ಚಿಕ್ಕಮಗಳೂರು: ಒಂದು ಸರ್ಟಿಫಿಕೇಟ್ಗಾಗಿ ಈಕೆ ಖರ್ಚು ಮಾಡಿದ್ದು ಬರೋಬ್ಬರಿ 75 ಲಕ್ಷ ರೂಪಾಯಿ. ಆದರೆ ಕೊನೆಯಲ್ಲಿ ಸಿಗಬೇಕಾದ ಅಸಲಿ ಸರ್ಟಿಫಿಕೇಟ್ ಸಿಗಲಿಲ್ಲ, ಕೊಟ್ಟ ಹಣವೂ ಕೈಸೇರಲಿಲ್ಲ. ಇದೇ ಅಲ್ವಾ ವಿಪರ್ಯಾಸ ಅಂದರೆ? ಅಬ್ಬಬ್ಬಾ ಅಂದರೆ ಪಿಎಚ್ಡಿ ಮಾಡಲು 5 ರಿಂದ 10 ಲಕ್ಷ ರೂಪಾಯಿ ಖರ್ಚು ಆಗಬಹುದು. ಆದರೆ ಕಾಫಿನಾಡು ಚಿಕ್ಕಮಗಳೂರಿನ ಮಹಿಳೆಯೊಬ್ಬರು 75 ಲಕ್ಷ ಖರ್ಚು ಮಾಡಿ ವಂಚಕರ ಬಲೆಗೆ ಬಿದ್ದಿದ್ದಾರೆ. ಕೋರ್ಸ್ ಮುಗಿತಲ್ವಾ ಎಂದು ಮಹಿಳೆ ಕೇಳಿದಾಗ ಅವರು ಒಂದು ಪಿಎಚ್ಡಿ ಪ್ರಮಾನಪತ್ರ ಕಳಿಸಿದ್ದಾರೆ. ಪ್ರಮಾಣ ಪತ್ರ ಕೈಸೇರಿದ ಖುಷಿಯಲ್ಲಿ ಆ ಮಹಿಳೆಯೂ ಇದ್ದಳು. ಆದರೆ ಈ ಸರ್ಟಿಫಿಕೇಟ್ ಅನ್ನು ಬೇರೊಬ್ಬರಿಗೆ ತೋರಿಸಿದಾಗ ಈ ಸರ್ಟಿಫಿಕೇಟ್ ಅಸಲಿಯಲ್ಲ ಎಂದು ತಿಳಿದುಬಂದಿದೆ. ಅಸಲಿಗೆ ಆಕೆ ಪಿಎಚ್ಡಿ ಮಾಡಿದ್ದ ವಿಶ್ವವಿದ್ಯಾಲಯ ಅದು ವಿಶ್ವವಿದ್ಯಾಲಯವೇ ಅಲ್ಲ ಎಂದು ಆಕೆಗೆ ನಾಲ್ಕು ವರ್ಷಗಳ ಬಳಿಕ ಗೊತ್ತಾಗಿದೆ.
ಮಹಿಳೆ ಹಾಕಿದ 75 ಲಕ್ಷ ಹಣ ಕೂಡ ಬ್ಯಾಂಕ್ ಮೂಲಕ ವ್ಯವಹಾರ ನಡೆದಿದ್ದು, ಹಣವನ್ನ ಯಾರಿಗೆ ಹಾಕಿದ್ದಾರೆ ಎಂದೇ ಗೊತ್ತಿಲ್ಲ. ಅವರು ಕೇಳಿದಾಗೆಲ್ಲಾ ಹಣ ಹಾಕಿದ್ದಾರೆ. ಪಿಎಚ್ಡಿ ಪ್ರಮಾಣಪತ್ರಕ್ಕಾಗಿ ನಾಲ್ಕು ವರ್ಷಗಳಲ್ಲಿ 75 ಲಕ್ಷ ಹಣ ಕಳೆದುಕೊಂಡ ಮೇಲೆ ನಕಲಿ ಪ್ರಮಾಣ ಪತ್ರ ಪಡೆದ ಬಗ್ಗೆ ತಿಳಿದು ತಾನು ಮೋಸ ಹೋಗಿರುವ ವಿಚಾರ ತಿಳಿದುಬಂದಿದೆ. ಬಳಿಕ ವಂಚನೆಗೆ ಒಳಗಾದ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಜಿಲ್ಲಾ ಪೊಲೀಸರು ಸಿಐಡಿ ಮತ್ತು ಬೆಂಗಳೂರು ಸೈಬರ್ ಜೊತೆ ಸಂಪರ್ಕದಲ್ಲಿದ್ದಾರೆ. ಅದರಂತೆ ಹಣ ಎಲ್ಲಿಗೆ ಹೋಗಿದೆ ಅಂತನೂ ತಿಳಿದುಬಂದಿದೆ. ಪೊಲೀಸರು ತನಿಖೆ ಕೈಗೊಂಡ ಮೇಲೆ ಫಾರಿನ್‍ನ ಆ ಯುನಿವರ್ಸಿಟಿಯೇ ಇಲ್ಲ ಎಂದು ಖಾತ್ರಿಯಾಗಿದೆ.
ಒಟ್ಟಾರೆ, ಇದು ಆ ಮಹಿಳೆಯ ದಡ್ಡತನ ಅನ್ಬೇಕೋ, ಸಾಂತ್ವಾನ ಹೇಳಬೇಕೋ ಗೊತ್ತಾಗ್ತಿಲ್ಲ. ದಿನಕ್ಕೆ ನಾಲ್ಕು ಗಂಟೆಯಂತೆ ನಾಲ್ಕೈದು ವರ್ಷ ಓದಿದ್ರೆ ಭಾರತದ ಹೆಸರಾಂತ ಯೂನಿವರ್ಸಿಟಿಯಲ್ಲೇ ಗೌರವಾನ್ವಿತವಾಗಿ ಪಿಎಚ್ಡಿ ಪ್ರಮಾಣ ಪತ್ರ ಪಡೆಯಬಹುದಿತ್ತು. ಗೌರವ ಡೌಕ್ಟರೇಟ್ ಕೂಡ ತನ್ನ ಹೆಸರಿನ ಮುಂದೆ ಇರುತ್ತಿತ್ತು. ಇದರೊಂದಿಗೆ ಆಕೆಯ ಲಕ್ಷಾಂತರ ರೂಪಾಯಿ ಕೂಡ ಉಳಿಯುತ್ತಿತ್ತು. ಆದರೆ ವಿದೇಶಿ ವಿಶ್ವವಿದ್ಯಾಲಯದ ಪ್ರಮಾಣ ಪತ್ರದ ಮೋಹಕ್ಕೆ ಬಿದ್ದು ಮಹಿಳೆ ನಾಲ್ಕು ವರ್ಷದಲ್ಲಿ 75 ಲಕ್ಷ ಕಳೆದುಕೊಂಡಿರುವುದು ದೌರ್ಭಾಗ್ಯ.
ವರದಿ: ಪ್ರಶಾಂತ್, ಟಿವಿ 9 ಚಿಕ್ಕಮಗಳೂರು
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:22 am, Fri, 28 October 22