ ಮಹಿಳೆ ಈ ಘಟನೆ ನಡೆದ 2 ದಿನಗಳ ನಂತರ ಮೈಲಾಪುರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಗೆ ಎಕ್ಸ್-ರೇ ತೆಗೆದುಕೊಳ್ಳುವ ಅಗತ್ಯವಿಲ್ಲದಿದ್ದರೂ ಖಾಸಗಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ತನಗೆ ಬಟ್ಟೆಗಳನ್ನು ಬಿಚ್ಚುವಂತೆ ಉದ್ದೇಶಪೂರ್ವಕವಾಗಿ ಸೂಚಿಸಿದ್ದಾರೆ ಎಂದು ಹೇಳಿದ್ದರು. ವೈದ್ಯರು ತನಗೆ ಎಕ್ಸ್​ರೇ ತೆಗೆಸಲು ಸೂಚಿಸಿರಲಿಲ್ಲ. ಆದರೂ ಆ ಲ್ಯಾಬ್ ಟೆಕ್ನಿಷಿಯನ್ ಬೇಕೆಂದೇ ತನ್ನ ಬಳಿ ಬಟ್ಟೆ ಬಿಚ್ಚಲು ಹೇಳಿದ್ದ ಎಂದು ಆಕೆ ದೂರಿನಲ್ಲಿ ವಿವರಿಸಿದ್ದರು.

ಆಕೆಯ ದೂರಿನ ಆಧಾರದ ಮೇಲೆ, ಪೊಲೀಸರು ವಿಚಾರಣೆಯನ್ನು ಪ್ರಾರಂಭಿಸಿದ್ದರು. ಬಳಿಕ ಲ್ಯಾಬ್ ಟೆಕ್ನಿಷಿಯನ್ ತಪ್ಪಿತಸ್ಥನೆಂದು ಸಾಬೀತಾದ ನಂತರ ಆತನ ವಿರುದ್ಧ ಸೆಕ್ಷನ್ 354 ಬಿ (ವಿವಸ್ತ್ರಗೊಳ್ಳುವ ಉದ್ದೇಶದಿಂದ ಮಹಿಳೆಯ ಮೇಲೆ ಹಲ್ಲೆ) ಮತ್ತು ತಮಿಳುನಾಡು ಮಹಿಳಾ ಕಿರುಕುಳ ನಿಷೇಧ ಕಾಯ್ದೆ (ಟಿಎನ್‌ಪಿಎಚ್‌ಡಬ್ಲ್ಯೂ) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಇದನ್ನೂ ಓದಿ: ಗುಂಡು ಹಾರಿಸಿ ಪತ್ನಿಯನ್ನೇ ಕೊಲೆ ಮಾಡಿದ ಪತಿ; ಹೆತ್ತಮ್ಮನನ್ನು ಕಳೆದುಕೊಂಡು ತಬ್ಬಲಿಯಾದ ನಾಲ್ವರು ಮಕ್ಕಳು

ಆದರೆ, ಮೇಲ್ಮನವಿ ಸಂದರ್ಭದಲ್ಲಿ ಆರೋಪಿ ಪರ ವಕೀಲರು ಪೊಲೀಸರ ಬಳಿ ಆ ಮಹಿಳೆ ದೂರು ಸಲ್ಲಿಸಲು 2 ದಿನ ವಿಳಂಬ ಮಾಡಿರುವುದು ಆತನ ವಿರುದ್ಧದ ಶಿಕ್ಷೆಯನ್ನು ವಜಾಗೊಳಿಸಬೇಕೆಂಬುದಕ್ಕೆ ಪ್ರಮುಖ ಕಾರಣ ಎಂದು ಉಲ್ಲೇಖಿಸಿದ್ದರು.

ಒಳ ಉಡುಪು ಮತ್ತು ಕೆಳ ಉಡುಪುಗಳನ್ನು ತೆಗೆಯದೆ ಎದೆಯ ಕೆಳಗಿನ ದೇಹದ ಯಾವುದೇ ಭಾಗದ ಎಕ್ಸ್-ರೇ ತೆಗೆಯಬಹುದು ಎಂದು ನ್ಯಾಯಾಲಯದ ಮುಂದೆ ಸಲ್ಲಿಸಿದ ತಜ್ಞರ ಹೇಳಿಕೆಯನ್ನು ನ್ಯಾಯಾಲಯವು ತನ್ನ ಆದೇಶದಲ್ಲಿ ನಮೂದಿಸಿದೆ. “ಇದು ಆರೋಪಿ ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯ ಎಂದು ಕಂಡುಬರುತ್ತದೆ” ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ