ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದು ಠಾಣೆಗೆ ಶರಣಾದ ಪತಿ

| Updated By: Rakesh Nayak Manchi

Updated on: Oct 22, 2022 | 8:06 AM

ಪತಿ ಮತ್ತು ಪತ್ನಿಯ ನಡುವಿನ ಕೌಟುಂಬಿಕ ಕಲಹವು ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಳಗಾವಿಯ ಕಿತ್ತೂರು ತಾಲೂಕಿನಲ್ಲಿ ನಡೆದಿದೆ.

ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದು ಠಾಣೆಗೆ ಶರಣಾದ ಪತಿ
ಕೊಲೆ ಆರೋಪಿ ಸಂಗಪ್ಪ ಮತ್ತು ಕೊಲೆಯಾದ ಸಂಗಪ್ಪನ ಪತ್ನಿ ರುದ್ರವ್ವ ಅಡಕಿ
Follow us on

ಬೆಳಗಾವಿ: ದಂಪತಿಯ ನಡುವಿನ ಕೌಟುಂಬಿಕ ಕಲಹವು ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ಕೊದನಾಪುರ ಗ್ರಾಮದಲ್ಲಿ ನಡೆದಿದೆ. ಕೊದನಾಪುರ ಹೊರವಲಯದಲ್ಲಿ ರುದ್ರವ್ವ ಅಡಕಿ(55) ಹತ್ಯೆಗೊಳಗಾದವಳು. ಕೌಟುಂಬಿಕ ಕಲಹದಿಂದ ಬೇಸತ್ತು ತವರು ಸೇರಿದ್ದ ಪತ್ನಿ ರುದ್ರವ್ವ ಜಮೀನಿಗೆ ಹೋಗುತ್ತಿದ್ದಾಗ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಪತಿ ಸಂಗಪ್ಪ ಬರ್ಬರವಾಗಿ ಕೊಲೆ ಮಾಡಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಕೊದನಾಪುರದ ರುದ್ರವ್ವ ಅಡಕಿ ಮತ್ತು ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮದ ಚನ್ನಬಸಪ್ಪ ಅಡಕಿ(60) ನಡುವೆ ಕೌಟುಂಬಕ ಕಲಹ ಏರ್ಪಟ್ಟಿತ್ತು. ಪರಿಣಾಮ ಮನೆಯಲ್ಲಿ ನಿತ್ಯವೂ ವಾಗ್ವಾದ ನಡೆಯುತ್ತಿತ್ತು. ಅದರಂತೆ ರುದ್ರವ್ವ ಪತಿಯ ಮನೆ ತೊರೆದು ಕೊದನಾಪುರದಲ್ಲಿರುವ ತನ್ನ ತವರು ಮನೆ ಸೇರಿದ್ದಳು. ಆದರೆ ಕೆಲ ದಿನಗಳ ಹಿಂದೆ ಸಂಗಪ್ಪ ಪತ್ನಿಯ ಮನೆಗೆ ಹೋಗಿದ್ದಲ್ಲದೆ ಅಲ್ಲೇ ನೆಲೆಸಿದ್ದನು.

ಪತ್ನಿಯ ಮನೆಯಲ್ಲಿದ್ದರೂ ಸಂಗಪ್ಪ ಮತ್ತು ರುದ್ರವ್ವನ ನಡುವೆ ನಿನ್ನೆ ಗಲಾಟೆ ಆಗಿದೆ. ಬಳಿಕ ರುದ್ರವ್ವ ಜಮೀನಿಗೆ ಹೋಗಿದ್ದಾಳೆ. ಇದನ್ನು ಗಮನಿಸಿದ ಸಂಗಪ್ಪ ಕೋಪದಲ್ಲಿ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿ ಕುಡಗೋಲಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ನಂತರ ದೊಡವಾಡ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.

ಕಾಡುಕೋಣ ಬೇಟೆಯಾಡುತ್ತಿದ್ದ ಇಬ್ಬರ ಬಂಧನ

ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡುಕೋಣ ಬೇಟೆಯಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಉಳಿದ 7 ಮಂದಿ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಬಂಧಿತರನ್ನು ಪಿರಿಯಾಪಟ್ಟಣ ತಾಲೂಕಿನ ಉದ್ಯಾನವನದಂಚಿನ ಲಕ್ಷ್ಮೀಪುರ ನಿವಾಸಿಗಳಾದ ಅಶೋಕ ಮತ್ತು ಕಾಟಿಚಂದ್ರ ಎಂದು ಗುರುತಿಸಲಾಗಿದೆ. ಆರೋಪಿಗಳು ಹುಣಸೂರು ತಾಲ್ಲೂಕಿನ ಆನೆಚೌಕೂರು ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡುಕೋಣ ಬೇಟೆಯಾಡಿ ಅದರ ಮಾಂಸ ಮಾರಾಟದಲ್ಲಿ ತೊಡಗಿದ್ದಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಌಪ್​ ಮೂಲಕ ಡ್ರಗ್ಸ್​ ಖರೀದಿಸಿ ಮಾರಾಟ

ಬೆಂಗಳೂರು: ಆ್ಯಪ್​ ಮೂಲಕ ಡ್ರಗ್ಸ್​ ಖರೀದಿಸಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು 4.5 ಲಕ್ಷ ಮೌಲ್ಯದ 60 ಗ್ರಾಂ ಎಂಡಿಎಂಎ ಕ್ರಿಸ್ಟಲ್​, 2 ಕೆಜಿ ಗಾಂಜಾ, ಕೃತ್ಯಕ್ಕೆ ಬಳಸುತ್ತಿದ್ದ 5 ಮೊಬೈಲ್ ಫೋನ್​ಗಳ ಜಪ್ತಿ ಮಾಡಿದ್ದಾರೆ. ಬಂಧಿತರನ್ನು ಜಿತಿನ್, ರೋಹನ್, ಯಶವಂತ, ಶಲ್ಬಿನ್ ಎಂದು ಗುರುತಿಸಲಾಗಿದೆ.

ಕೇರಳ ಮೂಲದ ಡ್ರಗ್ ಪೆಡ್ಲರ್​ನಿಂದ Wiker-me App ಮೂಲಕ ಕಡಿಮೆ ಬೆಲೆಗೆ ಡ್ರಗ್ಸ್​ ಖರೀದಿ ಮಾಡುತ್ತಿದ್ದ ಆರೋಪಿಗಳು ಅದನ್ನು ಕಾಲೇಜು ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಿಗಳಿಗೆ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದರು. ಆ ಮೂಲಕ ಅಕ್ರಮವಾಗಿ ಹಣ ಮಾಡುತ್ತಿದ್ದರು. ಅದರಂತೆ ಮೈಕೋ ಲೇಔಟ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್​ ಪೂರೈಸುತ್ತಿದ್ದಾಗ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಎನ್​ಡಿಪಿಎಸ್​ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:06 am, Sat, 22 October 22